ಶುಕ್ರವಾರ, ಏಪ್ರಿಲ್ 16, 2021
23 °C
ಮೆರವಣಿಗೆಯಲ್ಲಿ ಫುಗಡಿಯಾಡಿ ಗಮನ ಸೆಳೆದ ಮಹಿಳೆಯರು

ಪಾಂಡುರಂಗನ ಅದ್ದೂರಿ ಪಲ್ಲಕ್ಕಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಪಾಂಡುರಂಗ ದಿಂಡಿ ಸಪ್ತಾಹ ಸಮಾರೋಪದ ಅಂಗವಾಗಿ ನಗರದಲ್ಲಿ ಬುಧವಾರ ಪಲ್ಲಕ್ಕಿ ಉತ್ಸವ ಭಕ್ತ ಸಮೂಹದ ಮಧ್ಯೆ ಅದ್ದೂರಿಯಾಗಿ ಜರುಗಿತು.

ನಗರದ ಚೌಬಾರಾದ ಪಾಂಡುರಂಗ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಂದಿರದ ಆವರಣದಿಂದ ಆರಂಭವಾದ ಪಾಂಡುರಂಗನ ಪಲ್ಲಕ್ಕಿ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಫುಗಡಿ ಆಡುವ ಮೂಲಕ ಗಮನ ಸೆಳೆದರು. ಭಕ್ತರು ಸಮರ್ಪಣಾ ಭಾವದಿಂದ ಏಕತಾರಿ, ತಾಳ, ಚಿಟಕಿ ಬಾರಿಸುತ್ತ ಭಜನಾ ಪದಗಳನ್ನು ಹಾಡಿದರು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಭಜನಾ ಮಂಡಳಿಗಳು ಭಕ್ತಿ ಸುಧೆ ಹರಿಸಿದವು.

ಯುವಕರು ಮಂಗಲವಾದ್ಯದೊಂದಿಗೆ ಬೃಹತ್‌ ನಂದಿ ಧ್ವಜ, ಛತ್ರಿ ಚಾಮರಗಳನ್ನು ಹಿಡಿದು ಮೆರವಣಿಗೆಗೆ ಮೆರುಗು ತುಂಬಿದರು. ಮೆರವಣಿಗೆಯಲ್ಲಿ ತರಲಾದ ಮೊಸರು ಗಡಿಗೆಯನ್ನು ಶಹಾಗಂಜ್‌ ಕಮಾನಿನ ಬಳಿ ಇರಿಸಿ ಪೂಜೆ ನೆರವೇರಿಸಲಾಯಿತು.

ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಯುವಕರು ಕಮಾನಿನ ಮೇಲೇರಿ ಪಾಂಡುರಂಗನ ಪಾದುಕೆಯ ಮೇಲೆ ಬೀಳುವಂತೆ ಮೊಸರು ಗಡಿಗೆಯನ್ನು ಒಡೆದರು. ಮಡಿಕೆಯಿಂದ ಮೊಸರು ಕೆಳಗೆ ಬೀಳುತ್ತಿದ್ದಂತೆಯೇ ಜಯಘೋಷ ಮೊಳಗಿತು. ಪಾಂಡುರಂಗನ ಭಕ್ತರು ಬೊಗಸೆಯಲ್ಲಿ ಮೊಸರು ಹಿಡಿದುಕೊಂಡು ತಲೆಯ ಮೇಲೆ ಸವರಿಕೊಂಡು ಭಕ್ತಿ ಭಾವ ಮೆರೆದರು.

ಆರ್ಯ ವೈಶ್ಯ ಸಮಾಜದವರು ಪ್ರತಿ ವರ್ಷ ಶ್ರದ್ಧಾ ಭಕ್ತಿಯಿಂದ ಪಾಂಡುರಂಗನ ಪಲ್ಲಕ್ಕಿ ಉತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷವೂ ಅರ್ಥಪೂರ್ಣ ಆಚರಣೆಯ ಜತೆಗೆ ಉತ್ತಮ ಮಳೆ, ಬೆಳೆಗಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ’ ಎಂದು
ಆರ್ಯ ವೈಶ್ಯ ಸಂಘದ ಅಧ್ಯಕ್ಷ ಚಂದ್ರಶೇಖರ ಗಾದಾ ಹೇಳಿದರು.

ಮೆರವಣಿಗೆ ಪ್ರಯುಕ್ತ ಓಲ್ಡ್‌ಸಿಟಿಯಲ್ಲಿ ಸಂಚಾರ ಮಾರ್ಗಗಳನ್ನು ಬದಲಿಸಲಾಗಿತ್ತು. ಬೀದರ್‌ನ ಶಹಾಗಂಜ್‌ ಕಮಾನ್‌ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಎಲ್ಲ ಜನ ಸಮುದಾಯದವರು ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮವನ್ನು ವೀಕ್ಷಿಸಿ ಆನಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು