ಗುರುವಾರ , ಜನವರಿ 28, 2021
15 °C
ಹೊಸ ವರ್ಷದ ಕಾರ್ಯಕ್ರಮಗಳಿಗೂ ನಿರ್ಬಂಧ, ವಲಸೆ ಹೋಗದಂತೆ ಕಾರ್ಮಿಕರಿಗೆ ಸೂಚನೆ

ಹೊಸ ವೈರಸ್‌ ಪ್ರಕರಣಗಳ ಕಡಿವಾಣಕ್ಕೆ ಚೀನಾ ಕ್ರಮ

ಎಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್: ‘ಕೋವಿಡ್‌ 19‘ ಸೋಂಕಿನ 14 ಹೊಸ ಪ್ರಕರಣಗಳು ಪತ್ತೆಯಾದ ಬೀಜಿಂಗ್‌ ಸಮೀಪದ ಹೆಬಿ ಪ್ರಾಂತ್ಯದ ಕೆಲವು ಪ್ರದೇಶಗಳನ್ನು ‘ಹೆಚ್ಚಿನ ಅಪಾಯದ ವಲಯ‘ ಎಂದು ಚೀನಾ ಸರ್ಕಾರ ಗುರುತಿಸಿದೆ.

ಇದರಲ್ಲಿ ಹನ್ನೊಂದು ಪ್ರಕರಣಗಳು ಶಿಜಿಯಾಜುವಾಂಗ್‌ ನಗರದಲ್ಲಿ ಕಾಣಿಸಿಕೊಂಡಿವೆ. ಈ ನಗರದಲ್ಲಿ 2022ರಲ್ಲಿ ಚಳಿಗಾಲದ ಒಲಿಂಪಿಕ್ಸ್‌ನ ಕೆಲವು ಕಾರ್ಯಕ್ರಮಗಳು ನಡೆಯಲಿವೆ. ಉಳಿದ ಮೂರು ಪ್ರಕರಣಗಳು ಯಂತೈ ನಗರದಲ್ಲಿ ಕಾಣಿಸಿಕೊಂಡಿವೆ. ಇದೇ ಪ್ರಾಂತ್ಯದಲ್ಲಿ ಹೆಚ್ಚುವರಿಯಾಗಿ ರೋಗಲಕ್ಷಣರಹಿತ 30 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಪ್ರಾಂತೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿಗೆ ಹೆಬಿ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಹೊಸ ಪ್ರಕರಣವೂ ಸೇರಿದಂತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 19ಕ್ಕೆ ಏರಿದೆ. ಒಟ್ಟು ಪ್ರಕರಣಗಳಲ್ಲಿ ಮೂರು ದೇಶದೊಳಗೇ ಹರಡಿದ ಸೋಂಕು, ಉಳಿದ 16 ಹೊರದೇಶಗಳಿಂದ ಬಂದಿದ್ದು. ಈ ಹಿನ್ನೆಲೆಯಲ್ಲಿ ಸೋಂಕು ಹರಡುತ್ತಿರುವ ಮೂಲದ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.  

‘ಚೀನಾದಲ್ಲಿ ಇಲ್ಲಿಯವರೆಗೆ ಒಟ್ಟು 87,183 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 4,634 ಸಾವುಗಳು ಸಂಭವಿಸಿವೆ. ರೋಗ ಲಕ್ಷಣ ಕಾಣಿಸಿಕೊಳ್ಳದೇ ಸೋಂಕು ದೃಢಪಟ್ಟಂತಹ ಪ್ರಕರಣಗಳನ್ನು ಪ್ರತ್ಯೇಕವಾಗಿ ಎಣಿಸಲಾಗಿದೆ‘ ಎಂದು ಕೋವಿಡ್‌ 19 ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ರೂಪದ ಕೊರೊನಾ ವೈರಸ್‌ ಹಾಗೂ ಹಳೆಯ ಕೊರೊನಾ ವೈರಸ್‌ನ ಎರಡನೇ ಅಲೆಯ ಬಗ್ಗೆ ಎಚ್ಚರವಹಿಸುವಂತೆ ಚೀನಾ ಸರ್ಕಾರ ಸಲಹೆ ನೀಡಿದೆ. ಮುಂದಿನ ತಿಂಗಳು ಚೀನಾದಲ್ಲಿ ಹೊಸ ವರ್ಷದ ಸಂಭ್ರಮ ಹಾಗೂ ಚಂದ್ರ ದರ್ಶನ ಜರುಗುತ್ತದ. ಜತೆಗೆ ಆಗ ರಜೆಯ ದಿನಗಳೂ ಇರುತ್ತವೆ. ಈ ಅವಧಿಯಲ್ಲಿ ಅತಿ ಹೆಚ್ಚು ಕಾರ್ಮಿಕರು ವಲಸೆ ಹೋಗುತ್ತಾರೆ. ಜನಸಂದಣಿಯೂ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳವರೆಗೂ ಕಾರ್ಮಿಕರಿಗೆ ವಲಸೆ ಹೋಗದಂತೆ ಒತ್ತಾಯಿಸಿದೆ.

ಅಲ್ಲದೆ ಚೀನಾದಲ್ಲಿ ಹೊಸ ವರ್ಷ ಆರಂಭವಾಗುವ ಒಂದು ವಾರ ಮುನ್ನ ಶಾಲಾ ಕಾಲೇಜಿನ ತರಗತಿಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಹಾಗೆಯೇ ರಜೆ ದಿನಗಳಲ್ಲಿ ಪ್ರವಾಸಿಗರಿಗೆ ಬೀಜಿಂಗ್‌ಗೆ ಬರದಂತೆ ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು