ಮಂಗಳವಾರ, ಅಕ್ಟೋಬರ್ 15, 2019
26 °C

ಸುತ್ತಾಟಕ್ಕೆ ಝೊಝೊ; ವಾಸ್ತವ್ಯಕ್ಕೆ ಝಾಸ್ಟೆಲ್

Published:
Updated:

ಪ್ರವಾಸ ಎಂದಾಕ್ಷಣ ಸ್ಥಳಗಳ ಆಯ್ಕೆಯ ಜತೆಗೆ ಬಸ್, ರೈಲು ಅಥವಾ ವಿಮಾನಗಳ ಮಾಹಿತಿ, ಲಗೇಜ್ ಸಿದ್ಧತೆ ಎಲ್ಲವೂ ಹೆಗಲೇರುತ್ತದೆ. ಆದರೆ ಒಂದಷ್ಟು ಉತ್ತಮ ಸ್ಥಳಗಳನ್ನು ನಮಗಾಗಿ ಆಯ್ಕೆ ಮಾಡಿ, ವಾಸ್ತವ್ಯದ ವ್ಯವಸ್ಥೆಯೊಂದಿಗೆ ಪ್ರವಾಸಕ್ಕೆ ಕರೆದೊಯ್ಯುವ ಸೌಲಭ್ಯ ಇದ್ದರೆ ಎಷ್ಟು ಹಗುರ ಎನ್ನಿಸುತ್ತದೆ ಅಲ್ವಾ ?

ಹೌದು, ಇಂತಹದ್ದೊಂದು ಪ್ರವಾಸದ ಕಲ್ಪನೆಯನ್ನು ನಿಜವಾಗಿಸಿದೆ ‘ಝೊಝೊ ಬಸ್’. ಇದು ‘ಝಾಸ್ಟೆಲ್’ ಪ್ರವಾಸಿ ಕಂಪನಿ ಈಚೆಗಷ್ಟೇ ಆರಂಭಿಸಿರುವ ಹೊಸ ಸೇವೆ.

ಏನಿದು ಝಾಸ್ಟೆಲ್?

ದೇಶದಲ್ಲಿನ ಪ್ರವಾಸಿ ಪ್ರಿಯರಿಗೆ ಮಿತವ್ಯಯದ ಪ್ರವಾಸ, ಉತ್ತಮ ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ 2013ರಲ್ಲಿ ಆರಂಭವಾದ ‘ಝಾಸ್ಟೆಲ್’ ಇದೀಗ ಝೊಝೊ ಮೂಲಕ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿದೆ.

ನಿರ್ದಿಷ್ಟವಾಗಿ ದೇಶದ ಯುವ ಪ್ರವಾಸಿಗರನ್ನು ಸೆಳೆಯುವುದು, ಪ್ರವಾಸದ ಅನುಭವವನ್ನು ವಿಭಿನ್ನವಾಗಿಸುವುದೇ ‘ಝಾಸ್ಟೆಲ್’ ಪರಿಕಲ್ಪನೆಯ ಮೂಲ ಆಶಯ. ದೇಶದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಚೈತನ್ಯ ಹೆಚ್ಚಿಸುವ, ಹೊಸ ಮಾರುಕಟ್ಟೆ ಸೃಷ್ಟಿಸುವ ಉದ್ದೇಶದಿಂದ ಬಿ-ಸ್ಕೂಲ್, ಟಿ-ಸ್ಕೂಲ್‌ಗಳ ಉತ್ಸಾಹಿ, ವೃತ್ತಿಪರ ತಂಡ ಈ ಕಂಪನಿಯನ್ನು ಆರಂಭಿಸಿದೆ.

ಝೊಝೊ ಯಾನ ಹೇಗೆ?

ಈ ಯಾನದಲ್ಲಿ ಎರಡು ರೀತಿಯ ಪ್ರವಾಸ ಮಾಡಬಹುದು. ಒಂದು ಏಕಾಂಗಿಯಾಗಿ, ಇನ್ನೊಂದು ಗುಂಪು ಅಥವಾ ಸಮೂಹ ಪ್ರವಾಸ ಮಾಡಬಹುದು. ಆದರೆ ಝೊಝೊ ಗುರಿ ಏನೆಂದರೆ, ಹೊಸ ಹೊಸ ಜನರನ್ನು ಪರಿಚಯಿಸಿಕೊಳ್ಳಲು, ಅವರೊಂದಿಗೆ ಸಂವಹನ ನಡೆಸಲು ಪ್ರವಾಸಿಗರಿಗೆ ಸಾಧ್ಯವಾಗಬೇಕು ಎನ್ನುವುದು. ಹಾಗಾಗಿ ಒಂಟಿ ಯಾನಿಗಳಿಗೆ ಇಲ್ಲಿ ಹೊಸ ಸ್ನೇಹವಲಯ ಸೃಷ್ಟಿಸಿಕೊಳ್ಳುವ ಅವಕಾಶ ದೊರಕಬಹುದು.

12 ರಿಂದ 15 ಸೀಟುಗಳ ಬಸ್, ಝಾಸ್ಟೆಲ್‌ನ ಮಾರ್ಗದರ್ಶಿ ಜತೆಗೆ ಆಯ್ದ ಕೆಲವು ಸ್ಥಳಗಳಿಗೆ ಸುತ್ತಾಟ ನಡೆಸುತ್ತದೆ. ಪ್ರವಾಸದ ವೇಳೆ ವಸತಿಗಾಗಿ ತಂಗುವ ಹೊಟೆಲ್‌ಗಳೂ ‘ಝಾಸ್ಟೆಲ್’ ಕಂಪನಿಗೆ ಸೇರಿರುತ್ತವೆ. ಇದು ಝೊಝೊ ಯಾನಿಗಳಿಗೆ ಕಂಪನಿ ಒದಗಿಸುವ ವಿಶಿಷ್ಟ ಸೇವೆಯಾಗಿದೆ. ಸದ್ಯಕ್ಕೆ ‌ಝೊಝೊದ ಆರಂಭಿಕ ತಾಣ ದೆಹಲಿ. ಶೀಘ್ರದಲ್ಲಿಯೇ ಮುಂಬೈನಿಂದಲೂ ಬಸ್ ಸೇವೆ ಆರಂಭಿಸಲು ಕಂಪನಿ ಯೋಚಿಸುತ್ತಿದೆ.

ಬಂಕ್ ಬೆಡ್‌ಗಳಾಗಿ ಬದಲಿಸಬಹುದಾದ ಸೀಟುಗಳು, ಅಡುಗೆ ವ್ಯವಸ್ಥೆ, ಶೌಚಾಲಯ, ಪ್ರವಾಸಿಗರೇ ಚಾಲನೆ ಮಾಡಲು ಅವಕಾಶ –ಈ ರೀತಿಯ ಸೌಲಭ್ಯಗಳನ್ನು ಝೊಝೊ ಬಸ್‌ಗಳಲ್ಲಿ ಮುಂದಿನ ದಿನಗಳಲ್ಲಿ ಒದಗಿಸುವ ಯೋಜನೆಯೂ ಇದೆ.

ಸಣ್ಣ ಉದ್ದಿಮೆಗೂ ಕೊಡುಗೆ

ಸ್ಥಳೀಯ ಆಸಕ್ತ ಉದ್ದಿಮೆದಾರರಿಗೆ ಝಾಸ್ಟೆಲ್ ಫ್ರಾಂಚೈಸ್ ನೀಡುವ ಮೂಲಕ, ಸಣ್ಣ ಉದ್ದಿಮೆ ವಲಯಕ್ಕೂ ಕಂಪೆನಿ ಕೊಡುಗೆ ನೀಡುತ್ತದೆ. ‘ಎಂಟರ್ ಪ್ರಿನರ್ ಇಂಡಿಯಾ’ದ 2019ರ ಸಾಲಿನ ‘ಉತ್ತಮ ಸಣ್ಣ ಉದ್ದಿಮೆ’ ಪ್ರಶಸ್ತಿ ‘ಝಾಸ್ಟೆಲ್’ಗೆ ದೊರಕಿದೆ. 
ಹೆಚ್ಚಿನ ಮಾಹಿತಿಗೆ ಈ ವೆಬ್‌ಸೈಟ್ https://www.zostel.com/ ನೋಡಬಹುದು.

ತಿಂಗಳ ತಿರುಗಾಟ

ಪುಷ್ಕರ್: ರಾಜಸ್ಥಾನದ ಪುಷ್ಕರ್‌ಗೆ ಪ್ರಯಾಣ. ವಾಸ್ತವ್ಯದ ವೇಳೆ ಅಂಕುರ್ ತಿವಾರಿ, ಓಶೊ ಜೈನ್ ಅವರ ಸಂಗೀತ ಆಸ್ವಾದಿಸಬಹುದು, ಅ.11–14 
ವೆಗಮಾನ್: ಕೇರಳದ ವೆಗಮಾನ್ ಕಾಡು,ಬೆಟ್ಟ, ಜಲಪಾತಗಳ ವೀಕ್ಷಣೆಗೆ ಹೇಳಿಮಾಡಿಸಿದ ತಾಣ, ಅ.12–13 
ಡಾಲ್‌ಹೌಸಿ: ಹಿಮಾಚಲ ಪ್ರದೇಶದ ಧೌಲಾಧಾರ್‌ ಸಮೀಪ 5 ಬೆಟ್ಟಗಳಲ್ಲಿ ಹಬ್ಬಿಕೊಂಡಿರುವ ನಗರ. ಪೈನ್ ಕಾಡುಗಳಲ್ಲಿ ಸುತ್ತಾಡಲು, ಚಾರಣ ಮಾಡಲು ಸೂಕ್ತ ಸ್ಥಳ, ಅ.17–21

ಇದನ್ನೂ ಓದಿ: ಆತುರದ ಪ್ರವಾಸ ಬೇಡ, ಕೈಪಿಡಿ ಇಲ್ಲದ ಪ್ರವಾಸವೂ ಬೇಡ

Post Comments (+)