ಮಂಗಳವಾರ, ಮಾರ್ಚ್ 2, 2021
19 °C

ಬ್ರಿಟನ್‌ನಲ್ಲೇ ಉಳಿದುಕೊಳ್ಳಲು ‘ಆಶ್ರಯ’ ಮಾರ್ಗ ಹಿಡಿದ ಮಲ್ಯ?

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ಭಾರತದ ಬ್ಯಾಂಕ್‌ಗಳಿಗೆ ವಂಚನೆ ಎಸಗಿ 2016ರಲ್ಲಿ ಬ್ರಿಟನ್‌ಗೆ ಪರಾರಿಯಾಗಿ, ಅಲ್ಲೇ ನೆಲೆಸಿರುವ ಉದ್ಯಮಿ ವಿಜಯ್‌ ಮಲ್ಯ ಭಾರತಕ್ಕೆ ಹಸ್ತಾಂತರವಾಗುವುದನ್ನು ತಡೆಯಲು ‘ಅನ್ಯ ಮಾರ್ಗವೊಂದನ್ನು’ ಹಿಡಿದಿದ್ದಾರೆ. ಈ ಕುರಿತು ಮಲ್ಯ ಪರ ವಕೀಲರು ಇದೇ ಮೊದಲ ಬಾರಿಗೆ ಖಚಿತಪಡಿಸಿದ್ದಾರೆ.

ಭಾರತ ಸರ್ಕಾರ ಸಲ್ಲಿಸಿದ್ದ ಹಸ್ತಾಂತರ ಮನವಿಯನ್ನು ಪ್ರಶ್ನಿಸಿ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್‌ನ ಸುಪ್ರೀಂ ಕೋರ್ಟ್‌ ಕಳೆದ ವರ್ಷ ತಿರಸ್ಕರಿಸಿತ್ತು. ಪ್ರಸ್ತುತ ಜಾಮೀನಿನ ಮೇಲೆ ಮಲ್ಯ ಹೊರಗಿದ್ದಾರೆ. ಸಾಲ ಮರುಪಾವತಿಸದೇ ಬ್ಯಾಂಕ್‌ಗಳಿಗೆ ₹9 ಸಾವಿರ ಕೋಟಿ ವಂಚನೆ ಎಸಗಿರುವ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ಭಾರತಕ್ಕೆ ಹಸ್ತಾಂತರಿಸುವ ಆದೇಶಕ್ಕೆ ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್‌ ಸಹಿ ಹಾಕುವವರೆಗೂ ಮಲ್ಯ ಬ್ರಿಟನ್‌ನಲ್ಲೇ ಉಳಿಯುವ ಅವಕಾಶ ಪಡೆದಿದ್ದಾರೆ.

‘ಹಸ್ತಾಂತರ ಮನವಿಯನ್ನು ಎತ್ತಿಹಿಡಿಯಲಾಗಿದೆ, ಆದರೆ ಅವರು ಇನ್ನೂ ಇಲ್ಲಿಯೇ ಇದ್ದಾರೆ. ಏಕೆಂದರೆ, ಕಾನೂನು ಸಮ್ಮತ ಸ್ಥಾನಮಾನಕ್ಕೆ ಗೃಹ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಲು ಅವರಿಗೆ ಬೇರೊಂದು ಮಾರ್ಗವಿದೆ’ ಎಂದು ವಕೀಲ ಫಿಲಿಪ್‌ ಮಾರ್ಷಲ್‌ ಅವರು ‘ಇನ್‌ಸಾಲ್‌ವೆನ್ಸಿ ಆ್ಯಂಡ್‌ ಕಂಪನೀಸ್‌’ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 

ಮಲ್ಯ ಪರ ವಕೀಲರ ಈ ಹೇಳಿಕೆಯು, ಹಲವು ಊಹಾಪೋಹಕ್ಕೆ ಎಡೆಮಾಡಿದೆ. ಬ್ರಿಟನ್‌ನಲ್ಲೇ ಆಶ್ರಯಕ್ಕೆ ಮಲ್ಯ ಅರ್ಜಿ ಸಲ್ಲಿಸಿದ್ದಾರೆಯೇ ಎನ್ನುವ ವದಂತಿಗಳು ಕೇಳಿಬರುತ್ತಿದ್ದು, ಇದನ್ನು ಗೃಹ ಕಚೇರಿಯು ನಿರಾಕರಿಸಿಯೂ ಇಲ್ಲ ಹಾಗೂ ಖಚಿತಪಡಿಸಲೂ ಇಲ್ಲ.

ಹಸ್ತಾಂತರಕ್ಕೆ ಸಂಬಂಧಿಸಿದಂತೆ ಗೋಪ್ಯವಾದ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದಷ್ಟೇ ಕಚೇರಿಯು ಖಚಿತಪಡಿಸಿದೆ. ಮಲ್ಯ ಪರ ವಕೀಲರ ಪ್ರಸ್ತಾಪವು ‘ಆಶ್ರಯ ಮಾರ್ಗ’ವನ್ನೇ ಸೂಚಿಸುತ್ತಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು