ಮಂಗಳವಾರ, ಜನವರಿ 21, 2020
18 °C

ತಕ್ಕಡಿ ಹಿಡಿದ ಶೆಟ್ರು ಕೈ ಹಾಲು ಕರೆದಾಗ!

ಪ್ರಜಾವಾಣಿ ವಾರ್ತೆ / –ಉಮಾಶಂಕರ ಬ. ಹಿರೇಮಠ. Updated:

ಅಕ್ಷರ ಗಾತ್ರ : | |

ಯಲಬುರ್ಗಾ: ಪುಟ್ಟ ಗ್ರಾಮದಲ್ಲಿ ಸಣ್ಣದೊಂದು ಕಿರಾಣಿ ಅಂಗಡಿ ಇಟ್ಟು­ಕೊಂಡು ವ್ಯಾಪಾರ ಮಡುತ್ತಾ ಜೀವನ ನಡೆಸುತ್ತಿದ್ದ ತಾಲ್ಲೂಕಿನ ತರಲಕಟ್ಟಿ ಗ್ರಾಮದ ಬಸವರಾಜ ವಲ್ಮಕೊಂಡಿ (ಶೆಟ್ಟರ್‌) ಅವರು  ಹೈನು­ಗಾರಿಕೆ­ಯಲ್ಲಿ ಸಾಧನೆ ಮಾಡಬಹು­ದೆಂದು  ಯಾವತ್ತೂ  ಕನಸುಕಂಡವರಲ್ಲ.ಮೂಲತಃ ಆರ್ಯ ವೈಶ್ಯ ಸಮಾಜದ­ವರಾಗಿರುವ ಇವರು ತಕ್ಕಡಿ ಹಿಡಿದು­ಕೊಂಡು ವ್ಯಾಪಾರ ಮಾಡುವುದರ­ಲ್ಲಿಯೇ ಹೆಚ್ಚು ನಿಪುಣರು. ಆದರೆ ಕಿರಾಣಿ ವ್ಯಾಪಾರಕ್ಕಿಂತಲೂ ಕೃಷಿ  ಹಾಗೂ ಕೃಷಿ ಆಧಾರಿತ ಚಟುವಟಿಕೆಗಳ ಮೂಲಕ ಆರ್ಥಿಕ ಸಬಲರಾಗಿ ಯಶಸ್ವಿ ರೈತ, ಹೈನೋದ್ಯಮಿಯಾಗಿ ರೂಪು­ಗೊಂಡಿದ್ದು ಮಾತ್ರ ಒಂದು ಯಶೋಗಾಥೆ.ಗ್ರಾಮದಲ್ಲಿ ಲಭ್ಯವಿರುವ 12 ಎಕರೆ ಜಮೀನಿನಲ್ಲಿ ಒಂದೆರಡು ಎಕರೆಯಲ್ಲಿ ಹತ್ತಿ ಬೀಜೋತ್ಪಾದನೆಗೆ ಆಕರ್ಷಿತರಾಗಿ ಕೆಲವರ್ಷ ಸಾಕಷ್ಟು ಶ್ರಮಿಸಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಕಾಣದೆ ಸಾಲಗಾರರಾಗಿಯೇ ಮುಂದು­ವರಿಯ ಬೇಕಾದ ಅನಿರ್ವಾಯ ಪರಿಸ್ಥಿತಿ ಇವರದ್ದಾಗಿತ್ತು.

ಸಕಾಲದಲ್ಲಿ ಕೃಷಿ ಕಾರ್ಮಿ­ಕರು ಸಿಗದೇ ಇರುವುದರಿಂದ ಬೀಜೋತ್ಪಾದನೆಯಲ್ಲಿ ಲಾಭಕ್ಕಿಂತಲೂ ನಷ್ಟವೇ ಹೆಚ್ಚು ಅನುಭವಿಸುತ್ತಿರುವು­ದರಿಂದ ಬೇಸತ್ತು ಅದನ್ನು ಕೈಬಿಟ್ಟು ಮತ್ತೆ ರೇಷ್ಮೆ ಕೃಷಿಯತ್ತ ವಾಲಿದರು. ಕೈ ಬಿಡದ ರೇಷ್ಮೆ ಬಸವರಾಜ ಅವರನ್ನು ಕೃಷಿ ಕ್ಷೇತ್ರದಲ್ಲಿ ಉಳಿಯುವಂತೆ ಮಾ­ಡಿತು. ಆದರೂ ಕೆಲವು ಸಮಸ್ಯೆಗಳು ಇವರನ್ನು ಕಾಡತೊಡಗಿದವು.

ಮುಖ್ಯ­ವಾಗಿ ಉತ್ತಮ ಇಳುವರಿ ತೆಗೆದರೂ ಸೂಕ್ತ ಮಾರುಕಟ್ಟೆ, ಸಾಗಣೆ ಸಮಸ್ಯೆ­ಯು ರೇಷ್ಮೆಯಲ್ಲಿಯೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ತಕ್ಕಮಟ್ಟಿಗೆ ಉತ್ತಮ ಎನಿಸಿದ ರೇಷ್ಮೆ ಕೃಷಿಯೊಂದಿಗೆ ಹೈನುಗಾರಿಕೆಯತ್ತ ಒಲವು ತೋರಿದ್ದು ಇವರ ಯಶಸ್ವಿ ಜೀವನಕ್ಕೆ ಮಹತ್ವದ ತಿರುವು ನೀಡಿತು.ಸಾಲ ಮತ್ತು 2 ಹಸು: ಬಸವರಾಜ ಅವರು ಬ್ಯಾಂಕ್‌ನಲ್ಲಿ ಸಾಲ ಮಾಡಿ ಎರಡು ಜರ್ಸಿ ಆಕಳು ಸಾಕಿ ಹಾಲು ಕರೆದು ಮಾರಲು ಶುರು ಮಾಡಿದರು. ದಿನೇ ದಿನೇ ಹಾಲಿನ ಕ್ಯಾನ್‌ಗಳೂ ತುಂಬ ತೊಡಗಿದವು. ಜತೆಗೆ ಇವರ ಜೇಬು ಸಹ. ಚಿಕ್ಕಬಳ್ಳಾಪುರದಿಂದ ಉತ್ತಮ ತಳಿಯ ಆಕಳು ಖರೀದಿಸಿದ ಇವರು ಶೆಡ್‌, ಉತ್ತಮ ಮೇವು ಉತ್ಪಾದನೆ ಹಾಗೂ ನೀರಿನ ತೊಟ್ಟಿ ನಿರ್ಮಿಸಿದರು. ಅಗತ್ಯ ಸೌಲಭ್ಯವನ್ನು ಸೃಷ್ಟಿಸಿಕೊಂಡು ಆರಂಭಿಸಿದ ಈ ಹೈನುಗಾರಿಕೆಯು 2 ಆಕಳುಗಳಿಂದ ಆರಂಭಿಸಿ, ಈಗ 32ಕ್ಕೆ ಏರಿದೆ! ಅದರಲ್ಲಿ 20 ದೊಡ್ಡದಿದ್ದು, ಉಳಿದಂತೆ 13 ಕರುಗಳಿವೆ.‘ಪ್ರತಿದಿನ 150 ರಿಂದ 200 ಲೀಟರ್‌ ಹಾಲು ಕರೆಯುತ್ತಿದ್ದಾರೆ. ತಿಂಗಳಿಗೆ ಸುಮಾರು 5–6 ಸಾವಿರ ಲೀಟರ್‌ ಹಾಲು ಉತ್ಪಾದನೆಯಾ­ಗುತ್ತಿದೆ. ಪ್ರತಿ ಲೀಟರ್‌ಗೆ ₨ 26 ರಂತೆ ಸುಮಾರು ₨ 1.50 ಲಕ್ಷದಷ್ಟು ಸಂಪಾದನೆ ಆಗುತ್ತಿದ್ದು, ಖರ್ಚು ತೆಗೆದು ತಿಂಗಳಿಗೆ ₨ 90 ಸಾವಿರದಿಂದ 1ಲಕ್ಷದ ವರೆಗೆ ಆದಾಯ ಪಡೆಯು­ತ್ತಿದ್ದೇವೆ. ಹೀಗೆ ವರ್ಷಕ್ಕೆ 10 ರಿಂದ 12 ಲಕ್ಷದಷ್ಟು ಆದಾಯವನ್ನು ಯಾವುದೇ ಅಡ್ಡಿ ಆತಂಕವಿಲ್ಲದೇ ಪಡೆಯುತ್ತಿದ್ದೇವೆ’ ಎಂದು ಕುಟುಂಬದ ಸದಸ್ಯ ರಂಗನಾಥ ವಿವರಿಸುತ್ತಾರೆ.ಜಾನುವಾರುಗಳ ಗೊಬ್ಬರದಿಂದಲೇ ಸಾಕಷ್ಟು ಹಣ ಗಳಿಸುತ್ತಿದ್ದಾರೆ. ಕೊಟ್ಟಿಗೆ ಗೊಬ್ಬರ ಸಾವಯವ ಕೃಷಿಗೆ ಅನುಕೂಲ­ವಾಗಿದ್ದು, ಆಸಕ್ತ ರೈತರು ಕೇಳಿದಷ್ಟು ದುಡ್ಡು ಕೊಟ್ಟು ಗೊಬ್ಬರವನ್ನು ಖರೀದಿಸುತ್ತಿದ್ದಾರೆ. 

ಮಕ್ಕಳೂ ಸೈ: ಹಸುಗಳನ್ನು ಪಾಲನೆ ಮಾಡುವ ಬಗ್ಗೆ ಕುಟುಂಬದ ಸದಸ್ಯರಿಗೆ ಚೆನ್ನಾಗಿ ಗೊತ್ತಿರುವುದರಿಂದ ನಿರ್ವಹಣೆ ಕಷ್ಟವಾಗುತ್ತಿಲ್ಲ. ಅಲ್ಲದೇ ಮೂರು ಮಂದಿ ಕಾರ್ಮಿಕರು ಅಚ್ಚುಕಟ್ಟಾಗಿ ದುಡಿಯುತ್ತಿರುವುದರಿಂದ ನಿರೀಕ್ಷತ ಮಟ್ಟದಲ್ಲಿ ಹಾಲು ಉತ್ಪಾದನೆಯಾ­ಗುತ್ತಿದೆ. ಯಂತ್ರದ ಸಹಾಯದಿಂದ ಮೇವು ತುಂಡು ಮಾಡಲಾಗುತ್ತದೆ.

ಜಾನು­ವಾರುಗಳ ತ್ಯಾಜ್ಯದ ವಿಲೇವಾರಿ­ಯೂ ಕೂಡಾ ಅಚ್ಚುಕಟ್ಟಾಗಿ ನಿರ್ವಹಿ­ಸುತ್ತಿರುವುದರಿಂದ ಹೆಚ್ಚಿನ ತೊಂದರೆ ಕಾಣುತ್ತಿಲ್ಲ. ಮೇಲಾಗಿ ಹೈನುಗಾರಿಕೆ ಕೈ ಹಿಡಿದಿದ್ದರಿಂದಲೇ ಸಮಾಜಕಾರ್ಯ ವಿಷಯ­ದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಗ, ಪ್ಯಾರಾ ಮೆಡಿಕಲ್‌ ಕೋರ್ಸ್‌ ಸೇರಿದ್ದ ಮತ್ತೊಬ್ಬ ಮಗ ಬೇರೆ ಕಡೆ ಉದ್ಯೋಗಕ್ಕೆ ಹೋಗದೆ ಹೈನುಗಾರಿಕೆಯನ್ನು ಅಭಿವೃದ್ಧಿಪಡಿಸಲು ದುಡಿಯುತ್ತಿದ್ದಾರೆ.ರೇಷ್ಮೆ, ಹೈನುಗಾರಿಕೆ ಜೊತೆಗೆ ತರಕಾರಿ ಬೆಳೆ ಕೂಡಾ ಇವರನ್ನು ಮೇಲಕ್ಕೆ­ತ್ತುತ್ತಿದೆ. ಇವರಲ್ಲಿ ದುಡಿ­ಯುವ ಕಾರ್ಮಿಕರ ವೆಚ್ಚವನ್ನು ಸರಿದೂ­ಗಿಸುತ್ತಿರುವ ತಕಕಾರಿ ಬೆಳೆ ಇವರ ಕ್ರಿಯಾಶೀಲ ಕೃಷಿ ಚಟುವಟಿಕೆಗೆ ಸಾಕ್ಷಿಯಾಗಿದೆ. ‘ಜನನಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ’ಯ ಸ್ಥಾಪಿಸಿರುವ ವಲ್ಮಕೊಂಡಿ ಕುಟುಂಬದ ಸದಸ್ಯರು ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ, ಗ್ರಾಮೀಣಾ­ಭಿವೃದ್ಧಿ ಹಾಗೂ ಇನ್ನಿತರ ಗ್ರಾಮೀಣ ಜನರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.ಜೀವನದ ಪಯಣದಲ್ಲಿ ಹಲವು ಏಳುಬೀಳುಗಳನ್ನು ಕಂಡಿರುವ ಬಸವ­ರಾಜ, ಕೃಷಿ ಎಂದರೆ ಮಣ್ಣಿನ ಮಕ್ಕಳೇ ಮೂಗು ಮುರಿಯುವಂತಹ ಕಾಲದಲ್ಲಿ ಕೃಷಿ ಕ್ಷೇತ್ರವನ್ನು ಅಪ್ಪಿಕೊಂಡು ಅದರಲ್ಲಿಯೇ ಹೆಚ್ಚು ಸಾಧನೆ ಮಾಡಿದ್ದಾರೆ. ಹೈನುಗಾರಿಕೆ ಬಗ್ಗೆ ಹೆಚ್ಚಿನ ಮಾಹಿತಿಗೆ 8277229118 (ಅನಿಲಕುಮಾರ) ಸಂಖ್ಯೆಯನ್ನು ಸಂಪರ್ಕಿಸ­ಬಹುದು.

–ಉಮಾಶಂಕರ ಬ. ಹಿರೇಮಠ.

ಪ್ರತಿಕ್ರಿಯಿಸಿ (+)