ಮಂಗಳವಾರ, ಮೇ 24, 2022
31 °C

ನಾಡ ಕಚೇರಿಗಳ ಅಧಿಕಾರ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗ್ರಾಮಿಣ ಜನರು ದಿನನಿತ್ಯ ಜಿಲ್ಲಾ, ತಾಲ್ಲೂಕು ಕಚೇರಿಗಳಿಗೆ ಅಲೆಯುವ ತಾಪತ್ರಯ ತಪ್ಪಿಸಲು ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಡಕಚೇರಿಗಳ ಅಧಿಕಾರಗಳನ್ನು ಮುಂದುವರಿಸುವಂತೆ ಸರ್ಕಾರ ಆದೇಶ ನೀಡಿದೆ. ಕಂದಾಯ ಆಡಳಿತವನ್ನು ಬಲಪಡಿಸಲು ತಾಲ್ಲೂಕು ಹಂತದಲ್ಲಿ ಕೇಂದ್ರಿಕೃತವಾಗಿರದ ಅಧಿಕಾರಗಳನ್ನು ಹೋಬಳಿಮಟ್ಟದಲ್ಲಿ ವಿಕೇಂದ್ರೀಕರಿಸುವುದಕ್ಕಾಗಿ ಸರ್ಕಾರವು ನಾಡಕಚೇರಿಗಳನ್ನು ಆರಂಭಿಸಿದ್ದು, ಪ್ರಸ್ತುತ ಗುಲ್ಬರ್ಗ ವಿಭಾಗದಲ್ಲಿ ತಾಲ್ಲೂಕಿಗೆ ಎರಡರಂತೆ 62 ನಾಡ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.ಈ ಹಿಂದೆ ಕರ್ನಾಟಕ ಆಡಳಿತ ಸುಧಾರಣೆ ಆಯೋಗವು ತನ್ನ ವರದಿಯಲ್ಲಿ ಎಲ್ಲಾ ನಾಡ ಕಚೇರಿಗಳನ್ನು ರದ್ದುಗೊಳಿಸಲು ಮಾಡಿದ ಶಿಫಾರಸು ಮೇರೆಗೆ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಆದರೆ ಸಾರ್ವಜನಿಕರು ತಾಲ್ಲೂಕು ಕಚೇರಿಗಳನ್ನು ಸಂಪರ್ಕಿಸುವ ಬದಲಾಗಿ ಮಾಸಿಕ ಪಿಂಚಣಿ ಯೋಜನೆಗಳು, ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ಇತರೆ ದೃಢೀಕರಣ ಪತ್ರಗಳನ್ನು ಹೋಬಳಿ ಮಟ್ಟದಲಿಯ್ಲಿ ಪಡೆದುಕೊಳ್ಳುವಂತಾದರೆ ಬಡಕುಟುಂಬಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ವ್ಯವಸ್ಥೆಯನ್ನು ಮುಂದುವರಿಸಲು ಒಪ್ಪಿಗೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಫೆ.18ರಿಂದ ಈ ನಿಯಮ ಜಾರಿಗೊಳ್ಳುವಂತೆ ಆದೇಶ ನೀಡಿದೆ.  ಪ್ರತಿ ನಾಡ ಕಚೇರಿಯಲ್ಲಿ ಭೂಮಿ, ಕಿಯೋಸ್ಕಗಳನ್ನು ಪ್ರಾರಂಭಿಸಿ ಅವುಗಳಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳ ಮೇಲ್ವಿಚಾರಣೆ ಹಾಗೂ ನಿರ್ವಹಣೆ ಅಧಿಕಾರಗಳನ್ನು ಪ್ರತ್ಯಾಯೋಜಿಸಲಾಗಿದೆ. ಈಗ ಸಾರ್ವಜನಿಕರು ನಾಡ ಕಚೇರಿಗಳಲ್ಲಿ  ಪಿಂಚಣಿ ಮಂಜೂರಾತಿ, ನಿಸರ್ಗ ವಿಪತ್ತುಗಳ ಅಡಿ ನೊಂದವರಿಗೆ ಪರಿಹಾರ ಧನ ನೀಡುವುದು,  ಜನನ ಮರಣ ದಾಖಲೆಗಳ ನೋಂದಾವಣೆ, ಸಣ್ಣ ಅತೀ ಸಣ್ಣ ರೈತರಿಗೆ ದೃಢೀಕರಣ ಪತ್ರ ನೀಡುವುದು ಸೇರಿದಂತೆ ತಾಲ್ಲೂಕು ಮಟ್ಟದ ಕಾರ್ಯಗಳನ್ನು ಮಾಡಿಕೊಳ್ಳಬಹುದಾಗಿದೆ ಎಂದು ಪ್ರಾದೇಶಿಕ ಆಯುಕ್ತ ರಜನೀಶ ಗೋಯಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.