ಗುರುವಾರ , ಮೇ 19, 2022
20 °C

ನುಗ್ಗಿದ ಲಾರಿ: 8 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಜೇವರ್ಗಿ: ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಅಫಜಲಪುರ ತಾಲ್ಲೂಕಿನ ಬಿದನೂರ ಗ್ರಾಮದಿಂದ ಯಾದಗಿರಿಗೆ ತೆರಳಿ ಹಿಂತಿರುಗುವ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 8 ಜನರು ಮೃತಪಟ್ಟು 9 ಜನರಿಗೆ ತೀವ್ರ ಗಾಯಗಳಾದ ದುರ್ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ.ಮೃತಪಟ್ಟವರೆಲ್ಲರು ಹತ್ತಿರದ ಸಂಬಂಧಿಗಳು ಎಂದು ತಿಳಿದುಬಂದಿದೆ. ರಾತ್ರಿ 10ಗಂಟೆಗೆ ಅಂತ್ಯಕ್ರಿಯೆಯ ಬಳಿಕ ಬಿದನೂರಿಗೆ ತೆರಳುತ್ತಿದ್ದಾಗ ಶಹಾಪುರ-ಜೇವರ್ಗಿ ರಾಜ್ಯ ಹೆದ್ದಾರಿಯ ಮೇಲಿರುವ ಅವರಾದ ಬಳಿ ಕ್ರೂಜರ್ ಪಂಕ್ಚರ್ ಆಯಿತು.ಚಕ್ರವನ್ನು ತೆಗೆದು ಜೀಪ್ ಚಾಲಕ ಪಂಕ್ಚರ್ ಮಾಡಿಸಲು ಜೇವರ್ಗಿ ಕಡೆ ಹೋಗಿದ್ದಾಗ ಸುರಪುರದಿಂದ- ಸೋಲಾಪುರಕ್ಕೆ ಶೇಂಗಾ ತುಂಬಿಕೊಂಡು ಹೊರಟಿದ್ದ ಲಾರಿ ನಿಂತ ಕ್ರೂಜರ್‌ಗೆ ಹಿಂದಿನಿಂದ ವೇಗವಾಗಿ ಡಿಕ್ಕಿ ಹೊಡೆಯಿತು. ಇದರಿಂದ ಕ್ರೂಜರ್‌ನಲ್ಲಿದ್ದ 8 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 9ಜನರಿಗೆ ತೀವ್ರ ಗಾಯಗಳಾಗಿವೆ.ಮೃತರನ್ನು ಅಫಜಲಪುರ ತಾಲ್ಲೂಕಿನ ಬಿದನೂರ ಗ್ರಾಮದವರಾದ ಸುಭದ್ರಾಬಾಯಿ ಶಿವಪ್ಪ ಪಾಳೆದ (60), ಸಾಬವ್ವ ಚಂದ್ರಶ್ಯಾ ನಡಗಟ್ಟಿ (45), ಮರೆಮ್ಮ ಸೈದಪ್ಪ ಹಳ್ಳಿ (50), ಮರೆಮ್ಮ ಮರೆಪ್ಪ ಹಳ್ಳಿ (40), ರತ್ನಾಬಾಯಿ ದೇವಪ್ಪ ಹೇರೂರ (50), ಶರಣಮ್ಮ ಸೈದಪ್ಪ ಮ್ಯಾಕೇರಿ (40), ಹಣಮಂತ ಬಸಪ್ಪ ಹಳ್ಳಿ (50), ಶರಣಮ್ಮ ಹಾಜಪ್ಪ ಮ್ಯಾಕೇರಿ (30) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರ ವಿವರ ಇಂತಿದೆ.ಮಹಾದೇವಿ ಕೃಷ್ಣ ಹಳ್ಳಿಕರ್ (28), ಸಂಗಮ್ಮ ಅರ್ಜುನ ಮ್ಯಾಕೇರಿ (35), ಮಹಾದೇವಿ ಕೃಷ್ಣ ಹಳ್ಳಿಕರ್ (23), ದೇವಣ್ಣ ಶರಣಪ್ಪ ಹಳ್ಳಿಕರ್ (22), ವಿಜಯಮ್ಮ ಬಸವರಾಜ ಹಳ್ಳಿಕರ್ (20), ಖಲೀಫ್ ಹಣಮಂತ ಹಳ್ಳಿಕರ್ (28), ಶ್ರೀಮಂತ ಬಸಪ್ಪ ಅಡಕಿ (60), ನಾಗಮ್ಮ ಹಣಮಂತ ಹಳ್ಳಿಕರ್ (40), ನಾಗಮ್ಮ ಭೀಮಶ್ಯಾ ಅವರಾದ (55).ಕ್ರೂಜರ್‌ನಲ್ಲಿ ಪ್ರಯಾಣಿಸುತ್ತಿದ್ದ ಅಂಬಣ್ಣ ಬಸಪ್ಪ ಹಾಡಕ್ಕಿ, ತಿಪ್ಪಣ್ಣ ನಾಗಪ್ಪ ತಳಕೇರಿ, ಸೂರ್ಯಕಾಂತ ಶರಣಪ್ಪ ಅವರಾದಿ, ಪರಮೇಶ್ವರ ಶಂಕರಗೌಡ ಪಾಟೀಲ, ಎಂಬುವವರಿಗೆ ಯಾವುದೇ ಗಾಯಗಳಾಗಿಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ.ಈ ದುರ್ಘಟನೆಗೆ ಕಾರಣನಾದ ಲಾರಿ ಚಾಲಕ ಪರಾರಿಯಾಗಿದ್ದು, ಆತನ ಹೆಸರು, ವಿಳಾಸ ಪತ್ತೆಯಾಗಿಲ್ಲ. ಲಾರಿ ಚಾಲಕನ ಅತಿವೇಗ ಹಾಗೂ ಅಲಕ್ಷತನದಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸೂರ್ಯಕಾಂತ ಶರಣಪ್ಪ ಅವರಾದಿ ನೀಡಿದ ದೂರಿನನ್ವಯ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ ಪವಾರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾಶಿನಾಥ ತಳಕೇರಿ, ಡಿವೈಎಸ್‌ಪಿ (ಉಪ ಪೊಲೀಸ್ ಅಧಿಕ್ಷಕ) ಹೆಚ್.ತಿಮ್ಮಪ್ಪ, ಜೇವರ್ಗಿ ಸರ್ಕಲ್ ಇನ್ಸಪೆಕ್ಟರ್ ವಿಶ್ವನಾಥರಾವ್ ಕುಲಕರ್ಣಿ, ಸಬ್ ಇನ್ಸಪೆಕ್ಟರ್ ಸಂಗಮೇಶ ಶಿವಯೋಗಿ ಭೇಟಿ ನೀಡಿ, ತನಿಖೆ ಮುಂದುವರೆಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.