ಗುರುವಾರ , ನವೆಂಬರ್ 26, 2020
20 °C
ತುರುವೇಕೆರೆ: ರೋಗಕ್ಕೆ ಪೂರಕವಾದ ಮಳೆ ಹಾಗೂ ಮೋಡ ಕವಿದ ವಾತಾವರಣ

ತೊಗರಿಗೆ ಎಲೆ ತಿನ್ನುವ ಹುಳ ಬಾಧೆ

ಪಾಂಡುರಂಗಯ್ಯ ಎ. Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ತೊಗರಿ ಬೆಳೆಯಲ್ಲಿ ಎಲೆ ತಿನ್ನುವ ಹಾಗೂ ಗೂಡುಕಟ್ಟುವ ಹುಳದ ಬಾಧೆ ಕಾಣಿಸಿಕೊಂಡಿದ್ದು, ತಾಲ್ಲೂಕಿನ ರೈತರ ಆತಂಕ ಹೆಚ್ಚಿಸಿದೆ.

ತೊಗರಿಗೆ ಉತ್ತಮ ಬೆಲೆ ಇರುವುದರಿಂದ ತಾಲ್ಲೂಕಿನ ವಿವಿಧೆಡೆ ರಾಗಿ, ಅವರೆ, ಹರಳು, ಹುರುಳಿ, ಅಡಿಕೆ, ಬಾಳೆ, ತೆಂಗು, ತರಕಾರಿ ಮತ್ತು ಹೂವು ಬೆಳೆಗಳ ನಡುವೆ  ತೊಗರಿಯನ್ನು ಉಪಬೆಳೆಯಾಗಿ ಬೆಳೆಯಲಾಗುತ್ತಿದೆ. ಇನ್ನು ಕೆಲ ರೈತರು ಪ್ರಧಾನ ಬೆಳೆಯಾಗಿಯೂ ತೊಗರಿ ಬೆಳೆಯುತ್ತಿದ್ದಾರೆ.

ಕಸಬಾದಲ್ಲಿ 139, ದಂಡಿನಶಿವರ 102, ದಬ್ಬೇಘಟ್ಟ 65, ಮಾಯಸಂದ್ರದ 135 ಹೆಕ್ಟೇರ್‍ ಪ್ರದೇಶಗಳಲ್ಲಿ ತೊಗರಿ ಬಿತ್ತನೆಯಾಗಿದೆ. ಈ ವರ್ಷ ಜುಲೈನಲ್ಲಿ 12 ಕ್ವಿಂಟಲ್‍ ತೊಗರಿ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ವಿತರಿಸಲಾಗಿದೆ.

ಆಗಸ್ಟ್, ಸೆಪ್ಟಂಬರ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ತೊಗರಿ ಗಿಡ ಹುಲುಸಾಗಿ ಬೆಳೆದಿತ್ತು. ಆದರೆ ಈಗ ಎಲೆತಿನ್ನುವ ಹುಳ ಕಾಣಿಸಿಕೊಂಡು, ಗಿಡದ ಎಲೆಯಲ್ಲಿ ಅಲ್ಲಲ್ಲಿ ತಿನ್ನುತ್ತಾ ಬಂದಿದೆ. ಎಲೆಗಳಲ್ಲಿ ರಂಧ್ರವಾಗಿರುವುದರಿಂದ ಗಿಡದ ಬೆಳವಣಿಗೆ ಕುಂಠಿತವಾಗಿದೆ. ಮತ್ತೆ ಕೆಲ ಗಿಡಗಳು ಒಣಗಲು ಶುರುವಾಗಿದೆ. ಇನ್ನು ಕೆಲವೆಡೆ ‘ನಂಜಾಣು ಬಂಜೆ’ ರೋಗ ಬಾಧೆಯೂ ರೈತರನ್ನು ಕಂಗೆಡಿಸಿದೆ.

ತೊಗರಿ 4 ತಿಂಗಳ ಬೆಳೆಯಾಗಿದ್ದು, ಕೆಲವೆಡೆ ಮಂಚಿತವಾಗಿ ರೈತರು ಭಿತ್ತನೆ ಮಾಡಿದ್ದು, ಗಿಡ ಹೂವು ಕಟ್ಟುವ ಹಂತಕ್ಕೆ ತಲುಪಿದೆ. ಅಕ್ಟೋಬರ್‌ನಲ್ಲಿ ತಾಲ್ಲೂಕಿನಲ್ಲಿ ಮಳೆ ಬೀಳುವ ಪ್ರಮಾಣ ಹೆಚ್ಚಾಗಿದ್ದು ಮೋಡ ಕವಿದ ವಾತಾವರಣ ಇರುವುದರಿಂದ ‘ಕಾಯಿಕೊರಕ’ ಹುಳುಗಳ ಬಾಧೆ ಹೆಚ್ಚಾಗಿದೆ. ಹೂವಿನ ಮೊಗ್ಗನ್ನು ಹುಳ ತಿನ್ನುತ್ತಿರುವುದರಿಂದ ಇಳುವರಿ ಕಡಿಮೆಯಾಗಲಿದೆ ಎಂದು ರೈತ ವೆಂಕಟಪ್ಪ ಆತಂಕ ವ್ಯಕ್ತಪಡಿಸಿದರು.

ನಿಯಂತ್ರಣ ಹೇಗೆ: ತೊಗರಿ ಎಲೆ ಹುಳು ತಿನ್ನುವ ರೋಗ ನಿಯಂತ್ರಣಕ್ಕೆ ಕ್ಲೋರೋ ಫೈರಿಪಾಸ್‍ ಔಷಧವನ್ನು ಒಂದು ಲೀಟರ್‌ಗೆ 1 ಎಂಎಲ್‍ ಔಷಧಿ, ಸುರಳಿ ಅಥವಾ ಕಾಯಿಕೊರಕ ರೋಗಕ್ಕೆ 1 ಲೀಟರ್‍ ನೀರಿಗೆ ನುವಾನ್‍ 1 ಎಂ.ಎಲ್‍, ನಂಜಾಣು ಬಂಜೆ ರೋಗಕ್ಕೆ 1ಲೀಟರ್‍ ನೀರಿಗೆ ಅರ್ಧ ಎಂಎಲ್‍ ಔಷಧಿ ಸೇರಿಸಿ ಸಿಂಪಡಿಸಬೇಕು. ಈ ಔಷಧಿಗಳು ರೈತಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಪ್ರಮೋದ್‍ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.