ಬುಧವಾರ, ಅಕ್ಟೋಬರ್ 20, 2021
29 °C
ಕಟಾವು ಮಾಡಿದ ಈರುಳ್ಳಿ ತಿಪ್ಪೆಗೆ ಸುರಿದ ರೈತರು

ಕೊಳೆ ರೋಗಕ್ಕೆ ಈರುಳ್ಳಿ ಗಡ್ಡೆ ನಾಶ

ವಿಶ್ವನಾಥ ಡಿ. Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ತಾಲ್ಲೂಕಿನ ಚಿಗಟೇರಿ ಹೋಬಳಿಯ ಗ್ರಾಮಸ್ಥರ ಜೀವಾಳವಾಗಿರುವ ಈರುಳ್ಳಿ ಗಡ್ಡೆಗೆ ಕೊಳೆ ರೋಗ ಬಂದಿದ್ದು, ಕಟಾವು ಮಾಡಿದ ಈರುಳ್ಳಿ ರಾಶಿಗಳನ್ನು ರೈತರು ಟ್ರ್ಯಾಕ್ಟರ್‌ನಲ್ಲಿ ತಂದು ತಿಪ್ಪೆಗೆ ಸುರಿಯುತ್ತಿದ್ದಾರೆ.

ಲೋಲೇಶ್ವರ ಗ್ರಾಮದಲ್ಲಿ ಗುರುವಾರ ರೈತರಾದ ಬಸವರಾಜ್, ಮಂಜುನಾಥ್, ರಾಜಪ್ಪ ಅವರು ತಮ್ಮ ಹೊಲದಲ್ಲಿದ್ದ ಈರುಳ್ಳಿ ಬೆಳೆ ಕಿತ್ತು ಗಡ್ಡೆ ಬೇರ್ಪಡಿಸಿದ್ದರು. ಮೂರು ದಿನ ಬಿಟ್ಟು ನೋಡಿದರೆ, ಗಡ್ಡೆಯ ಒಳಭಾಗದ ಕಾಂಡ ಕೊಳೆತಿತ್ತು. ಬೇಸತ್ತ ರೈತರು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಬಂದು ತಿಪ್ಪೆಗೆ ಸುರಿದಿದ್ದಾರೆ. ಕೆಲವು ರೈತರು ಹೊಲದಲ್ಲಿಯೇ ಬಿಟ್ಟಿದ್ದಾರೆ.

ಕಳೆದ ವರ್ಷ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಗಿಡಕ್ಕೆ ಹುಳುಗಳ ಕಾಟ ಹೆಚ್ಚಾಗಿ ಹೊಲವೇ ನಾಶವಾಗಿತ್ತು. ಈರುಳ್ಳಿ ಕೀಳುವ ಗೋಜಿಗೆ ಹೋಗದ ನೂರಾರು ರೈತರು, ಹೊಲದಲ್ಲಿ ಗಿಡದ ಸಮೇತ ಮುರೆವು ಹರಗಿ, ಬೆಳೆ ನಾಶಪಡಿಸಿದ್ದರು. ಆದರೆ, ಪ್ರಸಕ್ತ ಸಾಲಿನಲ್ಲಿ ಗಡ್ಡೆ ಬರುವ ತನಕವೂ ಸೊಂಪಾಗಿದ್ದು, ನಂತರದಲ್ಲಿ ವಿಚಿತ್ರ ರೋಗ ಬಂದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

‘ಈರುಳ್ಳಿ ಕಿತ್ತು ಮೂರು ದಿನಗಳ ನಂತರ ಗಡ್ಡೆಯನ್ನು ಬಳ್ಳಿಯಿಂದ ಬೇರ್ಪಡಿಸಿದೆವು. ಒಂದೇ ದಿನದಲ್ಲಿ ಗಡ್ಡೆಯ ಒಳಭಾಗ ಕೊಳೆತಿದೆ. ಬಿತ್ತಿದ ದಿನದಿಂದ ಕೀಳುವ ತನಕ ಮಾಡಿದ ಖರ್ಚು, ಸಾಲ ತೀರಿಸುವ ನಿರೀಕ್ಷೆ ಹುಸಿಯಾಗಿದೆ. ನೂರಾರು ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದೆ. ಮುಂದೇನು ಮಾಡಬೇಕೋ ದಾರಿ ತೋಚದಾಗಿದೆ’ ಎಂದು ರೈತ ಬಸವರಾಜ್ ಅಳಲು ತೋಡಿಕೊಂಡರು.

***

ಈರುಳ್ಳಿ ಬೆಳೆಗೆ ಎಕರೆಯೊಂದಕ್ಕೆ ₹ 20 ಸಾವಿರದಿಂದ ₹ 25 ಸಾವಿರ ಹಣ ಖರ್ಚಾಗುತ್ತದೆ. ಈ ಬಾರಿ ಬೆಳೆದ ಬೆಳೆಗೆ ಮಾಡಿದ ಖರ್ಚು ಸಹ ಕೈಗೆ ಸಿಗದೇ ಬೆಳೆ ಸರ್ವನಾಶವಾಗಿದೆ.
ಚಂದ್ರಪ್ಪ ಗೌಡ್ರ, ಲೋಲೇಶ್ವರ

ಈರುಳ್ಳಿ ಗಡ್ಡೆ ನೋಡಲು ತುಂಬಾ ಚೆನ್ನಾಗಿದೆ. ಆದರೆ, ತಿನ್ನಲು ಬರುವುದಿಲ್ಲ. ಒಳಗಿನ ಗಡ್ಡೆ ನೀರು ತುಂಬಿಕೊಂಡು ಕೊಳೆತಿದೆ. ಎರಡು ವರ್ಷಗಳಿಂದ ಬೆಳೆ ನಷ್ಟ ಅನುಭವಿಸುತ್ತಿರುವ ನಮಗೆ ಪರಿಹಾರ ಕೊಡಬೇಕು.
ಗಿರಜ್ಜಿ ಬಸವರಾಜ್, ಈರುಳ್ಳಿ ಬೆಳೆಗಾರ

ಕೊಳೆ ರೋಗದಿಂದ ಈರುಳ್ಳಿ ಬೆಳೆ ನಷ್ಟ ಅನುಭವಿಸುತ್ತಿರುವ ರಾಜ್ಯದ ಈರುಳ್ಳಿ ಬೆಳೆಗಾರರಿಗೆ ಸರ್ಕಾರ ಎಕರೆಗೆ ₹ 50 ಸಾವಿರ ಪರಿಹಾರ ನೀಡಬೇಕು.
ಎಂ.ಪಿ. ವೀಣಾ ಮಹಾಂತೇಶ್, ರಾಜ್ಯಾಧ್ಯಕ್ಷೆ, ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟ

***

ರೋಗದ ಸಮೀಕ್ಷೆ ನಡೆಸಲು ಸೂಚನೆ

ತಾಲ್ಲೂಕಿನಲ್ಲಿ ಅಂದಾಜು 950 ಹೆಕ್ಟೇರ್‌ ಭೂಮಿಯಲ್ಲಿ ಈರುಳ್ಳಿ ಬಿತ್ತನೆ ಆಗಿದೆ. ಈ ಬಾರಿ ಅತಿ ಹೆಚ್ಚು ಮಳೆ ಆಗಿರುವ ಕಾರಣ ಅಥವಾ ಪ್ರತಿ ವರ್ಷ ಒಂದೇ ಬೆಳೆ ಬಿತ್ತನೆ ಕಾರಣಕ್ಕೂ ಬೆಳೆಗಳು ರೋಗಕ್ಕೆ ತುತ್ತಾಗಿರಬಹುದು. ಈರುಳ್ಳಿ ಕೊಳೆ ರೋಗದ ಬಗ್ಗೆ ಸಮೀಕ್ಷೆ ಮಾಡಲು ಸೂಚಿಸಿದ್ದು, ಪೂರ್ಣಗೊಂಡ ಬಳಿಕ ಎಷ್ಟು ಪ್ರಮಾಣ ಹಾನಿಯಾಗಿದೆ ಎಂದು ತಿಳಿಯುತ್ತದೆ.

– ಜಯಸಿಂಹ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ, ಹರಪನಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು