ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಫೈಜರ್‌–ಬಯೊಎನ್‌ಟೆಕ್‌ ಲಸಿಕೆ ತುರ್ತು ಬಳಕೆಗೆ ಅಮೆರಿಕ ಒಪ್ಪಿಗೆ

ಎಲ್ಲ ನಾಗರಿಕರಿಗೆ ಉಚಿತ ವಿತರಣೆ: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌
Last Updated 12 ಡಿಸೆಂಬರ್ 2020, 5:51 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆಗೆ ಫೈಜರ್‌–ಬಯೊಎನ್‌ಟೆಕ್‌ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಅಂತಿಮ ಒಪ್ಪಿಗೆ ನೀಡಿದೆ.

ಜರ್ಮನಿಯ ಬಯೊಎನ್‌ಟೆಕ್‌ ಸಹಭಾಗಿತ್ವದಲ್ಲಿ ಅಮೆರಿಕದ ಫಾರ್ಮಾಸುಟಿಕಲ್‌ ಕಂಪನಿ ಫೈಜರ್‌ ಕೋವಿಡ್‌–19ಗೆ ಲಸಿಕೆ ಅಭಿವೃದ್ಧಿ‍ಪಡಿಸಿದೆ. ಆಹಾರ ಮತ್ತು ಔಷಧ ಆಡಳಿತ ಮಂಡಳಿಯು(ಎಫ್‌ಡಿಎ) ಲಸಿಕೆಯ ತುರ್ತು ಬಳಕೆಗೆ ಈ ಕಂಪನಿಗಳಿಗೆ ಅಧಿಕೃತ ಒಪ್ಪಿಗೆ ನೀಡಿದೆ.

‘ಇಂದು ನಮ್ಮ ದೇಶ ವೈದ್ಯಕೀಯ ಕ್ಷೇತ್ರದಲ್ಲಿ ಪವಾಡ ಸೃಷ್ಟಿಸಿದೆ. ಕೇವಲ ಒಂಬತ್ತು ತಿಂಗಳಲ್ಲಿ ಸುರಕ್ಷಿತವಾದ ಮತ್ತು ಪರಿಣಾಮಕಾರಿಯಾದ ಔಷಧಿಯನ್ನು ತಯಾರಿಸಿದ್ದೇವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

‘ಇದು ಇತಿಹಾಸದಲ್ಲೇ ಶ್ರೇಷ್ಠ ವೈಜ್ಞಾನಿಕ ಸಾಧನೆಯಾಗಿದೆ. ಈ ಲಸಿಕೆಯಿಂದ ಲಕ್ಷಾಂತರ ಜೀವಗಳನ್ನು ಉಳಿಸಬಹುದು. ಜತೆಗೆ, ಈ ಸಾಂಕ್ರಾಮಿಕ ಕಾಯಿಲೆಯೂ ಶಾಶ್ವತವಾಗಿ ಅಂತ್ಯವಾಗುತ್ತದೆ. ಫೈಜರ್‌ ಲಸಿಕೆ ಬಳಕೆಗೆ ಎಫ್‌ಡಿಎ ಅಧಿಕೃತ ಒಪ್ಪಿಗೆ ನೀಡಿರುವುದನ್ನು ಕೇಳಿ ಅಪಾರ ಸಂತೋಷವಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಈ ಲಸಿಕೆಯು ಎಲ್ಲ ಅಮೆರಿಕನ್‌ರಿಗೆ ಉಚಿತವಾಗಿ ದೊರೆಯಲಿದೆ. 24ಗಂಟೆಯ ಒಳಗೆ ಮೊದಲ ಲಸಿಕೆಯನ್ನು ಬಳಸಲಾಗುವುದು’ ಎಂದು ಟ್ರಂಪ್‌ ತಿಳಿಸಿದ್ದಾರೆ.

ಲಸಿಕೆಯ ಸುರಕ್ಷತೆ, ಪರಿಣಾಮಗಳು ಮತ್ತು ತಯಾರಿಕೆಯ ಗುಣಮಟ್ಟದ ಬಗ್ಗೆ ಸಮಗ್ರವಾಗಿ ಮೌಲ್ಯಮಾಪನ ಮಾಡಲಾಗಿದೆ ಎನ್ನುವುದನ್ನು ಸಾರ್ವಜನಿಕರಿಗೆ ಮತ್ತು ವೈದ್ಯಕೀಯ ಸಮುದಾಯಕ್ಕೆ ಸ್ಪಷ್ಟವಾಗಿ ತಿಳಿಸುತ್ತೇವೆ ಎಂದು ಎಫ್‌ಡಿಎ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

‘ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆಯನ್ನು ನಿಯಂತ್ರಿಸಲು ಇದೊಂದು ಮಹತ್ವದ ಮೈಲಿಗಲ್ಲು. ಮುಕ್ತವಾದ ಮತ್ತು ಪಾರದರ್ಶಕವಾಗಿ ಲಸಿಕೆಯ ವಿಶ್ಲೇಷಣೆಯನ್ನು ಕೈಗೊಳ್ಳಲಾಗಿದೆ. ಎಫ್‌ಡಿಎ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಿರುವ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಲಾಗಿದೆ. ಆರೋಗ್ಯ ತಜ್ಞರು ಈ ಪ್ರಕ್ರಿಯೆಯಲ್ಲಿ ಒಳಗೊಂಡಿದ್ದಾರೆ’ ಎಂದು ಎಫ್‌ಡಿಎ ಆಯುಕ್ತ ಸ್ಟೆಫನ್‌ ಎಂ. ಹಾಹ್ನ ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT