ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಜಗಳ ವಿಸ್ಮಯ ಲೋಕ

Last Updated 3 ಡಿಸೆಂಬರ್ 2018, 19:31 IST
ಅಕ್ಷರ ಗಾತ್ರ

ಮನೆಯ ಮುಂದಿನ ಕೈತೋಟದತ್ತ ನೋಟ ನೆಟ್ಟು ಕುಳಿತಿದ್ದೆ. ಕಪ್ಪು ಹಾಗೂ ಕಂದು ಹಳದಿ ಬಣ್ಣದ, ಎಳೆಬಿಸಿಲಿಗೆ ಮಿರ ಮಿರ ಮಿಂಚುತ್ತಿದ್ದ, ಹುಳುವೊಂದು ಹಾರಿ ಬಂದು ಗುಲಾಬಿ ಗಿಡದ ಎಲೆಯ ಮೇಲೆ ಕುಳಿತುಕೊಂಡಿತು. ಕೂಡಲೇ ಒಳಗೆ ಓಡಿ ಕ್ಯಾಮೆರಾ ಸಿದ್ಧಮಾಡಿಕೊಂಡು ಬಂದೆ. ಅಲ್ಲೇ ಹಾರಾಟ ನಡೆಸುತ್ತಿದ್ದ ಅದರ ಚಟುವಟಿಕೆಯನ್ನು ಕ್ಲಿಕ್ಕಿಸತೊಡಗಿದೆ. ಸ್ವಲ್ಪ ಹೊತ್ತಿನ ನಂತರ ಅದು ಖಾಲಿ ಜಾಗವನ್ನು ಹುಡುಕಿ ಮಣ್ಣಿನ ಮೇಲೆ ಕುಳಿತುಕೊಂಡಿತು. ನಾನು ನೋಡುತ್ತಲೇ ಇದ್ದೆ. ಆ ಹುಳು ನೆಲದಲ್ಲಿ ಗುಳಿಯೊಂದನ್ನು ತೋಡತೊಡಗಿತು. ಮೂತಿಯನ್ನು ಮಣ್ಣಿನೊಳಗೆ ಹಾಕಿ ಮಣ್ಣನ್ನು ಹೊರತೆಗೆಯುವುದು, ತೆಗೆದ ಮಣ್ಣನ್ನು, ಮತ್ತೆ ಗುಳಿಯೊಳಗೆ ಬೀಳಬಾರದೆಂದು, ಕಾಲುಗಳನ್ನು ಉಪಯೋಗಿಸಿ ಹಿಂದೆ ತಳ್ಳುವುದು, ಹೀಗೆ ಮಾಡುತ್ತಾ ಅದು ಪೂರ ಒಳಹೋಗುವಷ್ಟು ಅಂದರೆ ಎರಡು ಇಂಚಿನಷ್ಟು ಆಳದ ಸುಮಾರು ಅರ್ಧ ಇಂಚು ವ್ಯಾಸದ ಗುಳಿಯನ್ನು ನಿರ್ಮಿಸಿ ಎತ್ತಲೋ ಹೋಯಿತು. ಸ್ವಲ್ಪ ಹೊತ್ತು ಕಾದು, ನಾನೂ ಕೂಡ ಮನೆಯೊಳಗೆ ಹೋಗಿ ಬೇರೆ ಕೆಲಸದಲ್ಲಿ ತೊಡಗಿಕೊಂಡೆ. ಅರ್ಧ ಘಂಟೆ ಬಿಟ್ಟು ಹೊರಬಂದು ನೋಡಿದಾಗ ಆ ಗುಳಿ ಮುಚ್ಚಿತ್ತು. ಎಷ್ಟು ಎಚ್ಚರಿಕೆಯಿಂದ ಎಂದರೆ, ತೀರಾ ಗಮನವಿಟ್ಟು ನೋಡಿದರೆ ಮಾತ್ರ ಗೊತ್ತಾಗುವ ಸಾಧ್ಯತೆ ಇತ್ತು. ಅದೂ ನಾನು ಈ ಮೊದಲು ನೋಡಿದ್ದರಿಂದ!

ಅದೊಂದು ವಿಧದ ಕಣಜ ಎಂದು ನನಗೆ ಗೊತ್ತಾಯ್ತು. ನನ್ನಲ್ಲಿದ್ದ ಕಣಜದ ಫೋಟೋಗಳನ್ನೆಲ್ಲಾ ಹುಡುಕಿ ಒಂದೆಡೆ ಹಾಕಿದೆ. ನಮ್ಮ ಮನೆಯಲ್ಲಿ ಎಂದೋ ಸಂಗ್ರಹಿಸಿಟ್ಟಿದ್ದ ಕಣಜದ ಗೂಡೊಂದಿತ್ತು. ಅದನ್ನೂ ಹೊರತೆಗೆದು ಫೋಟೋ ಕ್ಲಿಕ್ಕಿಸಿದೆ. ಇಷ್ಟು ಮಾಡಿದ ನಂತರ ಅಂತರ್ಜಾಲದಲ್ಲಿ ಮಾಹಿತಿಗಾಗಿ ತಡಕಿದೆ...

Pompilidae ಕುಟುಂಬಕ್ಕೆ ಸೇರಿದ Vespidae, Crabronidae, Sphecidae, and Pompilidae ಮುಂತಾದ ಆರು ಉಪಕುಟುಂಬಗಳಿಗೆ ಸೇರಿದ ಸುಮಾರು ಐದು ಸಾವಿರ ಬಗೆಯ ಕಣಜಗಳು ಪ್ರಪಂಚದಾದ್ಯಂತ ಇವೆ. ಜೇಡ ಕಣಜಗಳು ಎಂದೂ ಕರೆಯುವ ಇವು Hymenoptera ವಿಧಕ್ಕೆ ಸೇರಿದ್ದರೂ, ನೊಣ ಮತ್ತು ಇರುವೆ ಇವೆರಡಕ್ಕೂ ಭಿನ್ನವಾದ ಕೀಟಗಳು. ಸಾಧಾರಣವಾಗಿ ಕಂಡುಬರುವ ಹಳದಿಕೋಟಿನ (yellowjackets) ಕಣಜಗಳು Vespidae ಕುಟುಂಬಕ್ಕೆ ಸೇರಿದ್ದು ಒಂದು ರಾಣಿ ಕಣಜ ಹಾಗೂ ಹಲವಾರು ಸಂತಾನೋತ್ಪತ್ತಿ ಮಾಡಲಾಗದ ಕೆಲಸಗಾರ ಕಣಜಗಳು ಒಟ್ಟಾಗಿ ಗೂಡಿನಲ್ಲಿ ವಾಸಿಸುತ್ತವೆ. ಮರದ ತೊಗಟೆ, ಮಣ್ಣು, ಸಸ್ಯಗಳಿಂದ ಒಸರುವ ಅಂಟು, ಮತ್ತು ಕಣಜಗಳೇ ಸ್ರವಿಸುವ ರಸ ಮುಂತಾದ ವಸ್ತುಗಳನ್ನು ಬಳಸಿ ಜೇನುಗೂಡಿನಂತಹ ರಚನೆಯನ್ನು ಮಾಡುತ್ತವೆ. ಇನ್ನು ಕೆಲವು ಕಣಜಗಳು ಗೋಡೆ ಮತ್ತು ನೆಲದಲ್ಲಿರುವ ಸಂದುಗಳಲ್ಲಿ ಗೂಡು ಕಟ್ಟುತ್ತವೆ. ಹೂಜಿ ಕಣಜಗಳು ಒಂಟಿ ಜೀವಿಗಳಾಗಿದ್ದು ತಮ್ಮ ಗೂಡನ್ನು ತಾವೇ ನಿರ್ಮಿಸಿ ತಮ್ಮ ಮರಿಗಳ ಪಾಲನೆಯ ಬಗ್ಗೆಯಷ್ಟೇ ಗಮನ ಹರಿಸುತ್ತವೆ. ಕೆಲವು ಕಣಜಗಳು ನೆಲದಲ್ಲಿ ತೂತುಗಳನ್ನು ಕೊರೆದು ಅಲ್ಲಿ ತಮ್ಮ ಸಂತಾನೋತ್ಪತ್ತಿ ಮಾಡುತ್ತವೆ.

ಎಲ್ಲಾ ಕೀಟಗಳಂತೆ ಕಣಜಗಳೂ ಗಟ್ಟಿಯಾದ ದೇಹ ರಚನೆ ಹೊಂದಿವೆ. ಅಪಾರದರ್ಶಕ ರೆಕ್ಕೆಗಳನ್ನು ಎರಡೂ ಬದಿಯಲ್ಲಿರುವ ಕೀಲುಗಳು ಬಂಧಿಸುತ್ತವೆ. ಮುಂಬದಿಯ ಕಾಲುಗಳು ಹಿಂಗಾಲುಗಳಿಗಿಂತ ತುಸು ಉದ್ದವಾಗಿರುತ್ತವೆ. ಕೆಲವು ಉಪಪಂಗಡಗಳ ಹೆಣ್ಣುಗಳಿಗೆ ರೆಕ್ಕೆಯಿರುವುದಿಲ್ಲ. ಸಾಧಾರಣವಾಗಿ ಕಣಜಗಳು ಕೆಲವೇ ಮಿಲಿಮೀಟರ್‌ಗಳಿಂದ ಹಿಡಿದು ಐದು ಇಂಚಿನ ಉದ್ದದವರೆಗೂ ಕಂಡುಬರುತ್ತವೆ. ತಮ್ಮ ಮುಳ್ಳಿನಿಂದ ಚುಚ್ಚಿ ವಿಷಕಾರಿ ದ್ರವವೊಂದನ್ನು ಸ್ರವಿಸಿ, ಅಹಾರಕ್ಕೆ ಬೇಕಾದ ಜೇಡ ಮುಂತಾದ ಕೀಟಗಳನ್ನು ನಿಷ್ಕ್ರಿಯಗೊಳಿಸುತ್ತವೆ. ತಮ್ಮ ತೂಕಕ್ಕಿಂತ ಹಲವು ಪಟ್ಟು ತೂಕವಿರುವ ಜೇಡಗಳನ್ನೂ ಹೊತ್ತೊಯ್ಯಬಲ್ಲ ಸಾಮರ್ಥ್ಯ ಇವಕ್ಕಿದೆ. ಮನುಷ್ಯರಿಗೂ ಈ ಮುಳ್ಳಿನ ಹೊಡೆತ ಬಹಳ ನೋವುಳ್ಳದ್ದಾಗಿರುತ್ತದೆ.

ಕೆಲವು ಕಣಜಗಳು ತಾವು ನಿಷ್ಕ್ರಿಯಗೊಳಿಸಿದ ಅಥವಾ ಜೀವಂತ ಕೀಟಗಳ ಮೇಲೆ ಮೊಟ್ಟೆಗಳನ್ನಿಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಕೆಲವಂತೂ ಬೇರೆ ಕೀಟಗಳ ಮೊಟ್ಟೆಗಳ ನಡುವೆ ತಮ್ಮ ಮೊಟ್ಟೆಗಳನ್ನಿರಿಸುತ್ತವೆ. ಮರಿಗಳು ಹೊರಬಂದಾಗ ಬೇರೆ ಕೀಟಗಳ ಆ ಮೊಟ್ಟೆಗಳು ಅವುಗಳ ಅಹಾರದ ಕಣಜವಾಗಿಬಿಡುತ್ತದೆ. ಇನ್ನು ಕೆಲವು ವಿಧದ ಕಣಜಗಳು [cuckoo wasps] ಬೇರೆ ಕಣಜಗಳ ಗೂಡಿನಲ್ಲಿ ಮೊಟ್ಟೆಯನ್ನಿಡುವ ಅಭ್ಯಾಸವಿರುತ್ತವೆ. ಮರಿಗಳು ಆ ಗೂಡಿನಲ್ಲಿಯೇ ಬೆಳೆದು ದೊಡ್ಡವಾಗುತ್ತವೆ.

ಕಣಜಗಳು ತಮ್ಮ ಮರಿಗಳಿಗೆ ಅಹಾರಕ್ಕಾಗಿ ಕೀಟಗಳನ್ನು ಹೊತ್ತು ತರುತ್ತವೆ. ಆ ವೇಳೆ ತಾವೂ ಒಂದಷ್ಟನ್ನು ತಿನ್ನುತ್ತವೆ. ಆಹಾರಕ್ಕಾಗಿ ಹಿಡಿದು ತಂದ ಕೀಟದ ದೇಹದ ರಸವನ್ನು ಹೀರುವುದುಂಟು. ಕೆಲವು ಕಣಜಗಳು ಆ ಕೀಟವನ್ನೇ ಚೂರು ಚೂರು ಮಾಡಿ ಮರಿಗಳಿಗೆ ಉಣಬಡಿಸಿದರೆ, ಇನ್ನು ಕೆಲವು ಕೀಟಗಳ ಮೇಲೆಯೇ ಮೊಟ್ಟೆಗಳನ್ನಿರಿಸುತ್ತವೆ. ಹೊರಬಂದ ಮರಿಗಳು ಆ ಕೀಟದ ದೇಹವನ್ನೇ ಆಹಾರವನ್ನಾಗಿ ಉಪಯೋಗಿಸುತ್ತಾ ಬೆಳೆದು ದೊಡ್ದವಾಗುತ್ತವೆ. ಸ್ವಲ್ಪ ಬೆಳೆದ ಮೇಲೆ ತಮ್ಮ ಆಹಾರವನ್ನು ತಾವೇ ಹುಡುಕಿಕೊಳ್ಳತೊಡಗುತ್ತವೆ.

ಕಣಜಗಳು ಮುಳ್ಳು ಹೊಂದಿರುವುದು ಮತ್ತು ಅವುಗಳು ಸ್ರವಿಸುವ ಮಾದಕ ದ್ರವದಿಂದಾಗಿ ಇವುಗಳನ್ನು ತಿನ್ನಲು ಹಲ್ಲಿಯಂತಹ ಸರೀಸೃಪಗಳು ಮನಸ್ಸು ಮಾಡುವುದಿಲ್ಲ. ಆದರೆ Meropidae ಕುಟುಂಬಕ್ಕೆ ಸೇರಿದ ನೊಣ ಭಕ್ಷಕ ಪಕ್ಷಿಗಳು ತಮ್ಮ ವಿಶೇಷ ಕೌಶಲದಿಂದಾಗಿ ನೊಣಗಳು, ಏರೋಪ್ಲೇನ್ ಚಿಟ್ಟೆಗಳು ಮತ್ತು ಕಣಜಗಳನ್ನು ತಿನ್ನುತ್ತವೆ. ಹಾರುತ್ತಿರುವ ಕೀಟಗಳನ್ನು ಗಾಳಿಯಲ್ಲಿಯೇ ಹಿಡಿದು, ಮರದ ಕೊಂಬೆಗಳೇ ಮುಂತಾದ ಗಟ್ಟಿ ಪದಾರ್ಥಗಳ ಮೇಲೆ ಉಜ್ಜುವುದರ ಮುಖೇನ ಅವುಗಳ ಮುಳ್ಳು ಮತ್ತು ವಿಷಕಾರಿ ದ್ರವವನ್ನು ನಿವಾರಿಸಿಕೊಂಡು ಭಕ್ಷಿಸುತ್ತವೆ. ಜೇನು ಕುಟುರ ಪಕ್ಷಿಗಳು [Bee-eaters] ಕಣಜಗಳ ಗೂಡಿಗೇ ದಾಳಿಯಿಟ್ಟು ಅವುಗಳ ಮೊಟ್ಟೆ, ಮರಿಗಳನ್ನು ತಿನ್ನುತ್ತವೆ.

ಕಣಜಗಳು ನಿಸರ್ಗದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ನೆರವಾಗುತ್ತವೆ. ಮುಖ್ಯವಾಗಿ ಪರಾಗಸ್ಪರ್ಶ ಕ್ರಿಯೆಯಲ್ಲಿ ಮತ್ತು ಎಲ್ಲಾ ವಿಧದ ಕೀಟಗಳ, ಅದರಲ್ಲೂ ಟೊಮೆಟೊ ಮತ್ತಿತರ ಬೆಳೆಗಳಿಗೆ ದಾಳಿ ಮಾಡುವ ಬಿಳಿನೊಣಗಳ ನಿಯಂತ್ರಣದಲ್ಲಿ ಇವುಗಳ ಪಾತ್ರ ದೊಡ್ದದು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT