ಗುರುವಾರ , ಏಪ್ರಿಲ್ 22, 2021
28 °C
ಕುದುರೆಮುಖ ಉದ್ಯಾನ ವ್ಯಾಪ್ತಿಯಲ್ಲಿ ಪ್ರಯಾಣಕ್ಕೆ ಸಂಚಕಾರ

ಗಸ್ತು ವಾಹನ ತುರ್ತು ನಿಯೋಜನೆಗೆ ಒತ್ತಾಯ

ರವಿ ಕೆಳಂಗಡಿ Updated:

ಅಕ್ಷರ ಗಾತ್ರ : | |

Prajavani

ಕಳಸ: ‘ಕುದುರೆಮುಖ ಉದ್ಯಾನ ವ್ಯಾಪ್ತಿಯಲ್ಲಿರುವ ಹೊರನಾಡು- ಕಳಸ– ಉಡುಪಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸುರಕ್ಷಿತವಾಗಿಲ್ಲ. ದಾರಿ ಮಧ್ಯೆ ಸಮಸ್ಯೆಯಾದರೆ ಯಾರೂ ಕೇಳುವುದಿಲ್ಲ. ಹೀಗಾಗಿ, ಈ ರಸ್ತೆಯಲ್ಲಿ ಗಸ್ತು ವಾಹನ ತುರ್ತು ನಿಯೋಜನೆ ಮಾಡಬೇಕು ಎಂಬ ಕೂಗು ಕೇಳಿಸುತ್ತಿದೆ.

ಘಟನೆ 1: ಜೂನ್‌ ತಿಂಗಳ
ಕೊನೆಯ ಭಾನುವಾರ ಹೊರನಾಡು-ಕಳಸದಿಂದ ಕುದುರೆಮುಖ ಮೂಲಕ ಉಡುಪಿಗೆ ತೆರಳುತ್ತಿದ್ದ ಪ್ರವಾಸಿ ವಾಹನವೊಂದು ಕುದುರೆಮುಖ ರಾಷ್ಟ್ರೀಯ ಉದ್ಯಾನದ ಎಸ್.ಕೆ. ಬಾರ್ಡರ್ ಬಳಿ ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಯ ಸಣ್ಣ ಹೊಂಡಕ್ಕೆ ಇಳಿದಿತ್ತು. ಮಧ್ಯಾಹ್ನ 12 ಗಂಟೆಗೆ ಆದ ಈ ಅಪಘಾತದ ಸ್ಥಳದಿಂದ ಆ ವಾಹನವನ್ನು ಎಳೆಯಲು ಸಂಜೆ 6.30ರವರೆಗೂ ಯಾರೂ ನೆರವಿಗೆ ಬರಲಿಲ್ಲ. ದಟ್ಟ ಅರಣ್ಯದ ಮಧ್ಯೆ ಆ ವಾಹನದಲ್ಲಿ ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಇದ್ದ ಕುಟುಂಬವೊಂದು ಕಂಗಾಲಾಗಿತ್ತು.

ಮಳೆಯೂ ಸುರಿಯುತ್ತಿದ್ದರಿಂದ ಆ ಕುಟುಂಬದ ಸಂಕಟ ಮುಗಿಲು ಮುಟಿತ್ತು. ಅದೇ ದಾರಿಯಲ್ಲಿ ಸಾಗುತ್ತಿದ್ದ ಕೊಂಕಣಿ ಅಕಾಡೆಮಿ ಸದಸ್ಯರೂ ಆದ ಕಾಸರಗೋಡು ಸಮೀಪದ ಕುಂಬಳೆಯ ಲಕ್ಷ್ಮಣ್ ಪ್ರಭು ಆ ಕಾರನ್ನು ಇತರೆ ವಾಹನಗಳ ನೆರವಿನಿಂದ ರಸ್ತೆಗೆ ಎಳೆದು ಆ ಕುಟುಂಬ ಸಂಚಾರ ಮುಂದುವರಿಸಲು ಅನುವು ಮಾಡಿಕೊಟ್ಟರು. 6 ಗಂಟೆಯ ಕಾಲ ಕಾಡಿನಲ್ಲಿ ಆಹಾರವೂ ಇಲ್ಲದೆ ಆತಂಕದಿಂದ ಕಾಲ ಕಳೆದಿದ್ದ ಕುಟುಂಬ ಕೊನೆಗೂ ನಿಟ್ಟುಸಿರು ಬಿಟ್ಟಿತು.

ಘಟನೆ 2: ಕಳೆದ ವಾರ ಕಳಸ ಸಮೀಪದ ಮುನ್ನೂರುಪಾಲಿನ 40 ವರ್ಷ ವಯಸ್ಸಿನ ಮಹಿಳೆಯೊಬ್ಬರು ಹೃದಯಾಘಾತಕ್ಕೆ ಒಳಗಾದರು. ಕಳಸದ ಖಾಸಗಿ ವೈದ್ಯ ಡಾ.ವಿಕ್ರಮ್ ಪ್ರಭು ಅವರು ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಆಂಬುಲೆನ್ಸ್‌ನಲ್ಲಿ ಕಳುಹಿಸಿದರು. 3 ಗಂಟೆಯಲ್ಲಿ ಆಸ್ಪತ್ರೆ ಸೇರಿದರೆ ಬದುಕುವ ಅವಕಾಶ ಹೆಚ್ಚಿತ್ತು. ಕುದುರೆಮುಖ ಉದ್ಯಾನ ವ್ಯಾಪ್ತಿಯಲ್ಲಿ ಭಾರಿ ಗಾಳಿ, ಮಳೆ ಸುರಿಯುತ್ತಿತ್ತು.

ಹೆದ್ದಾರಿಗೆ ಅಡ್ಡಲಾಗಿ ದೊಡ್ಡ ಮರವೊಂದು ಬಿದ್ದು ಒಂದೂವರೆ ಗಂಟೆ ಕಳೆದರೂ ಮರವನ್ನು ತೆರವು ಮಾಡುವವರು ಯಾರೂ ಇರಲಿಲ್ಲ. ಆಂಬುಲೆನ್ಸ್‌ನಲ್ಲಿ ಇದ್ದ ಮಹಿಳೆಯ ಪ್ರಾಣ ಪಕ್ಷಿ ಅರಣ್ಯದಲ್ಲೇ ಹಾರಿ ಹೋಯಿತು. ಸಕಾಲಕ್ಕೆ ಚಿಕಿತ್ಸೆ ಸಿಕ್ಕರೆ ಬದುಕುವ ಸಾಧ್ಯತೆ ಹೆಚ್ಚಿದ್ದ ಮಹಿಳೆಯ ಶವವನ್ನು ಅರ್ಧ ದಾರಿಯಿಂದಿಲೇ ಮರಳಿ ಮುನ್ನೂರುಪಾಲಿಗೆ ಸಾಗಿಸಲಾಯಿತು.‌

ಇವೆರಡೂ ಘಟನೆಗಳನ್ನು ಅವಲೋಕನ ಮಾಡಿದಾಗ ಕುದುರೆಮುಖ ರಾಷ್ಟ್ರೀಯ ಉದ್ಯಾನದ ನಡುವಿನ ಹೆದ್ದಾರಿಯಲ್ಲಿ ಪಯಣದ ಅಪಾಯದ ಅರಿವು ಆಗುತ್ತದೆ. ಆ ಉದ್ಯಾನ ವ್ಯಾಪ್ತಿಯಲ್ಲಿ ಮೊಬೈಲ್ ಫೋನ್ ಸಂಪರ್ಕವೂ ಇಲ್ಲದಿರುವುದರಿಂದ ಸಮಸ್ಯೆ ಬಿಗಡಾಯಿಸುತ್ತದೆ. ರಮ್ಯ ಪರಿಸರದ ಮಧ್ಯೆ ಸಾಗುವ ಈ ಹೆದ್ದಾರಿಯ
ಪಯಣ ಜೀವನವಿಡೀ ಮರೆಯಲಾರದಂಥಹ ಅನುಭವ ನೀಡುವುದು ಸುಳ್ಳಲ್ಲ. ಆದರೆ, ಮೇಲೆ ತಿಳಿಸಿದಂತಹ ಘಟನೆಗಳ ಬಗ್ಗೆ ಎಚ್ಚರಿಕೆ ಇರಲೇಬೇಕಾದ್ದು ಅತ್ಯಗತ್ಯ.

ಹಾಗಾದರೆ ಮೇಲಿನ ಎರಡೂ ಘಟನೆಗಳಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡುವುದು ಎಂಬ ಪ್ರಶ್ನೆ ಬಂದಾಗ ರಾಷ್ಟ್ರೀಯ ಉದ್ಯಾನದ ಉಸ್ತುವಾರಿ ಹೊತ್ತಿರುವ ಅರಣ್ಯ ಇಲಾಖೆಯೇ ಮೊದಲು ನಮ್ಮ ಮನಸ್ಸಿಗೆ ಬರುತ್ತದೆ. ಇನ್ನು ಅಪಘಾತ ನಡೆದಾಗ ಅದು ಕುದುರಮುಖ, ಶೃಂಗೇರಿ ಅಥವಾ ಕಾರ್ಕಳ ಗ್ರಾಮಾಂತರ ಠಾಣೆಯ ವ್ಯಾಪ್ತಿಗೆ ಬರುತ್ತದೋ ಎಂದು ಪತ್ತೆ ಮಾಡಿ ಜಾರಿಕೊಳ್ಳುವ ಪೊಲೀಸರು ಮಾನವೀಯತೆ ಮರೆತು ತೋರುವ ಬುದ್ಧಿವಂತಿಕೆ ಕೂಡ ಹೇಸಿಗೆ ಮೂಡಿಸುತ್ತದೆ.

ಮೊದಲ ಘಟನೆಯಲ್ಲಿ ಕಾರನ್ನು ಮತ್ತೆ ಹೆದ್ದಾರಿಗೆ ಎಳೆಸಿದ ಕೊಂಕಣಿ ಅಕಾಡೆಮಿಯ ಸದಸ್ಯ ಲಕ್ಷ್ಮಣ್ ಪ್ರಭು ಹೇಳುವಂತೆ, ‘ಇದು ಎರಡೂ ಇಲಾಖೆಗಳ ಲೋಪ. ದುರ್ಗಮ ಕಾಡಿನಲ್ಲಿ ಅಪಘಾತವಾಗಿ ಗಂಟೆಗಟ್ಟಲೆ ಕಾಯುವಂತಹ ಸ್ಥಿತಿ ಇರುವುದರಿಂದ ಮತ್ತು ಮಳೆಗಾಲದಲ್ಲಿ ಮರಗಳು ಬಿದ್ದು ರಸ್ತೆ ಸಂಚಾರ ಬಂದ್ ಆಗುವುದರಿಂದ ಅರಣ್ಯ ಇಲಾಖೆಯು ಈ ಮಾರ್ಗದಲ್ಲಿ ತುತಾಗಿ ಗಸ್ತುವಾಹನದ ಸಂಚಾರ ಆರಂಭಿಸಬೇಕು.
ಈ ಬಗ್ಗೆ ನಾನು ಈಗಾಗಲೇ ಸಚಿವರಾದ ಜಯಮಾಲಾ, ಸತೀಶ್ ಜಾರಕಿಹೊಳಿ ಮತ್ತು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಸಂರಕ್ಷಣಾಧಿಕಾರಿಗೂ ಮನವಿ ಮಾಡಿದ್ದೇನೆ. ಹೆದ್ದಾರಿಯಲ್ಲಿ ಸಂಚರಿಸುವ ಮಹಿಳೆಯರು ಮತ್ತು ಮಕ್ಕಳ ಪಾಲಿಗೆ ಗಸ್ತುವಾಹನ ಧೈರ್ಯ ತುಂಬುತ್ತದೆ' ಎಂದಿದ್ದಾರೆ.

ಆ ಅಪಘಾತದ ಘಟನೆ ಬಗ್ಗೆ ಮಾಳದ ಅರಣ್ಯ ತಪಾಸಣಾ ಘಟಕದಲ್ಲಿ ಉಪೇಕ್ಷೆ ಮಾಡಿದರು. ಜೊತೆಗೆ ಕಾರ್ಕಳ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದಾಗ ಅವರು ಕೂಡ ಅದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಅಸಡ್ಡೆಯ ಮಾತನ್ನು ಆಡಿದರು ಎಂಬುದು ಲಕ್ಷ್ಮಣ್ ಪ್ರಭು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಲೆನಾಡು ಮತ್ತು ಕರಾವಳಿ ಬೆಸೆಯುವ ಹೆದ್ದಾರಿಯಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಗಸ್ತುವಾಹನದ ತುರ್ತು ಅಗತ್ಯ ಇದೆ. ಈ ಬಗ್ಗೆ ಸಂಬಂಧ ಪಟ್ಟವರು ಶೀಘ್ರ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಆಗ್ರಹ ಈ ಹೆದ್ದಾರಿಯನ್ನು ಬಳಸುವವರದ್ದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು