ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳ್ಳಿ ಹೈದರ ಹುಬ್ಬೇರಿಸುತ್ತದೆ ಪ್ಯಾಟಿ ಹುಡ್ಗನ ಕೃಷಿ ಕಾಯಕ

Last Updated 8 ಸೆಪ್ಟೆಂಬರ್ 2021, 4:04 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ಆಧುನಿಕ ಕಾಲಘಟ್ಟದಲ್ಲಿ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇಂತಹ ಆತಂಕದ ಸಮಯದಲ್ಲಿ ಕೃಷಿಯನ್ನೇ ಬದುಕಾಗಿಸಿಕೊಂಡು, ವಿವಿಧ ತರಹದ ಉಪಕಸುಬುಗಳ ಮೂಲಕ ಲಕ್ಷಾಂತರ ರೂಪಾಯಿ ಗಳಿಸಿ ಹಳ್ಳಿ ಹೈದರು ಕೂಡ ಹುಬ್ಬೇರಿಸುವಂತೆ ಬದುಕು ಸಾಗಿಸುತ್ತಿದ್ದಾರೆ ಪಟ್ಟಣದ ಸೊರಬ ರಸ್ತೆಯ ನಿವಾಸಿ ಅಭಿಷೇಕ.

ಹದಿಹರೆಯದ ವಯಸ್ಸಿನಲ್ಲಿ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡದೆ ಕೃಷಿಯಲ್ಲಿ ಸಂಪೂರ್ಣ ಸಮಯವನ್ನು ತೊಡಗಿಸಿಕೊಂಡಿರುವ ಅವರು ಕುರಿ, ನಾಟಿಕೋಳಿ, ಮೀನು, ಬಾತುಕೋಳಿ, ಪಾರಿವಾಳ, ಹಸು, ವಿವಿಧ ತಳಿಯ ನಾಯಿಗಳ ಸಾಕಾಣಿಕೆ ಸೇರಿ ಹಲವಾರು ಬಗೆಯ ಉಪಕಸುಬುಗಳಿಂದ ವಾರ್ಷಿಕ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.

ಎರಡು ವರ್ಷಕ್ಕೆ ಮೂರು ಬೀಡು ಕುರಿ ಸಾಕುವ ಅವರು ಒಂದು ಬೀಡಿಗೆ 50 ಕುರಿ ಮರಿಗಳನ್ನು ಸಾಕುತ್ತಾರೆ. ಮೂರು ಬೀಡುಗಳಿಂದ ₹ 9 ಲಕ್ಷ ಸಂಪಾದಿಸಿದ್ದಾರೆ. ಅಮೀನಗಡ ತಳಿ, ಕೆಂಗುರಿ, ಶಿಮ್ಲಗುರಿ, ಹೋತ ಹೀಗೆ ವಿವಿಧ ರೀತಿಯ ಕುರಿಗಳನ್ನು ಸಾಕಾಣಿಕೆ ಮಾಡುತ್ತಿರುವ ಅವರು ಕುರಿ, ಕೋಳಿ ಹಾಗೂ ಹಸುವಿನ ಗಂಜಲ ಸಂಗ್ರಹಿಸಿ ಸಾವಯವ ಗೊಬ್ಬರ ತಯಾರಿಸಿ ತಮ್ಮ ನಾಲ್ಕೂವರೆ ಎಕರೆ ಅಡಿಕೆ ತೋಟ ಪೋಷಣೆ ಮಾಡುತ್ತಿದ್ದಾರೆ.

ಹಸುವಿನ ಹಾಲನ್ನು ಮನೆ ಮನೆಗಳಿಗೆ ಹಾಕುವ ಅಭಿಷೇಕ ಅವರು, ಕುರಿ, ಕೋಳಿ ಹಾಗೂ ಮೀನುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಅಡಿಕೆ ಸಸಿಗಳ ನರ್ಸರಿ ಮಾಡಿರುವ ಅವರು ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ವಿಶೇಷವೆಂದರೆ ಈ ಎಲ್ಲ ಕೆಲಸ ಕಾರ್ಯಗಳನ್ನು ಸಹ ತಾವೇ ಮಾಡುವ ಯುವಕ ಯಾವುದೇ ಕೆಲಸಗಾರರನ್ನು ಅವಲಂಬಿಸಿಲ್ಲ.

ಉಷಾ, ಸುನಿಲ್ ದಂಪತಿಯ ಪುತ್ರ ಅಭಿಷೇಕ ಐಟಿಐ ಹಾಗೂ ಪದವಿ ಶಿಕ್ಷಣ ಪಡೆದಿದ್ದು, ವೃತ್ತಿ ಬದುಕನ್ನು ಕೃಷಿಯ ಜೊತೆಗೆ ರೂಪಿಸಿಕೊಳ್ಳುವ ಮೂಲಕ ಯುವ ಸಮುದಾಯ ತಮ್ಮತ್ತ ದೃಷ್ಟಿ ಹಾಯಿಸುವಂತೆ ಮಾಡಿದ್ದಾರೆ.

ಬಾಲ್ಯದಿಂದಲೂ ಕೃಷಿಯ ಜೊತೆಗೆ ಬೆಳೆದ ಅವರು ಪ್ರಾಣಿ, ಪಕ್ಷಿ, ಗಿಡ, ಮರಗಳ ಬಗ್ಗೆ ತುಂಬಾ ಪ್ರೀತಿ, ಅಭಿಮಾನ ಹೊಂದಿದ್ದಾರೆ. ಹಾಗಾಗಿಯೇ ಪ್ರಾಣಿ, ಪಕ್ಷಿಗಳ ಸಾಕಾಣಿಕೆ ಪ್ರಾರಂಭಿಸಿ, ಅದರಲ್ಲಿಯೇ ಲಾಭ ಕಾಣುತ್ತಿದ್ದಾರೆ.

‘ಶ್ರಮಜೀವಿಯಾಗಿರುವ ಮಗನನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ. ಯಾರ ಮೇಲೂ ಅವಲಂಬಿತನಾಗದೆ ಕೃಷಿ ಹಾಗೂ ಸಾಕಾಣಿಕೆ ಕಾರ್ಯಗಳಲ್ಲಿ ತೊಡಗಿದ್ದಾನೆ. ಹಸು, ಕುರಿ, ಕೋಳಿ, ಮೀನು ಮರಿಗಳಿಗೆ ತಾನೇ ಮೇವು ಸಿದ್ಧಪಡಿಸಿ ನೀಡುತ್ತಾನೆ. ಅವುಗಳ ಶುಚಿತ್ವ ಹಾಗೂ ವಾಕ್ಸಿನ್‌ಗಳನ್ನು ಸಹ ವೈದ್ಯರ ಸಲಹೆ ಪಡೆದು ಮಾಡುತ್ತಾನೆ’ ಎನ್ನುತ್ತಾರೆ ತಾಯಿ ಉಷಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT