ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರ ತ್ಯಜಿಸಲು ಉಕ್ರೇನ್‌ ಸೇನೆಗೆ ರಷ್ಯಾ ಕೊನೆ ಗಡುವು

ಸೇನಾ ಆಸ್ತಿಗಳು ನಾಶ; ‘ಮರಿಯುಪೊಲ್‌ನಲ್ಲಿ ಕೊನೆಯ ಪಡೆ ಶೀಘ್ರ ಅಂತ್ಯ’
Last Updated 19 ಏಪ್ರಿಲ್ 2022, 20:30 IST
ಅಕ್ಷರ ಗಾತ್ರ

ಮಾಸ್ಕೊ/ಕ್ರಾಮರೊಸ್ಕಿ: ಉಕ್ರೇನ್‌ ಸೇನೆಗೆ ತಕ್ಷಣವೇ ಶಸ್ತ್ರಾಸ್ತ್ರ ತ್ಯಜಿಸಲು ರಷ್ಯಾ ರಕ್ಷಣಾ ಸಚಿವಾಲಯ ಮಂಗಳವಾರ ತಾಕೀತು ಮಾಡಿದೆ.

ಬಂದರು ನಗರ ಮರಿಯುಪೊಲ್‌ ರಕ್ಷಣೆಗೆ ನಿಂತಿರುವ ಉಕ್ರೇನ್‌ ಸೈನಿಕರು ಮತ್ತು ಬಾಡಿಗೆ ಸೈನಿಕರು ಪ್ರತಿರೋಧ ಕೈಬಿಡಬೇಕು. ಶಸ್ತ್ರತ್ಯಾಗಕ್ಕೆ ವಿಧಿಸಿರುವ ಅಂತಿಮ ಗಡುವು ಮಂಗಳವಾರ ಮಧ್ಯಾಹ್ನದಿಂದಲೇ ಶುರುವಾಗಿದೆ.

ಉಕ್ರೇನಿನ ಪೂರ್ವ ಭಾಗ ಕೇಂದ್ರೀಕರಿಸಿ ರಷ್ಯಾ ಪಡೆಗಳು ಹೊಸ ದಾಳಿ ಆರಂಭಿಸಿವೆ ಎಂದು ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿಕೆ ನೀಡಿದ ಬೆನ್ನಲ್ಲೇ ರಷ್ಯಾ ರಕ್ಷಣಾ ಸಚಿವಾಲಯದಿಂದ ಈ ಎಚ್ಚರಿಕೆ ಹೊರಬಿದ್ದಿದೆ.

ಅರ್ಥಹೀನ ಪ್ರತಿರೋಧ ತೋರುತ್ತಿರುವ ಸೈನಿಕರಿಗೆ ತಕ್ಷಣ ಶಸ್ತ್ರ ತ್ಯಜಿಸಲು ಆದೇಶ ರವಾನಿಸುವಂತೆ ಕೀವ್‌ ಅಧಿಕಾರಿಗಳಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಗಿದೆ. ಕೀವ್‌ ಅಧಿಕಾರಿಗಳಿಂದ ಈ ಸಂದೇಶ ರವಾನೆಯಾಗದಿದ್ದರೆ ಹೋರಾಟಗಾರರು ಸ್ವಯಂಪ್ರೇರಿತವಾಗಿ ಶಸ್ತ್ರತ್ಯಜಿಸಲು ನಿರ್ಧರಿಸಬೇಕು ಎಂದು ರಕ್ಷಣಾ ಸಚಿವಾಲಯ ತಾಕೀತು ಮಾಡಿದೆ.

‘ಕೀವ್‌ ಆಡಳಿತವು ಭಯಾನ ಕವಾದ ಹೊಸ ಅಪರಾಧಗಳನ್ನು ನಡೆಸಲು ಸಿದ್ಧತೆ ನಡೆಸಿರುವ ಬಗ್ಗೆ ನೈಜ ಪುರಾವೆಗಳು ಸಿಕ್ಕಿವೆ. ಅಜೋವಾ ಸಮುದ್ರದ ಬಂದರು ನಗರ ಮರಿಯುಪೊಲ್‌ನಲ್ಲಿ ಪ್ರತಿರೋಧ ತೋರುತ್ತಿರುವ ಉಕ್ರೇನ್‌ ಯೋಧರು ಮತ್ತು ಬಾಡಿಗೆ ಸೈನಿಕರು ದುರಂತ ಸ್ಥಿತಿಯಲ್ಲಿದ್ದಾರೆ’ ಎಂದು ರಷ್ಯಾ
ಹೇಳಿದೆ.

ವಾಯು ದಾಳಿ: ಪೂರ್ವ ಉಕ್ರೇನ್‌ ದೇಶದಾದ್ಯಂತ ಸೋಮವಾರ ತಡರಾತ್ರಿ ಹಲವು ಬಾರಿ ವಾಯು ದಾಳಿ ನಡೆಸಲಾಗಿದೆ ರಷ್ಯಾ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.

ಹಾರ್ಕಿವ್‌ನಲ್ಲಿ ಐವರು ನಾಗರಿಕರ ಸಾವು

ಕೀವ್‌ (ಎಪಿ): ರಷ್ಯಾ ಪಡೆಗಳು ನಡೆಸಿದ ಶೆಲ್‌ ದಾಳಿಯಿಂದ ಉತ್ತರ ಉಕ್ರೇನಿನಲ್ಲಿ ಐವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಪ್ರಾದೇಶಿಕ ಗವರ್ನರ್‌ ಮಂಗಳವಾರ ತಿಳಿಸಿದರು.

ಹಾರ್ಕಿವ್ ನಗರ ಕೇಂದ್ರ ಭಾಗ ಮತ್ತು ಹೊರವಲಯಗಳಲ್ಲಿ ರಷ್ಯಾದ ಕ್ಷಿಪಣಿಗಳು ಅಪ್ಪಳಿಸಿ, 17ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ ಎಂದುಗವರ್ನರ್ ಓಲೆಹ್ ಸಿನೆಹುಬೊವ್ ತಿಳಿಸಿದರು.

ಉಕ್ರೇನ್‌ನ ಎರಡನೇ ಅತಿದೊಡ್ಡ ನಗರ ಹಾರ್ಕಿವ್‌ ರಷ್ಯಾದ ಆಕ್ರಮಣದ ಪ್ರಾರಂಭದಿಂದಲೂ ತೀವ್ರ ದಾಳಿಗೆ ತುತ್ತಾಗಿದೆ.

‘ಹೊಸ ಘಟ್ಟದಲ್ಲಿ ಸೇನಾ ಕಾರ್ಯಾಚರಣೆ‘

ಮಾಸ್ಕೊ (ಎಪಿ): ಉಕ್ರೇನ್‌ನಲ್ಲಿ ಕೈಗೊಂಡಿರುವ ವಿಶೇಷ ಸೇನಾ ಕಾರ್ಯಾಚರಣೆಯು ಈಗ ಹೊಸ ಘಟ್ಟವನ್ನು ತಲುಪಿದೆ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್‌ ಮಂಗಳವಾರ ತಿಳಿಸಿದ್ದಾರೆ. ‘ಇಂಡಿಯಾ ಟುಡೆ’ ಟಿ.ವಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು, ‘ಸೇನಾ ಕಾರ್ಯಾಚರಣೆಯು ಮುಂದುವರಿದಿದೆ. ಈ ಕಾರ್ಯಾಚರಣೆಯ ಮತ್ತೊಂದು ಹಂತವು ಈಗ ಪ್ರಾರಂಭವಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT