ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಮೇಳ: 2ನೇ ದಿನ ರೈತರ ಲಗ್ಗೆ

ರಾಷ್ಟ್ರೀಯ ತೋಟಗಾರಿಕೆ ಮೇಳ
Last Updated 6 ಫೆಬ್ರುವರಿ 2020, 19:16 IST
ಅಕ್ಷರ ಗಾತ್ರ

ಬೆಂಗಳೂರು: ತರಹೇವಾರಿ ಹೂಗಳ ತೋಟ, ತರಕಾರಿ ಗಿಡಗಳ ತಾಕು, ಹಣ್ಣಿನ ತಳಿಗಳ ಬೀಡಾಗಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ (ಐಐಎಚ್‌ಆರ್‌) ಆಯೋಜಿಸಿರುವ ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ಎರಡನೇ ದಿನವಾದ ಗುರುವಾರವೂ ರೈತರು ಲಗ್ಗೆ ಇಟ್ಟಿದ್ದರು.

ಐಐಎಚ್‌ಆರ್‌ನ ವಿಶಾಲವಾದ ಬಯಲಿನಲ್ಲಿ ಒಂದೆಡೆ ಹೂದೋಟಗಳು, ಮತ್ತೊಂದೆಡೆ ತರಕಾರಿ ಗಿಡಗಳು, ಪ್ರಾತ್ಯಕ್ಷಿಕೆ ತಾಕುಗಳು ತೆರೆದುಕೊಂಡಿವೆ. ರೈತರಿಗೆ ತೋಟಗಾರಿಕೆ ಬೆಳೆಗಳ ತಿಳಿವಳಿಕೆ ಮತ್ತು ಮಾಹಿತಿ ಒದಗಿಸಲು ಸಕಲ ಸಿದ್ಧತೆಗಳನ್ನೂ ಇಲ್ಲಿನ ಆಡಳಿತ ಮಾಡಿಕೊಂಡಿದೆ.

ಬಸ್‌ಗಳಲ್ಲಿ ತಂಡೋಪತಂಡವಾಗಿ ಬಂದಿಳಿದ ರೈತರು, ರಣಬಿಸಿಲಿನ ನಡುವೆಯೂ ತಾಕುಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಇಡೀ ಆವರಣ ಸುತ್ತಾಡಿ ಬಂದ ನಂತರ ರೈತರಿಗೆ ಹೊಸ ಹೊಸ ಕೃಷಿ ಸಲಕರಣೆಗಳ ಪರಿಚಯವನ್ನೂ ಮಾಡಿ
ಕೊಡಲಾಯಿತು.

ಬಿತ್ತನೆ ಬೀಜ, ರಸಗೊಬ್ಬರ, ಯಂತ್ರೋಪಕರಣ, ಹನಿ ನೀರಾವರಿ ಪದ್ಧತಿಯ ಉಪಕರಗಳ ಸಂತೆಯೇ ಇಲ್ಲಿ ನೆರೆದಿದೆ. ಇವುಗಳ ಮಾಹಿತಿ ಪಡೆದುಕೊಂಡ ನಂತರವೂ ಅನುಮಾನಗಳಿದ್ದರೆ ಕೃಷಿ ತಜ್ಞರೊಂದಿಗೆ ಸಂವಾದ ನಡೆಸಲು ರೈತರಿಗೆ ಅವಕಾಶ ಕಲ್ಪಿಸಲಾಗಿತ್ತು. ತಜ್ಞರು ದಿನವಿಡೀ ಒಬ್ಬೊಬ್ಬರೇ ರೈತರ ಸಮಸ್ಯೆಗಳನ್ನೇ ಪ್ರತ್ಯೇಕವಾಗಿ ಆಲಿಸಿ ಪರಿಹರಿಸುವ ಪ್ರಯತ್ನ ಮಾಡಿದರು. ಗುರುವಾರ 12,500 ಜನ ನೋಂದಣಿ ಮಾಡಿಸಿಕೊಂಡಿದ್ದು, ನೋಂದಣಿ ಮಾಡಿ ಸದೆಯೂ ರೈತರು ಬಂದಿದ್ದಾರೆ ಎಂದು ಐಐಎಚ್‌ಆರ್‌ ಅಧಿಕಾರಿಗಳು ಹೇಳಿದರು.

ಹಲಸು- ಎರಡೇ ವರ್ಷಕ್ಕೆ ಫಸಲು: ಆಳೆತ್ತರ ಬೆಳೆಯುವಷ್ಟರಲ್ಲೇ ಫಸಲು ಬಿಡುವ ನಿನ್ನಿಕಲ್ಲು ತಳಿಯ ಹಲಸಿನ ಸಸಿಗಳನ್ನು ರೈತರು ಖರೀದಿಸಿದರು.

ಪುತ್ತೂರಿನ ಅಳಕೆಮಜಲು ಸಮೀಪದ ನಿನ್ನಿಕಲ್ಲು ನರ್ಸರಿಯಲ್ಲಿ ಬೆಳೆದಿರುವ ಈ ತಳಿಯ ಸಸಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಎರಡೇ ವರ್ಷಗಳಲ್ಲಿ ಫಸಲು ಬಿಟ್ಟಿರುವ ಮರಗಳ ಚಿತ್ರಗಳನ್ನು ಕಂಡು ಬೆರಗಾದ ರೈತರು, ಸಸಿಗಳನ್ನು ಖರೀದಿಸಿದರು.

‘ಅತ್ಯಂತ ಬೇಗ ಫಸಲು ನೀಡುವ ತಳಿ ಇದಾಗಿದೆ. ನಮ್ಮದೇ ನರ್ಸರಿಯಲ್ಲಿ ಅಭಿವೃದ್ಧಿಪಡಿಸಿ ರೈತರಿಗೆ ಮಾರಲಾಗುತ್ತಿದೆ’ ಎಂದು ಜಾಕ್ ಅನಿಲ್ ತಿಳಿಸಿದರು.

ಕೆ.ಜಿ ತೂಗುವ ಸೀಬೆ, ಸೀತಾಫಲ: 300 ಗ್ರಾಂನಿಂದ ಒಂದು ಕೆ.ಜಿ ತೂಗುವ ಸೀಬೆ (ಪೇರಲೆ ಹಣ್ಣು) ಮತ್ತು ಸೀತಾಫಲ ಹಣ್ಣುಗಳು ರೈತರನ್ನು ಆಕರ್ಷಿಸಿದವು. ರಾಯಪುರದ ವಿಎನ್‌ಆರ್‌ ಕಂಪನಿ ಈ ತಳಿಯನ್ನು ಅಭಿವೃದ್ಧಿಪಡಿಸಿದೆ. ಕಡಿಮೆ ಬೀಜದ ಸೀಬೆ ಹಣ್ಣಿನ ತಳಿಯ ಸಸಿಗಳನ್ನು ತಲಾ ₹170ಕ್ಕೆ ಮಾರಾಟ ಮಾಡಲಾಯಿತು. ಕಡಿಮೆ ನೀರಾವರಿ ಮತ್ತು ಎಲ್ಲಾ ಮಣ್ಣಿನಲ್ಲೂ ಬೆಳೆಬಹುದಾದ ತಳಿ ಇದಾಗಿದೆ. ಶೇ 60ರಿಂದ 65ರಷ್ಟು ಭಾಗ ಸೇವಿಸಬಹುದಾದ ಈ ಹಣ್ಣಿನ ಸಸಿ 3 ವರ್ಷಗಳಲ್ಲಿ ಫಸಲು ಕೊಡಲಿದೆ ಎಂದು ಕಂಪನಿ ಸಿಬ್ಬಂದಿ ಮಾಹಿತಿ ನೀಡಿದರು.

ಅಡಕೆ ಐಸ್‌ಕ್ರೀಂ: ಪುತ್ತೂರಿನ ಯುವಕನೊಬ್ಬ ಅಡಕೆಯನ್ನು ವಿವಿಧ ಹಂತದಲ್ಲಿ ಸಂಸ್ಕರಿಸಿ ಐಸ್‌ಕ್ರೀಂ ತಯಾರಿಸಿದ್ದು, ಮೇಳದಲ್ಲಿ ಜನರನ್ನು ವಿಶೇಷವಾಗಿ ಆಕರ್ಷಿಸಿತು.

‘ಒಂದು ಕೆ.ಜಿ ಅಡಕೆಯಲ್ಲಿ 20 ಲೀಟರ್ ಐಸ್‌ಕ್ರೀಮ್ ತಯಾರಿಸಬಹುದು. ಹಳದಿ ರೋಗ, ಬೇರು ಹುಳು ರೋಗದಿಂದ ಅಡಕೆ ಬೆಳೆ ಕುಸಿಯತೊಡಗಿದೆ. ಸರ್ಕಾರದ ಸಹಕಾರ ದೊರೆತರೆ ಮಾರುಕಟ್ಟೆ ಹಿಗ್ಗಿಸಬಹುದು’ ಎಂದು ಐಸ್‌ಕ್ರೀಮ್ ತಯಾರಿಸಿರುವ ಸುಹಾಸ್ ಅವರು ಹೇಳಿದರು.

ಒಂದು ಯಂತ್ರ: 5 ಉಪಯೋಗ

ರೈತರು ಐದು ರೀತಿಯಲ್ಲಿ ಉಪ‍ಯೋಗ ಪಡೆದುಕೊಳ್ಳುವ ಟ್ರೈಲರ್ ಮಾದರಿಯ ನಾಲ್ಕು ಚಕ್ರದ ವಾಹನವು ನೆರೆದಿದ್ದ ರೈತರನ್ನು ಆಕರ್ಷಿಸಿತು.

ವರ್ಷಾ ಕೃಷಿ ಉಪಕರಣಗಳ ಕಂಪನಿ ತಯಾರಿಸಿರುವ ಈ ವಾಹನದಲ್ಲಿ ಉಳುಮೆ ಮಾಡಲು ಮೂರು ಡಿಸ್ಕ್‌ಗಳ ಕಲ್ಟಿವೇಟರ್, ಬಿತ್ತನೆಗೆ ಅವಕಾಶ ಆಗವಂತೆ ಪೈಪ್‌ಗಳ ಅಳವಡಿಕೆ, ಕಳೆ ತೆಗೆಯಲು ರೋಟೋವೇಟರ್‌, ಔಷಧ ಸಿಂಪರಣೆಗೆ ಪಂಪ್‌, ಹಳ್ಳ ಅಥವಾ ಸಣ್ಣ ಬಾವಿಯಿಂದ ನೀರು ಮೇಲೆತ್ತುವ ಅವಕಾಶವೂ ಇದರಲ್ಲಿ ಇದೆ.

₹78 ಸಾವಿರ ಮೊತ್ತದ ಈ ಯಂತ್ರಕ್ಕೆ ಸರ್ಕಾರದಿಂದ ₹33,200 ಸಹಾಯಧನವೂ ಇದೆ. ರೈತರು ₹44,800 ಪಾವತಿಸಿ ಖರೀದಿಸಬಹುದು. ಸಹಾಯಧನ ಪಡೆಯಲು ಬಯಸುವ ಕೃಷಿಕರು ರೈತ ಸಂಪರ್ಕ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಕಂಪನಿ ಸಿಬ್ಬಂದಿ ವಿವರಿಸಿದರು.

ಎಲ್ಲವೂ ಸೌರಚಾಲಿತ

ಹೊಲಿಗೆ ಯಂತ್ರ, ಮಡಿಕೆ ಮಾಡುವ ಯಂತ್ರ, ಭತ್ತದ ಮಿಲ್, ಹಾಲು ಕರೆಯುವ ಯಂತ್ರ.. ಎಲ್ಲವೂ ಇಲ್ಲಿ ಸೌರ ಚಾಲಿತ.

ಸೆಲ್ಕೊ ಸೋಲಾರ್ ಲೈಟ್‌ ಕಂಪನಿ ಸೌರಶಕ್ತಿಯ ಮೂಲಕವೇ ಎಲ್ಲಾ ಯಂತ್ರಗಳನ್ನು ಚಾಲನೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿ ರೈತರಿಗೆ ಪರಿಚಯಿಸಿತು. ವಿದ್ಯುತ್ ಕೊರತೆ, ಕೆಲಸಗಾರರ ಕೊರತೆ ನಡುವೆಯೂ ಕುಲಕಸುಬು ಮುಂದುವರಿಸಲು ಈ ಸರಳ ತಂತ್ರಜ್ಞಾನ ಅನುಕೂಲವಾಗಲಿದೆ ಎಂದು ಸಂಸ್ಥೆ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT