ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯತ್ತ ನಡೆದ ಅಫ್ಗನ್ನರು: ವಿಮಾನಗಳ ಹಾರಾಟವಿಲ್ಲ, ಭೂಮಾರ್ಗವೇ ಏಕೈಕ ಆಯ್ಕೆ

;
Last Updated 1 ಸೆಪ್ಟೆಂಬರ್ 2021, 20:02 IST
ಅಕ್ಷರ ಗಾತ್ರ

ಕಾಬೂಲ್: ಅಮೆರಿಕವು ದೇಶದಿಂದ ಹೊರನಡೆದ ಮರುದಿನ ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ಅಧಿಕೃತವಾಗಿ ಆರಂಭವಾಗಿದೆ. ಆದರೆ ತಾಲಿಬಾನ್ ನಿಯಂತ್ರಣದಿಂದ ಪಾರಾಗುವ ಜನರ ಬಯಕೆ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಆದರೆ ತಪ್ಪಿಸಿಕೊಳ್ಳುವುದಕ್ಕೆ ಹೆಚ್ಚು ಆಯ್ಕೆಗಳು ಉಳಿದಿಲ್ಲ.

ತೆರವು ಕಾರ್ಯಾಚರಣೆ ನಡೆಸಲು ಇಷ್ಟು ದಿನ ಹಾರಾಟ ನಡೆಸಿದ್ದ ವಿದೇಶಗಳ ವಿಮಾನಗಳು ಕಾಬೂಲ್ ವಿಮಾನ ನಿಲ್ದಾಣಗಳಲ್ಲಿ ಮಂಗಳವಾರ ಕಂಡುಬರಲಿಲ್ಲ. ದೇಶ ತೊರೆಯುವ ಹಂಬಲದಿಂದ ವಿಮಾನ ನಿಲ್ದಾಣದಲ್ಲಿ ಜಮಾವಣೆಯಾಗಿದ್ದ ಜನರು ಈಗ ಪಾಕಿಸ್ತಾನ ಹಾಗೂ ಇರಾನ್ ದೇಶಗಳ ಭೂ ಗಡಿಗಳತ್ತ ಚಿತ್ತ ನೆಟ್ಟಿದ್ದಾರೆ.ಭೂಮಾರ್ಗವೇ ಸದ್ಯಕ್ಕಿರುವ ಏಕೈಕ ಆಯ್ಕೆ ಎಂದುಅಮೆರಿಕ ಸೇನಾಪರಿಣಿತರು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಗಡಿಯಾದ ಟಾರ್ಕಮ್‌ನಲ್ಲಿ ಪ್ರವೇಶದ್ವಾರ ತೆಗೆಯುವುದನ್ನೇ ಅಫ್ಗನ್ನರು ಕಾಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು,ಅಫ್ಗಾನಿಸ್ತಾನ ಮತ್ತು ಇರಾನ್ ನಡುವಿನ ಇಸ್ಲಾಂ ಕ್ವಾಲಾ ಗಡಿಠಾಣೆಯಲ್ಲಿ ಸಾವಿರಾರು ಜನರು ಸೇರಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

‘ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಗಡಿ ಪ್ರವೇಶಿಸುವ ವಿಚಾರದಲ್ಲಿ ಇರಾನ್ ಭದ್ರತಾ ಪಡೆಗಳು ಕೊಂಚ ಮೆದುವಾಗಿ ವರ್ತಿಸಿದವು’ ಎಂದು ಗಡಿ ದಾಟಿ ಇರಾನ್ ದೇಶ ಪ್ರವೇಶಿಸಿದ ಅಫ್ಗನ್ ಪ್ರಜೆಯೊಬ್ಬರು ಹೇಳಿದ್ದಾರೆ.

ಮುಖ್ಯರಸ್ತೆಗಳಲ್ಲಿ ತಾಲಿಬಾನ್ ಸೈನಿಕರು ಚೆಕ್‌ಪಾಯಿಂಟ್‌ಗಳನ್ನು ಈಗಾಗಲೇ ಹಾಕಿದ್ದಾರೆ. ಮಹಿಳೆಯರು ಒಬ್ಬಂಟಿಯಾಗಿ ಮನೆಯಿಂದ ಹೊರಗೆ ಬರುವುದನ್ನು ನಿರ್ಬಂಧಿಸಿದ್ದಾರೆ. ‘ತಾಲಿಬಾನ್ ಹಿಂಬಾಲಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳದೆಯೇ ದೇಶದ ಗಡಿಗಳನ್ನು ತಲುಪಲು ಪ್ರಯತ್ನಿಸಬಾರದು’ ಎಂದುದೇಶ ತೊರೆಯಲು ಯತ್ನಿಸುತ್ತಿರುವ ಜನರಿಗೆ ಸಹಾಯ ಮಾಡುತ್ತಿರುವ ಸಂಘಟನೆಗಳು ಸೂಚಿಸಿವೆ.

ತಜಕಿಸ್ತಾನವು 1 ಲಕ್ಷ ಅಫ್ಗನ್ ನಿರಾಶ್ರಿತರನ್ನು ಸ್ವೀಕರಿಸಲು ಪ್ರತಿಜ್ಞೆ ಮಾಡಿದೆ. ಉಜ್ಬೇಕಿಸ್ತಾನವು ತನ್ನ ಭೂಪ್ರದೇಶದ ಮೂಲಕ ಅಮೆರಿಕನ್ನರು ಮತ್ತು ಅಫ್ಗನ್ನರು ಸಾಗಲು ಅವಕಾಶ ನೀಡಿದೆ. ಆದರೆ ಈ ಎರಡೂ ದೇಶಗಳು ಎಷ್ಟು ಜನರಿಗೆ ಅವಕಾಶ ನೀಡಿವೆ ಎಂಬ ಅಂಕಿಅಂಶ ಸದ್ಯಕ್ಕೆ ಲಭ್ಯವಿಲ್ಲ.

14 ಲಕ್ಷಕ್ಕೂ ಹೆಚ್ಚು ಅಫ್ಗನ್ ನಿರಾಶ್ರಿತರಿಗೆ ನೆಲೆಯಾಗಿರುವ ಪಾಕಿಸ್ತಾನವು, ವಿವಿಧ ದೇಶಗಳ ರಾಜತಾಂತ್ರಿಕರು, ಅಂತರರಾಷ್ಟ್ರೀಯ ಸಂಸ್ಥೆಗಳ ಸಿಬ್ಬಂದಿ, ಎನ್‌ಜಿಒ ಸಿಬ್ಬಂದಿ ಸೇರಿದಂತೆ ಸುಮಾರು 2,000 ಜನರಿಗೆ ತಿಂಗಳ ಮಟ್ಟಿಗೆಟ್ರಾನ್ಸಿಟ್ ವೀಸಾ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕ ಹಾಗೂ ಮಿತ್ರಪಡೆಗಳು ಅಫ್ಗನ್‌ನಿಂದ ಸುಮಾರು 1.3 ಲಕ್ಷ ಜನರನ್ನು ತೆರವು ಮಾಡಿವೆ.ಅಫ್ಗಾನಿಸ್ತಾನದಲ್ಲಿ ಅಭಿವೃದ್ಧಿ ಸಂಸ್ಥೆಗಳಿಗಾಗಿ ಕೆಲಸ ಮಾಡುತ್ತಿರುವ ಸುಮಾರು 40,000 ಜನರನ್ನು ಸ್ಥಳಾಂತರಿಸಬೇಕಾಗಬಹುದು ಎಂದು ಜರ್ಮನಿ
ಹೇಳಿದೆ.

ಅಫ್ಗನ್ ತೊರೆಯಲು ಬಯಸುತ್ತಿರುವ ಜನರಿಗೆ ಅವಕಾಶ ಮಾಡಿಕೊಡಬೇಕು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅನುಮೋದಿಸಿದ ನಿರ್ಣಯದಲ್ಲಿ ತಾಲಿಬಾನ್‌ಗೆ ಮನವಿ ಮಾಡಲಾಗಿದೆ.ಕಾಬೂಲ್ ವಿಮಾನ ನಿಲ್ದಾಣ ನಿರ್ವಹಣೆ ಕುರಿತು ಕತಾರ್ ಮತ್ತು ಟರ್ಕಿಯೊಂದಿಗೆ ತಾಲಿಬಾನ್ ಮಾತುಕತೆ ನಡೆಸುತ್ತಿದೆ ಎಂದು ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ವೈಸ್ ಲೆ ಡ್ರಿಯಾನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT