ಸೋಮವಾರ, ಫೆಬ್ರವರಿ 24, 2020
19 °C

Valentine Day | ಕಣ್ಮಣಿಯೇ... ಪ್ರೀತಿ–ಪ್ರೇಮ ಮಾತೆಲ್ಲ ಕಾಲಹರಣ...

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

Prajavani

ಕ್ಲಾಸ್‌ರೂಮಿನೊಳಗೆ ಪಾಠ ಕೇಳುತ್ತಲೇ ತನ್ನೆರಡು ಕೈಬೆರಳುಗಳನ್ನು ಚುಂಬಿಸಿ, ಅದನ್ನು ಪಿಸ್ತೂಲಿನಂತೆ ಮಡಚಿ ತನಗೆ ಕಣ್ಣು ಹೊಡೆದ ಹುಡುಗನಿಗೆ ಟ್ರಿಗ್ಗರ್ ಎಳೆದು ಬಿಟ್ಟು, ಕಣ್ಣು ಮಿಟುಕಿಸಿದಂತೆ ಮಾಡಿ ಹುಡುಗನ ಬಲೆಗೆ ಹಾಕಿಕೊಂಡ ಹುಡುಗಿಯಂತೆ ನಂಗ್ಯಾರೂ ಮಾಡಿದ್ದು ನೆನಪಿಲ್ಲವಲ್ಲ  ಎಂದು ‘ಒರು ಅಡಾರ್‌ ಲವ್‌' ಸಿನಿಮಾ ಸೀನ್‌ ನೆನಪಿಸಿಕೊಳ್ಳುತ್ತಲೇ ಎದ್ದವನಿಗೆ ಹಾಲ್‌ನ ಟಿ.ವಿ.ಯಿಂದ ಹಾಡೊಂದು ಕವಿಗಪ್ಪಳಿತು... 

ಕಣ್ಮಣಿಯೇ... ಕಣ್ಣು ಹೊಡಿಯೇ!
ಕೈಯ ಹಿಡಿಯೆ... ಕನ್ಯಾಮಣಿಯೆ!

ಉಸಿರಾಡಲು ಜಾಗವೇ ಇಲ್ಲ
ಬಿಸಿ ಎಷ್ಟಿದೆ ದೇವರೇ ಬಲ್ಲ...

–ಕೀರಲು ಕಂಠದಲ್ಲಿ ಕಿರುಚಾಡುವ ಹಾಡಿಗೆ ಬಳುಕುತ್ತಿದ್ದ ಕನ್ಯಾಮಣಿಯ ಕುಡಿನೋಟಕ್ಕೆ ಸುದೀಪ್‌ ಕಣ್ಣಲ್ಲೇ ನುಂಗುವಂತೆ ನೋಡುತ್ತ ಹೆಜ್ಜೆ ಹಾಕಿದ್ದು ನನ್ನ ಮನಸ್ಸಿಗೆ ನಾಟಿ ಅರೆಕ್ಷಣ ರೋಮ್ಯಾಂಟಿಕ್‌ ಮೂಡಿಗೆ ತಿರುಗಿಯೇ ಬಿಟ್ಟೆ... ‘ಕಣ್ಮಣಿಯೇ.. ಕಣ್ಣು ಹೊಡಿಯೇ! ಕೈಯ ಹಿಡಿಯೆ...ಕನ್ಯಾಮಣಿಯೆ!’ ಎಂದು ಎರಡು ಸಾಲು ಗುನುಗಿದೆ...

‘ಥೂ ನೀಮಗೇನು? ಬೆಳಬೆಳಿಗ್ಗೆ...ಅವರೇನೋ ಲವರ್ಸು ಹಾಡಿಕೊಳ್ತಾರೆ ನಿಮ್ಮದೇನು?’ ಎಂಬ ಧಾಟಿಯಲ್ಲಿ ಹೆಂಡತಿಯ ಬಿರುನುಡಿ ಅದೆಲ್ಲಿಂದಲೋ ಕೇಳಿಬಂತಪ್ಪಾ.

ರಿಮೋಟ್‌ ಒತ್ತಿ ಹಾಡು ಮ್ಯೂಟ್‌ ಮಾಡಿದೆ. ಪೇಪರ್‌ನತ್ತ ಕಣ್ಣು ಹಾಯಿಸಿದೆ. ಅಲ್ಲಿ ನೋಡಿದರೆ ವ್ಯಾಲೆಂಟೈನ್ಸ್ ಡೇ ಜಾಹೀರಾತು. ‘ನಿಮ್ಮ ಪ್ರೇಮಿಯನ್ನು ಒಲಿಸಿಕೊಳ್ಳಲು ಇದಕ್ಕಿಂತ ಸುಸಮಯ ಎಲ್ಲಿದೆ? ಆಕೆಯ ಮೊಗದಲ್ಲಿ ಹರಡುವ ಖುಷಿಯ ಬೆಳಕು ನೋಡದಷ್ಟು ಕಠಿಣ ಹೃದಯಿಯೇ ನೀವು...’ ಎಂಬಿತ್ಯಾದಿ ಒಕ್ಕಣೆಯೊಂದಿಗಿನ ಜಾಹೀರಾತು...

ಎಲ್ಲಿ ನೋಡಿದಲ್ಲೂ ನೀನೇ ಅಡಗಿ ಕೂತಂತೆ/ ಹರಿದ ನೋಟಿನಂತೆ ನಾನೆ ತಿರುಗಿ ಬಂದಂತೆ ...

ಫೆಬ್ರುವರಿ ತಿಂಗಳು ಬಂದ ಕೂಡಲೇ ಅದೆಲ್ಲಿಂದ ಪ್ರೇಮದ ಘಮಲು ಎಲ್ಲರ ತಲೆಗೇರುತ್ತದೆಯೋ ನಾನರಿಯೆ... ಅಷ್ಟು ದಿನ ಕಾಣದ್ದು ಧುತ್ತೆಂದು ಒತ್ತರಿಸಿಕೊಂಡು ಬಂದು ಫೆ.14ರ ಹೊತ್ತಿಗೆ 102 ಡಿಗ್ರಿ ಜ್ವರದಂತೆ ಮೈಸುಡುತ್ತದೆ. ರೋಸ್‌ ಡೇ ಯಿಂದ ಆರಂಭವಾಗಿ ವ್ಯಾಲೆಂಟೈನ್‌ ಡೇ ಯಲ್ಲಿ ಸಮಾಪ್ತಿಗೊಳ್ಳುವ ಪರಿ ಮಾಘ ಮಾಸದ ಮಹಾ ಜಾತ್ರಾ ಮಹೋತ್ಸವವೇ ಬಿಡಿ!! ಪ್ರೇಮಿಗಳ ಪಾಡು ಅಯ್ಯೋ ನೋಡಲಾರೆ; ಆದರೂ ಯಾಕೆ ಪ್ರೀತಿ ಮಾಡುತ್ತಾರೆ? ಪ್ರೀತಿ ಎಂದರೆ ಕೆಲಸವಿಲ್ಲದ ಎರಡು ಹೃದಯಗಳ ಗ್ರಹಚಾರ; ಪ್ರೀತಿ–ಪ್ರಣಯ ಮಾತೆಲ್ಲ ಕಾಲಹರಣ...

ಅದೃಷ್ಟವಿದ್ದವರು, ಬಲೆಗೆ ಬೀಳಿಸಿಕೊಂಡವರು ಸೋಷಿಯಲ್‌ ಮೀಡಿಯಾದ ಎಮೋಜಿಯಂತೆ ಮುಖವರಳಿಸಿಕೊಂಡರೆ, ಸೋತವರು, ಹೃದಯ ಹೋಳಾಗಿಸಿಕೊಂಡವರು ಹ್ಯಾಪ್‌ಮೋರೆಯಲ್ಲಿ ಓಡಾಡುವುದನ್ನು ನೋಡುವುದು ಅದೆಷ್ಟು ಆನಂದವೋ... ಪ್ರತಿ ವರ್ಷ ಈ ಫೆಬ್ರುವರಿ ಎರಡನೇ ವಾರದ ಮಜವೇ ಮಜಾ ಬಿಡಿ...

‘ಪ್ರೇಮವೆನಲು ಹಾಸ್ಯವೇ?ಎಂದು ನೀವು ಕೊಂಕು ನುಡಿಯಬೇಡಿ;ತಮಾಷೆ ಮಾಡಬೇಡಿ. ಅದು ಅಷ್ಟು ಸರಳವಲ್ಲ’

‘ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು, ಕಾಣದೊಂದು ಕನಸ ಕಂಡು...ಪ್ರೇಮವೆನಲು ಹಾಸ್ಯವೇ?’ ಊಹೂಂ ಖಂಡಿತವಾಗಿಯೂ ಹಾಸ್ಯ ಅಲ್ಲವೇ ಅಲ್ಲ. ನನಗಂತೂ ಪ್ರೇಮವಿವಾಹ ಆಗುವ ಅದೃಷ್ಟ ದೊರಕದ್ದಕ್ಕೆ ನಾನು ಪ್ರೇಮಿಗಳನ್ನು/ಪ್ರೇಮವಿವಾಹವನ್ನು ಅತ್ಯಂತ ಕುತೂಹಲಿಯಾಗಿಯೇ ನೋಡುತ್ತೇನೆ.

ಸುಸಮಯದಲ್ಲಿ ಹುಡುಗಿಯರಿಗೆ ಬಾದಾಮಿ, ಪಿಸ್ತಾ, ಗೋಡಂಬಿ, ಕಡ್ಲೆಬೀಜದಂತಹ ‘ಕಾಳು’ ಹಾಕುವ ಸಂಪ್ರದಾಯಕ್ಕೆ ಹೋಗಿಲ್ಲ. ಒಲವಿನ ಓಲೆ ಬರೀಲಿಲ್ಲ...‘ನಿನ್ನ ದಾವಣಿಯಲಿ ನೇಯ್ದಂಥ ಎಳೆಯಾಗಲೇ/ ನಿನಗೆಂದೇ ಅಂಗಡಿಯಲಿ ಆಯ್ದ ಬಳೆಯಾಗಲೇ’ ಎಂದಿಲ್ಲ... ಛೇ! ಹೀಗಾಗಿ ಈ ಪ್ರೀತಿಸಿ ಮದುವೆಯಾದವರನ್ನು ಕಂಡಾಗ ‘ಅರೆರೇ ನಾವೂ ಹಂಗೇ ಮದುವೆಯಾಗಬೇಕಿತ್ತಲ್ಲ’ ಅಂತ ಒಮ್ಮೊಮ್ಮೆ ಅನ್ನಿಸಿ ನೀಡುಸುಯ್ದಿದ್ದಿದೆ.

‘ಪ್ರೀತಿಸಿ ಮದುವೆಯಾದವರೆಲ್ಲ ಖುಷಿಯಾಗಿಲ್ರೀಪಾ;ನೋಡ್ತೀರಲ್ಲ, ಟಿವಿಯ್ಯಾಗ, ಪೇಪರ್‌ನ್ಯಾಗ, ಆಚೀಚೆ ಮನ್ಯಾಗ, ಗಂಡ–ಹೆಂಡ್ತಿ ದಿನಾ ರಣರಂಗ ಮಾಡಿಕೊಳ್ಳೋದು, ಹೆಂಡ್ತಿ ಬ್ಯಾಗ್‌ ಎತ್ತಿಕೊಂಡು ತವರು ಮನೀಗೆ ಹೋಗೋದು, ಗಂಡ–ಹೆಂಡ್ತಿ ಹೊಡ್ಕೊಂಡು ಹಲ್ಲುಮುರಕೊಳ್ಳೋದು; ಇನ್ನು ಕೆಲವ್ರು ಜಗಳಾಡಿ ಹೊಡೆದಾಡಿ ಕೈಕಾಲೇ ಮುರ್ಕೋತಾರ್ರೀ; ಮೊನ್ನೆ ಏನಾಯ್ತೂ ಅಂದ್ರೆ... ಥೋ ಥೋ ಬಿಡ್ರೀ,...ಲವ್‌ ಮ್ಯಾರೇಜ್‌ ಆಗದಿದ್ರೇ ಛಲೋ ಬಿಡ್ರೀಪಾ...’ ಅಂತ ಸ್ನೇಹಿತರು, ಪಕ್ಕದ ಮನೆ ಅಂಕಲ್‌ ಅಂದಾಗ ಹೌದಲ್ವಾ; ಅಂತ ತಲೆಯಾಡಿಸಿ ಸಮಾಧಾನ ಮಾಡಿಕೊಂಡೀನಿ...ಮನವ ಸಂತೈಸಿಕೊಂಡೀನಿ!

ಆದರೂ ಮನದಲ್ಲಿ ಹುಚ್ಚೆಬ್ಬಿಸುವ ಭಾವುಕತೆಗೇನು ಮದ್ದು? ಆಕಾಶದಿ ಕಲೆಯಾಗಿದೆ...ಈ ಗಾಯ ಹಸಿಯಾಗಿದೆ...

‘ಮಳೆಯಲಿ ಮಿಂದ ಹೂವಿನ ಹಾಗೆ ಮಿನುಗುವೆ ಏಕೆ, ನನ್ನೊಲವೇ... ಕನಸಲಿ ಕಂಡ ದೇವರ ಹಾಗೆ... ಸೆಳೆಯುವ ಏಕೆ ನನ್ನೊಲವೇ... ಹೃದಯದ ಮಾತು ಆಲಿಸು ಪೂರ... ಕಂಪಿಸುವಾಗ , ಈ ಕೋರಳು... ಚಿಂತೆಯು ಕೂಡ ನಿಂತಿದೆ ದೂರ ಜೊತೆಯಲಿ ಜೀವವೇ ನೀನಿರಲು’ ಅಂತ ಭೋರ್ಗರೆಯುವ ಕಡಲ ಎದುರಿಗೆ ನಿಂತು ಎದೆ ಬಿರಿಯುವಂತೆ ಹಲುಬುತ್ತ, ನಿರ್ಜನ ಬೀದಿಯಲ್ಲಿ ಬೈಕ್‌ ಎಕ್ಸಲರೇಟರ್ ಕಿವಿ ಹಿಂಡುತ್ತ ಒಲವ ಪಡೆದ/ಪಡೆಯವ ಜೀವದ ಕೊರಳಿಗೆ ಕೊರಳು ಸೇರಿಸಿ ಹಾಡುವ ಕ್ಷಣವನ್ನು ಕಳೆದುಕೊಂಡೆನೋ ಅನ್ನಿಸಿ ಹುಣ್ಣಿಮೆ ರಾತ್ರಿಯಲಿ ಚಂದಿರನ ನೋಡುತ್ತ ‘ನೀನಿಲ್ಲದೇ ಈ ಚಂದಿರ ಕಣ್ಣಲ್ಲಿ ಕಸವಾಗಿದೆ/ಅದನೂದುವ ಉಸಿರಿಲ್ಲದೇ ಬೆಳದಿಂಗಳು ಅಸುನೀಗಿದೆ’ ಎನ್ನುತ್ತ ಇರುಳ ಕಳೆದಿದ್ದೇನೆ.

‘ಹೋಗ್ರಿ...ಹೋಗ್ರೀ ಅದೇನು ಲವರ್ಸ್ ಥರಾ ಹಾಡಿಕೊಂಡು ಇರೋದು ನೀವು’ ಅಂತ ಹೆಂಡತಿ ಗೊಣಗಿದ್ರೆ; ‘ಆಗ ಹಾಡೋಕೆ ಆಗಿಲ್ವಲ್ಲ. ಈಗಲಾದ್ರೂ ಹಾಡೋಣು ನಡೀ’ ಅಂತ ಅನ್ನುವುದೇ ಆದರೆ ನಿಮ್ಮದು ಅರೇಂಜ್ಡ್‌ ಮ್ಯಾರೇಜು! ಮದುವೆಗೆ ಮುಂಚೆ ಪಾರ್ಕ್‌ನಲ್ಲಿ ನೀವು ನನ್ನ ಬಳಕುವ ಸೊಂಟ ಹಿಡಿದು ಹಾಡ್ತಿದ್ರಲ್ಲಾ...ಈಗ ಯಾಕ್‌ ಹಿಡೀತಿಲ್ಲ;ಅಲ್ಲಿ ಟೈರ್‌ ಬೆಳೆದಿದೆ ಅಂತಾನಾ? ನಿಮಗೆ ನನ್ ಮೇಲೆ ಪ್ರೀತಿಯೇ ಇಲ್ಲ’ ಎಂದು ಗೊಣಗಿ ಹೆಂಡ್ತಿ ನಿಮ್ ತಲೆಗೊಂದು ಮೊಟಕಿದ್ರೆ ನಿಮ್ದು ಪಕ್ಕಾ ಲವ್ ಮ್ಯಾರೇಜ್!! 

‘ಲವ್‌ ಮಾಡಿ ಮದುವೆಯಾದವರೆಲ್ಲ ಇಂಥ ಹಾಡನ್ನು ಹಾಡ್ಕೋಂತಿರ್ತಾರೇನು? ಏನೋ ಚೆನ್ನಾಗಿ ಕಾಳು ಹಾಕಿರ್ತಾರೆ, ಕೈ ಕೈ ಹಿಡ್ಕೊಂಡು ಪಾರ್ಕು, ಸಿನಿಮಾ, ಮಾಲು, ಅಂತ ಸುತ್ತಿರ್ತಾರೆ, ಗಿಫ್ಟ್‌, ‘ಅದು ಇದೂ’ ಅಂತ ಕೊಟ್ಟಿರ್ತಾರ/ ಏನೋ ‘ಅಷ್ಟಿಷ್ಟು’ ಇಸ್ಕೋಂಡಿರ್ತಾರೆ ಅಷ್ಟೆ; ಸುಮ್ನಿರು’ ಅಂತ ಮನವ ಸಂತೈಸಿಕೊಂಡು ಮತ್ತೆ ಹಾಡು ಗುನುಗೋದಪ್ಪ...‘ಮದುವೆ ಆದ ಮೇಲೆ ನಾವೂ ಅದನ್ನ ಮಾಡೀವಲ್ಲ; ಅಂದ್ರೂ ಮತ್‌ ಮತ್ ಲವ್ ಮ್ಯಾರೇಜ್‌ ಆಗಿಲ್ಲವಲ್ಲ ಅಂತ ಆಚೀಚೆ ನೋಡಿ ಹಪಹಪಿಸಿದ್ರೆ...ಚೆನ್ನಾಗಿರಲ್ಲ ನೋಡ್‌’ ಅಂತ ಮನಸ್ಸಿಗೆ ಹೇಳಿಕೊಂಡು ಬಿಗು ನಿಲುವು ತಾಳ್ತೀನಿ.

’ನಿಮ್ದು ಲವ್ವಾ, ಆರೇಂಜ್ಡ್‌ ಮ್ಯಾರೇಜಾ’ ಸಹೋದ್ಯೋಗಿ ಗೆಳೆಯ ಕೇಳಿದಾಗ, ‘ನಂದು ಆರೇಂಜ್ಡ್‌ ಪಾ’ ಅನ್ನುತ್ತಿದ್ದ ಹಾಗೇ, ‘ಒಳ್ಳೇದು ಮಾರಾಯ...ನಂದು ಲವ್‌ ಮ್ಯಾರೇಜು’ ಎಂದು ವ್ಯಾಲೆಂಟೈನ್ ವೀಕ್‌ ನಲ್ಲಿ ಹೆಂಡತಿಗೆ ‘ಸಂಪ್ರದಾಯ’ದಂತೆ ಕೊಡಿಸಿದ ಗಿಫ್ಟ್‌ಗಳ ಪಟ್ಟಿ ಹೇಳಿ ಬ್ಯಾಂಕ್‌ ಬ್ಯಾಲೆನ್ಸ್‌ ಲೋ ಬೀಪಿ ತರಹ ಇಳಿದಿದ್ದನ್ನು ಮುಖಹಿಂಡಿಕೊಂಡು ಹೇಳಿಕೊಂಡಾಗ ನನ್ನ ಮುಖದಲ್ಲಿ ಹ್ಯಾಪಿ ಎಮೋಜಿ ಮೂಡಿತ್ತು.

ಸದ್ಯ ಲವ್ ಮ್ಯಾರೇಜ್‌ ಆಗದೇ ಇರೊದಕ್ಕೆ ವ್ಯಾಲೆಂಟೈನ್ಸ್‌ ಡೇ ಬಂದ್ರೂ ನಮ್‌ ಜೇಬಿಗೇನೂ ಖರ್ಚಿಲ್ವಲ್ಲಾ ಅಂತ ಖುಷಿಯಾಗಿ ಕಚೇರಿಗೆ ಹೊರಡಲು ರೆಡಿಯಾದೆ...

ಕಣ್ಮಣಿಯೇ... ಕಣ್ಣು ಹೊಡಿಯೇ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು