ಮಂಗಳವಾರ, ಏಪ್ರಿಲ್ 13, 2021
23 °C
ಗ್ಲೋಬಲ್ ಅಲಯನ್ಸ್‌ ಫಾರ್ ವ್ಯಾಕ್ಸಿನ್ ಅಂಡ್ ಇಮ್ಯುನೈಸೇಷನ್ ಅಭಿಮತ

ಭಾರತದಲ್ಲಿ ಕೋವಿಡ್‌ ಏರಿಕೆ: ಇತರೆ ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಇಳಿಕೆ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಭಾರತದಲ್ಲಿ ಕೋವಿಡ್‌ 19 ಪ್ರಕರಣಗಳ ಸಂಖ್ಯೆ ದಿಢೀರನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ವಿಶ್ವದ ಇತರೆ ರಾಷ್ಟ್ರಗಳಿಗೆ ಸರಬರಾಜು ಮಾಡುವ ಕೊರೊನಾ ಲಸಿಕೆ ಪ್ರಮಾಣವನ್ನು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಗ್ಲೋಬಲ್ ಅಲಯನ್ಸ್‌ ಫಾರ್ ವ್ಯಾಕ್ಸಿನ್ ಅಂಡ್ ಇಮ್ಯುನೈಸೇಷನ್ (ಗವಿ) ಹೇಳಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಲಸಿಕೆ ಪೂರೈಸುವ ಗವಿ ಅಲೈಯನ್ಸ್‌ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸೇತ್‌ ಬರ್ಲಿ, ‘ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ‌ಲಸಿಕೆಗಳನ್ನು ಪೂರೈಸುವ ಅತಿದೊಡ್ಡ ಪೂರೈಕೆದಾರ ರಾಷ್ಟ್ರ ಭಾರತ. ಈಗ ಆ ದೇಶದಲ್ಲೇ ಏಕಾಏಕಿ ಕೋವಿಡ್‌ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಲ್ಲಿನ ಸರ್ಕಾರ ತಮ್ಮ ದೇಶದೊಳಗಿನ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಿದೆ. ಹಾಗಾಗಿ ಆ ದೇಶಕ್ಕೆ ಹೆಚ್ಚು ಲಸಿಕೆಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಇತರೆ ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಪ್ರಮಾಣವನ್ನು ಕಡಿಮೆಗೊಳಿಸಬಹುದು‘ ಎಂದು ಸಿಬಿಎಸ್‌ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಸುಮಾರು 9 ಕೋಟಿ ಡೋಸ್‌ ಲಸಿಕೆಯನ್ನು ನಿರೀಕ್ಷಿಸಿದ್ದೆವು. ಆದರೆ, ಈಗ ಅಷ್ಟು ಪ್ರಮಾಣದ ಲಸಿಕೆ ದೊರೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ. ಇದು ನಮಗೆ ದೊಡ್ಡ ಸಮಸ್ಯೆಯಾಗುತ್ತದೆ‘ ಎಂದು ಅವರು ಹೇಳಿದ್ದಾರೆ.

‘ಶ್ರೀಮಂತ ರಾಷ್ಟ್ರಗಳು ತಮ್ಮ ತಮ್ಮ ದೇಶಗಳಲ್ಲಿರುವ ಹೆಚ್ಚಿನ ಜನಸಂಖ್ಯೆಗೆ ಲಸಿಕೆ ನೀಡಲು ಪ್ರಾರಂಭಿಸಿವೆ. ಇಂತಹ ರಾಷ್ಟ್ರಗಳು ಲಸಿಕೆ ಬಳಕೆಯನ್ನು ನಿಲ್ಲಿಸಿದ ನಂತರ, ತಮ್ಮ ದೇಶದಲ್ಲಿ ಉತ್ಪಾದಿಸುವ ಲಸಿಕೆಗಳನ್ನು ಬೇರೆ ರಾಷ್ಟ್ರಗಳಿಗೆ ತಲುಪಿಸುವ ವಿಶ್ವಾಸವಿದೆ. ಉದಾಹರಣೆಗೆ ಅಮೆರಿಕ ಮಾಡರ್ನಾ, ಫೈಜರ್‌ ಮತ್ತು ಜೆ ಅಂಡ್‌ ಜೆ ಜತೆಗೆ, ನೋವಾಕ್ಸ್ ಮತ್ತು ಆಸ್ಟ್ರಾಜೆನಿಕಾ ಲಸಿಕೆಗಳನ್ನು ಕೂಡ ಹೊಂದಿದೆ‘ ಎಂದು ಬರ್ಲಿ ಹೇಳಿದ್ದಾರೆ.

ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೊರೊನಾ ಲಸಿಕೆ ಪೂರೈಕೆ ಎನ್ನುವುದು ಒಂದು ದೊಡ್ಡ ಸವಾಲಾಗುವ ಸಾಧ್ಯತೆಯಾಗಿ ಕಾಣುತ್ತಿರುವುದಾಗಿ ಬರ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು