ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರಬೆಳೆಯಲ್ಲಿ ಕಾಫಿ ಪರಿಮಳ

Last Updated 22 ಜುಲೈ 2019, 19:30 IST
ಅಕ್ಷರ ಗಾತ್ರ

ಕೊಡಗು, ಚಿಕ್ಕಮಗಳೂರಿನಂತಹ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಕಾಫಿ ಬೆಳೆಯುವುದು ಸಾಮಾನ್ಯ. ಆದರೆ, ಮಂಡ್ಯ ಜಿಲ್ಲೆಯ ರೈತರೊಬ್ಬರು ವೈವಿಧ್ಯಮಯ ತೋಟಗಾರಿಕಾ ಬೆಳೆಗಳ ನಡುವೆ ಕಾಫಿ ಕೃಷಿ ಮಾಡಿದ್ದಾರೆ. ಇದು ಅವರ ಮೊದಲ ಪ್ರಯತ್ನ. ಒಂದು ಹಂತದ ಕೊಯ್ಲು ಮುಗಿಸಿ, ಕಾಫಿ ಬೀಜವನ್ನು ಮಾರಾಟ ಮಾಡಿದ ಖುಷಿಯಲ್ಲಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕು ಕೆಆರ್‌ಎಸ್ ಜಲಾಶಯದ ದಡದಲ್ಲಿರುವ ಪಾಲಹಳ್ಳಿ ಗ್ರಾಮದ ಸಿ.ದೇವರಾಜು ಕಾಫಿ ಬೆಳೆಯುತ್ತಿರುವ ರೈತರು.

ಒಟ್ಟು ಐದು ಎಕರೆ ಜಮೀನಿನಲ್ಲಿ ಎರಡೂವರೆ ಎಕರೆ ರೋಬೊಸ್ಟಾ ಮತ್ತು ಅರೆಬಿಕಾ ತಳಿಯ ಕಾಫಿ ಬೆಳೆದಿದ್ದಾರೆ. ಒಟ್ಟು 1300 ಗಿಡಗಳಿವೆ. ಈಗ ಮೊದಲ ಕೊಯ್ಲು ಮುಗಿದಿದೆ. ನಾಲ್ಕು ಮೂಟೆ ಕಾಫಿ ಬೀಜಗಳನ್ನು ಮಡಿಕೇರಿ ಸಮೀಪದ ಕುಶಾಲನಗರದಲ್ಲಿ ಮಾರಾಟ ಮಾಡಿದ್ದಾರೆ. ₹15 ಸಾವಿರ ಆದಾಯವೂ ಬಂದಿದೆ.

ದೇವರಾಜು ಅವರು ಮೂಲತಃ ತೋಟಗಾರಿಕಾ ಬೆಳೆಗಾರರು. ತೋಟದಲ್ಲಿ ಹತ್ತಕ್ಕೂ ಹೆಚ್ಚು ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಉಳಿದ ಜಮೀನಿನಲ್ಲಿ ಕಬ್ಬು, ಭತ್ತ ಬೆಳೆಯುತ್ತಿದ್ದಾರೆ.

ಸದ್ಯ ತೋಟದಲ್ಲಿ ಮುನ್ನೂರು ಪಚ್ಚಬಾಳೆ, ಒಂದು ನೂರು ಅಡಿಕೆ, ಅರವತ್ತು ಸಪೋಟ, ನೂರು ಪಪ್ಪಾಯ ಗಿಡಗಳಿವೆ. ಇದರ ಜತೆಗೆ ಅರವತ್ತು ತೆಂಗು, ಐವತ್ತು ಏಲಕ್ಕಿ ಬಾಳೆ ಗಿಡಗಳಿವೆ.

ಅಡಿಕೆ ಮರಕ್ಕೆ ಕಾಳು ಮೆಣಸಿನ ಬಳ್ಳಿಗಳನ್ನು ಹಬ್ಬಿಸಿದ್ದಾರೆ. ತೋಟದ ಇನ್ನೊಂದು ಭಾಗದಲ್ಲಿ ಸೀಬೆ ಹಣ್ಣಿನ ಮರಗಳಿವೆ.

ಜತೆಗೆ ನಿಂಬೆ, ಕಿತ್ತಳೆ, ಬಟರ್ ಫ್ರೂಟ್, ಮಾವು, ದಾಳಿಂಬೆ, ಏಲಕ್ಕಿ ಗಿಡಗಳಿವೆ. ಈ ಪೈಕಿ ಅಡಿಕೆ, ತೆಂಗು, ಸಪೋಟ, ಕಾಳು ಮೆಣಸು, ಪಪ್ಪಾಯ, ಮಾವು ಫಲ ಕೊಡುತ್ತಿವೆ. ತೋಟದ ಬದುಗಳ ಮೇಲೆ ನೂರು ತೇಗ, ಅರವತ್ತು ಸಿಲ್ವರ್ ಮರಗಳು ಬೆಳೆಯುತ್ತಿವೆ.

ಎಲ್ಲ ತೋಟಗಾರಿಕೆ ಬೆಳೆಗಳು ಸೊಂಪಾಗಿ ಬೆಳೆದಿವೆ. ಈ ಬೆಳೆಗಳು ಕಾಫಿ ಗಿಡಗಳಿಗೆ ಅಗತ್ಯವಾದ ನೆರಳು ಸೃಷ್ಟಿಸಿವೆ. ಅವುಗಳು ಉದುರಿಸುವ ಎಲೆಗಳು, ಮಣ್ಣಿಗೆ ಗೊಬ್ಬರವಾಗಿ, ಮುಚ್ಚಿಗೆಯಾಗಿ ತೇವಾಂಶವನ್ನೂ ಕಾಪಾಡುತ್ತಿವೆ. ಹಾಯಿ ನೀರು ಪದ್ಧತಿಯಲ್ಲಿಯೇ ಕಾಫಿ ಕೃಷಿ ಮಾಡುತ್ತಿದ್ದಾರೆ. ‘ಕಾಫಿ ಬೆಳೆ ಚೆನ್ನಾಗಿ ಬರುವುದರಲ್ಲಿ ಇವೆಲ್ಲದರ ಪಾತ್ರವಿದೆ’ ಎನ್ನುವುದು ಅವರ ಅಭಿಪ್ರಾಯ.

ಮೊದಲು ತೋಟಗಾರಿಕಾ ಬೆಳೆ ಪ್ರಧಾನ ತೋಟವಾಗಿದ್ದ ದೇವರಾಜು ಅವರ ತೋಟ, ಮೂರು ವರ್ಷಗಳಿಂದ ಕಾಫಿ ಪ್ರಧಾನ ತೋಟದಂತಾಗಿದೆ. ಕಾಫಿಯ ಆದಾಯದ ಜತೆಗೆ, ತೆಂಗಿನಕಾಯಿ ಮತ್ತು ಎಳನೀರಿನಿಂದ ವರ್ಷಕ್ಕೆ ₹60 ಸಾವಿರ ಆದಾಯ ಪಡೆಯುತ್ತಿದ್ದಾರೆ. ಸಪೋಟ ಗಿಡಗಳನ್ನು ವರ್ಷಕ್ಕೆ ಗುತ್ತಿಗೆ ಕೊಡುತ್ತಾರೆ. ರೆಡ್ ಲೇಡಿ ತಳಿಯ ಪಪ್ಪಾಯ ಗಿಡಗಳು ಈವರೆಗೆ ₹20 ಸಾವಿರ ಹಣ ತಂದು ಕೊಟ್ಟಿವೆ. ಇನ್ನೂ ಫಲ ಕೊಡುತ್ತಲೇ ಇವೆ. ಅಡಿಕೆ ಮರ ಮತ್ತು ಅವುಗಳಿಗೆ ಹಬ್ಬಿರುವ ಕಾಳು ಮೆಣಸು ಬಳ್ಳಿಗಳು ಗೊಂಚಲು ಗೊಂಚಲಾಗಿ ಫಲ ನೀಡಲಾರಂಭಿಸಿವೆ.

ಒಂದೇ ಕೊಳವೆಬಾವಿ

ಐದು ಎಕರೆ ತೋಟ ನಿರ್ವಹಣೆಗಾಗಿ ಇರುವುದು ಒಂದೇ ಒಂದು ಕೊಳವೆಬಾವಿ. 300 ಅಡಿ ಆಳವಿದೆ. ಎರಡೂವರೆ ಇಂಚು ನೀರು ಇದೆ. ಲಭ್ಯವಾಗುವ ನೀರನ್ನೇ ಮಿತವಾಗಿ ಬಳಸುತ್ತಾರೆ. ಕಾಫಿಗೆ ಸ್ಪ್ರಿಂಕ್ಲರ್ ಮೂಲಕ ನೀರು ಹನಿಸುತ್ತಾರೆ. ಉಳಿದ ಬೆಳೆಗಳಿಗೆ ಡ್ರಿಪ್‌ ಮಾಡಿಸಿದ್ದಾರೆ. ಇಡೀ ತೋಟಕ್ಕೆ ಮುಚ್ಚಿಗೆ ಮಾಡುವುದರಿಂದ ಮಳೆನೀರು ಬಿದ್ದಲ್ಲೇ ಇಂಗುತ್ತದೆ. ಸ್ಪ್ರಿಂಕ್ಲರ್‌ ಮತ್ತು ಡ್ರಿಪ್‌ ಜತೆಗೆ ನೆಲ ಮುಚ್ಚಿಗೆಯಿಂದಾಗಿ ತೇವಾಂಶ ರಕ್ಷಣೆಯಾಗುತ್ತದೆ. ಇವೆಲ್ಲ ಕಾಫಿ ಬೆಳೆ ಉತ್ತಮವಾಗಿ ಬರಲು ಕಾರಣವಾಗಿವೆ.

‘ವರ್ಷಕ್ಕೊಮ್ಮೆ ಯಥೇಚ್ಚವಾಗಿ ತಿಪ್ಪೆಗೊಬ್ಬರ ಕೊಡುತ್ತೇನೆ. ಕಾಫಿ ಮತ್ತು ಬಾಳೆ ಬೆಳೆಗಳಿಗೆ ಮಾತ್ರ ಅಲ್ಪ ಪ್ರಮಾಣದಲ್ಲಿ ರಸಗೊಬ್ಬರ ಉಪಯೋಗಿಸಿದ್ದೇವೆ. ಆದರೆ, ಕೀಟನಾಶಕ ಬಳಕೆ ಇಲ್ಲ. ಬೆಳೆ ವೈವಿಧ್ಯ ಹೆಚ್ಚಾಗಿರುವ ಕಾರಣ, ಬೆಳೆಗಳಿಗೆ ರೋಗ–ಕೀಟಬಾಧೆ ತುಸು ಕಡಿಮೆ’ ಎನ್ನುತ್ತಾರೆ ದೇವರಾಜು.

‘ಕಾಫಿ ಗಿಡಗಳನ್ನು ನಾಟಿ ಮಾಡಿದ ಆರಂಭದ ದಿನಗಳಲ್ಲಿ ಬೆಳೆ ಬರುತ್ತದೆಯೋ ಇಲ್ಲವೋ ಎಂಬ ಆತಂಕವಿತ್ತು. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಸ್ವಲ್ಪ ನೆರವಾಯಿತು. ಸದ್ಯ ಎಲ್ಲ ಕಾಫಿ ಗಿಡಗಳು ಚೆನ್ನಾಗಿ ಬೆಳೆಯುತ್ತಿದ್ದು, ರೋಗದಿಂದ ಮುಕ್ತವಾಗಿವೆ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ದೇವರಾಜ.

ಸದ್ಯಕ್ಕೆ ಮೂರು ವರ್ಷಗಳ ಹಿಂದೆ ಹಾಕಿರುವ ಈ ಗಿಡಗಳು ಇನ್ನೂ ಎಳಸು. ಹಾಗಾಗಿ ಸದ್ಯಕ್ಕೆ ಅಷ್ಟೇನೂ ಫಲ ಸಿಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಕಾಫಿ ಬೀಜದ ಇಳುವರಿ ಹೆಚ್ಚಲಿದೆ ಎಂಬ ವಿಶ್ವಾಸ ಅವರದ್ದು.

ಸಂಪರ್ಕಕ್ಕೆ ಮೊ: 99643 64350

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT