ಸೋಮವಾರ, ಫೆಬ್ರವರಿ 24, 2020
19 °C

Valentine Day | ಅಧ್ಯಾತ್ಮದ ಒಲವೇ ಪ್ರೀತಿಯ ಹಾದಿಯಾಯಿತು

ವ್ಯಾಲಂಟೈನ್ ಡೇ ಸ್ಪೆಷಲ್‌ Updated:

ಅಕ್ಷರ ಗಾತ್ರ : | |

ನನ್ನ ಪ್ರಕಾರ ಪ್ರೀತಿಗೂ ಅಧ್ಯಾತ್ಮಕ್ಕೂ ಬಹಳ ಏನು ವ್ಯತ್ಯಾಸ ಇಲ್ಲ. ಅಧ್ಯಾತ್ಮದಲ್ಲಿ ನಮ್ಮನ್ನ ನಾವು ಸಂಪೂರ್ಣವಾಗಿ ಆ ಸೃಷ್ಟಿಕರ್ತನಿಗೆ ಸಮರ್ಪಿಸಬೇಕಾಗತ್ತೆ. ನಾವು, ನಮ್ಮ ಪ್ರಪಂಚ ಎಲ್ಲವು ಅವನಲ್ಲೇ ಲೀನವಾಗುತ್ತದೆ. ಜೀವಾತ್ಮ ಮತ್ತು ಪರಮಾತ್ಮ ಎಂಬ ಎರಡು ಅಸ್ತಿತ್ವಗಳು ಒಂದೇ ಅನ್ನೋ ಭಾವ ಹುಟ್ಟುತ್ತದೆ.

ಪ್ರೀತಿಯಲ್ಲಿಯೂ ಹಾಗೆಯೇ ಅಲ್ಲವೇ? ನಾವು ಸಂಪೂರ್ಣವಾಗಿ ನಮ್ಮ ಸಂಗಾತಿಗೆ ಶರಣಾಗಿ ಬಿಡುತ್ತವೆ. ಬಿಟ್ಟೂ ಬಿಡದೆ ಅವರದೇ ಯೋಚನೆ ಮನೆ ಮಾಡುತ್ತದೆ. ಮನಸು ಅವನಲ್ಲೇ ಲೀನವಾಗಿರುತ್ತದೆ, ದೇಹ ಎರಡು ಆಗಿದ್ದರು ಜೀವ ಭಾವ ಒಂದೇ ಆಗಿ ಹೋಗಿರುತ್ತದೆ. ಎಷ್ಟೊಂದು ಸಾಮ್ಯತೆ ಇದೆ ಎರಡರಲ್ಲೂ!!

ಹೌದು ಪ್ರೀತಿಸುವವರಿಗೆ ಪ್ರೀತಿನೂ ಒಂದು ತರಹ ದೇವರೇ. ಪ್ರೀತಿಯಿಂದನೇ ಜಗ ನಡೆಯುತ್ತಿದೆ, ನಲಿಯುತ್ತಿದೆ. ಪ್ರತಿಯೊಂದು ಜೀವದ ಹೃದಯದ ಉಸಿರಾಟಕ್ಕೆ ಪ್ರೀತಿಯೇ ಆಮ್ಲಜನಕ. ಪ್ರತಿ ಜೀವದ ಮೂಲಗುಣಗಳಲ್ಲಿ ಪ್ರೀತಿಯು ಪ್ರಮುಖವಾದದ್ದು, ಪವಿತ್ರವಾದದ್ದು.

ನಾನು ಯಾಕೆ ಇಷ್ಟೊಂದು ಅಧ್ಯಾತ್ಮದ ಬಗ್ಗೆ ಹೇಳ್ತಾ ಇದ್ದೀನಿ ಅಂತ ಅಂದ್ರೆ, ನಾನು ಪ್ರೀತಿಸುವ ಹುಡುಗನಿಗೆ ಅಧ್ಯಾತ್ಮದ ಹುಚ್ಚು. ಸನ್ಯಾಸಿ ಆಗೋ ಆಶೆ ಇದೆ. ನಾನು ಈ ವಿಷಯಕ್ಕೆ ಖುಷಿ ಪಡೋಬೇಕೋ. ದುಃಖ ಪಡಬೇಕೋ ಗೊತ್ತಿಲ್ಲ. ಆದ್ರೆ ನಾನು ಅವನಿಗೆ ಮನ ಸೋತಿದ್ದು ಈ ವಿಚಾರಕ್ಕೆ. ಅವನ ಈ ಅಧ್ಯಾತ್ಮದ ಆಸಕ್ತಿಯೇ ನನ್ನಲ್ಲಿ ಪ್ರೀತಿಯ ಹುಟ್ಟಿಗೆ ಕಾರಣವಾಗಿದೆ. ಹೀಗಿರುವಾಗ ನಾನು ಆಗಾಗ ಅವನನ್ನು ಭೇಟಿ ಆಗಿ ಅಧ್ಯಾತ್ಮದ ಬಗ್ಗೆನೇ ಚರ್ಚೆ ಮಾಡ್ತಾ ಇದ್ದೆ. ಪ್ರೊಪೋಸ್ ಮಾಡಬೇಕು ಅಂತ ಬಂದಾಗ ನನಗೆ ಹೊಳೆದಿದ್ದು ಇದೆ.

ಸನ್ಯಾಸತ್ವದ ಒಂದು ದೊಡ್ಡ ಹೊತ್ತಿಗೆಯನ್ನು ಖರೀದಿಸಿ, ಅದರ ಒಳ ಪುಟಗಳಲ್ಲಿ ಒಂದು ಹಾರ್ಟ್ ಚಿತ್ರ ಬಿಡಿಸಿದ್ದೆ. ನನ್ನ ಹೆಸರು ಅವನ ಹೆಸರು ಸೇರಿಸಿ ಒಂದು ಹೊಸ ಹೆಸರು ತಯಾರಿಸಿ ನಮ್ಮಿಬ್ಬರ ಪ್ರೀತಿಗೆ ಈ ಹೆಸರು ಇಟ್ಟಿದ್ದೆ. ಈ ಹೆಸರನ್ನು ಆ ಹಾರ್ಟ್ ಒಳಗೆ ಬರೆದ ಪುಸ್ತಕವನ್ನು ಅವನಿಗೆ ಗಿಫ್ಟ್ ಮಾಡಿದ್ದೆ.

ಅದ್ರಲ್ಲಿ ಒಂದು ಕಡೆ ನನ್ನ ಹಸ್ತಾಕ್ಷರಗಳಲ್ಲಿ ‘ನೀವು ಸನ್ಯಾಸಿ ಆಗಿ, ನಾನು ಸನ್ಯಾಸಿನಿ ಆಗುವವಳಿದ್ದೀನಿ’ ಅಂತ ನೋಟ್ ಬರೆದಿದ್ದೆ. ಇದು ನಾನು ಪ್ರೊಪೋಸ್ ಮಾಡಿದ್ದ ಪರಿ. ಆಸಕ್ತಿ ಹವ್ಯಾಸಗಳು ಒಂದೇ ಆದಾಗ ಪ್ರೀತಿ ಫಲಿಸದೆ ಇರುತ್ತದೆಯೇ? ಅವರು ಈ ಪ್ರೀತಿಯನ್ನು ಒಪ್ಪಿದರು.

ನನ್ನ ಅದೃಷ್ಟ ನಾವು ಸನ್ಯಾಸಿಗಳಾಗಲಿಲ್ಲ. ಪ್ರೀತಿಯ ಪಾರಿವಾಳಗಳಾಗಿ ಬಾನಲ್ಲಿ ಇನ್ನು ಹಾರಾಡುತ್ತಿದ್ದೇವೆ.

–ವಿಮುಕ್ತೆ

***

ಪ್ರೇಮ ಪ್ರಸ್ತಾವದ ಮಧುರ ನೆನಪುಗಳನ್ನು ಹಂಚಿಕೊಳ್ಳಲು ‘ಪ್ರಜಾವಾಣಿ’ ನೀಡಿದ ಕರೆಗೆ ಸಾಕಷ್ಟು ಜನರು ಓಗೊಟ್ಟರು. ಪ್ರಸ್ತಾವದ ಗಾಢ ನೆನಪುಗಳನ್ನು ಹೊಂದಿರುವ ಆಯ್ದ ಕೆಲ ಬರಹಗಳು ಇಲ್ಲಿವೆ. ನಿಮಗೆ ಯಾವ ಪ್ರಸ್ತಾವ ಇಷ್ಟವಾಯಿತು? ಕಾಮೆಂಟ್‌ ಮಾಡಿ ತಿಳಿಸಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಮೂರು ಬರಹಗಳಿಗೆ ‘ಅಮೆಜಾನ್‌ ಇಕೋ ಡಾಟ್‌‘ ಬಹುಮಾನವೂ ಇದೆ. ಫೆ.18ರಂದು ವಿಜೇತರ ವಿವರ ಪ್ರಕಟವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು