ಮಂಗಳವಾರ, ಏಪ್ರಿಲ್ 20, 2021
32 °C

ಕರ್ತವ್ಯಲೋಪ: ಇನ್‌ಸ್ಪೆಕ್ಟರ್‌ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಾದಕವಸ್ತು ಪೂರೈಕೆ ಪ್ರಕರಣಗಳ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸೇರಿದಂತೆ ಅಪರಾಧ ಪ್ರಕರಣಗಳ ನಿಯಂತ್ರಣದ ವಿಚಾರದಲ್ಲಿ ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಸುರತ್ಕಲ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಕೆ.ಕೆ.ರಾಮಕೃಷ್ಣ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಸೋಮವಾರ ಆದೇಶ ಹೊರಡಿಸಿದ್ದಾರೆ.

ಸುರತ್ಕಲ್‌ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಗಾಂಜಾ ಸೇರಿದಂತೆ ಮಾದಕವಸ್ತು ಪೂರೈಕೆ ಹೆಚ್ಚಾಗಿತ್ತು. ತಮಗೆ ಲಭಿಸುತ್ತಿದ್ದ ಮಾಹಿತಿಯನ್ನು ನೀಡಿ ಕಾರ್ಯಾಚರಣೆ ನಡೆಸುವಂತೆ ಕಮಿಷನರ್‌ ಸೂಚಿಸಿದ್ದರೂ ರಾಮಕೃಷ್ಣ ಅವರು ಸೂಕ್ತ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪವಿದೆ. ಇದೇ ಕಾರಣದಿಂದ ಮಾದಕವಸ್ತು ಜಾಲದ ಕಾರ್ಯಾಚರಣೆಯ ಹೊಣೆಯನ್ನು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀನಿವಾಸ ಗೌಡ ಅವರಿಗೆ ವಹಿಸಲಾಗಿತ್ತು ಎಂದು ‌ಮೂಲಗಳು ತಿಳಿಸಿವೆ.

ಮೈಸೂರಿನ ಸಹಕಾರ ಸಂಸ್ಥೆಯೊಂದರ ಹೆಸರಿನಲ್ಲಿ ದೊಡ್ಡ ಪ್ರಮಾಣದ ವಂಚನೆ ನಡೆದಿರುವ ಕುರಿತು ಹಲವರು ಠಾಣೆಗೆ ದೂರು ನೀಡಿದ್ದರು. ಆದರೆ, ರಾಮಕೃಷ್ಣ ಅವರು ಸಹಕಾರ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸದೇ ಕರ್ತವ್ಯಲೋಪ ಎಸಗಿದ್ದರು. ಠಾಣೆಗೆ ಬರುತ್ತಿದ್ದ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ ಎಂಬ ಆರೋಪವೂ ಇದೆ.

ತಮ್ಮ ವಿರುದ್ಧದ ಆರೋಪಗಳ ಕುರಿತು ಸಮಜಾಯಿಷಿ ನೀಡುವಂತೆ ರಾಮಕೃಷ್ಣ ಅವರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿತ್ತು. ಸರಿಯಾದ ಉತ್ತರ ನೀಡಲು ಅವರು ವಿಫಲರಾದರು. ಹಿರಿಯ ಅಧಿಕಾರಿಗಳು ಸಲ್ಲಿಸಿದ ವರದಿ ಆಧರಿಸಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.