ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಿರ್ – ನಾಗವಳ್ಳಿಯ ಕೃಷಿ ತಪಸ್ವಿ

Last Updated 23 ಮಾರ್ಚ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ನಾಸಿರ್ ಅಹ್ಮದ್ ಅನುಭವಿ ಕೃಷಿಕರು. ಚಾಮರಾಜನಗರದ ನಾಗವಳ್ಳಿಯೇ ಇವರ ತಪೋ ಭೂಮಿ. ಇವರು ವ್ಯಾಪಾರ ನಡೆಸಿ ಬದುಕು ಸಾಗಿಸಬಹುದಿತ್ತು. ಆದರೆ, ಕೃಷಿ ಮಾಡಿಯೇ ಬದುಕು ಕಟ್ಟಿಕೊಳ್ಳಬೇಕೆಂದು ಅವರ ಮಹದಾಸೆ. ನಾಲ್ಕು ದಶಕಗಳ ಹಿಂದೆ ಇಂಥದ್ದೊಂದು ಆಸೆ ಹೊತ್ತು ಕೃಷಿ ಆರಂಭಿಸಿದರು.

ಮೈಸೂರು-ಚಾಮರಾಜನಗರದಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಬಾಳೆ ಕೃಷಿಯ ಅನುಭವ ಇವರದ್ದು. ಇದಕ್ಕಾಗಿಯೇ ನಾಸೀರರು ‘ಬಾಳೆಯ ಬ್ರಹ್ಮ’ನೆಂದೇ ಖ್ಯಾತಿ. ಒಂದೇ ಬೆಳೆಗೆ ಅಂಟಿಕೊಳ್ಳದೆ ಅರಿಶಿಣ, ಅಡಿಕೆ, ಶುಂಠಿ, ಸುವರ್ಣಗೆಡ್ಡೆ ಬೆಳೆದೂ ಸೈ ಎನಿಸಿಕೊಂಡಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ಹತ್ತು ಎಕರೆಯಲ್ಲಿ ಮೊದಲ ಸಲ ಸುವರ್ಣಗಡ್ಡೆ ಬೆಳೆದು ಗೆದ್ದವರು. ಕಳೆದ ಸಲ ಗರ್ಕಿನ್ ಬೆಳೆ ಅನುಭವವನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ವಿಜ್ಞಾನ-ತಂತ್ರಜ್ಞಾನಗಳ ಅಳವಡಿಕೆ
ನಾಸಿರರ ಕೃಷಿ ಯಶಸ್ಸಿನ ಹಿಂದೆ ತಂತ್ರಜ್ಞಾನಗಳ ಅಳವಡಿಕೆಯ ಪಾತ್ರ ದೊಡ್ಡದಿದೆ. ಹಾಗೆಂದು ಎಲ್ಲವನ್ನೂ ಯಥಾವತ್ತಾಗಿ ಅಳವಡಿಸುವುದಿಲ್ಲ. ಚಿಕ್ಕ ಪ್ರಯೋಗ ಮಾಡಿ, ಸರಿಯೆನಿಸಿದರೆ ಮಾತ್ರ ಮುಂದುವರಿಸುತ್ತಾರೆ. ಎಲ್ಲ ಬೆಳೆಗಳಲ್ಲೂ ಗರಿಷ್ಠ ಇಳುವರಿ ಪಡೆಯುವ ಚಾಕಚಕ್ಯತೆ. ಬೇಡಿಕೆಯಿರುವ ತಳಿಗಳ ಆಯ್ಕೆ, ಸೂಕ್ತ ಕಾಲದಲ್ಲಿ ನಾಟಿ, ಬೆಳೆಗಳ ನಿತ್ಯ ಪರಿಶೀಲನೆ, ಬೇಕಾದ ಪಾಲನೆ-ಪೋಷಣೆ, ಸಮಗ್ರ ಪೋಷಕಾಂಶ/ನೀರು/ಕೀಟ/ರೋಗ/ಕಳೆ ನಿರ್ವಹಣೆಯ ಅಳವಡಿಕೆ ಇವರ ಯಶಸ್ಸಿನ ಗುಟ್ಟು. ‘ಹೆತ್ತ ಮಕ್ಕಳ ಮೇಲೆ, ಹಾಕಿದ ಬೆಳೆ ಮೇಲೆ ನಿಗಾ ಮಡಗ್ಬೇಕು ಸಾರ್, ಇಲ್ಲಾಂದ್ರೆ ಎರಡೂ ಕೈಗೆ ಬರೋಲ್ಲಾ‘ ಅಂತಾರೆ. ‘ಜಮೀನಿಗೆ ಬೀಜ ಹಾಕಿ ಸಿಟಿ ಸುತ್ತೋಕೋದ್ರೆ ಹೆಂಗಾಗುತ್ತೆ ಹೇಳಿ?‘ ಮರು ಪ್ರಶ್ನಿಸುತ್ತಾರೆ. ಮೂರು ದಶಕಗಳಿಗೂ ಹಿಂದೆಯೇ ಹನಿನೀರಾವರಿ, ಅಂಗಾಶ ಬಾಳೆ ಕೃಷಿಯನ್ನು ಸಮರ್ಪಕವಾಗಿ ಅಳವಡಿಸಿದ ಹಿರಿಮೆ ನಾಸಿರರದ್ದು.

ಶಿಸ್ತಿನ ಸಿಪಾಯಿ
‘ಯಾವಾಗ ನೋಡಿದರೂ ಬೆಳೆಗಳು ಬಹಳ ಚೆನ್ನಾಗಿಯೇ ಇರ್ತಾವಲ್ಲ ಏನ್ ಸಮಾಚಾರ?‘ ಎಂದು ಪ್ರಶ್ನೆ ಮಾಡಿದರೆ, ‘ಸಾರ್, ನಾವು ದಿನಕ್ಕೆ ಮೂರೊತ್ತೂ ಊಟ ಮಾಡ್ತೀವಿ, ಆರೋಗ್ಯ ಹೆಚ್ಚೂ ಕಡಿಮೆ ಆದ ತಕ್ಷಣ ಡಾಕ್ಟರತ್ತಿರ ಹೋಗಿ ಮೆಡಿಸನ್ ತಗೋತೀವಿ, ನಮ್ಮ ಬೆಳೆಗಳೂ ಹಂಗೇ ಅಲ್ವ ಸರ್; ಅವಕ್ಕೆ ಯಾವ್ಯಾವಾಗ ಏನೇನ್ ತಿಂಡಿ (ಗೊಬ್ಬರ) ತೀರ್ಥ (ಔಷಧ) ಬೇಕೋ ಅದನ್ನ ಕೊಡ್ತೀನಿ; ದಿನಾ ಅವುಗಳನ್ನ ಮಾತನಾಡ್ಸತೀನಿ; ಕಳೆಗಳಿಗೆ ಅವಕಾಶನೇ ಇಲ್ಲ; ಎಷ್ಟು ನೀರು ಬೇಕೋ ಅಷ್ಟನ್ನ ಮಾತ್ರ ಕೊಡ್ತೀನಿ; ಉಳಿದದ್ದೆಲ್ಲ ಅಲ್ಲಾಹುವಿಗೆ ಬಿಟ್ಟದ್ದು‘ ಅಂತಾರೆ. ಬೆಳೆ ಯೋಜನೆಯಿಂದ ಹಿಡಿದು ಮುಗಿಯುವವರೆಗೂ ಇವರು ತೋರುವ ಬದ್ಧತೆ ಮಾದರಿಯಾಗುವಂಥದ್ದು. ಮಾರುಕಟ್ಟೆ ದರಗಳ ಬಗೆಗೆ ತಲೆಕೆಡಿಸಿಕೊಳ್ಳದೆ, ಅಧಿಕ ಹಾಗೂ ಗುಣಮಟ್ಟದ ಉತ್ಪನ್ನ ತೆಗೆಯುವ ಕಡೆಗೆ ಗಮನ ಹರಿಸುತ್ತಾರೆ. ‘ರೇಟು ಹೆಚ್ಚೂ ಕಡಿಮೆ ಆಗೋದು ಸಾಮಾನ್ಯ; ನಾಲ್ಕಾರು ಬೆಳೆ ಮಾಡೋದ್ರಿಂದ ಅದರ ಬಿಸಿ ನಂಗೇನೂ ಅಷ್ಟು ತಟ್ಟೋದಿಲ್ಲ, 50 ಪರ್ಸೆಂಟ್ ಬೆಳೆಗಳಿಗಾದ್ರೂ ಒಳ್ಳೆ ರೇಟ್ ಸಿಕ್ಕೇ ಸಿಗುತ್ತೆ; ಬೆಳೆಯನ್ನ ಮಾತ್ರ ಸರಿಯಾಗಿ ನೋಡ್ಕೋಬೇಕು” ಅಂತಾರೆ.

ಪ್ರತಿಭ ತಳಿಯ ಬಗ್ಗೆ ವಿವರಿಸುತ್ತಿರುವುದು

ವಿಜ್ಞಾನ-ವಿಜ್ಞಾನಿಗಳು ಬೇಕು
‘ಬಾಳೆ ಟಿಶ್ಯೂ ಕಲ್ಚರ್ ವಿಜ್ಞಾನದ ಕೊಡುಗೆಯಲ್ವ? ಬರೋ ಸಮಸ್ಯೆಗಳನ್ನ ಪತ್ತೆ ಹಚ್ಚೋಕೆ ವಿಜ್ಞಾನ ಬೇಕೇ ಬೇಕಲ್ವ? ರೈತ್ರು ಎಷ್ಟೇ ಬುದ್ಧಿವಂತರಾದ್ರ್ರೂ ಹೊಸ ಸಮಸ್ಯೆಗೆ ಸಂಶೋಧನೆಗೆ ವಿಜ್ಞಾನಿಗಳು ಬೇಕು‘ ಅನ್ನೋದು ನಾಸಿರರ ಮಾತು. ‘ನಾವೂ ಸಂಶೋಧನೆ ಮಾಡಬಹುದು; ಸಮಯ, ಜಾಗ, ಬಂಡವಾಳ ಹೂಡ್ಬೇಕು, ಸಂಶೋಧನೆಯಿಂದ ನಷ್ಟ ಆದ್ರೆ? ಅದಕ್ಕೆಂದೇ ಸಂಶೋಧನಾ ಸಂಸ್ಥೆ, ಯೂನಿವರ್ಸಿಟಿಗಳಿರೋದು; ಅವರು ನಮಗೆ ಬೇಕಾದ್ದನ್ನ ಮಾಡ್ಲಿಲ್ಲಾಂದ್ರೆ ಅವರು ಮಾಡೋವರ್ಗೆ ಕಾಯ್ಕೊಂಡು ಕೂರೋಕ್ಕಾಗಲ್ಲ, ಆಗ ನಮಗೆ ಬೇಕಾದ ಸಂಶೋಧನೆಯನ್ನ ನಾವೇ ಮಾಡ್ಕೊತೀವಿ” ಅಂತಾರೆ ನಾಸಿರ್.

ಸಂಶೋಧನೆಗಳ ಬಗೆಗೆ ಎಷ್ಟೊಳ್ಳೆ ಅಭಿಪ್ರಾಯ ಇದ್ದರೂ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಇವರು. ತಮ್ಮದೇ ತಾಕಿನಲ್ಲಿ ಒಂದೆರಡು ಸಲ ಪ್ರಯೋಗಿಸಿ, ಸತ್ಯಾಸತ್ಯತೆ ಕಂಡುಕೊಂಡ ನಂತರವಷ್ಟೇ ಅದರ ಪ್ರದೇಶ ವಿಸ್ತರಣೆಗೆ ಮುಂದಾಗುತ್ತಾರೆ.

ನಾಸಿರ್ ಹೊಸ ತಳಿ ಬೆಳೆಯಲ್ಲೂ ಮೊದಲಿಗರು. ಬಾಳೆ ಜತೆಗೆ ಹೆಚ್ಚಾಗಿ ಅರಿಶಿಣ ಬೆಳೆಯುತ್ತಾರೆ. ಮೊದಲು ಈರೋಡ್ ಲೋಕಲ್ ತಳಿ ಬೆಳೆಯುತ್ತಿದ್ದರು. ಈಗ ಅದರ ಜತೆಗೆ ‘ಪ್ರತಿಭಾ’ ತಳಿ, ಮೂರು ವರ್ಷಗಳ ಹಿಂದಿನಿಂದ ‘ಪ್ರಗತಿ’ ಎಂಬ ತಳಿಯನ್ನು ಬೆಳೆಯುತ್ತಿದ್ದಾರೆ. ‘ಹೊಸ ತಳಿಗಳ ಇಳುವರಿ ಚೆನ್ನಾಗೈತೆ, 100 ಕೆಜಿ ಹಸಿ ಅರಿಸಿನಕ್ಕೆ 20 ಕೆಜಿಗೂ ಹೆಚ್ಚು ಸಂಸ್ಕರಿಸಿದ ಅರಿಸಿನ ಸಿಗುತ್ತೆ, ರೋಗ-ಕೀಟ ಕಡಿಮೆ, ‘ಕರ್ಕುಮಿನ್’ ಅಂಶ ಜಾಸ್ತಿ ಇದೆ, ಇಂಡಸ್ಟ್ರಿಗಳೂ ಇವನ್ನೇ ಕೇಳ್ತಾರೆ‘ ಎನ್ನುತ್ತಾರೆ ನಾಸಿರ್. ಈಗೀಗ ‘ಪ್ರಗತಿ’ಯನ್ನು ಹೆಚ್ಚೆಚ್ಚು ಪ್ರದೇಶದಲ್ಲಿ ಬೆಳಿತಿದ್ದಾರೆ. ಎಲ್ಲಾ ತಳಿಗಳಿಗೂ ಹೋಲಿಸಿದರೆ, ಇದು ಬೇಗ ಕಟಾವಿಗೆ ಬರುತ್ತೆ. ನಮ್ಮ ಜಿಲ್ಲೆಯಲ್ಲಿ ನೀರು ಕಡಿಮೆ, ಹಂಗಾಗಿ ನಮಗೆ ಹೊಂದುತ್ತೆ ಅಂತಾರೆ. ತೀರಾ ಇತ್ತೀಚೆಗೆ ಇವರ ತೋಟದಲ್ಲೇ ಅರಿಸಿನ ಸಂಸ್ಕರಣಾ ಘಟಕ ಕೂಡ ಸ್ಥಾಪಿಸಿದ್ದಾರೆ. ಈ ಸಲ ಅರಿಶಿಣದಲ್ಲಿ ಎಕರೆಗೆ ಸರಾಸರಿ 40 ಕ್ವಿಂಟಲ್ ಇಳುವರಿ (ಸಂಸ್ಕರಿಸಿದ್ದು) ತೆಗೆದಿದ್ದಾರೆ.

ಕಾರ್ಮಿಕರ ನಿರ್ವಹಣೆ ಕರಾರುವಕ್ಕು
ನಾಸಿರರು ಕಾರ್ಮಿಕರನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತಾರೆ. ಪ್ರೀತಿಯಿಂದ ಮಾತನಾಡಿಸುತ್ತಾರೆ. ವರ್ಷಪೂರ್ತಿ ಕೆಲಸ ಕೊಡುತ್ತಾರೆ. ಅಗತ್ಯವಿದ್ದಾಗ ಮುಂಗಡ ಹಣ ಕೊಡುತ್ತಾರೆ. ಜೊತೆಯಲ್ಲೇ ಇದ್ದು ಮೈಗಳ್ಳತನ ಮಾಡದೆ ದುಡಿಯುವಂತೆ ನೋಡಿಕೊಳ್ಳುತ್ತಾರೆ.

ದೊಡ್ಡ ಪ್ರಮಾಣದಲ್ಲಿ ಕೃಷಿ, ವೈಜ್ಞಾನಿಕ ಪದ್ಧತಿಗಳ ಅಳವಡಿಕೆ, ಅಧಿಕ ಇಳುವರಿ, ಉತ್ತಮ ಗುಣಮಟ್ಟದ ಉತ್ಪನ್ನ ಪಡೆಯುವುದರಲ್ಲಿ ನಿಸ್ಸೀಮರಾಗಿರುವ ನಾಸೀರ ಖ್ಯಾತಿ ಕರ್ನಾಟಕ ದಾಟಿ ನೆರೆಯ ತಮಿಳುನಾಡು, ಕೇರಳದಲ್ಲೂ ಹಬ್ಬಿರುವುದು ಉಲ್ಲೇಖರ್ಹ.

ಹೀಗಾಗಿ ಮೂರು ಎಕರೆಯಿಂದ ಶುರು ಮಾಡಿ ನೂರಾರು ಎಕರೆಗೆ ಕೃಷಿ ವಿಸ್ತರಿಸಿರುವ ನಾಸೀರರ ಸಾಧನೆಕಡಿಮೆಯೇನಲ್ಲ. ಇವೆಲ್ಲ ನೋಡುತ್ತಿದ್ದರೆ ಕೃಷಿ ಇವರಿಗೆ ಒಲಿದಿದೆಯೋ ಅಥವಾ ಇವರೇ ಕೃಷಿಗೆ ಒಲಿದಿದ್ದಾರೋ ನನಗೆ ಇನ್ನೂ ತಿಳಿದಿಲ್ಲ; ಒಟ್ಟಿನಲ್ಲಿ ಇವರನ್ನು ಕೃಷಿಯಿಂದಲೂ, ಕೃಷಿಯನ್ನು ಇವರಿಂದಲೂ ಪ್ರತ್ಯೇಕಿಸಿ ನೋಡುವುದು ಕಷ್ಟ.

ಹೆಚ್ಚಿನ ಮಾಹಿತಿಗೆ ಮೊ. 76768 95957.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT