ಸೋಮವಾರ, ಏಪ್ರಿಲ್ 12, 2021
23 °C

ಗುರುಪೂರ್ಣಿಮೆಯ ಬೆಳಕು

ಛಾಯಾಪತಿ Updated:

ಅಕ್ಷರ ಗಾತ್ರ : | |

ಭಾರತೀಯ ಸಂಸ್ಕೃತಿಯಲ್ಲಿ ಮಾತ್ರವಲ್ಲದೆ, ಜಗತ್ತಿನ ಎಲ್ಲ ಪ್ರಾಚೀನ ಸಂಸ್ಕೃತಿಗಳಲ್ಲೂ ಗುರುತತ್ತ್ವಕ್ಕೆ ತುಂಬ ಗೌರವವಿದೆ. ಒಟ್ಟು ಗುರುಪರಂಪರೆಗೆ ಪೂಜೆ ಸಲ್ಲಿಸುವುದಕ್ಕಾಗಿ ನಮ್ಮಲ್ಲಿ ಒಂದು ದಿನವನ್ನೇ ಮೀಸಲಾಗಿಡಲಾಗಿದೆ. ಅದೇ ಗುರುಪೂರ್ಣಿಮಾ. ಪ್ರತಿ ವರ್ಷ ಆಷಾಢ ಶುದ್ಧ ಹುಣ್ಣಿಮೆಯ ದಿನವನ್ನು ಗುರುಪೂರ್ಣಿಮೆಯನ್ನಾಗಿ ಆಚರಿಸಲಾಗುತ್ತದೆ.

ಗುರುಪೂರ್ಣಿಮೆಯನ್ನು ‘ವ್ಯಾಸಪೂರ್ಣಿಮಾ’ ಎಂದೂ ಕರೆಯಲಾಗುತ್ತದೆ. ಇದೂ ಕೂಡ ಮನನೀಯವಾಗಿದೆ. ಒಟ್ಟು ಭಾರತೀಯ ಪರಂಪರೆಗೆ ಗುರುಸ್ಥಾನದಲ್ಲಿರುವವರೇ ವ್ಯಾಸಮಹರ್ಷಿ. ಅವರು ಒಂದೇ ಆಗಿದ್ದ ವೇದವನ್ನು ಅಧ್ಯಯನದ ಅನುಕೂಲಕ್ಕಾಗಿ ನಾಲ್ಕಾಗಿ ವಿಭಾಗಮಾಡಿದವರು; ಮಹಾಭಾರತವನ್ನೂ ಹದಿನೆಂಟು ಪುರಾಣಗಳನ್ನೂ ರಚಿಸಿ ವೇದದ ತಿರುಗಳು ಎಲ್ಲರಿಗೂ ತಿಳಿಯುವಂತೆ ಮಾಡಿದವರು. ಭಾರತೀಯ ವಿದ್ಯಾಪರಂಪರೆಗೆ ಚೌಕಟ್ಟನ್ನು ಒದಗಿಸಿದವರೇ ವ್ಯಾಸಮಹರ್ಷಿ. ಸನ್ಯಾಸಿಗಳು ವ್ಯಾಸಪೂಜೆಯನ್ನು ಮಾಡಿ ಚಾತುರ್ಮಾಸ್ಯವ್ರತದ ಸಂಕಲ್ಪವನ್ನು ಕೈಗೊಳ್ಳುತ್ತಾರೆ.

’ಗುರು’ ಎಂದರೆ ಕತ್ತಲೆಯನ್ನು ಓಡಿಸಿ, ಬೆಳಕನ್ನು ಒದಗಿಸಿದವನು. ಅವನು ಇಲ್ಲದಿದ್ದರೆ ನಮ್ಮ ಬಾಳು ಸುಗಮವಾಗಿ ಸಾಗದು; ಬದುಕಿನ ದಾರಿ ನಮಗೆ ಕಾಣುವುದೇ ಅವನು ಕೊಡುವ ಬೆಳಕಿನಲ್ಲಿ. ಅವನು ವಿದ್ಯೆಯ ರೂಪದಲ್ಲಿ ನಮಗೆ ನೀಡುವ ತಿಳಿವಳಿಕೆಯೇ ಆ ಬೆಳಕು. ಹೀಗಾಗಿ ನಮಗೆ ಪ್ರತಿ ಕ್ಷಣವೂ ಗುರುವಿನ ಜೊತೆ ಬೇಕು. ಅಂಥ ಗುರುಪರಂಪರೆಯನ್ನು ಗೌರವದಿಂದ ಸ್ಮರಿಸಿ, ಆರಾಧಿಸಿ, ಪೂಜಿಸುವುದೇ ಗುರುಪೂರ್ಣಿಮೆಯ ಉದ್ದೇಶ.

ಭಾರತೀಯ ಸಂಸ್ಖೃತಿಯಲ್ಲಿ ‘ಗುರುತತ್ತ್ವ’ವನ್ನು ವಿವಿಧ ಮೂಲಗಳಲ್ಲಿ ಕಾಣಲಾಗಿದೆ. ಪ್ರಕೃತಿಯ ಒಂದೊಂದು ವಸ್ತು–ವಿವರವನ್ನೂ ಗುರು ಎಂದೇ ಸ್ವೀಕರಿಸಲಾಗಿದೆ. ಈ ಎಲ್ಲ ಗುರುತತತ್ತ್ವದ ಪ್ರತಿನಿಧಿಯಾಗಿ ವ್ಯಾಸಮಹರ್ಷಿಗಳನ್ನು ಅಥವಾ ದಕ್ಷಿಣಾಮೂರ್ತಿಯನ್ನು ಅಥವಾ ದತ್ತಾತ್ರೇಯನನ್ನು ಆರಾಧಿಸುವುದು ವಾಡಿಕೆ.

ವ್ಯಾಸರ ವಿಶೇಷವನ್ನು ಈ ಮೊದಲು ನೋಡಿದ್ದೇವೆ. ವಿದ್ಯೆ ಎನ್ನುವುದು ಎಂದಿಗೂ ತಾರುಣ್ಯವನ್ನು, ಎಂದರೆ ಶಕ್ತಿಯನ್ನು ಕಳೇದುಕೊಳ್ಳದ ಸ್ಥಿತಿಯಲ್ಲಿರುತ್ತದೆ. ಇದಕ್ಕೆ ಸಂಕೇತವೇ ದಕ್ಷಿಣಾಮೂರ್ತಿ. ಗುರುಸ್ಥಾನದಲ್ಲಿ ಯುವಕನಾದ ದಕ್ಷಿಣಮೂರ್ತಿಯಿದ್ದರೆ, ಶಿಷ್ಯರು ವೃದ್ಧರು. ಇದರ ತಾತ್ಪರ್ಯವೇ ವಿದ್ಯೆಗಿರುವ ಕಾಂತಿಯನ್ನು ಸೂಚಿಸುವುದು.

ದತ್ತಾತ್ರೇಯನನ್ನು ಅವಧೂತನ ಸ್ವರೂಪದಲ್ಲಿ ಕಾಣಿಸಲಾಗಿದೆ. ಲೋಕವ್ಯವಹಾರದ ಸೀಮಿತ ವಿಧಿ–ನಿಷೇಧಗಳನ್ನು ಮೀರಿದವನೇ ಅವಧೂತ. ಅಂತೆಯೇ ನಮಗೆ ವಿದ್ಯೆ ಕೂಡ ಯಾವ ಮೂಲದಿಂದಲೂ ಒದಗಬಹುದು; ನಮ್ಮ ತರ್ಕಕ್ಕೆ ಸಿಗದ ರೀತಿಯಲ್ಲಿ ಬದುಕು ನಮಗೆ ಪಾಠವನ್ನು ಕಲಿಸುತ್ತಿರುತ್ತದೆ. ಇದರ ಸಂಕೇತವೇ ದತ್ತಾತ್ರೇಯ. ಅವನು ತ್ರಿಮೂರ್ತಿಗಳ ಸ್ವರೂಪನೂ ಹೌದು. ಎಂದರೆ ಸೃಷ್ಟಿ, ಸ್ಥಿತಿ, ಲಯಗಳ ಸಂಗಮ. ಗುರು ನಮಗೆ ಈ ಮೂರು ಸ್ಥಿತಿಗಳಲ್ಲೂ ಒದಗುತ್ತಾನೆ.

ಐತಿಹಾಸಿಕವಾಗಿಯೂ ಆಷಾಢ ಶುದ್ಧ ಪೂರ್ಣಿಮೆಗೆ ಮಹತ್ವವಿದೆ. ಬುದ್ಧನಾಗುವ ಮೋದಲು ಸಿದ್ಧಾರ್ಥನು ಅರಮನೆಯನ್ನು ತೊರೆದದ್ದು ಇದೇ ದಿನ, ಅವನು ತಪಸ್ಸಿಗೆಂದು ವನವನ್ನು ಪ್ರವೇಶಿಸಿದ್ದು ಇದೇ ದಿನ ಮತ್ತು ಅವನು ಜ್ಞಾನೋದಯವನ್ನು ಪಡೆದ ಮೇಲೆ ಮೊದಲಿಗೆ ಧರ್ಮವನ್ನು ಉಪದೇಶಿಸಿದ್ದು ಕೂಡ ಇದೇ ದಿನ.

ಹೀಗೆ ಗುರುಪೂರ್ಣಿಮೆಗೆ ಹಲವು ಆಯಾಮಗಳ ಮಹತ್ವವಿದೆ. ಅಂದು ನಮ್ಮ ಗುರುಪರಂಪರೆಯನ್ನು ಸ್ಮರಿಸಿ, ಗೌರವಿಸಿ, ನಮಿಸೋಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.