ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ಕೆಸರಲ್ಲೇ ರಾಶಿ ಮಾಡುತ್ತಿರುವ ರೈತರು!

ಮಳೆ ಬಿಡುವು ನೀಡಿದರೂ ಕೂಡ ಹೊಲಗಳಲ್ಲಿ ನಿಂತ ನೀರು
Last Updated 1 ಅಕ್ಟೋಬರ್ 2020, 8:44 IST
ಅಕ್ಷರ ಗಾತ್ರ

ಔರಾದ್: ಎರಡು–ಮೂರು ದಿನಗಳಿಂದ ಮಳೆ ಬಿಡುವು ನೀಡಿದರೂ ಕೂಡ ಹೊಲಗಳಲ್ಲಿ ನೀರು ನಿಂತಿದೆ. ಬಹಳ ಕಷ್ಟಪಟ್ಟು ಬೆಳೆದ ಬೆಳೆ ನೀರು ಪಾಲಾಗುವುದನ್ನು ರೈತರಿಗೆ ಸಹಿಸಲಾಗುತ್ತಿಲ್ಲ. ಬಹಳಷ್ಟು ರೈತರು ಬಂದಷ್ಟು ಬರಲಿ ಎಂದು ಕೆಸರಲ್ಲೇ ರಾಶಿ ಮಾಡುವಲ್ಲಿ ನಿರತರಾಗಿದ್ದಾರೆ.

ಕಳೆದ ಒಂದು ವಾರ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನ ರೈತ ವರ್ಗಕ್ಕೆ ಹೆಚ್ಚಿನ ಹಾನಿಯಾಗಿದೆ. ಕಟಾವಿಗೆ ಬಂದ ಉದ್ದು, ಹೆಸರು, ಸೋಯಾ ನೀರಿನಲ್ಲಿ ಕೊಚ್ಚಿ ಹೋಗಿದೆ. ನೀರಿನಲ್ಲಿ ಮುಳುಗಿದ ಉದ್ದು, ಹೆಸರಿನ ಕಾಯಿ ಕಟ್ಟಿಗೆ ಮಂಚದ (ಹೊರಸು) ಮೇಲೆ ಹಾಕಿ ನೀರು ಜಾರಿದ ನಂತರ ತೆಗೆದು ಒಣಗಿಸುತ್ತಿದ್ದಾರೆ.

‘ನಮ್ಮ ಊರಿನ ಪಕ್ಕದಲ್ಲಿ ಕೆರೆ ಇದೆ. ಮೊದಲೇ ಮಳೆ ಜಾಸ್ತಿಯಾಗಿ ಹೊಲದಲ್ಲಿ ನೀರು ನಿಂತಿದೆ. ಇನ್ನು ಕೆರೆ ತುಂಬಿ ಅದರ ನೀರು ಪಕ್ಕದ ಹೊಲಗಳಿಗೆ ನುಗ್ಗಿದೆ. ಹೀಗಾಗಿ ಬೆಳೆದು ನಿಂತ ಉದ್ದು, ಹೆಸರಿಗೆ ಕುತ್ತು ಬಂದಿದೆ. ಸಾಲ ತಂದು ಬಿತ್ತನೆ ಮಾಡಲಾಗಿತ್ತು. ಈಗ ರಾಶಿ ಆಗುವ ಹೊತ್ತಿಗೆ ಸಮಸ್ಯೆಯಾಗಿದೆ. ಬಂದಷ್ಟು ಬರಲಿ ಎಂದು ತೆಗಂಪುರ, ಯನಗುಂದಾ ಸೇರಿದಂತೆ ಈ ಭಾಗದ ರೈತರು ಕಳೆದ ಎರಡು ದಿನಗಳಿಂದ ಕೆಸರು, ಮಳೆಯಲ್ಲೇ ರಾಶಿ ಮಾಡುತ್ತಿದ್ದಾರೆ’ ಎಂದು ತೇಗಂಪುರ ಗ್ರಾಮದ ಶರಣಪ್ಪ ಚಿಟ್ಮೆ ಹೇಳುತ್ತಾರೆ.

‘ತಾಲ್ಲೂಕಿನಲ್ಲಿ ಯಾವುದೇ ನೀರಾವರಿ ಯೋಜನೆ ಇಲ್ಲದೆ ರೈತರು ಮುಂಗಾರು ಬೆಳೆ ಮೇಲೆ ಅವಲಂಬಿಸಿದ್ದಾರೆ. ಆದರೆ ಭಾರಿ ಮಳೆಯಿಂದ ಉದ್ದು, ಹೆಸರು, ಜೋಳ, ತೊಗರಿ ಸೇರಿದಂತೆ ಪ್ರಮುಖ ಬೆಳೆಗಳು ಪೂರ್ಣವಾಗಿ ಹಾಳಾಗಿವೆ. ಕೆಲಬೆಳೆಗಳು ಕೊಚ್ಚಿಕೊಂಡು ಹೋದರೆ, ಇನ್ನು ಕೆಲವು ಬೆಳೆಗಳು ಹೊಲದಲ್ಲಿ ನೀರು ನಿಂತು ಹಾಳಾಗುತ್ತಿವೆ. ಇದರಿಂದ ರೈತರು ಕಂಗಾಲಾಗಿ ಚಿಂತಿತರಾಗಿದ್ದಾರೆ’ ಎಂದು ರೈತ ಮುಖಂಡ ಶ್ರೀಮಂತ ಬಿರಾದಾರ ಕಳವಳ ವ್ಯಕ್ತಪಡಿಸುತ್ತಾರೆ.

‘ಸರ್ವೆ ಮಾಡುವುದು, ತಂಡ ಬಂದು ಪರಿಶೀಲಿಸುವುದು, ಆರು ತಿಂಗಳು ಅಥವಾ ವರ್ಷದ ನಂತರ ಪರಿಹಾರ ನೀಡಿದರೆ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಮೀನ-ಮೇಷ ಎಣಿಸದೇ ತಕ್ಷಣ ಮಧ್ಯಂತರ ಪರಿಹಾರ ನೀಡಬೇಕು’ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಬಾವುಗೆ ಆಗ್ರಹಿಸಿದರು.

‘ಈಗಾಗಲೇ ಪ್ರಾಥಮಿಕ ಸರ್ವೆ ಆಗಿದೆ. ಉದ್ದು, ಹೆಸರು, ಸೋಯಾ, ತೊಗರಿ, ಜೋಳ ಸೇರಿದಂತೆ ತಾಲ್ಲೂಕಿ ನಲ್ಲಿ 42 ಸಾವಿರ ಹೆಕ್ಟೇರ್ ಪ್ರದೇಶ ದಲ್ಲಿ ಬೆಳೆ ಹಾನಿಯಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಅಬ್ದುಲ್ ಮಾಜೀದ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT