ಕೀವ್, ಉಕ್ರೇನ್ (ಎಪಿ/ರಾಯಿಟರ್ಸ್): ವರ್ಷ ಪೂರೈಸಿ ಮುಂದುವರಿದಿರುವ ಉಕ್ರೇನ್– ರಷ್ಯಾ ನಡುವಿನ ಯುದ್ಧ ದಿನೇ ದಿನೇ ಭೀಕರತೆ ಪಡೆಯುತ್ತಿದೆ.
ಉಕ್ರೇನ್ ಸೇನೆಯ ಪ್ರತಿರೋಧ– ಪ್ರತಿದಾಳಿ ಸಾಮರ್ಥ್ಯ ಕುಗ್ಗಿಸಲು ಪ್ರಮುಖ ಇಂಧನ ಮೂಲಸೌಕರ್ಯಗಳು ಮತ್ತು ಪಶ್ಚಿಮದ ರಾಷ್ಟ್ರಗಳಿಂದ ಪೂರೈಕೆಯಾಗಿರುವ ಶಸ್ತ್ರಾಸ್ತ್ರಗಳ ಸಂಗ್ರಹಗಾರಗಳನ್ನೇ ಗುರಿಯಾಗಿಸಿಕೊಂಡು ರಷ್ಯಾ ಸೇನೆ ಕ್ಷಿಪಣಿಗಳು ಮತ್ತು ಸ್ವಯಂ ಸ್ಫೋಟದ ಇರಾನಿ ಡ್ರೋನ್‌ಗಳಿಂದ ನಿರಂತರ ದಾಳಿ ನಡೆಸುತ್ತಿದೆ.
ಉಭಯ ಸೇನೆಗಳು ಹಲವು ತಿಂಗಳುಗಳಿಂದ ನಡೆಸುತ್ತಿರುವ ತೀವ್ರ ಹೋರಾಟವು ಬಖ್ಮಟ್ ಕೇಂದ್ರಿತವಾಗಿದೆ. ಉಪ್ಪಿನ ಗಣಿಯ ಪಟ್ಟಣವೆನಿಸಿದ ಬಖ್ಮಟ್ ಮೇಲಿನ ಹಿಡಿತ ಉಳಿಸಿಕೊಳ್ಳುವುದು ಉಕ್ರೇನ್ ಸೇನೆ ಪಾಲಿಗೆ ನಿರ್ಣಾಯಕವೆನಿಸಿದೆ. ಹಾಗೆಯೇ ರಷ್ಯಾ ಸೇನೆ, ಉಕ್ರೇನ್ ರಾಜಧಾನಿ ಕೀವ್ ಭದ್ರಕೋಟೆ ಭೇದಿಸಲು ಮತ್ತು ಸ್ವಾಧೀನಪಡಿಸಿಕೊಂಡಿರುವ ಡಾನ್‌ಬಾಸ್ ಪ್ರದೇಶದ ಸುತ್ತಲೂ ಭದ್ರತೆ ಖಾತ್ರಿಗಾಗಿ ಬಖ್ಮಟ್ ವಶಪಡಿಕೊಳ್ಳುವ ಸಂಕಲ್ಪ ಮಾಡಿದೆ. ಹಾಗಾಗಿ, ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದಾಳಿ ತೀವ್ರಗೊಳಿಸಿದೆ.
‘ಕಳೆದ 24 ತಾಸುಗಳಲ್ಲಿ ಬಖ್ಮಟ್ ಪಟ್ಟಣವೊಂದರ ಮೇಲೆಯೇ ರಷ್ಯಾ 102 ಬಾರಿ ದಾಳಿ ನಡೆಸಿದೆ. ದೇಶದ ಹತ್ತು ಪ್ರಾಂತ್ಯಗಳ ಮೇಲೆ ಗುರುವಾರ ಒಂದೇ ದಿನ 80ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಅಲ್ಲದೇ, ಆರು ಹೈಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದೆ. ಪ್ರಮುಖ ಇಂಧನ ಮೂಲಸೌಕರ್ಯಗಳು, ರೈಲ್ವೆ ಸೌಲಭ್ಯಗಳು ಹಾನಿಗೀಡಾಗಿವೆ. ಒಂಬತ್ತು ನಾಗರಿಕರು ಮೃತಪಟ್ಟಿದ್ದಾರೆ. ರಷ್ಯಾ ನಾಗರಿಕರನ್ನು ಗುರಿಯಾಗಿಸಿಕೊಂಡು, ಯುದ್ಧಾಪರಾಧಕ್ಕಿಳಿದಿದೆ’ ಎಂದು ಉಕ್ರೇನ್ ಸೇನೆ ಹೇಳಿದೆ.
ಉಕ್ರೇನ್ ಹೇಳಿಕೆ ನಿರಾಕರಿಸಿರುವ ರಷ್ಯಾ, ಪಶ್ಚಿಮದ ರಾಷ್ಟ್ರಗಳಿಂದ ಶಸ್ತ್ರಾಸ್ತ್ರಗಳ ನೆರವು ಪಡೆದು ಪ್ರತಿದಾಳಿಯ ತಯಾರಿಯಲ್ಲಿರುವ ಉಕ್ರೇನ್ ಸೇನಾ ಸಾಮರ್ಥ್ಯ ಕುಗ್ಗಿಸುವುದು ಮಾತ್ರ ವೈಮಾನಿಕ ಕಾರ್ಯಾಚರಣೆಯ ಉದ್ದೇಶವಾಗಿತ್ತು ಎಂದು ಹೇಳಿದೆ.
ಇಬ್ಬರ ವಶ: ಉಕ್ರೇನ್ ಹೊಂದಿದ್ದ ವಿಶ್ವದ ಅತಿ ದೊಡ್ಡ ಸರಕು ಸಾಗಣೆಯ ‘ಅಂಟೊನೊವ್ –ಎಎನ್ 225’ (ಮ್ರಿಯಾ) ವಿಮಾನವನ್ನು ಆಕ್ರಮಣದ ಆರಂಭದಲ್ಲಿ ನಾಶಪಡಿಸಲು ರಷ್ಯಾ ಸೇನೆಗೆ ಆಸ್ಪದ ನೀಡಿದ ಆಪಾದನೆಯ ಸಂಬಂಧ ಇಬ್ಬರು ವಾಯುಪಡೆಯ ಇಬ್ಬರು ಮಾಜಿ ಅಧಿಕಾರಿಗಳನ್ನು ಉಕ್ರೇನ್ ಭದ್ರತಾ ಸೇವೆ ಅಧಿಕಾರಿಗಳು (ಎಸ್‌ಯುಬಿ) ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.
ಅಲ್ಲದೆ, ವಿಮಾನ ತಯಾರಕ ಕಂಪನಿ ಅಂಟೊನೊವ್‌ನ ಮೂವರು ಮಾಜಿ ವ್ಯವಸ್ಥಾಪಕರ ಮೇಲೂ ಶಂಕೆ ವ್ಯಕ್ತಪಡಿಸಿ, ಅವರಿಗೆ ಎಸ್‌ಯುಬಿ ನೋಟಿಸ್ ನೀಡಿದೆ.
ಕಳೆದ ತಿಂಗಳು ಅಮಾನತುಗೊಳಿಸಿದ ಅಣ್ವಸ್ತ್ರ ಕಡಿತ ಮತ್ತು ನಿಯಂತ್ರಣ ಒಪ್ಪಂದ ‘ನ್ಯೂ ಸ್ಟಾರ್ಟ್’ ವಿಚಾರದಲ್ಲಿ ಅಮೆರಿಕದ ಜತೆಗೆ ರಷ್ಯಾ ಈಗಲೂ ಸಂಪರ್ಕದಲ್ಲಿದೆ ಎಂದು ರಷ್ಯಾ ಉಪ ವಿದೇಶಾಂಗ ಸಚಿವ ಸೆರ್ಗಿ ರಿಯಾಬ್ಕೊವ್ ಹೇಳಿದ್ದಾರೆ.
‘ನ್ಯೂ ಸ್ಟಾರ್ಟ್’ ಒಪ್ಪಂದದ ಬಗ್ಗೆ ಮಾಸ್ಕೊ ಮತ್ತು ವಾಷಿಂಗ್ಟನ್ ನಡುವಿನ ಸಂಪರ್ಕಗಳಿಂದ ಗಮನಾರ್ಹ ಪ್ರಗತಿಯಾಗುವ, ಒಪ್ಪಂದಕ್ಕೆ ಮರಳುವ ಬಗ್ಗೆ ಯಾವುದೇ ನಿರೀಕ್ಷೆಗಳಿಲ್ಲ ಎಂದು ಸೆರ್ಗಿ ಹೇಳಿರುವುದಾಗಿ ‘ರಿಯಾ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಉಕ್ರೇನ್‌ನಲ್ಲಿ ರಷ್ಯಾದ ಕಾರ್ಯತಂತ್ರ ಸೋಲನ್ನು ಬಯಸಿದ್ದ ಅಮೆರಿಕವು, 2010ರಲ್ಲಿ ಉಭಯತ್ರರ ನಡುವೆ ಆಗಿದ್ದ ಈ ಒಪ್ಪಂದವನ್ನು ದುರ್ಬಳಕೆ ಮಾಡಿಕೊಳ್ಳುವ ಹುನ್ನಾರ ನಡೆಸಿದೆ ಎಂದು ಆರೋಪಿಸಿ ರಷ್ಯಾ, ಒಪ್ಪಂದ ಕಡಿದುಕೊಂಡಿತ್ತು. ಕಳೆದು ತಿಂಗಳು ಈ ಆದೇಶಕ್ಕೆ ಪುಟಿನ್ ಸಹಿ ಹಾಕಿದ್ದರು.
ಬ್ಲಿಂಕನ್– ಲಾವ್ರೊವ್ ಮಾತುಕತೆ: ಇದೇ ವೇಳೆ ರಷ್ಯಾ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್ ಅವರು, ಇತ್ತೀಚೆಗೆ ಭಾರತದಲ್ಲಿ ಜಿ 20 ವಿದೇಶಾಂಗ ಸಚಿವರ ಸಭೆ ಸಂದರ್ಭ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರೊಂದಿಗೆ ಮಾತುಕತೆ ನಡೆಸಲಾಯಿತು. ಅಣ್ವಸ್ತ್ರ ಬಿಕ್ಕಟ್ಟು ಮತ್ತು ಉಕ್ರೇನ್ ಸಂಘರ್ಷದ ಬಗ್ಗೆ ರಚನಾತ್ಮಕ ಚರ್ಚೆ ನಡೆಯಿತು ಎಂದು ಲಾವ್ರೊವ್ ಅವರು ಸಂದರ್ಶನದಲ್ಲಿ ಹೇಳಿರುವುದಾಗಿ ರಷ್ಯಾದ ಟಾಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.