ಸೋಮವಾರ, ಜೂನ್ 1, 2020
27 °C

ಬೇಸಿಗೆಯಲ್ಲಿ ರಾಸುಗಳ ನಿರ್ವಹಣೆ

ಡಾ.ರೋಜಾ ಬಸನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಬೇಸಿಗೆಯ ತಾಪಕ್ಕೆ ಜಾನುವಾರುಗಳು ಸೊರಗುತ್ತವೆ. ವಾತಾವರಣದಲ್ಲಿ ಧಗೆ ಹೆಚ್ಚಾದಂತೆ, ರಾಸುಗಳು ಮೇವು ತಿನ್ನುವ ಪ್ರಮಾಣ ಕಡಿಮೆ ಮಾಡುತ್ತವೆ. ಪರಿಣಾಮವಾಗಿ ಹಾಲಿನ ಇಳುವರಿ ಕುಸಿಯುತ್ತದೆ. ಆರೋಗ್ಯ ಕೆಡುತ್ತದೆ. ಇದರಿಂದ ಕೃಷಿ ಚಟುವಟಿಕೆಗಳ ಮೇಲೂ ತೀವ್ರ ಪರಿಣಾಮ ಬೀರುತ್ತದೆ. ಹೀಗಾಗಿ ಬೇಸಿಗೆಯಲ್ಲಿ ರಾಸುಗಳನ್ನು ರಕ್ಷಣೆ ಒದಗಿಸುವುದು ರೈತರಿಗೆ ಒಂದು ಸವಾಲಿನ ಕೆಲಸ. ಇಂಥ ವೇಳೆ ವೈಜ್ಞಾನಿಕ ನೆಲೆಯಲ್ಲಿ ರಾಸುಗಳ ಆರೋಗ್ಯ ನಿರ್ವಹಣೆ ಮಾಡುವುದು ಅಗತ್ಯವಾದ ಕೆಲಸ.

ತಾಪಮಾನ ಹೆಚ್ಚಿದಾಗ–ಲಕ್ಷಣಗಳು

ತಾಪಮಾನ ಹೆಚ್ಚಾದಾಗ ಸಹಜವಾಗಿ ಹಸುಗಳು ಸೇವಿಸುವ ಮೇವಿನ ಪ್ರಮಾಣ ಶೇ 10 ರಷ್ಟು ಕಡಿಮೆಯಾಗುತ್ತದೆ. ಹಸಿಮೇವು ಅಷ್ಟೇ ಅಲ್ಲ, ಒಣಮೇವು ತಿನ್ನುವುದನ್ನು ಕಡಿಮೆ ಮಾಡುತ್ತವೆ. ಹೆಚ್ಚಾಗಿ ತೇಗುವುದು ಮತ್ತು ಜೊಲ್ಲು ಸುರಿಸುವುದು ಮಾಡುತ್ತವೆ. ಬೆವರುವುದು ಮತ್ತು ಏದುಸಿರು ಬಿಡುವುದು (ಶ್ರಮದಿಂದ ಉಸಿರಾಡುವುದು) ಕಂಡುಬರುತ್ತದೆ. ಎಮ್ಮೆಗಳಲ್ಲಿ ಅವುಗಳ ಕಾಲು ಹಾಗೂ ಹೊಟ್ಟೆಯ ಕೆಳಭಾಗದ ಚರ್ಮ ಕೆಂಪಗಾಗುತ್ತದೆ. ಹೆಚ್ಚು ಬಾರಿ ನೀರು ಕುಡಿಯುವುದನ್ನು ಗುರುತಿಸಬಹುದಾಗಿದೆ.

ಹಸುಗಳು ಬಹುಬೇಗ ಆಯಾಸಗೊಳ್ಳುತ್ತವೆ. ಅವುಗಳ ಸಹಜ ಪ್ರಕ್ರಿಯೆಯಲ್ಲಿ ಅನೇಕ ವ್ಯತ್ಯಾಸ, ಬದಲಾವಣೆಗಳು ಕಂಡು ಬರುತ್ತವೆ. ಕಡಿಮೆ ಆಹಾರ ಸೇವಿಸುವುದರಿಂದ ಹಾಲಿನ ಇಳುವರಿ ಜೊತೆ ಹಾಲಿನಲ್ಲಿರುವ ಅಂಶಗಳೂ ಕಡಿಮೆಯಾಗುತ್ತವೆ. ಇದರಿಂದ ಹಾಲಿನಲ್ಲಿ ಕೊಬ್ಬಿನ ಅಂಶ ಇಳಿಕೆಯಾಗು ತ್ತದೆ. ತಾಪಮಾನದ ತೀವ್ರತೆಯಿಂದ ದೇಹದ ಬೆಳವಣಿಗೆಯಲ್ಲೂ ಕುಂಠಿತವಾಗುತ್ತದೆ. ಬಂಜೆತನ ಉಂಟಾಗುವ ಸಾಧ್ಯತೆ ಇರುತ್ತದೆ.

ನಿರ್ವಹಣೆ ವಿಧಾನ ಹೇಗೆ?

ಮೊದಲು ರಾಸುಗಳನ್ನು ಕಟ್ಟುವ ಕೊಟ್ಟಿಗೆಯಲ್ಲಿನ ಉಷ್ಣಾಂಶ ಕಡಿಮೆ ಮಾಡಬೇಕು. ಅದಕ್ಕಾಗಿ ಕೊಟ್ಟಿಗೆ ಅಥವಾ ಶೆಡ್‌ನಲ್ಲಿ ಗಾಳಿಯಾಡುವಂತಹ ವ್ಯವಸ್ಥೆ ಮಾಡಬೇಕು.

ಶುದ್ಧವಾದ ಗಾಳಿ ಬರಲು ಕೊಟ್ಟಿಗೆಯ ಚಾವಣಿ ಎತ್ತರಿಸಬೇಕು. ಕೊಟ್ಟಿಗೆ ಸೂರಿಗೆ ಹಸಿ ತೆಂಗಿನ ಗರಿ ಅಥವಾ ಹುಲ್ಲು ಹೊದಿಸಬೇಕು. ಕೊಟ್ಟಿಗೆಯ ಚಾವಣಿ ಸಿಮೆಂಟ್‌ದಾಗಿದ್ದರೆ, ಅದಕ್ಕೆ ಬಿಳಿಯ ಬಣ್ಣ ಅಥವಾ ಸುಣ್ಣ ಹೊಡೆಯಬೇಕು.

ಸೂರ್ಯನ ಕಿರಣಗಳು ನೇರವಾಗಿ ಕೊಟ್ಟಿಗೆ ಪ್ರವೇಶಿಸುವುದನ್ನು ತಪ್ಪಿಸಬೇಕು. ಅದಕ್ಕಾಗಿ ಕೊಟ್ಟಿಗೆಯ ಸುತ್ತ ಮರಗಿಡಗಳನ್ನು ಬೆಳೆಸಬೇಕು. ಸಾಧ್ಯವಾದಷ್ಟು ರಾಸುಗಳನ್ನು ನೆರಳಲ್ಲಿ, ತಂಪಾದ ಜಾಗದಲ್ಲೇ ಕಟ್ಟಬೇಕು.

ಕೊಟ್ಟಿಗೆಯ ಕಿಟಕಿಗಳಿಗೆ ಒದ್ದೆ ಮಾಡಿದ ಗೋಣಿ ಚೀಲ ಹೊದಿಸಬೇಕು. ಅನುಕೂಲವಿದ್ದವರು ಕೂಲಿಂಗ್‌ ಫ್ಯಾನ್‌ಗಳನ್ನೂ ಅಳವಡಿಸಬಹುದು. ದೊಡ್ಡ ಫಾರಂಗಳಲ್ಲಿ ಸ್ಪಿಂಕ್ಲರ್‌ಗಳನ್ನು ಅಳವಡಿಸಿ ವಾತಾವರಣ ತಂಪಾಗಿರುವಂತೆ ನೋಡಿಕೊಳ್ಳಬೇಕು.

ಬಿಸಿಲಿನಲ್ಲಿ ರಾಸುಗಳನ್ನು ಹೊರಗೆ ಮೇಯುವುದಕ್ಕೆ ಕಳಿಸಬಾರದು. ಒಂದೊಮ್ಮೆ ಅನಿವಾರ್ಯವಾದರೆ ಮುಂಜಾನೆಯೇ ಹೊರಗೆ ಕಳಿಸಿ, ಸಂಜೆ ಬಿಸಿಲು ಇಳಿದ ಮೇಲೆ ಮನೆಗೆ ವಾಪಸ್ ಬರುವಂತೆ ನೋಡಿಕೊಳ್ಳಬೇಕು. ಹೊರಗೆ ಹೋದರೂ ಮರದ ನೆರಳಿನಲ್ಲೇ ಮೇಯುವಂತೆ ನೋಡಿಕೊಳ್ಳಬೇಕು. 

ಯಾವಾಗಲೂ ಶುದ್ಧವಾದ ನೀರನ್ನೇ ಕುಡಿಸಬೇಕು.

ದಿನಕ್ಕೆ 2 ರಿಂದ 3 ಬಾರಿ ತಣ್ಣೀರಿನಿಂದ ರಾಸುಗಳ ಮೈ ತೊಳೆಯಬೇಕು.

ಆಹಾರ ಪೂರೈಕೆಯಲ್ಲಿ ಎಚ್ಚರವಿರಲಿ

ವಾತಾವರಣ ನಿರ್ವಹಣೆ ಜತೆಗೆ, ರಾಸುಗಳಿಗೆ ಪೂರೈಸುವ ಆಹಾರದಲ್ಲೂ ಎಚ್ಚರವಹಿಸಬೇಕು. ರಾಸುಗಳಿಗೆ ಶುದ್ಧ ಹಾಗೂ ತಾಜಾ ಆಹಾರವನ್ನೇ ಪೂರೈಸಬೇಕು.

ಪ್ರೊಟೀನ್‌ಯುಕ್ತ ಆಹಾರ ನೀಡಬೇಕು. ನಾರಿನಂಶ ವಿರುವಂತಹ ಶೇಂಗಾ ಹಿಂಡಿ, ಸೋಯಾಹಿಂಡಿ, ಸೂರ್ಯಪಾನ ಹಿಂಡಿಯನ್ನು ಕೊಡಬೇಕು. ಒಣ ಹುಲ್ಲು, ಸೋಯಾ ಹುಲ್ಲು, ಮೆಕ್ಕೆಜೋಳ, ಜೋಳ, ಹುರುಳಿಕಾಳು, ಸೋಯಾಬೀನ್‌ನಂತಹ ತಾಜಾ ಕಾಳುಗಳನ್ನು ನಿಯಮಿತವಾಗಿ ಕೊಡಬೇಕು.

‌ನಂದಿನಿ ಗೋಲ್ಡ್‌, ನಂದಿನಿ ಬೈಪಾಸ್‌ನಂತಹ ಹೆಚ್ಚು ಪೌಷ್ಟಿಕಾಂಶವುಳ್ಳ ಸಿದ್ಧ ಆಹಾರ ಮಾರು ಕಟ್ಟೆಯಲ್ಲಿ ಲಭ್ಯವಿದೆ. ಸಿದ್ಧ ಆಹಾರವನ್ನು ಆಕಳುಗಳ ದೇಹ ತೂಕಕ್ಕೆ ತಕ್ಕಂತೆ ದಿನಕ್ಕೆ ಒಂದೂವರೆ ಕೆ.ಜಿಯಿಂದ ಎರಡು ಕೆ.ಜಿಯಷ್ಟು ಕೊಡಬೇಕು. ಹಾಲು ಕರೆಯುವ ಹಸುವಿಗೆ, ಅದು ಕೊಡುವ ಹಾಲಿನ ಇಳುವರಿಯ ಪ್ರಮಾಣಕ್ಕೆ ಅನುಗುಣವಾಗಿ ಅಂದರೆ ಪ್ರತಿ ಮೂರು ಲೀಟರ್‌ಗೆ 1 ಕೆ.ಜಿಯಂತಹ ಪಶು ಆಹಾರ ನೀಡಬೇಕು. ಹಾಲು ಉತ್ಪಾದನೆ ಹೆಚ್ಚಾದಂತೆ, ಪೂರೈಸುವ ಆಹಾರವನ್ನೂ ಹೆಚ್ಚಿಸ ಬೇಕು. ಹಾಲು ಹಿಡಿದ ನಂತರ ಆಹಾರ ಕೊಡಬೇಕು.

ಒಣ ಮೇವನ್ನು ಸುಮಾರು ಒಂದೂವರೆ ಇಂಚು ಉದ್ದಕ್ಕೆ ತುಂಡರಿಸಿ, ಪ್ರತಿ ರಾಸುಗೆ ನಿತ್ಯ ಏಳರಿಂದ ಎಂಟು ಕೆ.ಜಿ. ಕೊಡಬೇಕು. ಅದಕ್ಕೂ ಮುನ್ನ ಮೇವಿಗೆ ಉಪ್ಪು ಅಥವಾ ಬೆಲ್ಲದ ದ್ರಾವಣ ಸಿಂಪಡಿಸಬೇಕು. ದಿನಕ್ಕೆ 100 ಗ್ರಾಂ ಲವಣಾಂಶ (ಮಿಕ್ಸರ್) ಮಿಶ್ರಣವನ್ನು (ಬೆಳಿಗ್ಗೆ 35 ಗ್ರಾಂ, ಮಧ್ಯಾಹ್ನ 30 ಗ್ರಾಂ ಹಾಗೂ ಸಂಜೆ 35 ಗ್ರಾಂ) ಬಳಸಬೇಕು.

ವಾತಾವರಣ ತಂಪಾಗಿದ್ದಾಗ ಆಹಾರ ಕೊಡಬೇಕು. ಆಹಾರ ಮತ್ತು ನೀರು ಪೂರೈಸುವ ಪದ್ಧತಿಯನ್ನು ಒಂದೇ ಬಾರಿಗೆ ಬದಲಾಯಿಸಬಾರದು.

ಹಾಲು ಹಿಂಡುವ ಎರಡು ತಾಸು ಮೊದಲು ರಾಸುಗಳ ಮೈ ಉಜ್ಜಬೇಕು. ಸೊಳ್ಳೆ, ನೊಣಗಳು ಬಾರದಂತೆ ನೋಡಿಕೊಳ್ಳಬೇಕು. ಬೇಸಿಗೆಯಲ್ಲಿ ಜಾಗರೂಕತೆಯಿಂದ ರಾಸುಗಳನ್ನು ನಿರ್ವಹಣೆ ಮಾಡಿದರೆ ಹಾಲಿನ ಇಳುವರಿ ಮತ್ತು ಪಶುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು