ಬುಧವಾರ, ನವೆಂಬರ್ 20, 2019
22 °C

ತಾಯಿಯ ಹಾಲು ಅಮೃತಕರುವಿಗೂ (ಸ)ಹಿತ

Published:
Updated:

ಇದು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವಲ್ಲ. ಆದರೂ ನೀವು ಹೈನುಗಾರರಾಗಿದ್ದರೆ ನಿಮಗೊಂದು ಕ್ವಿಝ್, ಇಲ್ಲಿದೆ;

1. ಮನೆಯಲ್ಲಿ ಹಸು/ಎಮ್ಮೆ ಕರು ಹಾಕಿದ ಕೂಡಲೇ ಮಾಡುವ ಮೊದಲ ಕೆಲಸ ಯಾವುದು?
ಆಪ್ಶನ್‌

ಎ) ಹಾಲು ಹಿಂಡಿಕೊಂಡು ಗಟ್ಟಿಗಿಣ್ಣು ಮಾಡಲು ಅಡಿಗೆ ಮನೆಗೆ ದೌಡಾಯಿಸುವುದು.

ಬಿ) ಹಾಲು ಹಿಂಡದೇ, ಹಸುವಿಗೆ ನೀರು ಆಹಾರ ಕೊಡದೇ ಮಾಸು ಬೀಳುವ ತನಕ ಅಥವಾ ಕರು ಎದ್ದು ನಿಲ್ಲುವತನಕ ಕಾಯುವುದು.‌

ಸಿ) ಕರುವಿನ ಹಿಂಗಾಲು ಅಗಲಿಸಿ ನೋಡಿ ‘ಬೇಕಾದ್ದೇ’ ಆದರೆ ಬೇನೆಗಂಜಿಯ ಆರೈಕೆ ಮಾಡಲು ಹೆಂಡತಿಗೆ/ಗಂಡನಿಗೆ ಆದೇಶಿಸುವುದು.

ಡಿ) ತಾಯಿಗೆ ತನ್ನ ಕರುವನ್ನು ನೆಕ್ಕಲು ಬಿಟ್ಟು ಗಿಣ್ಣದ ಹಾಲು ಹಿಂಡಿ ಕರುವಿಗೆ ಕುಡಿಸುವುದು.

***

ಇದಕ್ಕೆ ಉತ್ತರವನ್ನು ಈಗಲೇ ಹೇಳಿಬಿಡುತ್ತೇನೆ. ಕರು ಹುಟ್ಟಿದ ಕೂಡಲೇ ಅದಕ್ಕೆ ಗಿಣ್ಣದ ಹಾಲನ್ನು ಕುಡಿಸುವುದು ಮೊಟ್ಟಮೊದಲು ಮಾಡಬೇಕಾದ್ದು. ಹಸು ತಾನು ಕರುಹಾಕಿದ ದಿನದಿಂದ ಸುಮಾರು ಐದಾರು ದಿನಗಳವರೆಗೆ ‘ಗಿಣ್ಣದ ಹಾಲು’ ಹಿಂಡುತ್ತದೆ. ಕರುವಿನ ಸರ್ವತೋಮುಖ ಬೆಳವಣಿಗೆ, ರೋಗನಿರೋಧಕ ಶಕ್ತಿಗೆ ಗಿಣ್ಣದ ಹಾಲು ಅತ್ಯವಶ್ಯ.

ಗಿಣ್ಣದ ಹಾಲಿನ ಹೆಚ್ಚುಗಾರಿಕೆ

ಸಾದಾ ಹಾಲಿಗೆ ಹೋಲಿಸಿದರೆ ಗಿಣ್ಣದ ಹಾಲಿನಲ್ಲಿ ಅನೇಕ ಬಗೆಯ ಆಹಾರಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಕರು ಹಾಕಿದ ಕೂಡಲೇ ದೊರೆಯುವ ಮೊಟ್ಟಮೊದಲ ಹಾಲಿನಲ್ಲಿ ಮೂರರಿಂದ ಐದು ಪಟ್ಟು ಪ್ರೊಟಿನ್, ಎರಡರಷ್ಟು ಅವಶ್ಯಕ ಕೊಬ್ಬಿನ ಅಂಶ (ಎಸೆನ್ಷಿಯಲ್ ಫ್ಯಾಟಿ ಆಸಿಡ್ಸ್), ಎರಡರಷ್ಟು ಖನಿಜಗಳು, ಹತ್ತು ಪಟ್ಟು ಕಬ್ಬಿಣ, ಮೂರು ಪಟ್ಟು ವಿಟಮಿನ್ ಡಿ, ಐದರಿಂದ ಹದಿನೈದರಷ್ಟು ವಿಟಮಿನ್ ಎ ಅಧಿಕವಾಗಿ ಇರುತ್ತದೆ. ಇವಲ್ಲದೇ ಅವಶ್ಯಕ ಖನಿಜಗಳಾದ ತಾಮ್ರ, ಮೆಗ್ನೆಶಿಯಂ, ಮ್ಯಾಂಗನೀಸ್‍ಗಳು, ಬಿ ಜೀವಸತ್ವಗಳಾದ ರೈಬೋಫ್ಲವಿನ್, ಥಯಮಿನ್ ಮತ್ತು ಪ್ಯಾಂಟೋಥೆನಿಕ್ ಆಮ್ಲಗಳು, ಕೋಲೀನ್‍ನಂತಹ ಅಮೈನೋ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿವೆ. ಗಿಣ್ಣದ ಹಾಲಿನಲ್ಲಿರುವ ಸಸಾರಜನಕವು ರೋಗನಿರೋಧಕ ಶಕ್ತಿನೀಡುವ ಇಮ್ಯುನೋಗ್ಲಾಬ್ಯುಲಿನ್‍ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಇವು ಸೂಕ್ಷ್ಮಾಣುಜೀವಿಗಳಿಂದ ಬರುವ ಭೇದಿ, ಗಂಟುಬಾವಿನಂತಹ ಅನೇಕ ರೋಗಗಳಿಂದ ಕರುವನ್ನು ರಕ್ಷಿಸುತ್ತವೆ. ಜೊತೆಗೆ ಕರುವಿನ ಹೊಟ್ಟೆಯಲ್ಲಿ ಶೇಖರವಾಗಿರುವ ಮೊದಲ ಮಲವನ್ನು ಹೊರಹಾಕಿ ಕರುಳಿನ ಶುದ್ಧೀಕರಣಕ್ಕೆ ಸಹಾಯಮಾಡುತ್ತದೆ.

ಹಾಲು ಕುಡಿಯುವ ಜೀವಕೋಶಗಳು!

ಕೆಲವು ರೈತರು ಹಸುವು ಕರು ಹಾಕಿದ ನಂತರ ಮಾಸು ಬೀಳುವವರೆಗೂ ಕರುವಿಗೆ ಹಾಲು ಕುಡಿಸುವುದಿಲ್ಲ. ಇದು ತೀರಾ ತಪ್ಪು. ಕರು ಹುಟ್ಟಿದ ಅರ್ಧಗಂಟೆಯೊಳಗೆ ಗಿಣ್ಣದ ಹಾಲು ಕುಡಿಸುವುದು ಅತ್ಯಗತ್ಯ. ಹೀಗೆ ಮಾಡುವುದರಿಂದ ಹಾಲು ಯಾವುದೇ ಜೀರ್ಣಕ್ರಿಯೆಗೆ ಒಳಪಡದೇ ತನ್ನ ಮೂಲಸ್ವರೂಪದಲ್ಲಿಯೇ ರಕ್ತವನ್ನು ಸೇರುತ್ತದೆ. ಇದರಿಂದಾಗಿ ಹಾಲಿನಲ್ಲಿರುವ ಎಲ್ಲ ಉತ್ಕೃಷ್ಟ ಪೋಷಕಾಂಶಗಳು ನೇರವಾಗಿ ಕರುವಿನ ದೇಹಕ್ಕೆ ಲಭ್ಯವಾಗುತ್ತವೆ. ಹೀಗೆ ಕರುಳಿನಲ್ಲಿರುವ ಜೀವಕೋಶಗಳೇ ಹಾಲನ್ನು ಹೀರಿ ನೇರವಾಗಿ ರಕ್ತಕ್ಕೆ ಸೇರಿಸುವುದನ್ನು ಪೈನೋಸೈಟೋಸಿಸ್ ಅಥವಾ ಸೆಲ್ ಡ್ರಿಂಕಿಂಗ್ ಎನ್ನುತ್ತಾರೆ. ಕರು ಜನಿಸಿ ಮೊದಲ ಅರ್ಧಮುಕ್ಕಾಲು ಗಂಟೆಯ ತನಕ ಈ ವ್ಯವಸ್ಥೆ ಚಾಲ್ತಿಯಲ್ಲಿರುತ್ತದೆ. ಸಮಯಕಳೆದಂತೆ ಈ ನೇರ ಹೀರುವಿಕೆಯ ಪ್ರಮಾಣ ಕಡಿಮೆಯಾಗುತ್ತಾ ಬಂದು ಹಾಲು ಜೀರ್ಣಕ್ರಿಯೆಗೆ ಒಳಪಡಲಾರಂಭಿಸುತ್ತದೆ. ಜೊತೆಗೆ ಹಾಲಿನಲ್ಲಿರುವ ಪೋಷಕಾಂಶಗಳ ಪ್ರಮಾಣವೂ ಕಡಿಮೆಯಾಗುತ್ತಾ ಬರುತ್ತದೆ. ’

ಗಿಣ್ಣದ ಹಾಲು ಎಷ್ಟು ಕೊಡಬೇಕು

ಗಿಣ್ಣದ ಹಾಲು ಅಜೀರ್ಣ, ಹೆಚ್ಚು ಕುಡಿಸಿದರೆ ಜಂತು ಆಗುತ್ತದೆ ಎಂಬ ತಪ್ಪುನಂಬಿಕೆ ಇದೆ. ಮೊದಲ ಗಿಣ್ಣದ ಹಾಲನ್ನು ಕೆಟ್ಟ ಹಾಲು ಎಂದು ಗೊಬ್ಬರದ ಗುಂಡಿಗೆ ಚೆಲ್ಲುವವರೂ ಇದ್ದಾರೆ. ಸಾಮಾನ್ಯವಾಗಿ ಒಂದು ಮಿಶ್ರತಳಿ ಕರುವಿಗೆ ದಿನವೊಂದಕ್ಕೆ ಎರಡೂವರೆಯಿಂದ ಮೂರು ಲೀಟರ್ ಗಿಣ್ಣದ ಹಾಲು ಬೇಕು. ಅಂದರೆ ಕರುವಿನ ದೇಹದ ತೂಕದ ಶೇ 10 ರಷ್ಟು. ಇದನ್ನು ಒಂದು ವಾರದವರೆಗೆ ದಿನಕ್ಕೆ ಮೂರು ಬಾರಿ, ಅನಂತರ ದಿನಕ್ಕೆ ಎರಡು ಸಲದಂತೆ ಕುಡಿಸಿದರೆ ಸಾಕು. ಕರುವಿಗೆ ಯಾವಾಗಲೂ ಆಗಲೇ ಕರೆದ ಬಿಸಿ ಹಾಲು ಕುಡಿಸುವುದು ಸೂಕ್ತ. ಒಂದು ವೇಳೆ ಮೊದಲೇ ಕರೆದಿಟ್ಟ ಹಾಲು ಕುಡಿಸಬೇಕೆಂದರೆ ಅದನ್ನು ಕೊಂಚ ಹೂಬಿಸಿ ಮಾಡಿ(ಉಗುರು ಬೆಚ್ಚಗೆ) ಕುಡಿಸುವುದು ಒಳ್ಳೆಯದು. ಹಾಲನ್ನು ಸುಮಾರು ಮೂರು ತಿಂಗಳವರೆಗೆ ನೀಡಿದರೆ ಸಾಕು. ಈ ಸಮಯದಲ್ಲಿ ನಿಧಾನವಾಗಿ ಹಾಲು ಕಡಿಮೆಮಾಡಿ ಹಿಂಡಿಮಿಶ್ರಣವನ್ನು ಪ್ರಾರಂಭಿಸಿ ನಿಧಾನವಾಗಿ ಹೆಚ್ಚಿಸಬೇಕು.

ಕರುವು ಹುಟ್ಟಿದ ದಿನದಿಂದಲೂ ರೋಗರಹಿತವಾಗಿ, ಉತ್ತಮ ಬೆಳವಣಿಗೆ ಹೊಂದಿ ಶೀಘ್ರ ಬೆದೆಗೆ ಬರಲು, ಹೆಚ್ಚಿನ ಇಳುವರಿಗೆ, ಗಿಣ್ಣದ ಹಾಲನ್ನು ನೀಡುವುದು ಬಹಳ ಮುಖ್ಯ. ಆದ್ದರಿಂದ ಕರು ಹಾಕಿದಕೂಡಲೇ ಕರುವನ್ನು ತಾಯಿಗೆ ನೆಕ್ಕಲು ಬಿಟ್ಟರೆ ಹದಿನೈದು ಇಪ್ಪತ್ತು ನಿಮಿಷಗಳಲ್ಲಿಯೇ ಎದ್ದು ನಿಲ್ಲುತ್ತದೆ. ಅಷ್ಟರಲ್ಲಿ ತಾಯಿಯ ಕೆಚ್ಚಲನ್ನು ಶುದ್ಧ ಹೂಬಿಸಿ ನೀರಿನಿಂದ ಸ್ವಚ್ಛಗೊಳಿಸಿಕೊಂಡು ಹಾಲುಹಿಂಡಿ ಕರುವಿಗೆ ಕುಡಿಸಬೇಕು. ಈ ಅವಧಿಯಲ್ಲಿ ಕರು ಎದ್ದುನಿಲ್ಲಲಿ ಬಿಡಲಿ ಅಮೃತಸಮಾನವಾದ ಗಿಣ್ಣದ ಹಾಲು ಕುಡಿಸುವುದನ್ನು ತಪ್ಪಿಸಬಾರದು.

ಹೀಗಾಗಿ ನಾನು ಮೊದಲು ಕೇಳಿದ ಪ್ರಶ್ನೆಗೆ ಯಾವುದೇ ಲೈಫ್ಲೈನ್ ಬಳಸದೇ ಸರಿಯುತ್ತರ ಹೇಳಿದಿರೆಂದರೆ ನಿಮ್ಮಲ್ಲಿ ಯಶಸ್ವೀ ಹೈನುಗಾರರಾಗಿರುವ ಎಲ್ಲ ಲಕ್ಷಣಗಳಿವೆ ಎಂದು ಅರ್ಥ.

ಚಿತ್ರಗಳು: ಲೇಖಕರವು

ಪ್ರತಿಕ್ರಿಯಿಸಿ (+)