ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೆಗೂ ಹಸಿರು ಹೊದಿಸಿದ ಶೇಖಮ್ಮ

Published 23 ಸೆಪ್ಟೆಂಬರ್ 2023, 23:30 IST
Last Updated 23 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಕೊಪ್ಪಳ ಸಮೀಪದ ಕಲ್ಲು ತಾವರಗೇರಾ ಗ್ರಾಮ ಹೆಸರಿಗೆ ತಕ್ಕಂಥ ಹಳ್ಳಿ. ಎಲ್ಲೆಲ್ಲಿಯೂ ಕಲ್ಲಿನ ಬಂಡೆಗಳೇ. ಅವುಗಳ ಮೇಲೆ ಮಣ್ಣು ಹಾಕಿ ಕೃಷಿ ಚಟುವಟಿಕೆ ಮಾಡಿರುವ ಶೇಖಮ್ಮ ವಾಣಿ ಹಾಗೂ ಹುಚ್ಚಪ್ಪ ದಂಪತಿಯ ಯಶೋಗಾಥೆ ಅನುಕರಣೀಯ.

***

ಕಣ್ಣು ಹಾಯಿಸಿದಷ್ಟೂ ದೂರ ಕಲ್ಲಿನ ಬಂಡೆಗಳು. ಆ ಬಂಡೆಗಳ ಮೇಲೆ ಬುನಾದಿಯಿಲ್ಲದೆ ಗೋಡೆಗಳಿಂದ ಮಾತ್ರ ನಿರ್ಮಿತವಾದ ಮನೆಗಳು ಹಲವು ಬಣ್ಣಗಳಿಂದ ನಳನಳಿಸುತ್ತಿದ್ದವು. ಊರು ಕೂಡ ಹೆಸರಿಗೆ ತಕ್ಕಂತೆಯೇ ಇದೆ; ಕಲ್ಲ ತಾವರಗೇರಾ.

ಕೊಪ್ಪಳದಿಂದ 20 ಕಿ.ಮೀ. ದೂರದಲ್ಲಿರುವ ಪುಟ್ಟ ಗ್ರಾಮವಿದು. ಎಲ್ಲಿ ನೋಡಿದರೂ ಕಲ್ಲುಗಳೇ. ಈ ಕಲ್ಲುಗಳ ಮೇಲೆ ಸಾಹಸ ಮಾಡಿ ಮನೆಗಳನ್ನೇನೊ ಕಟ್ಟಲಾಗಿದೆ. ಊರಿನ ಜನರ ಹೊಲಗಳ ಪರಿಸ್ಥಿತಿಯೇನು? ಕೃಷಿಯನ್ನೇ ನೆಚ್ಚಿಕೊಂಡ ರೈತರ ಗತಿಯೇನು? ಎಂದು ನೋಡಿದಾಗ ಒಂದೆಡೆ ಕಣ್ಣಿಗೆ ಬಿದ್ದದ್ದು ಸಮೃದ್ಧ ಹಸಿರು. ತರಹೇವಾರಿ ಮರಗಳು ಎತ್ತರೆತ್ತರ ಬೆಳೆದು ನಿಂತಿದ್ದವು. ಮಾವಿನ ಮರಗಳಲ್ಲಿ ತುಂಬಿದ್ದ ಕಾಯಿಗಳು. ಸೀತಾಫಲಗಳೂ ಸಮೃದ್ಧ. ಲಿಂಬೆಯ ಪರಿಮಳ ಆಘ್ರಾಣಿಸಿಕೊಂಡು ಮುಂದಡಿ ಇಟ್ಟರೆ ಸ್ವಲ್ಪ ದೂರದಲ್ಲೇ ಪೇರಲ ಹಣ್ಣಿನ ಬಾಯಿ ಚಪ್ಪರಿಸುವಂಥ ಸಿಹಿ.

ಬಹುತೇಕ ಕಲ್ಲುಗಳೇ ತುಂಬಿರುವ ಕಲ್ಲ ತಾವರಗೇರಾ ಗ್ರಾಮದಲ್ಲಿ ಕೃಷಿ ಚಟುವಟಿಕೆ ಮಾಡುವುದಾದರೂ ಹೇಗೆ ಸಾಧ್ಯ? ಎನ್ನುವ ಕುತೂಹಲ ತಾಳಲಾಗದೆ ಒಂದಷ್ಟು ಹೊಲಗಳಲ್ಲಿ ಓಡಾಡಿದರೆ ಪರಿಚಯವಾಗಿದ್ದು ರೈತ ಮಹಿಳೆ ಶೇಖಮ್ಮ ಹಾಗೂ ಹುಚ್ಚಪ್ಪ ವಾಣಿ ದಂಪತಿಯ ಸಾಹಸ, ಛಲದ ಕಥನ. ಫಲವತ್ತಾದ, ಸಹಜ ಕೃಷಿಗೆ ಅನುಕೂಲವಿಲ್ಲದ ಹೊಲಗಳಲ್ಲಿ ಕೃಷಿ ಮಾಡಲಾಗದೆ ಆತ್ಮಹತ್ಯೆಯ ದಾರಿ ಹುಡುಕುವ ಅನೇಕ ರೈತರ ನಡುವೆ ಈ ದಂಪತಿಯ ಸ್ಫೂರ್ತಿ ತುಂಬುವ ಕಾಯಕ ಎಲ್ಲರಿಗೂ ಮಾದರಿಯಾಗುವಂಥದ್ದು.

ಬೇರೆಯವರಾಗಿದ್ದರೆ ಕಲ್ಲುಗಳೇ ತುಂಬಿರುವ ಈ ಹೊಲದಲ್ಲಿ ಕೃಷಿಯ ಗೊಡವೆ ಯಾಕೆಂದು ಬೇರೆ ಕೆಲಸ ಮಾಡುತ್ತಿದ್ದರೊ ಏನೋ? ಶೇಖಮ್ಮ ಅವರಿಗೆ ಒಟ್ಟು 16 ಎಕರೆ ಹೊಲವಿದೆ. ಇದರಲ್ಲಿ ಐದು ಎಕರೆಯಲ್ಲಿ ಕಲ್ಲು ಬಂಡೆಗಳೇ ತುಂಬಿವೆ. ಎರಡೂವರೆ ದಶಕಗಳ ಹಿಂದೆ ಸಮೀಪದ ಕೆರೆಯಿಂದ ಮಣ್ಣು ತಂದು ಹಾಕಿ ಹೊಲ ಸಿದ್ಧಪಡಿಸಿಕೊಂಡಿದ್ದಾರೆ. ಪತಿ ಹುಚ್ಚಪ್ಪ ಜೊತೆಗೂಡಿ ಹೊಸ ಪ್ರಯೋಗಗಳಿಗೆ ಮುಂದಡಿ ಇಟ್ಟಿದ್ದಾರೆ. ಅದರ ಪರಿಣಾಮವೇ ಈಗ ಅಲ್ಲಿ ಹಸಿರಿನ ಮಾತು.

ಶೇಖಮ್ಮ ಅವರ ಸ್ವಂತ ಊರು ಕೂಡಲಸಂಗಮದ ಬಳಿಯ ಹಳ್ಳಿ. ನದಿಯ ಹಿನ್ನೀರಿನಲ್ಲಿ ಹಳ್ಳಿ ಮುಳುಗಿದಾಗ ಕಲ್ಲು ತಾವರಗೇರಾ ಗ್ರಾಮಕ್ಕೆ ಬಂದರು. ಹುಚ್ಚಪ್ಪ ಮೊದಲಿನಿಂದಲೂ ಕೃಷಿಕರು. ಒಣಭೂಮಿಯಲ್ಲಿ ಜೋಳ, ಸಜ್ಜೆ ಬೆಳೆಯುತ್ತಿದ್ದರು. ಕಲ್ಲುಗಳ ಮೇಲೆ ಏನು ಬೆಳೆದೀತು ಎಂದು ಪ್ರಶ್ನಿಸುವವರಿಗೆ ಅವರ ಹೊಲದಲ್ಲಿ ಬೆಳೆದಿದ್ದ ಪಡವಲ ಬಳ್ಳಿ ಸಾಕ್ಷಿಯಂತಿತ್ತು. ಊರಿನ ಹಲವು ರೈತರು ಹೊಲದ ಸಮೀಪದಲ್ಲಿನ ಕೆರೆಯಿಂದ ಮಣ್ಣು ತಂದು ಹೊಲಕ್ಕೆ ಹಾಕಿಸುತ್ತಿದ್ದರು. ಇದನ್ನು ನೋಡಿದ ದಂಪತಿ ತಾವೂ ಹೊಲಕ್ಕೆ ಮಣ್ಣು ಹಾಕಿಸುವ ಸಾಹಸ ಮಾಡಿದರು. ಐದು ಎಕರೆಯಷ್ಟು ಹೊಲಕ್ಕೆ ಮಣ್ಣು ಹಾಕಿಸುವ ಕಾಯಕ ಮುಗಿಯಲು ಬೇಕಾಗಿದ್ದು ಬರೋಬ್ಬರಿ ಮೂರು ವರ್ಷ. ಮಳೆಯ ಅಬ್ಬರದಿಂದ ಆ ಮಣ್ಣು ಕೊಚ್ಚಿಹೋಗದಂತೆ ಎತ್ತರದಲ್ಲಿ ಬದುಗಳನ್ನು ನಿರ್ಮಿಸಿ ‘ರಕ್ಷಣಾ ಗೋಡೆ’ ಕಟ್ಟಿದರು. ಕೆಳಗಡೆ ಬಂಡೆ; ಮೇಲೆ ಮಣ್ಣು ಹಾಕಿ ಕೃಷಿ ಚಟುವಟಿಕೆ ಆರಂಭಿಸಿದರು.

ಮುಕ್ಕಾಲು ಅಡಿಯಷ್ಟು ಹಾಕಿದ ಮಣ್ಣಿನ ಮೇಲೆ ಮೊದಲು ಕನಕಾಂಬರ ಅರಳಿಸಿದರು. ಒಂದು ದಿನಕ್ಕೆ ಎರಡು ಕೆ.ಜಿ.ಯಷ್ಟು ಬೆಳೆಯುತ್ತಿದ್ದ ಕನಕಾಂಬರ ಈ ದಂಪತಿಗೆ ಬಂಪರ್‌ ಲಾಭವನ್ನೇ ತಂದುಕೊಟ್ಟಿತು. ಆಗಿನ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ಗರಿಷ್ಠ ₹20ರಿಂದ ₹30 ಸಿಗುತ್ತಿತ್ತು. ಜೊತೆಗೆ ಹೈನುಗಾರಿಕೆಯಿಂದ ಬರುತ್ತಿದ್ದ ಆದಾಯವೂ ಕುಟುಂಬಕ್ಕೆ ಆಸರೆಯಾಗಿತ್ತು. ಈ ಹಣವನ್ನು ಕೂಡಿಸಿಟ್ಟು ಹಂತಹಂತವಾಗಿ ಹೊಲಕ್ಕೆ ಮಣ್ಣು ತುಂಬಿಸಿದರು. ಬಂಡೆಯ ಮೇಲೆಯೂ ಕೃಷಿ ಮಾಡಿ ಸಮೃದ್ಧ ಲಾಭ ಗಳಿಸಬಹುದು ಎನ್ನುವ ಭರವಸೆಯನ್ನು ಕನಕಾಂಬರ ತುಂಬಿತು.

ಹಂತಹಂತವಾಗಿ ಟೊಮೆಟೊ, ಬದನೇಕಾಯಿ, ಲಿಂಬೆ, ಸೀತಾಫಲ, ಹಲಸು, ಪೇರಲ, ಮಾವು, ಸಜ್ಜೆ, ಭತ್ತ, ಚೆಂಡು ಹೂ, ಸೌತೇಕಾಯಿ, ಬೆಂಡೆಕಾಯಿ, ಬೀಟ್‌ರೂಟ್‌, ಅವರೆ, ಸಜ್ಜೆ, ಮೆಕ್ಕೆಜೋಳ ಬೆಳೆದು ಬಂಪರ್‌ ಫಸಲು ಪಡೆದರು. ಎರಡು ದಶಕಗಳ ಅವಧಿಯಲ್ಲಿ ಒಂಬತ್ತು ಬೋರ್‌ವೆಲ್‌ಗಳನ್ನು ಕೊರೆಯಿಸಿದರು. ಏಳು ಬಾವಿಗಳಲ್ಲಿ ನೀರೇ ಚಿಮ್ಮಲಿಲ್ಲ. ಇನ್ನುಳಿದ ಎರಡು ಬೋರ್‌ವೆಲ್‌ಗಳು ಸುರಿಸಿದ ನೀರು ಕೃಷಿ ಚಟುವಟಿಕೆಗೆ ಆಸರೆಯಾಗಿದೆ.

ಜಮೀನಿನ ಎತ್ತರದ ಭಾಗದಲ್ಲಿ ದೊಡ್ಡದಾಗಿ ಕಲ್ಲುಗಳ ನಡುವೆಯೇ ಬೆಳೆದ ಬೇವಿನ ಮರಗಳಿವೆ. ಕಲ್ಲಿನ ನಡುವೆಯೇ ಮರಗಳು ಬೆಳೆದು ನಿಂತಾಗ ಅವರಿಗೆ ಹೊಳೆದಿದ್ದು ತೋಟಗಾರಿಕಾ ಬೆಳೆಗಳು. ತೋಟಗಾರಿಕಾ ಕೃಷಿಯತ್ತಲೂ ಆಸಕ್ತಿ ತೋರಿಸಿದರು. ಪೇರಲ, ಲಿಂಬೆ, ಮಾವು ಸಮೃದ್ಧ ಫಸಲು ತಂದುಕೊಟ್ಟವು. ಹೊಲದಲ್ಲಿ ತೆಗ್ಗು ಪ್ರದೇಶ ಇರುವಲ್ಲಿ ಭತ್ತ, ಹುರುಳಿ, ನವಣಿ, ಸಜ್ಜೆ, ಅಲಸಂದಿ, ತೊಗರಿ, ಗುರೆಳ್ಳು ಬೆಳೆಯುತ್ತಾರೆ. ಹೊಲದ ಕೆಲಭಾಗಗಳಲ್ಲಿ ಇನ್ನೂ ಮಣ್ಣು ಹಾಕಿಲ್ಲ. ಅಂಥ ಬಂಡೆಗಳ ಮೇಲೂ ಪಡವಲಬಳ್ಳಿ, ಕುಂಬಳಕಾಯಿ ಬಳ್ಳಿಗಳನ್ನು ಹಬ್ಬಿಸಿದ್ದಾರೆ.  ಮಳೆ ನೀರು ಸರಾಗವಾಗಿ ಹರಿದು ಒಂದೆಡೆ ಸೇರಲು ಹೊಂಡ ನಿರ್ಮಿಸಿದ್ದಾರೆ. ಜೋಳದ ದಂಟು, ಸೆಣಬು ತ್ಯಾಜ್ಯದಿಂದ ಕಲ್ಲುಸಂದಿಯಲ್ಲಿ ಎರೆಗೊಬ್ಬರ ತಯಾರಿಸುತ್ತಿದ್ದಾರೆ. ಕಲ್ಲು ಬಂಡೆಯ ಮೇಲೆ ಸಣ್ಣ ಪುಟ್ಟಿಯಲ್ಲಿ ಮಣ್ಣು ತುಂಬಿ ಅದಕ್ಕೆ ತರಕಾರಿಗಳ ಬೀಜಗಳನ್ನು ಹಾಕಿ ಅದನ್ನು ಬಂಡೆಯ ಮೇಲಿಟ್ಟು ಕೆಲ ದಿನ ನೀರು ಹಾಕುತ್ತಾರೆ. ಬಳ್ಳಿ ಚಿಗಿತ ಬಳಿಕ ಪುಟ್ಟಿ ತೆಗೆದರೆ ಬಳ್ಳಿ ಬೆಳೆಯುತ್ತದೆ. ಸದಾ ನಿರಾಸೆ, ಹತಾಶೆ ಹಾಗೂ ಬೇಸರದ ಭಾವನೆಯಿಂದ ರೈತನ ಕಷ್ಟದ ಬದುಕು ಯಾರಿಗೂ ಬೇಡ ಎಂದು ಬೇಸರ ಪಟ್ಟುಕೊಳ್ಳುವವರೇ ಹೆಚ್ಚು. ಆದರೆ ಶೇಖಮ್ಮ ಹಾಗೂ ಹುಚ್ಚಪ್ಪ ದಂಪತಿ ತಮ್ಮ ಹೊಲದ ಕಲ್ಲುಗಳನ್ನೇ ಕರಗಿಸಿ ಹಸಿರ ಸಿರಿಯ ಸೊಬಗು ಅರಳುವಂತೆ ಮಾಡಿದ್ದಾರೆ. ಅವರ ಶ್ರಮ ಹಾಗೂ ಅನನ್ಯ ಕೃಷಿ ಪ್ರೀತಿಯ ಬದುಕು ರೈತರ ನೂರಾರು ಸಮಸ್ಯೆಗಳನ್ನು ದೂರ ಮಾಡಿ ಪ್ರೇರಕ ಶಕ್ತಿ ಚಿಮ್ಮಿಸುವಂತಿದೆ.

ಹೊಲವೇ ನಮ್ಮ ಭಾಗ್ಯ
‘ನಮ್ಮ ಹೊಲದಲ್ಲಿ ಬಂಡೆಗಳೇ ಹೆಚ್ಚಿವೆ ಎನ್ನುವ ಸತ್ಯವನ್ನು ಮೊದಲು ಒಪ್ಪಿಕೊಂಡು ಅದನ್ನು ಬದಲಿಸಲು ನಿರ್ಧರಿಸಿದ್ದೆ. ಬಂಡೆಗಳೇ ತುಂಬಿರುವ ಹೊಲದಲ್ಲಿ ಏನುತಾನೆ ಮಾಡಲು ಸಾಧ್ಯ ಎಂದು ಅನೇಕರು ಪ್ರಶ್ನಿಸಿದ್ದರು. ಇಲ್ಲದ ಸಾಹಸ ಮಾಡಬೇಡ ಎಂದು ಛೇಡಿಸಿದ್ದರು. ಪತಿಯ ನೆರವಿನೊಂದಿಗೆ ಬಂಡೆಗಳ ಮೇಲೆ ಮಣ್ಣು ಹಾಕಿ ಎರಡೂವರೆ ದಶಕಗಳಿಂದ ಕೃಷಿ ಮಾಡುತ್ತಿದ್ದೇವೆ. ಈಗ ನಮ್ಮ ಹೊಲವನ್ನು ನೋಡಲು ಹೊರರಾಜ್ಯಗಳಿಂದ ಜನ ಬರುತ್ತಿದ್ದಾರೆ. ಹೊಲವೇ ನಮ್ಮ ಭಾಗ್ಯ’ ಎನ್ನುತ್ತಾರೆ ಶೇಖಮ್ಮ ವಾಣಿ.
ಕೊಪ್ಪಳ ತಾಲ್ಲೂಕಿನ ಕಲ್ಲ ತಾವರಗೇರಾ ಗ್ರಾಮದಲ್ಲಿ ಬಂಡೆಯ ಮೇಲೆ ಕೃಷಿ ಮಾಡಿ ಬಂಪರ್‌ ಲಿಂಬೆ ಬೆಳೆದ ಶೇಖಮ್ಮ ವಾಣಿ

ಕೊಪ್ಪಳ ತಾಲ್ಲೂಕಿನ ಕಲ್ಲ ತಾವರಗೇರಾ ಗ್ರಾಮದಲ್ಲಿ ಬಂಡೆಯ ಮೇಲೆ ಕೃಷಿ ಮಾಡಿ ಬಂಪರ್‌ ಲಿಂಬೆ ಬೆಳೆದ ಶೇಖಮ್ಮ ವಾಣಿ 

–ಪ್ರಜಾವಾಣಿ ಚಿತ್ರಗಳು/ಭರತ್‌ ಕಂದಕೂರ

ಕಲ್ಲ ತಾವರಗೇರಾ ಗ್ರಾಮದಲ್ಲಿ ಹೊಲದಲ್ಲಿರುವ ಬಂಡೆಗಳ ಮೇಲೆ ಮಣ್ಣು ಹಾಕಿರುವುದು
ಕಲ್ಲ ತಾವರಗೇರಾ ಗ್ರಾಮದಲ್ಲಿ ಹೊಲದಲ್ಲಿರುವ ಬಂಡೆಗಳ ಮೇಲೆ ಮಣ್ಣು ಹಾಕಿರುವುದು
ಕಲ್ಲು ತಾವರಗೇರಾ ಗ್ರಾಮದಲ್ಲಿ ಬಂಡೆಗಳ ಮೇಲೆ ಶೇಖಮ್ಮ ವಾಣಿ ಅರಳಿಸಿದ ಹಸಿರ ಸಿರಿ
ಕಲ್ಲು ತಾವರಗೇರಾ ಗ್ರಾಮದಲ್ಲಿ ಬಂಡೆಗಳ ಮೇಲೆ ಶೇಖಮ್ಮ ವಾಣಿ ಅರಳಿಸಿದ ಹಸಿರ ಸಿರಿ
ಬಂಡೆಗಳ ಮೇಲೆ ಅರಳಿದ ಹಸಿರ ಸಿರಿಯಲ್ಲಿ ಶೇಖಮ್ಮ ವಾಣಿ ಕೃಷಿ ಕಾಯಕ
ಬಂಡೆಗಳ ಮೇಲೆ ಅರಳಿದ ಹಸಿರ ಸಿರಿಯಲ್ಲಿ ಶೇಖಮ್ಮ ವಾಣಿ ಕೃಷಿ ಕಾಯಕ
ಕಲ್ಲು ಬಂಡೆಯ ಕರಗಿಸಿ ಹಸಿರು ಕಂಗೊಳಿಸುವಂತೆ ಮಾಡಿದ ಶೇಖಮ್ಮ ಹಾಗೂ ಹುಚ್ಚಪ್ಪ ವಾಣಿ ದಂಪತಿ
ಕಲ್ಲು ಬಂಡೆಯ ಕರಗಿಸಿ ಹಸಿರು ಕಂಗೊಳಿಸುವಂತೆ ಮಾಡಿದ ಶೇಖಮ್ಮ ಹಾಗೂ ಹುಚ್ಚಪ್ಪ ವಾಣಿ ದಂಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT