ಭಾನುವಾರ, ಮೇ 22, 2022
22 °C

ಕೃಷಿ ಮೇಳ: ಪೌಷ್ಟಿಕ ಅಂಶ ಹೇರಳವಾಗಿರುವ ಬೀಜದ ದಂಟಿನ ತಳಿ

ಡಿ.ಸುರೇಶ್ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ಕೃಷಿ ಮೇಳದ ಅಂಗವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಬಿಡುಗಡೆಗೊಳಿಸಿರುವ ಹೆಚ್ಚು ಪೌಷ್ಟಿಕಾಂಶ ಹೊಂದಿರುವ ‘ಕೆಬಿಜಿಎ-15’ ಬೀಜದ ದಂಟಿನ ತಳಿ ಮೇಳದಲ್ಲಿ ರೈತರನ್ನು ಆಕರ್ಷಿಸುತ್ತಿದೆ.

ಮೇಳದಲ್ಲಿ ಈ ತಳಿಯ ಪ್ರದರ್ಶನ ತಾಕು ಸಿದ್ಧಪಡಿಸಲಾಗಿದ್ದು, ತನ್ನ ವಿನ್ಯಾಸ ಹಾಗೂ ಬಣ್ಣದಿಂದಲೇ ಎಲ್ಲರನ್ನೂ ಸೆಳೆಯುತ್ತಿದೆ. 

‘ರಾಗಿ, ಭತ್ತ, ಗೋಧಿ ಹಾಗೂ ಸಿರಿಧಾನ್ಯಗಳಿಗೆ ಹೋಲಿಸಿದರೆ, ಈ ಬೀಜದ ದಂಟಿನ ತಳಿ ಶೇ 15ರಷ್ಟು ಹೆಚ್ಚುವರಿ ಪೌಷ್ಟಿಕಾಂಶ ಹೊಂದಿದೆ. ಕ್ಯಾಲ್ಸಿಯಂ, ಸತು, ಪೊಟ್ಯಾಷಿಯಂ ಮತ್ತು ರಂಜಕದ ಪ್ರಮಾಣ ಇದರಲ್ಲಿ ಹೇರಳವಾಗಿದ್ದು, ಅಮೈನೊ ಆಮ್ಲಗಳನ್ನೂ ಒಳಗೊಂಡಿದೆ. ಯಾವುದೇ ಏಕದಳ ಧಾನ್ಯಗಳಲ್ಲಿ ಇರದ ‘ಲೈಸಿನ್’ ಎಂಬ ಅಮೈನೊ ಆಮ್ಲ ಈ ಬೀಜದ ದಂಟಿನಲ್ಲಿರುವುದು ವಿಶೇಷ’ ಎನ್ನುತ್ತಾರೆ ಅಖಿಲ ಭಾರತ ಸುಸಂಘಟಿತ ಸಮರ್ಥ ಬೆಳೆಗಳ ಸಂಶೋಧನಾ ಪ್ರಾಯೋಜನೆಯ ಹಿರಿಯ ವಿಜ್ಞಾನಿ ಡಾ.ನಿರಂಜನ ಮೂರ್ತಿ.

‘ಈ ಬೆಳೆಯ ಹೂ ಗೊಂಚಲು ಗೋಳಾಕಾರವಾಗಿದ್ದು, ಕುಂಕುಮ ಮಿಶ್ರಿತ ಹಸಿರು ಬಣ್ಣದಿಂದ ಕೂಡಿದೆ. ಇದರಿಂದ ಆಕರ್ಷಣೀಯವಾದ ತೆನೆಯನ್ನು ತಳಿ ಹೊಂದಿದೆ. ಗಿಡ ಎತ್ತರವಾಗಿರುವುದರಿಂದ ಮಿಶ್ರ ಹಾಗೂ ಅಂತರಬೆಳೆಗೆ ಸೂಕ್ತವಾಗಿದ್ದು, ಇತರೆ ತಳಿಗಳಿಗೆ ಹೋಲಿಸಿದಾಗ ಶೇ15ರಷ್ಟು ಹೆಚ್ಚು ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ. 95 ದಿನಗಳೊಳಗೆ ಇದು ಕಟಾವಿಗೆ ಬರುತ್ತದೆ’ ಎಂದು ವಿವರಿಸಿದರು.

‘ಈ ದಂಟಿನ ಎಲೆಯು ತುಕ್ಕುರೋಗ, ಫಿಲ್ಲೋಡಿ, ಚುಕ್ಕೆರೋಗಗಳು ಹಾಗೂ ಕೀಟ ನಿರೋಧಕ ಶಕ್ತಿ ಹೊಂದಿರುತ್ತದೆ. ಈ ತಳಿಯನ್ನು ರಾಜ್ಯದ ಪೂರ್ವ ಮತ್ತು ದಕ್ಷಿಣ ಒಣ ವಲಯಗಳಿಗೆ ಶಿಫಾರಸು ಮಾಡಲಾಗಿದೆ’ ಎಂದು ಪ್ರಾಯೋಜನೆಯ ಕಿರಿಯ ವಿಜ್ಞಾನಿ ಡಾ.ಎಸ್.ಆರ್.ಆನಂದ್ ಹೇಳಿದರು.

‘ಈ ಬೀಜದಲ್ಲಿ ಶೇ 7ರಷ್ಟು ಎಣ್ಣೆ ‌ಮತ್ತು ಶೇ 8ರಷ್ಟು ‘ಸ್ಕ್ವಾಲಿನ್’ ಅಂಶವಿದೆ. ಇದನ್ನು ಸೌಂದರ್ಯವರ್ಧಕ ತಯಾರಿಗೂ ಬಳಸಲಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಕೊರೊನಾ ಲಸಿಕೆ ತಯಾರಿಕೆಯಲ್ಲೂ ಈ ಸ್ಕ್ವಾಲಿನ್ ಅಂಶವನ್ನು ಬಳಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಈ ವಿಶೇಷ ತಳಿಯ ಹೆಚ್ಚಿನ ವಿವರಗಳಿಗೆ 9986735146, 9448680139  ಸಂ‍ಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು