ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಡೇನಹಳ್ಳಿಯಿಂದ ಸ್ವಿಂಡನ್‌ವರೆಗೆ...

ಬಡತನದ ನಡುವೆ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ, ವಿದೇಶದಲ್ಲಿ ಉದ್ಯಮಿ, ಕೌನ್ಸೆಲರ್ ಆದ ಕನ್ನಡಿಗನ ಹೆಮ್ಮೆಯ ಕಥೆಯಿದು
Last Updated 31 ಅಕ್ಟೋಬರ್ 2018, 17:30 IST
ಅಕ್ಷರ ಗಾತ್ರ

‘ಛಲಕ್ಕೆ ಭಾಷೆ, ಸಿರಿತನ–ಬಡತನದ ಹಂಗಿಲ್ಲ. ನಮ್ಮ ಬಗ್ಗೆ ನಮಗೆ ವಿಶ್ವಾಸವಿರಬೇಕು. ನಾವೇನೂ ಯಾರಿಗೂ ಕಡಿಮೆ ಇಲ್ಲ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ದೊಡ್ಡ ಸಾಧನೆಗೆ ಅದು ರಹದಾರಿಯಾಗುತ್ತದೆ..’

ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊಂಡೇನಹಳ್ಳಿ ಎಂಬ ಪುಟ್ಟ ಗ್ರಾಮದ ಬಡ ಕುಟುಂಬದಲ್ಲಿ ಹುಟ್ಟಿ ದೂರದ ಲಂಡನ್‌ನಲ್ಲಿ ಉದ್ಯಮಿಯಾಗಿ, ಅಲ್ಲಿನ ಸ್ವಿಂಡಲ್ ಕೌನ್ಸಿಲ್‌ಗೆ ಕಳೆದ ವರ್ಷ ಕೌನ್ಸಿಲರ್‌ ಆಗಿ ಆಯ್ಕೆಯಾಗಿರುವ ಸುರೇಶ ಗಟ್ಟಪುರ ಅವರು ತುಂಬಾ ವಿಶ್ವಾಸದಿಂದ ತಾವು ಬೆಳೆದ ಬಗೆಯನ್ನು ಹೀಗೆ ತೆರೆದಿಡುತ್ತಾರೆ.

ಬಡತನದಲ್ಲೇ ಬಾಲ್ಯ ಕಳೆದ ಸುರೇಶ, ಸರ್ಕಾರಿ ಶಾಲೆಯಲ್ಲಿ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು. ಕಾಲೇಜಿನಲ್ಲಿ ಇಂಗ್ಲಿಷ್ ಬರದೆ ನಗೆಪಾಟಲಿಗೀಡಾದವರು. ಕೊನೆಗೆ ಆಟೊಮೊಬೈಲ್ ಎಂಜಿನಿಯರಿಂಗ್ ಪದವಿ ಪಡೆದು, ಉದ್ಯೋಗಕ್ಕಾಗಿ ಶ್ರೀಲಂಕಾ, ಸ್ವಿಟ್ಚರ್‌ಲೆಂಡ್ ಅಂತ ತಿರುಗಾಡಿ, ಅಂತಿಮವಾಗಿ ಲಂಡನ್‌ನಲ್ಲಿ ಸಾಫ್ಟ್‌ವೇರ್ ಕಂಪನಿ ಸ್ಥಾಪಿಸಿದರು. ಈವರೆಗಿನ ಪಯಣದಲ್ಲಿ ತನಗೆ ನೆರವಾಗಿದ್ದು ‘ನನ್ನೊಳಗಿದ್ದ ಛಲ, ತನ್ನ ಬಗೆಗಿದ್ದ ವಿಶ್ವಾಸ’ ಎನ್ನುತ್ತಾರೆ.

ಬದುಕು ಬದಲಿಸಿದ ಸಾಫ್ಟವೇರ್...

ಆಟೊಮೊಬೈಲ್ ಎಂಜಿನಿಯರ್ ಪದವಿ ಪಡೆದ ನಂತರ ₹700 ತಿಂಗಳ ಸಂಬಳಕ್ಕೆ ಕೆಜಿಎಫ್‌ನ ಬಿಇಎಂಎಲ್‌ನಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ ಸುರೇಶ್‌ ಅವರು 1994ರಲ್ಲಿ ಬೆಂಗಳೂರಿನ ಕವಿತಾ ಅವರನ್ನು ಮದುವೆಯಾದರು. 1999ರ ಸುಮಾರಿಗೆ ಬೆಂಗಳೂರಿನಲ್ಲಿ ಆರಂಭವಾದ ‘ಸಾಫ್ಟವೇರ್ ಬಿರುಗಾಳಿ’ ಅದೇ ತಾನೆ ಬೀಸಲು ಆರಂಭಿಸಿತ್ತು.

ಆಗ ಟೆಕಿಗಳ ಸಂಬಳ ನೋಡಿ ಪತ್ನಿ ಮತ್ತು ಸ್ನೇಹಿತರ ಒತ್ತಾಯದ ಮೆರೆಗೆ ಕಂಪ್ಯೂಟರ್ ಗಂಧಗಾಳಿ ಗೊತ್ತಿಲ್ಲದಿದ್ದರೂ ಸುರೇಶ್ ಅವರು ಹಗಲಿನಲ್ಲಿ ಕೆಜಿಎಫ್‌ನಲ್ಲಿ ಕೆಲಸ ಮಾಡುತ್ತಾ ರಾತ್ರಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಕೋರ್ಸ್‌ವೊಂದರ ತರಬೇತಿ ಪಡೆದರು.

ಪತ್ನಿ ಕವಿತಾ ಅವರ ದುಡಿಮೆಯ ಹಣದಲ್ಲಿ ಕಂಪ್ಯೂಟರ್ ಖರೀದಿಸಿ, ರಾತ್ರಿ ವೇಳೆ ಕಂಪ್ಯೂಟರ್ ಕಲಿಕೆ ಶುರುವಿಟ್ಟುಕೊಂಡರು. ಜತೆಗೆ ಮೂರು ತಿಂಗಳು ಕಂಪನಿಗೆ ರಜೆ ಹಾಕಿ ವಿದೇಶಿ ಕೆಲಸ ಖಾತ್ರಿ ಎಂದ ಕೋರ್ಸ್‌ವೊಂದನ್ನು ಸಹ ಮುಗಿಸಿದರು. ತರಬೇತಿದಾರರ ವಂಚನೆಯಿಂದಾಗಿ ವಿದೇಶಕ್ಕೆ ಹೋಗುವ ಇವರ ಕನಸು ನನಸಾಗಲಿಲ್ಲ.

‘ಸೋಲೇ ಗೆಲುವಿನ ಮೆಟ್ಟಿಲು’ ಎನ್ನುವಂತೆ, ಹಲವು ಸೋಲುಗಳು ಅವರನ್ನು ಸಾಫ್ಟ್‌ವೇರ್ ಡೆವಲಪರ್ ಆಗುವಂತೆ ಉತ್ತೇಜಿಸಿತು‌. ಹೊಸ ಕೆಲಸಕ್ಕಾಗಿ ಅರಸುತ್ತಿದ್ದ ಸುರೇಶ್‌ಗೆ ಸ್ವಿಟ್ಜರ್‌ಲೆಂಡ್‌ ಕಂಪನಿಯೊಂದು ಶ್ರೀಲಂಕಾದಲ್ಲಿ ಸಾಫ್ಟ್‌ವೇರ್‌ ಕನ್ಸಲ್ಟೆಂಟ್‌ ಕೆಲಸದ ‘ಆಫರ್’ ನೀಡಿತು. ಇಲ್ಲಿಯ ಕೆಲಸ ಬಿಟ್ಟು, ಶ್ರೀಲಂಕಾದಲ್ಲಿ ಹೊಸ ವೃತ್ತಿ ಬದುಕು ಆರಂಭಿಸಿದರು.

ಆಗ ಶ್ರೀಲಂಕಾದಲ್ಲಿ ಎಲ್‌ಟಿಟಿಇ‌ ಉಗ್ರರ ಉಪಟಳ. ಒಮ್ಮೆ ಇವರು ಸಾಗುತ್ತಿದ್ದ ಕಾರಿನ ಸಮೀಪದಲ್ಲಿಯೇ ಬಾಂಬ್‌ ಸ್ಫೋಟಿಸಿ 19 ಜನ ಸತ್ತರು. ಆಗ ಇವರ ಜತೆಯಲ್ಲಿದ್ದವರು ಪ್ರಾಣಭಯದಿಂದ ಶ್ರೀಲಂಕಾ ತೊರೆದರು. ಆದರೆ ಸುರೇಶ್ ಹೆದರಲಿಲ್ಲ. ಹಗಲಿರುಳು ದುಡಿದು ಕೆಲವೇ ತಿಂಗಳಲ್ಲಿ ಕಂಪನಿಯ ಜಾಗತಿಕ ವಿಭಾಗದ ಮುಖ್ಯಸ್ಥರಾಗಿ ಬಡ್ತಿ ಪಡೆದು ಸ್ವಿಟ್ಜರ್‌ಲ್ಯಾಂಡ್‌ನತ್ತ ಪ್ರಯಾಣ ಬೆಳೆಸಿದರು.

2004ರಲ್ಲಿ ಲಂಡನ್‌ ಸರ್ಕಾರ ವಿವಿಧ ದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದವರಿಗೆ ಉಚಿತ ವೀಸಾ ಕೊಡಲಾರಂಭಿಸಿತು. ಆಗ ಇವರಿಗೂ ವೀಸಾ ಸಿಕ್ಕಿತು. ಆಗ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಸುರೇಶ್ ಅವರು ಅದೇ ವರ್ಷದ ಏಪ್ರಿಲ್‌ನಲ್ಲಿ ಲಂಡನ್‌ಗೆ ತಮ್ಮ ನೆಲೆ ಬದಲಾಯಿಸಿ, ಭಾರತದಲ್ಲಿದ್ದ ಕುಟುಂಬವನ್ನು ಅಲ್ಲಿಗೆ ಸ್ಥಳಾಂತರಿಸಿದರು.

ಲಂಡನ್‌ನಲ್ಲಿ ಆರಂಭದ ದಿನಗಳಲ್ಲಿ ಕೆಲ ಕಂಪನಿಗಳಲ್ಲಿ ಕೆಲಸ ಮಾಡಿದ ಸುರೇಶ್ ಅವರು 2013ರಲ್ಲಿ ಅಲ್ಲಿನ ಇಬ್ಬರು ಸ್ನೇಹಿತರೊಡನೆ ಪಾಲುದಾರರಾಗಿ ‘ಕೂಡಾಕ್ಸ್’ ಎಂಬ ಸಾಫ್ಟ್‌ವೇರ್ ಕಂಪನಿ ಹುಟ್ಟುಹಾಕಿದರು.

ಲಂಡನ್‌ನಿಂದ 80 ಮೈಲಿ ದೂರದ ಸ್ವಿಂಡನ್‌ನ ವೆಸ್ಲಿ ಪ್ರದೇಶದಲ್ಲಿ ವಾಸವಾಗಿರುವ ಸುರೇಶ್‌, ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಸ್ವಿಂಡನ್‌ನ ಹಿಂದೂ ದೇವಾಲಯ ನಿರ್ಮಾಣದ ರೂವಾರಿಗಳಲ್ಲಿ ಒಬ್ಬರಾದ ಸುರೇಶ್‌ ಅವರು ಸಂಕಷ್ಟದಲ್ಲಿರುವವರಿಗೆ ನೆರವಾದರು.

ಪರೋಪಕಾರದ ಗುಣದಿಂದಲೇ ಅಲ್ಲಿನ ಸ್ಥಳೀಯರ ಮೆಚ್ಚುಗೆ ಗಳಿಸಿದರು. ಅದು ಸಹಜವಾಗಿ ರಾಜಕೀಯದತ್ತ ಒಲವು ತೋರುವಂತೆ ಮಾಡಿತು. ಹೀಗಾಗಿ ಅವರು ಕನ್ಸರ್ವೇಟಿವ್ ಪಕ್ಷದಲ್ಲಿ ಗುರುತಿಸಿಕೊಂಡು ಸಕ್ರಿಯರಾದರು. ಇವರ ಉಪಕಾರ ಮನೋಭಾವವೇ 2017ರ ಮೇ ನಲ್ಲಿ ನಡೆದ ವೆಸ್ಲಿ ಕ್ಷೇತ್ರದ ಕೌನ್ಸಿಲರ್ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಲು ಕಾರಣವಾಯಿತು.

ಕನ್ನಡಿಗರಿಲ್ಲದ, ಬೆರಳೆಣಿಕೆಯ ಭಾರತೀಯ ಕುಟುಂಬಗಳಿರುವ, ಮಾಜಿ ಮೇಯರ್ ಸೇರಿದಂತೆ ಸ್ಥಳೀಯ ನಾಲ್ವರು ಘಟಾನುಘಟಿಗಳ ಸ್ಪರ್ಧೆ ಒಡ್ಡಿರುವ ಕ್ಷೇತ್ರದಲ್ಲಿ ಸುರೇಶ್‌ ಗೆಲುವಿನ ನಗೆ ಬೀರಿದ್ದು ಲಂಡನ್‌ನಲ್ಲಿರುವ ಕನ್ನಡಿಗರಿಗೇ ಅಚ್ಚರಿ ತಂದಿತ್ತು. ನಾಲ್ಕು ವರ್ಷಗಳ ಅವಧಿಗೆ ವೆಸ್ಲಿ ಕೌನ್ಸಿಲರ್ ಆಗಿ ಆಯ್ಕೆಯಾಗಿರುವ ಸುರೇಶ್‌ ಕ್ಷೇತ್ರದ ಜನರ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ.

‘ಕೆಲಸ ನಿಮಿತ್ತ ತಿಂಗಳಲ್ಲಿ 15 ದಿನ ವಿದೇಶ ಪ್ರವಾಸದಲ್ಲಿರುತ್ತೇನೆ. ಆಗೆಲ್ಲ ಕ್ಷೇತ್ರದ ಜನರ ಸಮಸ್ಯೆ ಇಮೇಲ್ ಮೂಲಕ ಬಗೆಹರಿಸುವ ಕೆಲಸ ಮಾಡುವೆ. ಮನೆಯಲ್ಲಿದ್ದಾಗ ಬೆಳಿಗ್ಗೆ 5.30ಕ್ಕೆ ಎದ್ದು 7 ಗಂಟೆ ವರೆಗೆ ಕೌನ್ಸಿಲ್ ಕೆಲಸ ಮಾಡಿ, ಬಳಿಕ ನನ್ನ ಕಚೇರಿಗೆ ಹೋಗುವೆ. ಸದ್ಯ 25 ವರ್ಷಗಳಿಂದ ಸೊರಗಿದ್ದ ಸಣ್ಣ ಕೊಳವೊಂದರ ಪುನಶ್ಚೇತನಕ್ಕೆ ಮುಂದಾಗಿದ್ದೇನೆ. ಇದು ಸ್ಥಳೀಯರಲ್ಲಿ ಮಂದಹಾಸ ಮೂಡಿಸಿದೆ’ ಎಂದು ಸಂತಸದಿಂದ ಹೇಳಿಕೊಳ್ಳುತ್ತಾರೆ ಸುರೇಶ್.

ಸುರೇಶ್‌ ಅವರ ಪತ್ನಿ ಕವಿತಾ ಅವರು ವಾಲ್‌ಮಾರ್ಟ್‌ ಕಂಪನಿಯಲ್ಲಿ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗೆ ಬ್ರಿಜೇಶ್, ಬಿಪಿನ್ ಎಂಬ ಅವಳಿ ಮಕ್ಕಳಿದ್ದಾರೆ. ಅವರಲ್ಲೊಬ್ಬ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರೆ, ಮತ್ತೊಬ್ಬ ಮಗ ವೈದ್ಯಕೀಯ ಪದವಿ ಶಿಕ್ಷಣ ಪಡೆಯುತ್ತಿದ್ದಾನೆ.

ಕಾನ್ವೆಂಟ್‌ ಶಾಲೆಗಳಲ್ಲಿ, ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ಮಕ್ಕಳು ಉನ್ನತ ಸಾಧನೆ ಮಾಡಲು ಸಾಧ್ಯ ಎನ್ನುವ ಮನಸ್ಥಿತಿ ಬಲವಾಗುತ್ತಿರುವ ಈ ಹೊತ್ತಿನಲ್ಲಿ, ಕರ್ನಾಟಕದ ಗಡಿಭಾಗದ ಪುಟ್ಟ ಹಳ್ಳಿಯೊಂದರಿಂದ ಹೋಗಿ ಲಂಡನ್‌ನಲ್ಲಿ ಯಶಸ್ವಿ ಉದ್ಯಮಿಯಾಗಿ, ಜನಪ್ರಿಯ ಜನಪ್ರತಿನಿಧಿಯಾಗಿ ಗುರುತಿಸಿಕೊಂಡಿರುವ ಇವರ ಸಾಧನೆ ಕನ್ನಡಿಗರಿಗೆ ಹೆಮ್ಮೆ ಮೂಡಿಸುವಂತಿದೆ.

**

ವಿದೇಶದಲ್ಲೂ ಅಪ್ಪಟ ಕನ್ನಡಪ್ರೇಮಿ...

ಲಂಡನ್‌ನಲ್ಲಿರುವ ‘ಕನ್ನಡ ಬಳಗ ಯುಕೆ’ ಮತ್ತು ‘ಕನ್ನಡಿಗರು ಯುಕೆ’ ಎರಡಲ್ಲೂ ಸಕ್ರಿಯ ಸದಸ್ಯರಾಗಿರುವ ಸುರೇಶ್‌ ಅವರು, ಈ ಬಳಗಗಳು ನವೆಂಬರ್‌ನಲ್ಲಿ ಲಂಡನ್ ಮತ್ತು ಕೇಂಬ್ರಿಡ್ಜ್‌ನಲ್ಲಿ ನಡೆಸುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಪ್ಪದೆ ಭಾಗವಹಿಸುತ್ತಾರೆ.

ಸ್ವಿಂಡನ್‌ನಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆರಂಭಿಸಿದವರಲ್ಲಿ ಇವರೇ ಮೊದಲಿಗರು. ಆ ಮೂಲಕ ಯುಗಾದಿ, ಸಂಕ್ರಾಂತಿ, ದೀಪಾವಳಿ, ಗಣೇಶ ಚತುರ್ಥಿ ಸೇರಿದಂತೆ ಅನೇಕ ಹಬ್ಬಗಳ ನೆಪದಲ್ಲಿ ಕನ್ನಡಿಗರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ವಿದೇಶದಲ್ಲಿ ನಮ್ಮ ಭಾಷೆ, ನೆಲಮೂಲದ ಸಂಸ್ಕೃತಿಯ ಅರಿವಿನ ದೀವಿಗೆ ಆರದಂತೆ ನೋಡಿಕೊಳ್ಳುತ್ತಿದ್ದಾರೆ. ತಮ್ಮ ಮಕ್ಕಳಲ್ಲಿ ಕೂಡ ಕನ್ನಡ ಪ್ರೇಮ ಕಡಿಮೆಯಾಗದಂತೆ ನೋಡಿಕೊಂಡಿದ್ದಾರೆ. ವಿಶೇಷವೆಂದರೆ ಇವರು ಸದ್ಯ ‘ಲಂಡನ್‌ನಲ್ಲಿ ಲಂಬೋದರ್’ ಎಂಬ ಕನ್ನಡ ಚಿತ್ರ ನಿರ್ಮಾಣದಲ್ಲಿ ಸಹ ಪಾಲುದಾರರಾಗಿದ್ದಾರೆ.

ಲಂಡನ್‌ನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸುವ ಹೊತ್ತಿಗೆ ವಿದ್ಯಾರ್ಥಿಗಳು ಬಡಗಿತನ, ಫ್ಲಂಬಿಂಗ್ ಸೇರಿದಂತೆ ಹತ್ತಾರು ಕೌಶಲಗಳನ್ನು ಕಲಿತಿರುತ್ತಾರೆ. ಅದೇ ರೀತಿ ಭಾರತದಲ್ಲಿರುವ ಕೌಶಲ ಶೂನ್ಯ, ಅಂಕಕ್ಕೆ ನೇತು ಬೀಳುವ ಶಿಕ್ಷಣ ಪದ್ಧತಿ ಬದಲಾಗಬೇಕಿದೆ. ವಿದ್ಯಾರ್ಥಿಗಳು ಯಾರದೋ ಒತ್ತಡಕ್ಕೆ ಬೇಡದ್ದನ್ನೆಲ್ಲ ಕಲಿಯುವ ಬದಲು ತಮಗೆ ಇಷ್ಟಪಟ್ಟದ್ದು ಕಲಿಯುವ ವಾತಾವರಣ ನಿರ್ಮಾಣವಾಗಬೇಕು ಎನ್ನುತ್ತಾರೆ ಸುರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT