ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕುಟ ಉದ್ಯಮಕ್ಕೆ ‘ಹಕ್ಕಿ ಜ್ವರ’ದ ಬಿಸಿ

ಕೋಳಿ ಮಾಂಸ, ಮೊಟ್ಟೆ ಖರೀದಿಗೆ ಗ್ರಾಹಕರ ಹಿಂದೇಟು: ಕುಸಿದ ವಹಿವಾಟು
Last Updated 11 ಜನವರಿ 2021, 2:27 IST
ಅಕ್ಷರ ಗಾತ್ರ

ಕೋಲಾರ: ದೇಶದ ಹಲವೆಡೆ ಹಕ್ಕಿ ಜ್ವರ (ಕೋಳಿ ಶೀತ ಜ್ವರ) ಕಾಣಿಸಿಕೊಂಡ ಬೆನ್ನಲ್ಲೇ ಜಿಲ್ಲೆಯ ಕುಕ್ಕುಟ ಉದ್ಯಮಕ್ಕೆ ಅದರ ಬಿಸಿ ತಟ್ಟಿದ್ದು, ಕೋಳಿ ಮಾಂಸ ಹಾಗೂ ಮೊಟ್ಟೆ ವಹಿವಾಟು ಕುಸಿದಿದೆ.

ಜಿಲ್ಲೆಯ ರೈತರು ಹೈನುಗಾರಿಕೆ ಹಾಗೂ ರೇಷ್ಮೆ ಕೃಷಿ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತರಾಗಿದ್ದಾರೆ. ಕೃಷಿಗೆ ಪರ್ಯಾಯವಾಗಿ ಕುಕ್ಕುಟ ಉದ್ಯಮವು ರೈತರ ಜೀವನಕ್ಕೆ ಆಧಾರವಾಗಿದೆ. ಹಕ್ಕಿ ಜ್ವರದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ್ದು, ಮೊಟ್ಟೆ ಹಾಗೂ ಮಾಂಸ ಪ್ರಿಯರು ಕೋಳಿ ಮಾಂಸ ಮತ್ತು ಮೊಟ್ಟೆ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿ 611 ನೋಂದಾಯಿತ ಕೋಳಿ ಫಾರಂಗಳಿದ್ದು, ಬ್ರಾಯ್ಲರ್‌ (ಮಾಂಸದ ಉದ್ದೇಶದ್ದು) ಮತ್ತು ಲೇಯರ್‌ (ಮೊಟ್ಟೆಯ ಉದ್ದೇಶದ್ದು) ಕೋಳಿಗಳನ್ನು ಪ್ರಮುಖವಾಗಿ ಸಾಕಲಾಗುತ್ತಿದೆ. ಜಿಲ್ಲಾ ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರದ ಮಾಹಿತಿ ಪ್ರಕಾರ ಜಿಲ್ಲೆಯ ಫಾರಂಗಳಲ್ಲಿ ಸುಮಾರು 20 ಲಕ್ಷ ಬ್ರಾಯ್ಲರ್‌ ಕೋಳಿ ಹಾಗೂ 36 ಲಕ್ಷ ಲೇಯರ್‌ ಕೋಳಿಗಳಿವೆ. ಕೆಲವೆಡೆ ಅಲ್ಪ ಪ್ರಮಾಣದಲ್ಲಿ ನಾಟಿ ಕೋಳಿ, ಗಿರಿರಾಜ ಕೋಳಿಗಳನ್ನು ಸಾಕಲಾಗಿದೆ.

ಜಿಲ್ಲೆಯ ಬೇಡಿಕೆಗೆ ಹೋಲಿಸಿದರೆ ಕೋಳಿ ಮೊಟ್ಟೆ ಮತ್ತು ಮಾಂಸದ ಉತ್ಪಾದನೆ ಕಡಿಮೆ ಇದೆ. ಹೀಗಾಗಿ ತಮಿಳುನಾಡಿನ ನಾಮಕ್ಕಲ್‌, ಕರೂರು, ಕೃಷ್ಣಗಿರಿ ಮತ್ತು ಆಂಧ್ರಪ್ರದೇಶದಿಂದ ಜಿಲ್ಲೆಗೆ ಮೊಟ್ಟೆ ಮತ್ತು ಮಾಂಸವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಜಿಲ್ಲೆಯಲ್ಲಿ ಕಟ್ಟೆಚ್ಚರ: ಕೇರಳದ ಫಾರಂಗಳಲ್ಲಿರುವ ಕೋಳಿಗಳಿಗೆ ಮತ್ತು ಬಾತು ಕೋಳಿಗಳಿಗೆ ಹಕ್ಕಿ ಜ್ವರದ ಸೋಂಕು ತಗುಲಿ ಮೃತಪಟ್ಟಿರುವುದು ದೃಢಪಟ್ಟಿದೆ. ಜತೆಗೆ ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ವಲಸೆ ಹಕ್ಕಿಗಳು, ಕಾಗೆ ಸೇರಿದಂತೆ ಸ್ಥಳೀಯ ಪಕ್ಷಿಗಳು ಹಕ್ಕಿ ಜ್ವರದಿಂದ ಮೃತಪಟ್ಟಿವೆ. ಹೀಗಾಗಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿದೆ.

ಜಿಲ್ಲೆಯಲ್ಲಿ ಈ ಹಿಂದೆ ಹಕ್ಕಿ ಜ್ವರ ಕಾಣಿಸಿಕೊಂಡ ಉದಾಹರಣೆ ಇಲ್ಲ. ಆದರೂ ಇಲಾಖೆಯು ಹಕ್ಕಿ ಜ್ವರವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೋಂಕಿನ ತಡೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕುಕ್ಕುಟ ಉದ್ಯಮಿಗಳಿಗೆ ಅರಿವು ಮೂಡಿಸುತ್ತಿದೆ. ಇಲಾಖೆ ಅಧಿಕಾರಿಗಳು ನಿಯಮಿತವಾಗಿ ಫಾರಂಗಳಿಗೆ ಭೇಟಿ ಕೊಟ್ಟು ಕೋಳಿಗಳ ರಕ್ತ, ಹಿಕ್ಕೆ ಮತ್ತು ಕೋಳಿ ಆಹಾರದ ಮಾದರಿಯನ್ನು ಸಂಗ್ರಹಿಸುತ್ತಿದ್ದಾರೆ.

ಜತೆಗೆ ಹೊರಗಿನಿಂದ ಆಹಾರ ಮತ್ತು ನೀರು ಅರಸಿ ಜಿಲ್ಲೆಗೆ ಬರುವ ಪಕ್ಷಿಗಳ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ. ಜಿಲ್ಲೆಯ ಗಡಿ ಭಾಗದ ರಾಯಲ್ಪಾಡು, ನಂಗಲಿ. ವಿ.ಕೋಟಾ, ಬೂದಿಕೋಟೆ, ಕೆಂಪಾಪುರ ಚೆಕ್‌ಪೋಸ್ಟ್‌ ಮೂಲಕ ಜಿಲ್ಲೆಯನ್ನು ಪ್ರವೇಶಿಸುವ ಕೋಳಿ, ಕೋಳಿ ಉತ್ಪನ್ನಗಳು ಮತ್ತು ಕೋಳಿ ಆಹಾರ ಸಾಗಣೆ ವಾಹನಗಳನ್ನು ಸ್ಯಾನಿಟೈಸ್‌ ಮಾಡಿಸಲು ಕ್ರಮ ಕೈಗೊಂಡಿದ್ದಾರೆ.

ಆರ್‌ಆರ್‌ಟಿ ರಚನೆ: ಕುಕ್ಕುಟ ಉದ್ಯಮದ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ 33 ಕ್ಷಿಪ್ರ ಕಾರ್ಯಪಡೆ (ಆರ್‌ಆರ್‌ಟಿ) ತಂಡಗಳನ್ನು ರಚಿಸಲಾಗಿದೆ. ಪ್ರತಿ ಆರ್‌ಆರ್‌ಟಿ ತಂಡದಲ್ಲಿ ಪಶು ವೈದ್ಯರು, ಪರಿವೀಕ್ಷಕರು, ಅರೆ ತಾಂತ್ರಿಕ ಸಿಬ್ಬಂದಿ, ಸಹಾಯಕರು ಮತ್ತು ಡಿ ದರ್ಜೆ ನೌಕರರಿದ್ದಾರೆ. ಆರ್‌ಆರ್‌ಟಿ ತಂಡದ ಸದಸ್ಯರು ತಮ್ಮ ಕಾರ್ಯ ಕ್ಷೇತ್ರದ ವ್ಯಾಪ್ತಿಯಲ್ಲಿನ ಕೋಳಿ ಫಾರಂಗಳಿಗೆ ನಿಯಮಿತವಾಗಿ ಭೇಟಿ ಕೊಟ್ಟು ಹಕ್ಕಿ ಜ್ವರದ ಲಕ್ಷಣಗಳ ವಿವರವನ್ನು ಒಳಗೊಂಡ ಕರಪತ್ರ ಹಂಚುತ್ತಿದ್ದಾರೆ.

ಕೋಳಿ ಫಾರಂಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಹಕ್ಕಿ ಜ್ವರದ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ಹೀಗಾಗಿ ಫಾರಂಗಳಲ್ಲಿ ಕೆಲಸ ಮಾಡುವ ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಕೆಲಸಗಾರರಿಗೆ ಅರಿವು ಮೂಡಿಸಲಾಗುತ್ತಿದೆ.

ಭಯ ಪಡಬೇಕಿಲ್ಲ: ‘ಕೋಳಿ ಮಾಂಸ ಅಥವಾ ಮೊಟ್ಟೆ ಸೇವನೆಯಿಂದ ಮನುಷ್ಯರಿಗೆ ಹಕ್ಕಿ ಜ್ವರದ ಸೋಂಕು ತಗುಲುವುದಿಲ್ಲ. ಅಲ್ಲದೇ, ಕೋಳಿ ಮಾಂಸ ಅಥವಾ ಮೊಟ್ಟೆಯನ್ನು ಬೇಯಿಸಿದಾಗ ಸೋಂಕಿನ ವೈರಸ್‌ ನಾಶವಾಗುತ್ತದೆ. ಹೀಗಾಗಿ ಜನ ಕೋಳಿ ಮಾಂಸ ಹಾಗೂ ಮೊಟ್ಟೆ ಸೇವಿಸಲು ಭಯಪಡಬೇಕಿಲ್ಲ’ ಎಂದು ಜಿಲ್ಲಾ ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರದ ತಜ್ಞರು ಹೇಳುತ್ತಾರೆ.

ಹಕ್ಕಿ ಜ್ವರ ಸೋಂಕಿನ ನಿವಾರಣೆಗೆ ಯಾವುದೇ ಚುಚ್ಚುಮದ್ದು ಇಲ್ಲ. ಈ ಸೋಂಕುಪೀಡಿತ ಕೋಳಿಗಳನ್ನು ಇತರೆ ಆರೋಗ್ಯವಂತ ಕೋಳಿಗಳಿಂದ ಪ್ರತ್ಯೇಕಿಸುವುದು ಅಥವಾ ಸಾಯಿಸುವುದೇ ಹಕ್ಕಿ ಜ್ವರ ನಿಯಂತ್ರಣಕ್ಕೆ ಇರುವ ಮಾರ್ಗೋಪಾಯ ಎನ್ನುತ್ತಾರೆ ತಜ್ಞರು.

ದೇಶದ ವಿವಿಧೆಡೆ ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಜಿಲ್ಲೆಯಲ್ಲಿ ಗ್ರಾಹಕರು ಕೋಳಿ ಮಾಂಸ ಮತ್ತು ಮೊಟ್ಟೆ ಖರೀದಿಸಲು ಭಯಪಡುತ್ತಿದ್ದಾರೆ. ಹೀಗಾಗಿ ಒಂದು ವಾರದಿಂದ ವಹಿವಾಟು ಕುಸಿದಿದೆ. ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಸೋಂಕಿನ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದರೆ ಅನುಕೂಲವಾಗುತ್ತದೆ ಎಂದು ಕೋಳಿ ಫಾರಂ ಹಾಗೂ ಅಂಗಡಿಗಳ ಮಾಲೀಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT