ಶುಕ್ರವಾರ, ನವೆಂಬರ್ 27, 2020
21 °C
ಹಿರಿಯೂರು ತಾಲ್ಲೂಕಿನ ಗೌಡನಹಳ್ಳಿ ಕಾವಲ್‌ನಲ್ಲಿ ಪಾಲಿಹೌಸ್‌ನಲ್ಲಿ ವಿವಿಧ ಬೆಳೆ

ಮಿಶ್ರ ಬೆಳೆಯಲ್ಲಿ ಖುಷಿ ಕಂಡ ಕುಟುಂಬ

ಸುವರ್ಣಾ ಬಸವರಾಜ್ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ಕತ್ತಲಾದಾಕ್ಷಣ ಹಣೆಗೆ ಸರ್ಚ್ ಲೈಟ್ ಸಿಕ್ಕಿಸಿಕೊಂಡು ಪಾಲಿಹೌಸ್ ಒಳಗೆ ಹೋಗಿ ಹೂವು, ಕ್ಯಾಪ್ಸಿಕಂ ಬಿಡಿಸುವುದು, ಔಷಧ ಸಿಂಪರಣೆಯಂತಹ ಕೆಲಸಗಳಲ್ಲಿ ಇಡೀ ಕುಟುಂಬ ತೊಡಗಿಕೊಳ್ಳುವ ಅಪರೂಪದ ದೃಶ್ಯವನ್ನು ಕಾಣಬೇಕೆಂದರೆ ತಾಲ್ಲೂಕಿನ ಗೌಡನಹಳ್ಳಿ ಕಾವಲ್‌ನಲ್ಲಿರುವ ನಾಗರಾಜ್ ಅವರ ತೋಟಕ್ಕೆ ಹೋಗಬೇಕು.

ಹಿರಿಯೂರಿನಿಂದ ದಿಂಡಾವರ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಗೌಡನಹಳ್ಳಿ ಗೇಟ್‌ನಿಂದ ಎಡಭಾಗಕ್ಕೆ ಒಂದೂವರೆ ಕಿ.ಮೀ ಕ್ರಮಿಸಿದರೆ ಮಲೆನಾಡನ್ನು ನೆನಪಿಗೆ ತರುವ ತೋಟವೊಂದು ಕಣ್ಣಿಗೆ ಬೀಳುತ್ತದೆ. ತೋಟದಲ್ಲಿಯೇ ನಾಗರಾಜ್ ತನ್ನ ಸಹೋದರರಾದ ಶಿವಕುಮಾರ್ ಮತ್ತು ವಿಜಯಕುಮಾರ್ ಜತೆ ನೆಲೆಸಿದ್ದು, ಪತ್ನಿ, ಮಕ್ಕಳು ಸೇರಿ ಇಡೀ ಕುಟುಂಬ ತೋಟದ ಕೆಲಸದಲ್ಲಿ ದಿನವಿಡೀ ತೊಡಗಿಕೊಳ್ಳುತ್ತಿದ್ದಾರೆ.

12 ಎಕರೆ ವಿಸ್ತೀರ್ಣದ ತೋಟದಲ್ಲಿ ಒಮ್ಮೆ ಸುತ್ತಾಡಿದರೆ ಸಪೋಟ, ದಾಳಿಂಬೆ, ಶ್ರೀಗಂಧ, ತೇಗ, ಹೆಬ್ಬೇವು, ಸಿಲ್ವರ್ ಓಕ್, ರಕ್ತಚಂದನ, ಹಲಸಿನ ಮರಗಳು ಹೀಗೆ ಪುಟ್ಟದೊಂದು ಅರಣ್ಯದ ಅನುಭವ ನೀಡುತ್ತದೆ. ದಾಳಿಂಬೆ, ಪಪ್ಪಾಯ, ಕ್ಯಾಪ್ಸಿಕಂ, ಹಾಗಲಕಾಯಿ, ಹೂವು–ತರಕಾರಿ ನರ್ಸರಿಗಳು ಕಣ್ಣಿಗೆ ರಾಚುತ್ತವೆ. ಜಮೀನೊಂದರಲ್ಲಿ ಇಷ್ಟೆಲ್ಲ ವೈವಿಧ್ಯದ ಬೆಳೆ ಬೆಳೆಯಲು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟುತ್ತದೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಕುಟುಂಬದ ಹಿರಿಯ ನಾಗರಾಜ್, ‘ಕೃಷಿ ಇಲಾಖೆ ಮಂಜೂರು ಮಾಡಿರುವ ಸೋಲಾರ್ ಪ್ಲಾಂಟ್‌ನಿಂದ ಒಂದು ಕೊಳವೆಬಾವಿಯ ನೀರು ಎತ್ತುತ್ತಿದ್ದೇವೆ. ಐದು ವರ್ಷಗಳ ಹಿಂದೆ ತೋಟಗಾರಿಕೆ ಇಲಾಖೆ ಮೂಲಕ ₹ 10.30 ಲಕ್ಷ ಸಹಾಯಧನದೊಂದಿಗೆ ಪಾಲಿಹೌಸ್ ನಿರ್ಮಿಸಿ ಸೇವಂತಿಗೆ ಹಾಕಿದ್ದೆವು. ಪ್ರಸ್ತುತ ₹9.98 ಲಕ್ಷ ಸಹಾಯಧನದಲ್ಲಿ ಮತ್ತೊಂದು ಪಾಲಿಹೌಸ್ ನಿರ್ಮಿಸಿ ಗ್ರೀನ್ ಕ್ಯಾಪ್ಸಿಕಂ ಹಾಕಿದ್ದು, ಬೆಳೆ ಬರತೊಡಗಿದೆ’ ಎಂದು ವಿವರಿಸಿದರು.

‘ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರದವರು ಕ್ಯಾಪ್ಸಿಕಂ ಉಸ್ತುವಾರಿ ನೋಡುತ್ತಿದ್ದಾರೆ. ಡಾ.ಬಾಲಕೃಷ್ಣ ಎಂಬ ವಿಜ್ಞಾನಿ 15 ದಿನಕ್ಕೊಮ್ಮೆ ಬಂದು ಮಾರ್ಗದರ್ಶನ ನೀಡುತ್ತಿದ್ದಾರೆ. ಜತೆಗೆ ಬೆಳೆಗೆ ಬೇಕಿರುವ ಬೇವಿನಹಿಂಡಿ, ಎರೆಹುಳು ಗೊಬ್ಬರ, ಔಷಧ ಮತ್ತು ಔಷಧ ಸಿಂಪರಣೆಗೆ ಬೇಕಿರುವ ಎಲ್ಲ ರಕ್ಷಣಾತ್ಮಕ ಸಾಧನಗಳನ್ನು ಉಚಿತವಾಗಿ ಕೊಟ್ಟಿದ್ದಾರೆ’ ಎಂದರು.

‘ಲಾಕ್‌ಡೌನ್ ಸಮಯದಲ್ಲಿ ಕಲರ್ ಕ್ಯಾಪ್ಸಿಕಂ ಇತ್ತು. 26 ಟನ್ ಇಳುವರಿಯಲ್ಲಿ ಸುಮಾರು 2 ಟನ್ ಹಾಳಾಯಿತು. ಪಪ್ಪಾಯ ಕಟಾವು ನಡೆದಿದ್ದು, ಹೇಳಿಕೊಳ್ಳುವಂತಹ ದರವಿಲ್ಲ. ಮಾರಿಗೋಲ್ಡ್ ಹೂವಿಗೆ ಉತ್ತಮ ದರವಿದೆ. ದೀಪಾವಳಿ ಸಮಯಕ್ಕೆ ಅರ್ಧ ಎಕರೆ ಹೊಸ ಹೂವು ಬರಲಿದೆ. ಹಾಗಲಕಾಯಿ ಕೊಯ್ಲಿಗೆ ಬಂದಿದ್ದು, ಅದಕ್ಕೂ ಉತ್ತಮ ಬೇಡಿಕೆ ಇದೆ.
ಹೂವು–ತರಕಾರಿಯಿಂದ ಮನೆಯ ಖರ್ಚು, ಜಮೀನಿಗೆ ಅಗತ್ಯವಿರುವ ಖರ್ಚು ನಿಭಾಯಿಸುತ್ತೇವೆ. ಅಲ್ಪಾವಧಿ ಬೆಳೆಗಳ ನಡುವೆ ಅರಣ್ಯೀಕರಣ ಮಾಡಿದ್ದು, ತೇಗ, ಶ್ರೀಗಂಧ, ರಕ್ತಚಂದನ ಭವಿಷ್ಯದಲ್ಲಿ ಉತ್ತಮ ಆದಾಯ ಕೊಡುತ್ತವೆ’ ಎಂದು ವಿಶ್ವಾಸದಿಂದ ನುಡಿಯುತ್ತಾರೆ ನಾಗರಾಜ್.

‘ಪಾಲಿಹೌಸ್‌ನಲ್ಲಿ ಬೆಳೆಯುತ್ತಿರುವ ಗ್ರೀನ್ ಕ್ಯಾಪ್ಸಿಕಂಗೆ ತುಮಕೂರು, ಚಿತ್ರದುರ್ಗಗಳಲ್ಲಿ ಹೆಚ್ಚು ಬೇಡಿಕೆ ಇದೆ. ಪ್ರಸ್ತುತ ಒಂದು ಕೆ.ಜಿ.ಗೆ ₹40ರಿಂದ ₹45 ದರವಿದೆ. ಒಂದು ಎಕರೆಗೆ ಕನಿಷ್ಠ 40 ಟನ್ ಬೆಳೆ ಉತ್ಪಾದಿಸಬೇಕು ಎಂದು ಡಾ.ಬಾಲಕೃಷ್ಣ ಹುರಿದುಂಬಿಸುತ್ತಿದ್ದಾರೆ. ದಾಳಿಂಬೆ ನಾಲ್ಕನೇ ಬೆಳೆಯಾಗಿದ್ದು, ಬ್ಯಾಕ್ಟೀರಿಯಲ್ ಬ್ರೈಟ್ ರೋಗದಿಂದ ನಿರೀಕ್ಷಿತ ಆದಾಯ ಸಿಕ್ಕಿಲ್ಲ. 700 ದಾಳಿಂಬೆ, 800 ಪಪ್ಪಾಯ ಗಿಡಗಳಿವೆ. 3000 ಶ್ರೀಗಂಧ, 900 ರಕ್ತಚಂದನ ಗಿಡಗಳಿವೆ. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ.ತೋಟಯ್ಯ ಪ್ರೋತ್ಸಾಹಿಸಿದ್ದರಿಂದ ಇಷ್ಟೆಲ್ಲ ಮಿಶ್ರ ಬೆಳೆ ಹಾಕಿದ್ದೇವೆ’ ಎಂದು ಅವರು ಹೇಳುತ್ತಾರೆ.

‘ತೋಟವೇ ಸರ್ವಸ್ವ ಎಂಬ ಭಾವನೆ ನಮ್ಮ ಇಡೀ ಕುಟುಂಬದ್ದು. ಹೈನುಗಾರಿಕೆ, ಕುರಿ ಸಾಕಣೆ, ಎರೆಹುಳು ಉತ್ಪಾದನಾ ಘಟಕ ಆರಂಭಿಸಬೇಕೆಂಕು ಎಂಬ ಗುರಿ ಇದೆ. ಅಡಿಕೆ, ತೆಂಗಿನಂತಹ ಸಾಂಪ್ರದಾಯಿಕ ಬೆಳೆಗಳ ಬದಲು ಅರಣ್ಯೀಕರಣ, ಅಲ್ಪಾವಧಿ ಬೆಳೆ ಹಾಕಿದಲ್ಲಿ ಒಂದಲ್ಲ ಒಂದು ಬೆಳೆ ಕೈ ಹಿಡಿಯುತ್ತದೆ. ಈ ಸಾಧನೆಯಲ್ಲಿ ಕುಟುಂಬದ ಎಲ್ಲ ಸದಸ್ಯರ ಶ್ರಮವಿದೆ’ ಎನ್ನುವರು ನಾಗರಾಜ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು