ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌ನಲ್ಲಿ ಮಂಡ್ಯಂ ಸಾಧನೆ

Last Updated 11 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಹಾಲಿವುಡ್‌ನಲ್ಲಿ ದಾಖಲೆ ಸೃಷ್ಟಿಸಿದ್ದ ಜೇಮ್ಸ್‌ ಬಾಂಡ್‌ ಸರಣಿಯ ‘ಸ್ಪೆಕ್ಟರ್‌’ ಸಿನಿಮಾ ನೋಡಿದವರಿಗೆ ಅದರಲ್ಲಿ ಬಳಕೆ ಮಾಡಿರುವ ಆಸ್ಟನ್‌ ಮಾರ್ಟಿನ್‌ ಕಂಪನಿಯ ಡಿಬಿ–10 ಕಾರು ನೆನಪಿರಲೇಬೇಕು. ಕಾರಿನ ಚೇಸಿಂಗ್‌ ದೃಶ್ಯವಂತೂ ಸಿನಿಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುತ್ತದೆ. ಅದರಲ್ಲೇನು ವಿಶೇಷ ಅಂತೀರಾ?

ಹೌದು, ವಿಶೇಷ ಇದೆ. ಏನೆಂದರೆ, ಆ ಡಿಬಿ–10 ಕಾರಿನ ತಂತ್ರಾಂಶ ರೂಪಿಸಿದ ಎಂಜಿನಿಯರ್‌ಗಳಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಹೃಷಿಕೇಶ್‌ ಮಂಡ್ಯಂ ಇದ್ದಾರೆ.

ಲಂಡನ್‌ನ ಸ್ಕೈಶಿಪ್‌ ಆಟೊಮೋಟಿವ್‌ ಲಿಮಿಟೆಡ್‌ನಲ್ಲಿ ಉದ್ಯೋಗಿಯಾಗಿರುವ ಹೃಷಿಕೇಶ್‌, ಕಾರುಗಳ ಒಳವಿನ್ಯಾಸ ಹಾಗೂ ತಂತ್ರಾಂಶಕ್ಕೆ ಸಂಬಂಧಿಸಿದ ಕೆಲಸ ಮಾಡುತ್ತಾರೆ. ಸುಮಾರು ₹3 ಕೋಟಿ ಮೌಲ್ಯದ ಡಿಬಿ–10 ಕಾರನ್ನು ಸ್ಪೆಕ್ಟರ್‌ ಸಿನಿಮಾಕ್ಕೆಂದೇ ತಯಾರಿಸಲಾಗಿತ್ತು. ಡೇನಿಯಲ್‌ ಕ್ರೇಗ್‌ ಓಡಿಸುವ ಈ ಕಾರು ಬಹಳಷ್ಟು ಜನಪ್ರಿಯವೂ ಆಗಿತ್ತು.

ಕೊವೆಂಟ್ರಿ ವಿವಿಯಲ್ಲಿ ಪದವಿ

ಲಂಡನ್‌ ಸಮೀಪದ ಕೊವೆಂಟ್ರಿ ವಿಶ್ವವಿದ್ಯಾಲಯದಲ್ಲಿ ಆಟೊಮೋಟಿವ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹೃಷಿಕೇಶ್‌, ಸ್ಕೈಶಿಪ್‌ ಆಟೊಮೋಟಿವ್‌ ಲಿಮಿಟೆಡ್‌ನಲ್ಲಿ ಎಂಟು ವರ್ಷಗಳಿಂದ ಮುಖ್ಯ ಡಿಸೈನ್‌ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಚಿಕ್ಕಂದಿನಿಂದಲೂ ನನಗೆ ಕಾರುಗಳ ಮೇಲೆ ಪ್ರೀತಿ ಹೆಚ್ಚು, ಹಾಗಾಗಿ ಆಟೊಮೋಟಿವ್‌ ಎಂಜಿನಿಯರಿಂಗ್‌ ವಿಷಯ ಆಯ್ಕೆ ಮಾಡಿಕೊಂಡೆ, ಲಂಡನ್‌ನ ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ಸಿಕ್ಕಿತು, ಆರಂಭದಿಂದಲೂ ಅಲ್ಲಿಯೇ ಕೆಲಸ ಮಾಡುತ್ತಿದ್ದೇನೆ. ಹಲವು ಪ್ರಾಜೆಕ್ಟ್‌ಗಳನ್ನು ಮಾಡಿ ಯಶಸ್ವಿಯಾಗಿದ್ದೇನೆ. 2015ರಲ್ಲಿ ಜೇಮ್ಸ್‌ ಬಾಂಡ್‌ ಚಿತ್ರ ನಿರ್ಮಾಣದ ಸಂದರ್ಭದಲ್ಲಿ ನಾಯಕನ ಕಾರಿನ ಒಳಭಾಗವನ್ನು ವಿನ್ಯಾಸ ಮಾಡಿಸಲು ಅನೇಕ ಕಾರು ಕಂಪನಿಗಳನ್ನು ಶೋಧಿಸಿದ ಚಿತ್ರತಂಡ, ಕೊನೆಗೆ ಸ್ಕೈಶಿಪ್‌ ಕಂಪನಿಯನ್ನು ಆಯ್ಕೆ ಮಾಡಿತು. ಕಂಪನಿಯವರು ಕಾರು ವಿನ್ಯಾಸ ತಂಡದಲ್ಲಿ ನನಗೆ ಅವಕಾಶ ಕೊಟ್ಟಿದ್ದು ತುಂಬಾ ಖುಷಿ ಕೊಟ್ಟಿದೆ’ ಎನ್ನುತ್ತಾರೆ ಹೃಷಿಕೇಶ್‌. ‘ಬಾಂಡ್‌ ಸರಣಿಯ 24ನೇ ಸಿನಿಮಾ ‘ಸ್ಪೆಕ್ಟರ್‌’ಗಾಗಿ 10 ಕಾರುಗಳನ್ನು ವಿನ್ಯಾಸಗೊಳಿಸಲಾಗಿತ್ತು, ಅದರಲ್ಲಿ ಎರಡು ಕಾರುಗಳು ಜಖಂಗೊಂಡಿದ್ದವು. ಗಂಟೆಗೆ 200 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿತ್ತು’ ಎಂದು ಮಾಹಿತಿ ಹಂಚಿಕೊಂಡರು.

ಬೆಂಗಳೂರಲ್ಲಿ ಓದಿದ್ದು

33ರ ಹರೆಯದ ಹೃಷಿಕೇಶ್‌, ಬೆಂಗಳೂರಿನ ಬಸನವಗುಡಿಯ ಬಿಬಿಯುಎಲ್‌ ಜೈನ್‌ ವಿದ್ಯಾಲಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು, ನ್ಯಾಷನಲ್‌ ಕಾಲೇಜಿನಲ್ಲಿ ಪಿಯುಸಿಯನ್ನು ಹಾಗೂ ಬಿಎಂಎಸ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿದ್ದಾರೆ. ಉತ್ತಮ ಶ್ರೇಣಿಯಲ್ಲಿ ಪದವಿ ಪೂರೈಸಿದ್ದಾರೆ. ಆರಂಭದಲ್ಲಿ ಮೈಸೂರಿನ ಇನ್ಫೋಸಿಸ್‌ನಲ್ಲಿ ಎರಡು ವರ್ಷ ಕೆಲಸ ಮಾಡಿ, ಆಟೊಮೋಟಿವ್‌ ಎಂಜಿನಿಯರಿಂಗ್‌ನಲ್ಲಿ ಆಸಕ್ತಿ ಇದ್ದುದರಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ಹೋದರು. ಕ್ಯಾಂಪಸ್‌ ಸಂದರ್ಶನದಲ್ಲಿ ಸ್ಕೈಶಿಪ್‌ ಆಟೊಮೋಟಿವ್‌ ಲಿಮಿಟೆಡ್‌ಗೆ ಆಯ್ಕೆಯೂ ಆದರು. ಈಗ ಜಾಗ್ವರ್‌ ಲೋಟಸ್‌, ಪಗನಿ ಹೌರಾ ಕಾರುಗಳ ವಿನ್ಯಾಸ ಹಾಗೂ ತಂತ್ರಾಂಶ ರೂಪಿಸುವ ಮೂಲಕ ಹೆಸರು ಮಾಡಿದ್ದಾರೆ. ಇವರು ಕಾರು ರ‍್ಯಾಲಿಯನ್ನೂ ಆಯೋಜಿಸಿದ್ದಾರೆ.

ಪ್ರತಿಭಾ ಪ್ರದರ್ಶನ

ಹೃಷಿಕೇಶ್‌ ಮಂಡ್ಯಂ ಅವರು ‘ಸೆಲ್ಫ್‌ ಡ್ರೈವಿಂಗ್‌ ಟ್ರಾನ್ಸ್‌ಪೋರ್ಟ್‌’ಗೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್‌ನಲ್ಲಿ ನಡೆದ ‘ದುಬೈ ವರ್ಲ್ಡ್‌ ಕಾಂಗ್ರೆಸ್‌’ಗೆ ಆಯ್ಕೆಯಾಗಿ ಸ್ಮಾರ್ಟ್‌ ಇನ್ಫ್ರಾಸ್ಟ್ರೆಕ್ಚರ್‌ ಅಂಡ್‌ ಕನೆಕ್ಟಿವಿಟಿ ಬಗ್ಗೆ ವಿಷಯ ಮಂಡಿಸಿದ್ದರು. ವಿಶ್ವದ ವಿವಿಧ ದೇಶಗಳ ಪ್ರಖ್ಯಾತ ಕಂಪನಿಗಳಿಂದ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡುವುದುವಿಚಾರ ಸಂಕಿರಣದ ವಿಶೇಷ.

ಹೃಷಿಕೇಶ್‌ ಅವರ ತಂದೆ ಕೃಷ್ಣಕುಮಾರ್‌ ಮಂಡ್ಯಂ, ತಾಯಿ ಲತಾ ಸಾರಥಿ ಮೈಸೂರಿನಲ್ಲಿ ನೆಲೆಸಿದ್ದಾರೆ.‘ನಮ್ಮ ಮಗ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಒಳ್ಳೆಯ ಹೆಸರು ಮಾಡಿರುವುದು ತುಂಬಾ ಸಂತಸ ತಂದಿದೆ.‘ಸ್ಪೆಕ್ಟರ್‌’ ಸಿನಿಮಾಕ್ಕೆ ಕಾರಿನ ತಂತ್ರಾಂಶ ರೂಪಿಸಿ ಯಶಸ್ವಿಯಾದ, ಅಲ್ಲದೇ ಹಲವು ಪ್ರಾಜೆಕ್ಟ್‌ಗಳನ್ನು ಮಾಡಿ ಮೆಚ್ಚುಗೆ ಪಡೆದಿರುವುದು ದೇಶಕ್ಕೂ, ನಮಗೂ ಕೀರ್ತಿ ತಂದಿದ್ದಾನೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಕೃಷ್ಣಕುಮಾರ್‌ ಮಂಡ್ಯಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT