ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಕೋವಿಡ್‌ ಪ್ರಕರಣಗಳು ಸ್ಥಿರ: ವಿಶ್ವ ಆರೋಗ್ಯ ಸಂಸ್ಥೆ

Last Updated 12 ಆಗಸ್ಟ್ 2021, 7:00 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ/ಜಿನೀವಾ: ‘ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಮೇ ತಿಂಗಳ ಆರಂಭದಲ್ಲಿ ಕೋವಿಡ್‌ ಪ್ರಕರಣಗಳು ಉತ್ತುಂಗಕ್ಕೇರಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಇಲ್ಲಿ ಪ್ರಕರಣಗಳು ಸ್ಥಿರವಾಗಿದೆ. ಇದಕ್ಕೆ ಮುಖ್ಯ ಕಾರಣ ಭಾರತದಲ್ಲಿ ಪ್ರಕರಣಗಳು ಸ್ಥಿರವಾಗಿರುವುದು ಹಾಗೂ ಇಂಡೊನೇಷ್ಯಾ ಮತ್ತು ಮ್ಯಾನ್ಮಾರ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಕಡಿಮೆ ಪ್ರಕರಣಗಳು ದಾಖಲಾಗಿರುವುದು’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಆಗ್ನೇಯ ಏಷ್ಯಾ ಪ್ರದೇಶದಲ್ಲಿ 7,99,000 ಹೊಸ ಪ್ರಕರಣಗಳು ವರದಿಯಾಗಿವೆ. ಹಿಂದಿನ ವಾರಕ್ಕೆ ಹೋಲಿಸಿದರೆ ಇದು ಶೇಕಡ 5ರಷ್ಟು ಕಡಿಮೆಯಾಗಿದೆ. ಆದರೆ ಈ ಪ್ರದೇಶದಲ್ಲಿರುವ ಶ್ರೀಲಂಕಾ, ಥಾಯ್ಲೆಂಡ್‌ ಸೇರಿದಂತೆ ಹಲವು ದೇಶಗಳಲ್ಲಿ ಪ್ರಕರಣಗಳು ಏರುಗತಿಯಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಆಗಸ್ಟ್ 10 ರಂದು ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ಈ ಪ್ರದೇಶದಲ್ಲಿ ಮರಣ ಪ್ರಮಾಣವು ತೀವ್ರ ಏರಿಕೆ ಕಂಡಿತ್ತು. ಆದರೆ ಈ ವಾರ ಮಾಲ್ಡೀವ್ಸ್‌ ಮತ್ತು ಮ್ಯಾನ್ಮಾರ್‌ನಲ್ಲಿ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಹಾಗಾಗಿ ಕಳೆದ ಏಳು ವಾರಗಳಲ್ಲಿ ಇದೇ ಮೊದಲ ಬಾರಿ ವಾರದ ಸಾವಿನ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಇನ್ನೊಂದೆಡೆ ಶ್ರೀಲಂಕಾ( ಶೇಕಡ 47), ನೇಪಾಳ (ಶೇಕಡ 35) ಮತ್ತು ಥಾಯ್ಲೆಂಡ್‌(ಶೇಕಡ 30) ಸೇರಿದಂತೆ ಹಲವು ದೇಶಗಳಲ್ಲಿ ಸಾಪ್ತಾಹಿಕ ಸಾವಿನ ಸಂಖ್ಯೆಯಲ್ಲಿ ಏರಿಕೆ ಉಂಟಾಗಿದೆ.

ಜಾಗತಿಕವಾಗಿ ಕೋವಿಡ್‌ ಪ್ರಕರಣಗಳ ಸಂಖ್ಯೆ 20 ಕೋಟಿ ದಾಟಿದೆ ಎಂದು ಆಗಸ್ಟ್‌ 5ರ ವರದಿ ಹೇಳಿದೆ.

ಜಾಗತಿಕವಾಗಿ ಈ ವಾರ 42 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ಮತ್ತು 65,000 ಸಾವು ವರದಿಯಾಗಿವೆ. ಇದರಲ್ಲಿ ಅಮೆರಿಕ ಮತ್ತು ಪಶ್ಚಿಮ ಪೆಸಿಫಿಕ್ ಪ್ರದೇಶ ಬಹುಭಾಗವನ್ನು ಹೊಂದಿದೆ. ಅಮೆರಿಕ ಮತ್ತು ಪಶ್ಚಿಮ ಪೆಸಿಫಿಕ್ ಪ್ರದೇಶದಲ್ಲಿ ಕ್ರಮವಾಗಿ 13 ಲಕ್ಷ ಮತ್ತು 3,75,000 ಹೊಸ ಪ್ರಕರಣಗಳು ವರದಿಯಾಗಿವೆ.

ಅಮೆರಿಕದಲ್ಲಿ 7,34,354 (ಶೇಕಡ 35ರಷ್ಟು ಏರಿಕೆ), ಭಾರತದಲ್ಲಿ 2,78,631 (ಶೇಕಡ 2ರಷ್ಟು ಇಳಿಕೆ), ಇರಾನ್‌ನಲ್ಲಿ 2,48,102 (ಶೇಕಡ 20ರಷ್ಟು ಏರಿಕೆ), ಬ್ರೆಜಿಲ್‌ನಲ್ಲಿ 2,28,473 (ಶೇಕಡ 8ರಷ್ಟು ಇಳಿಕೆ) ಮತ್ತು ಇಂಡೊನೇಷ್ಯಾದಲ್ಲಿ 2,25,635 (ಶೇಕಡ 18ರಷ್ಟು ಇಳಿಕೆ) ಹೊಸ ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT