ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದ ಉಡುಗೊರೆ ಕೊಡುವ ಮುನ್ನ..

Last Updated 31 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಹಬ್ಬಗಳ ಸಮಯದಲ್ಲಿ ಕುಟುಂಬದ ಸದಸ್ಯರಿಗೆ, ಆಪ್ತರಿಗೆ ಉಡುಗೊರೆಗಳನ್ನು ಕೊಡುವ ರಿವಾಜನ್ನು ಹಲವರು ಈಗಲೂ ಪಾಲಿಸುತ್ತಿದ್ದಾರೆ. ಈ ವರ್ಷದ ಬೆಳಕಿನ ಹಬ್ಬಕ್ಕೆ ಉಡುಗೊರೆ ಕೊಡುವ ಮೂಲಕನಿಮ್ಮ ಆಪ್ತರನ್ನು ಖುಷಿಪಡಿಸಬಹುದು. ದೀಪಾವಳಿ ಸಮಯದಲ್ಲಿ ಪಟಾಕಿ, ದೀಪಗಳು, ಸ್ವೀಟ್‌ ಬಾಕ್ಸ್‌, ಒಣ ಹಣ್ಣುಗಳು ಹೀಗೆ ವಿವಿಧ ಬಗೆಯ ಉಡುಗೊರೆಯನ್ನು ನೀಡಬಹುದು. ಈ ಮೂಲಕ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಬಹುದು. ಆದರೆ ಹಬ್ಬಕ್ಕೆ ಉಡುಗೊರೆ ಕೊಡುವ ಮುನ್ನ ಒಂದಿಷ್ಟು ವಿಷಯಗಳನ್ನು ತಿಳಿದುಕೊಂಡರೆ ಉತ್ತಮ.

ಮೊದಲೇ ಯೋಚಿಸಿ

ಹಬ್ಬಕ್ಕೆ ತಿಂಗಳು ಇರುವಾಗಲೇ ಯಾರು ಯಾರಿಗೆ ಉಡು‌ಗೊರೆ ಕೊಡಬೇಕು, ಏನನ್ನು ಕೊಡಬೇಕು, ಎಲ್ಲರಿಗೂ ಒಂದೇ ರೀತಿಯ ಉಡುಗೊರೆ ಕೊಡಬೇಕೇ ಅಥವಾ ಭಿನ್ನವಾದದ್ದೇ ಎಂಬೆಲ್ಲಾ ವಿಷಯಗಳನ್ನು ಮೊದಲೇ ಯೋಚಿಸಿ ನಿರ್ಧರಿಸಿಕೊಳ್ಳಿ. ಹಬ್ಬದ ಸಮಯದಲ್ಲಿ ಖರೀದಿ ಮಾಡುವುದು ಕಷ್ಟ. ಮಾರುಕಟ್ಟೆಗಳು ಹಾಗೂ ಶಾಪಿಂಗ್‌ ತಾಣಗಳು ಗಿಜಿಗುಡುತ್ತಿರುತ್ತವೆ. ಹಾಗಾಗಿ ಮೊದಲೇ ಖರೀದಿಸಿ ಇಟ್ಟುಕೊಳ್ಳಿ. ಅಲ್ಲದೇ ಹಬ್ಬದ ಸಮಯದಲ್ಲಿ ದರ ಏರಿಕೆಯಾಗುವುದು ಸಾಮಾನ್ಯ. ಇದರಿಂದಲೂ ಮೊದಲೇ ಖರೀದಿಸಿಟ್ಟುಕೊಳ್ಳಬಹುದು.

ಆನ್‌ಲೈನ್ ಖರೀದಿ

ಈಗೀಗ ಆನ್‌ಲೈನ್ ಖರೀದಿ ಟ್ರೆಂಡ್‌ ಹೆಚ್ಚು ಪ್ರಚಲಿತದಲ್ಲಿದೆ. ಆನ್‌ಲೈನ್‌ ಖರೀದಿ ಉತ್ತಮ ಕೂಡ. ಮನೆಯಲ್ಲೇ ಕುಳಿತುಕೊಂಡು ಏನು ಉಡುಗೊರೆ ಕೊಡಬಹುದು ಎಂದು ಯೋಚಿಸಿ ಅವರ ವಿಳಾಸಕ್ಕೆ ಕಳುಹಿಸಬಹುದು. ಇದರಿಂದ ನಿಮ್ಮ ಶ್ರಮ ಹಾಗೂ ಖರ್ಚು ಎರಡನ್ನೂ ಉಳಿಸಬಹುದು. ಆನ್‌ಲೈನ್‌ನಲ್ಲಿ ಕೆಲವೊಮ್ಮೆ ಒಂದು ಕೊಂಡರೆ ಒಂದು ಉಚಿತ, ಎರಡು ಕೊಂಡರೆ ಒಂದು ಉಚಿತ ಇಂತಹ ಆಫರ್‌ಗಳು ಇರುತ್ತವೆ. ಅದನ್ನು ನೋಡಿ ಆಯ್ಕೆ ಮಾಡಿಕೊಳ್ಳಬಹುದು.

ಅಗ್ಗದ ಮಾರಾಟ

ದೀಪಾವಳಿ ಹಬ್ಬದ ಸಮಯದಲ್ಲಿ ಕೆಲವೊಂದು ಅಂಗಡಿ ಹಾಗೂ ಮಳಿಗೆಗಳಲ್ಲಿ ಅಗ್ಗದ ಮಾರಾಟ ಮಾಡುತ್ತಾರೆ. ರಿಟೇಲ್‌ ಮಾರಾಟ ಮಾಡುವ ಅಂಗಡಿಗಳಲ್ಲಿ ಹೆಚ್ಚು ಹೆಚ್ಚು ಖರೀದಿಸಿದಾಗ ಕಡಿಮೆ ದರದಲ್ಲಿ ನೀಡುತ್ತಾರೆ. ಅಂತಹ ಅಂಗಡಿಗಳಲ್ಲೇ ಖರೀದಿಸುವುದರಿಂದ ಹಣ ಉಳಿತಾಯ ಕೂಡ ಮಾಡಬಹುದು. ರಿಟೇಲ್ ಮಳಿಗೆಗಳಲ್ಲಿ ಗುಣಮಟ್ಟವೂ ಉತ್ತಮವಾಗಿರುವ ಕಾರಣ ಅಲ್ಲಿ ಖರೀದಿ ಮಾಡಬಹುದು.

ಆಫರ್ ಇದ್ದಾಗ ಖರೀದಿಸಿಟ್ಟುಕೊಳ್ಳಿ

ನೀವು ಉಡುಗೊರೆ ಕೊಡುವ ವಸ್ತುಗಳು ಕೆಡದೇ ಇರುವಂತಹದ್ದಾಗಿದ್ದರೆ ಮೊದಲೇ ಖರೀದಿಸಿಟ್ಟುಕೊಳ್ಳಿ. ಅದರಲ್ಲೂ ಮಾಲ್‌ಗಳಲ್ಲಿ, ಆನ್‌ಲೈನ್‌ ಶಾಪಿಂಗ್ ತಾಣಗಳಲ್ಲಿ, ದೊಡ್ಡ ದೊಡ್ಡ ಮಳಿಗೆಗಳಲ್ಲಿ ಆಗಾಗ ಆಫರ್‌ಗಳನ್ನು ಹಾಕುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಖರೀದಿಸಿ ಇರಿಸಿಕೊಳ್ಳಿ. ಇದರಿಂದ ಹಣ ಉಳಿತಾಯ ಮಾಡಬಹುದು.

ಉಡುಗೊರೆ ಕೊಡುವ ಮುನ್ನ..

ಉಡುಗೊರೆ ಕೊಡುವ ಮುನ್ನ ಗುಣಮಟ್ಟವನ್ನು ಪರಿಶೀಲಿಸಿ.

ಉಡುಗೊರೆ ಕೊಡಲೇಬೇಕು ಎಂಬ ನೆಪ ಮಾತ್ರಕ್ಕೆ ಕೊಡಬೇಡಿ. ಉಡುಗೊರೆ ನಾವು ಕೊಡುವವರಿಗೆ ಮೆಚ್ಚುಗೆಯಾಗುವಂತಿರಲಿ.

ನಿಮ್ಮ ಬಜೆಟ್‌ ಅನ್ನು ಮೊದಲೇ ನೋಡಿ ನಿರ್ಧರಿಸಿಕೊಂಡು ಅದರ ಆಧಾರದ ಮೇಲೆ ಎಷ್ಟು ಜನರಿಗೆ, ಏನು ಕೊಡಬಹುದು ಎಂದು ಯೋಚಿಸಿ.

ದೀಪಾವಳಿ ಹಬ್ಬಕ್ಕೆ ಸ್ವೀಟ್‌ ಬಾಕ್ಸ್‌, ಒಣಹಣ್ಣು ಹಾಗೂ ದೀಪಗಳನ್ನು ಉಡುಗೊರೆಯಾಗಿ ನೀಡುವುದು ಉತ್ತಮ. ಭಿನ್ನ ವಿನ್ಯಾಸದ ಗೂಡುದೀಪಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅದನ್ನೂ ನೀಡಬಹುದು. ‌

ಆನ್‌ಲೈನ್‌ ಮೂಲಕ ನೇರವಾಗಿ ನೀವು ಉಡುಗೊರೆ ಕೊಡುವವರಿಗೆ ಕಳುಹಿಸಿದರೆ ಬೆಲೆ ಪಟ್ಟಿ ಸಮೇತವಾಗಿ ಅವರಿಗೆ ಡೆಲಿವರಿ ಆಗುತ್ತದೆ. ಆ ಕಾರಣಕ್ಕೆ ನಿಮ್ಮ ವಿಳಾಸಕ್ಕೆ ತರಿಸಿಕೊಂಡು ಅದನ್ನು ಪುನಃ ಪ್ಯಾಕ್ ಮಾಡಿ ಕಳುಹಿಸುವುದು ಉತ್ತಮ.

ಉಡುಗೊರೆ ಕೊಡುವ ಮುನ್ನ ಕೊನೆಯ ದಿನಾಂಕವನ್ನು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಿ.

ಉಡುಗೊರೆ ಕೊಡುವಾಗ ಪ್ಯಾಕಿಂಗ್ ಮಾಡುವುದೂ ಅಷ್ಟೇ ಮುಖ್ಯ. ಅಂದದ, ಆಕರ್ಷಕ ಪ್ಯಾಕಿಂಗ್‌ಗೆ ಹೆಚ್ಚು ಪ್ರಾಮುಖ್ಯ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT