ಶುಕ್ರವಾರ, ಸೆಪ್ಟೆಂಬರ್ 17, 2021
29 °C
ಅತ್ಯಂತ ರೋಚಕ ವಿಶ್ವಕಪ್ ಟೂರ್ನಿ ಇದಾಗಲಿದೆ

ರೋಚಕತೆಯ ಕಣ ರೌಂಡ್ ರಾಬಿನ್ ಲೀಗ್

ಸದಾನಂದ ವಿಶ್ವನಾಥ್ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಈ ಬಾರಿಯ ವಿಶ್ವಕಪ್ ಟೂರ್ನಿಯು ಅತ್ಯಂತ ರೋಚಕವಾಗಿರುವುದು ಖಚಿತ. ಏಕೆಂದರೆ, ಇದು ರೌಂಡ್‌ ರಾಬಿನ್ ಲೀಗ್‌ ಮಾದರಿಯಲ್ಲಿ ನಡೆಯುತ್ತಿದೆ. ಆದ್ದರಿಂದ ಪೈಪೋಟಿಯು ಜೋರಾಗಿರುವುದು ಖಚಿತ. ಈಗಿರುವ ಹತ್ತು ತಂಡಗಳ ಆಟಗಾರರು ವೃತ್ತಿಪರರಾಗಿದ್ದಾರೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿದ್ದಾರೆ. ಅದರಿಂದಾಗಿ ಯಾವುದೇ ಅಚ್ಚರಿ (ಅಪ್‌ಸೆಟ್) ಫಲಿತಾಂಶಗಳು ಹೊರಹೊಮ್ಮುವ ಸಾಧ್ಯತೆ ಕಡಿಮೆ ಇದೆ.

ಈ ಮಾದರಿಯಲ್ಲಿ ಪ್ರತಿಯೊಂದು ತಂಡವೂ ಇನ್ನೊಂದು ತಂಡದ ಎದುರು ಆಡಬೇಕು. ತಂಡಗಳು ತಲಾ ಒಂಬತ್ತು ಪಂದ್ಯಗಳನ್ನು ಆಡಬೇಕು. ಅವುಗಳಲ್ಲಿ ಕನಿಷ್ಠ ಆರರಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಗೆಲ್ಲಬೇಕು. ಆಗ ಮಾತ್ರ ನಾಲ್ಕರ ಘಟ್ಟಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಇಂಗ್ಲೆಂಡ್‌ನ ಹನ್ನೊಂದು ಮೈದಾನಗಳ ಪಿಚ್‌ಗಳೂ ವಿಭಿನ್ನವಾಗಿವೆ. ಜೂನ್ ತಿಂಗಳಲ್ಲಿ ಹೆಚ್ಚುವ ಬಿಸಿಲಿನ ವಾತಾವರಣ ಕೂಡ ಪಿಚ್‌ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಆದ್ದರಿಂದಲೇ ಈ ಬಾರಿ ವೆಸ್ಟ್ ಇಂಡೀಸ್ ಹೊರತುಪಡಿಸಿದರೆ ಎಲ್ಲ ತಂಡಗಳು ‘ರಿಸ್ಟ್‌ ಸ್ಪಿನ್ನರ್‌’ಗಳನ್ನು ಹೊಂದಿವೆ. ಇನಿಂಗ್ಸ್‌ನ ಮಧ್ಯದ ಓವರ್‌ಗಳಲ್ಲಿ ಸ್ಪಿನ್ನರ್‌ಗಳ ಪಾತ್ರ ಮಹತ್ವದ್ದಾಗಲಿದೆ. ಉಳಿದಂತೆ ಮಧ್ಯಮವೇಗಿಗಳ ವೇರಿಯೇಷನ್ ಕೂಡ ಪ್ರಮುಖ ಪಾತ್ರ ವಹಿಸುವುದು.

ಎಲ್ಲಕ್ಕಿಂತ ಮುಖ್ಯವಾಗಿ ಪಂದ್ಯ ಗಳಲ್ಲಿ ಎದುರಾಗುವ ಪರಿಸ್ಥಿತಿಗಳಿಗೆ ಅನುಗುಣವಾಗಿ ತತ್‌ಕ್ಷಣದ ಯೋಜನೆ ಗಳನ್ನು ರೂಪಿಸುವ ನಾಯಕರು ಮಾತ್ರ ತಮ್ಮ ತಂಡವನ್ನು ಜಯದತ್ತ ಮುನ್ನಡೆಸುವರು.  ನನ್ನ ಪ್ರಕಾರ ಈ ಬಾರಿಯ ಟೂರ್ನಿಯಲ್ಲಿ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿ ಲೆಂಡ್ ತಂಡಗಳು ನಾಲ್ಕರ ಘಟ್ಟ ಪ್ರವೇಶಿಸುವ ಸಾಧ್ಯತೆ ಹೆಚ್ಚು

ವಿರಾಟ್ ಕೊಹ್ಲಿ ನಾಯಕತ್ವವು ಇತ್ತೀಚಿನ ದಿನಗಳಲ್ಲಿ ಪಕ್ವಗೊಂಡಿದೆ. ಅನುಭವಿ ವಿಕೆಟ್‌ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರ ಸಲಹೆಗಳ ಸಹಾಯ ಕೊಹ್ಲಿಗೆ ಸಿಗಲಿದೆ. ಈ ಬಾರಿ ಡಿಆರ್‌ಎಸ್ (ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ) ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ತಂಡಕ್ಕೆ ಜಯದ ಅವಕಾಶ ಹೆಚ್ಚಲಿದೆ. ಧೋನಿ ಅದರಲ್ಲಿ ಪಳಗಿರುವ ವ್ಯಕ್ತಿ. ಬಾಂಗ್ಲಾ ಎದುರಿನ ಅಭ್ಯಾಸ ಪಂದ್ಯದಲ್ಲಿ ಧೋನಿ ಶತಕ ಬಾರಿಸಿದ್ದು ಅವರ ಬ್ಯಾಟಿಂಗ್ ಸಾಮರ್ಥ್ಯವೂ ಸಾಬೀತಾಗಿದೆ. ಅವರ ಕೀಪಿಂಗ್‌ಗೆ ಸಾಟಿ ಅವರೇ.

ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಯಾರು ಎಂಬ ಸಮಸ್ಯೆಗೆ ಕೆ.ಎಲ್. ರಾಹುಲ್ ಪರಿಹಾರವಾಗಿ ಸಿಕ್ಕಿದ್ದಾರೆ. ಅವರ ತುಂಬು ಆತ್ಮವಿಶ್ವಾಸ ತಂಡಕ್ಕೆ ದೊಡ್ಡ ಆಸ್ತಿಯಾಗಬಲ್ಲದು. ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್‌ ಕೊಹ್ಲಿ, ರಾಹುಲ್, ಹಾರ್ದಿಕ್, ಧೋನಿ, ಜಡೇಜ ಅವರೆಲ್ಲರೂ ಬ್ಯಾಟಿಂಗ್‌ನಲ್ಲಿ ಮಿಂಚಬಲ್ಲರು. ತಂಡದಲ್ಲಿರುವ ಇಬ್ಬರು ಎಡಗೈ ಆಟಗಾರರು (ಶಿಖರ್ ಮತ್ತು ಜಡೇಜ) ಅವರ ಆಟ ಮುಖ್ಯವಾಗಲಿದೆ. 2011ರಲ್ಲಿ ನಾವು ವಿಶ್ವಕಪ್ ಗೆದ್ದಾಗ ತಂಡದಲ್ಲಿ ಮೂವರು ಎಡಗೈ ಆಟ ಗಾರರು (ಗೌತಮ್ ಗಂಭೀರ್, ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ) ಇದ್ದರು.

ಟೂರ್ನಿಯಲ್ಲಿ ಭಾರತದ ಜಡೇಜ, ಪಾಂಡ್ಯ. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ಸ್ಟೋಕ್ಸ್‌. ವಿಂಡೀಸ್‌ನ ಆ್ಯಂಡ್ರೆ ರಸೆಲ್, ಬಾಂಗ್ಲಾದ ಮುಷ್ಫಿಕರ್ ರೆಹಮಾನ್, ಪಾಕಿಸ್ತಾನ ಶೋಯಬ್ ಮಲಿಕ್ ಅವರು ಮ್ಯಾಚ್‌ ವಿನ್ನಿಂಗ್ ಆಲ್‌ರೌಂಡರ್‌ ಆಗಬಲ್ಲ ಸಮರ್ಥರು. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಬಳಗವನ್ನು ಸೋಲಿಸುವುದು ಉಳಿದೆಲ್ಲ ತಂಡಗಳಿಗೂ ಈಗ ದೊಡ್ಡ ಸವಾಲು.  ಹೋದ ವರ್ಷ ವಿವಾದದಿಂದ ಸೊರಗಿದ್ದ ತಂಡವು ಈಗ ಆ್ಯರನ್ ಫಿಂಚ್ ನಾಯಕತ್ವದಲ್ಲಿ ಪುಟಿದೆದ್ದಿದೆ. ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಅವರು ಮರಳಿರುವುದು ತಂಡದ ಬಲ ಹೆಚ್ಚಿಸಿದೆ. ಜೊತೆಗೆ ರಿಕಿ ಪಾಂಟಿಂಗ್ ಮಾರ್ಗದರ್ಶನ ಸಿಗುತ್ತಿರುವುದು ಕೂಡ ಪ್ಲಸ್ ಪಾಯಿಂಟ್.

ಆತಿಥೇಯ ಇಂಗ್ಲೆಂಡ್‌ಗೆ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಇದೆ. ಮಾರ್ಗನ್ ಕೂಡ ಪರಿಪಕ್ವ ಬ್ಯಾಟ್ಸ್‌ಮನ್ ಮತ್ತು ಕ್ಯಾಪ್ಟನ್ ಆಗಿದ್ದಾರೆ. ಜೇಸನ್ ರಾಯ್ , ಜಾನಿ ಬೆಸ್ಟೊ ಅವರಂತಹ ಆರಂಭಿಕ ಜೋಡಿ ಇರುವಾಗ ರನ್‌ ಹೊಳೆ ಹರಿಸುವುದು ಸಾಧ್ಯವಿದೆ. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್, ಜೋ ರೂಟ್ ಅವರನ್ನು ಮೀರಿಸುವಂತಹ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇರೆ ತಂಡದಲ್ಲಿ ಇಲ್ಲ. ಆ ತಂಡದ ಬೌಲಿಂಗ್ ವಿಭಾಗ ಜೋಫ್ರಾ ಆರ್ಚರ್ ಬಂದ ಮೇಲೆ ಬಲಿಷ್ಠವಾಗಿದೆ.

ಕೇನ್ ವಿಲಿಯಮ್ಸನ್‌ ಅವರ ತಾಳ್ಮೆಯ ಮನೋಭಾವ ಮತ್ತು ಚಾಣಾಕ್ಷ ನಾಯಕತ್ವದಿಂದ ನ್ಯೂಜಿಲೆಂಡ್ ಕೂಡ ಕಠಿಣ ಪೈಪೋಟಿಯೊಡ್ಡಬಲ್ಲ ತಂಡವಾಗಿದೆ. ವೆಸ್ಟ್‌ ಇಂಡೀಸ್ ತಂಡವನ್ನು ಕಡೆಗಣಿಸುವಂತಿಲ್ಲ. ಆದರೆ ಅವರು ಟ್ವೆಂಟಿ–20 ಮೂಡ್‌ನಿಂದ ಹೊರಬರಬೇಕು. ಪಾಕಿಸ್ತಾನ, ಬಾಂಗ್ಲಾ ತಂಡಗಳಲ್ಲಿ ಪ್ರತಿಭಾವಂತರಿದ್ದಾರೆ.  ಅಫ್ಗಾನಿಸ್ತಾನ ತಂಡದ ಸಾಧನೆಯನ್ನು ಮೆಚ್ಚಲೇಬೇಕು. ಎರಡನೇ ಬಾರಿ ಕ್ವಾಲಿಫೈ ಆಗಿದೆ. ತಂಡದ ಬೌಲಿಂಗ್ ವಿಭಾಗ ಚೆನ್ನಾಗಿದೆ. ಆದರೆ ಬ್ಯಾಟಿಂಗ್‌ ನಲ್ಲಿ ಸ್ಥಿರತೆ ಇಲ್ಲ.

ಒಟ್ಟಿನಲ್ಲಿ ಒಂದೂವರೆ ತಿಂಗಳ ಅವಧಿಯಲ್ಲಿ ‘ಬೆಸ್ಟ್ ಟೆನ್’ ತಂಡಗಳು ಕ್ರಿಕೆಟ್‌ಪ್ರಿಯರಿಗೆ ಭರ್ಜರಿ ಮನರಂಜನೆ ನೀಡುವುದು ಖಚಿತ. ನ್ಯೂಜಿಲೆಂಡ್, ಶ್ರೀಲಂಕಾದಲ್ಲಿ ಆದ ಭಯೋತ್ಪಾದನೆ ದಾಳಿಯಿಂದಾಗಿ ವಿಶ್ವಕಪ್ ಪಂದ್ಯಗಳಿಗೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ಭದ್ರತಾ ಅಧಿಕಾರಿ ಜಿಲ್ ಮೆಕ್ರೆಕೆನ್ ಅವರು ಉತ್ತಮ ವ್ಯವಸ್ಥೆ ಮಾಡಿದ್ದಾರೆಂದು ವರದಿಯಾಗಿದೆ. ಬಹುಶಃ ಅದಕ್ಕಾಗಿ ಒಂದು ಲಕ್ಷ ಮಹಿಳೆಯರು ಪಂದ್ಯಗಳ ವೀಕ್ಷಣೆಗೆ ಟಿಕೆಟ್ ಖರೀದಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಶಾಂತಿ ನೆಲೆಸಲಿ, ಕ್ರಿಕೆಟ್‌ ಜಯಿಸಲಿ.

(ಲೇಖಕರು ಹಿರಿಯ ಅಂತರರಾಷ್ಟ್ರೀಯ ಕ್ರಿಕೆಟಿಗರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು