ಲಾಯ್ಡ್ ರಿಚರ್ಡ್ಸ್ ಲಾರಾಗೆ ಮನವಿ
ದಶಕಗಳ ಹಿಂದೆ ಕ್ರಿಕೆಟ್ ಲೋಕದ ದೈತ್ಯ ಶಕ್ತಿಯಾಗಿದ್ದ ವೆಸ್ಟ್ ಇಂಡೀಸ್ ಈಗ ಅಧಃಪತನ ಕಂಡಿದೆ. ಅದನ್ನು ಮತ್ತೆ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮಹತ್ವದ ಹೆಜ್ಜೆ ಇಟ್ಟಿದೆ. ತವರಿನಂಗಳಲ್ಲಿ ವಿಂಡೀಸ್ ತಂಡವು 0–3ರಿಂದ ಆಸ್ಟ್ರೇಲಿಯಾ ಎದುರು ಸೋತಿದೆ. ಈ ಹಿನ್ನೆಲೆಯಲ್ಲಿ ವಿಂಡೀಸ್ ದಿಗ್ಗಜರಾದ ಕ್ಲೈವ್ ಲಾಯ್ಡ್ ವಿವಿಯನ್ ರಿಚರ್ಡ್ಸ್ ಮತ್ತು ಬ್ರಯನ್ ಲಾರಾ ಅವರ ನೆರವನ್ನು ಮಂಡಳಿಯು ಕೋರಿದೆ. ‘ನಮ್ಮ ಮೂವರು ಶ್ರೇಷ್ಠ ಆಟಗಾರರಾದ ಸರ್ ಕ್ಲೈವ್ ಲಾಯ್ಡ್ ಸರ್ ವಿವಿಯನ್ ರಿಚರ್ಡ್ಸ್ ಮತ್ತು ಬ್ರಯನ್ ಲಾರಾ ಅವರಿಗೆ ಆಹ್ವಾನ ನೀಡಿದ್ದೇವೆ. ಸದ್ಯ ಸಮಿತಿಯಲ್ಲಿರುವ ಶಿವನಾರಾಯಣ ಚಂದ್ರಪಾಲ್ ಡೆಸ್ಮಂಡ್ ಹೇಯ್ನ್ಸ್ ಇಯಾನ್ ಬ್ರಾಡ್‌ಶಾ ಅವರೊಂದಿಗೆ ಮೂವರು ದಿಗ್ಗಜರೂ ಸೇರಿಕೊಂಡು ತಂಡವನ್ನು ಉತ್ತಮಗೊಳಿಸುವ ಕುರಿತು ಯೋಜನೆ ಮಾಡಲಿದ್ದಾರೆ’ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯುಐ) ಅಧ್ಯಕ್ಷ ಕಿಶೋರ್ ಶಾಲೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.