ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತು ಗೆದ್ದ ಕೃಷಿ ಉದ್ಯಮಿ ಕವಿತಾ ಮಿಶ್ರಾ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 27 ಜನವರಿ 2020, 10:21 IST
ಅಕ್ಷರ ಗಾತ್ರ

ನಾನು ಧಾರವಾಡದ ಮಗಳು. ಓದಿದ್ದು ಸಾಫ್ಟ್‌ವೇರ್‌ ಎಂಜಿನಿಯರಿಂಗ್‌. 25 ವರ್ಷಗಳ ಹಿಂದೆ ರಾಯಚೂರು ಜಿಲ್ಲೆಯ ಕವಿತಾಳಕ್ಕೆ ಮದುವೆ ಮಾಡಿಕೊಟ್ಟರು. ಅಸ್ತಿತ್ವವೇ ಇಲ್ಲದ ಊರು ಕವಿತಾಳ. ಆದರೆ ನನ್ನಲ್ಲಿ ಸಾಮರ್ಥ್ಯವಿತ್ತು.

ನನ್ನನ್ನು ಮದುವೆ ಮಾಡಿಕೊಟ್ಟ ಮೇಲೆ ಬಹುರಾಷ್ಟ್ರೀಯ ಕಂಪನಿಯಲ್ಲಿ ನೌಕರಿ ಸಿಕ್ಕಿತು. ನಾನು ನೌಕರಿಗೆ ಹೋಗುವುದಾಗಿ ನನ್ನ ಗಂಡನಲ್ಲಿ ಹೇಳಿದಾಗ, ಅವರು ನನ್ನ ಸಂದರ್ಶನ ಪತ್ರವನ್ನೇ ಹರಿದು ಹಾಕಿದರು. ಹೊಲ ಮನಿ ನೋಡ್ಕೊ ಸಾಕು ಅಂದ್ರು. ಅಮ್ಮನ ಕೇಳಿದೆ; ಅಮ್ಮ ನೀನು ಬರುವುದಾದರೆ ನಾನು ಬೆಂಗಳೂರಿನಲ್ಲಿ ನೌಕರಿ ಮಾಡ್ತೇನೆ ಎಂದು. ಅದಕ್ಕವರು ಕೊಟ್ಟ ಉತ್ತರ–ಹೆಣ್ಣು ಕುಲಕ್ಕೆ ಹೊರಗೆ. ನೀನು ನಿನ್ನ ಗಂಡನ ಮನೆಯಲ್ಲಿ ಹೇಗೆ ಹೇಳುತ್ತಾರೋ ಹಾಗೇ ಮಾಡು ಅಂದರು.

ಬೇರೆ ದಾರಿಯಿರದೇ ಹೊಲದಲ್ಲಿ ಕೃಷಿ ಕೆಲಸ ಮಾಡೋದು ಅನಿವಾರ್ಯವಾಯಿತು. ಕಲ್ಲುಗಳೇ ತುಂಬಿದ 22 ಎಕರೆ ಬರಡು ಹೊಲದಲ್ಲಿ 45 ಡಿಗ್ರಿ ಟೆಂಪರೇಚರ್‌ನಲ್ಲಿ ನಾನು ದುಡಿದೆ. ಗಂಡ ಹೊತ್ತಿಸಿದ ಕೃಷಿಯ ಕಿಡಿ ನನ್ನ ಮನದಲ್ಲಿ ಅದಾಗಲೇ ಹೊತ್ತಿಕೊಂಡಿತ್ತು. 12 ಬೋರ್‌ ಹೊಡೆಸಿದರೂ ನೀರು ಸಿಗಲಿಲ್ಲ. 13ನೇ ಬೋರ್‌ಗೆ ಒಂದೂವರೆ ಇಂಚು ನೀರು ಬಂತು.

ದಾಳಿಂಬೆ ಬೇಸಾಯಕ್ಕೆ ಕೈಹಾಕಿದೆ. ಮೊದಲ ಬೆಳೆಯಲ್ಲೇ ಆರು ಲಕ್ಷ ಆದಾಯ ಕೈಸೇರಿತು. ನಾನು ನೌಕರಿಗೆ ಹೋಗಿದ್ದರೆ ಅಲ್ಲಿ ಸಿಗುವುದಕ್ಕಿಂತಲೂ ಹೆಚ್ಚು ವರಮಾನ ಕೃಷಿಯಲ್ಲಿ ಸಿಕ್ಕಿತು. ಆ ಆದಾಯ 2ನೇ ಬೆಳೆಯಲ್ಲಿ ₹18 ಲಕ್ಷಕ್ಕೇರಿತು. 6ನೇ ಬೆಳೆಯಲ್ಲಿ ₹23 ಲಕ್ಷಕ್ಕೇರಿತು. ವಿದೇಶಗಳಿಗೆ ನಾನು ಬೆಳೆದ ದಾಳಿಂಬೆ ಸಾಗಿತು. ₹50 ಲಕ್ಷ ಆದಾಯ ಗಳಿಕೆ ನನ್ನ ಮುಂದಿತ್ತು. ಕೈಯಲ್ಲಿದ್ದ ಎಲ್ಲ ಹಣದ ಜೊತೆ ಸಾಲದ ಮೊತ್ತ ಸೇರಿಸಿ ದಾಳಿಂಬೆ ಬೆಳೆಗೆ ಸುರಿದೆ. ಕೆಲವು ಕಡೆಗಳಿಂದ ದಾಳಿಂಬೆ ರಿಜೆಕ್ಟ್‌ ಆಗಿ ವಾಪಸ್‌ ಬಂದವು. ಗುಡ್ಡದಿಂದ ಜಾರಿ ಕೆಳಗೆ ಬಿದ್ದ ಅನುಭವ ನನಗಾಯಿತು. ಸಾಲಗಾರರು ಬೆನ್ನತ್ತಿದರು. ಸಂಬಂಧಿಗಳು ದೂರ ಉಳಿದರು. ಆಗ ನಾನು ಆತ್ಮಹತ್ಯೆಗೆ ಪ್ರಯತ್ನಿಸಿದೆ. ಸಾವನ್ನು ಸಮೀಪದಿಂದ ಕಂಡು ಬಂದು ಇಂದು ನಿಮ್ಮ ಮುಂದೆ ನಿಂತಿದ್ದೇನೆ. ಆ ಸಂದಿಗ್ಧ ಸಮಯದಲ್ಲಿ ನನ್ನ ಕೈ ಹಿಡಿದವರು ನನ್ನ ಗಂಡ. ಎಲ್ಲರೂ ನನ್ನ ಮೇಲೆ ವಿಶ್ವಾಸ ಕಳೆದು
ಕೊಂಡಾಗ ನನ್ನ ಗಂಡ ನನ್ನ ಮೇಲೆ ವಿಶ್ವಾಸವಿಟ್ಟರು. ನಾನು ನನ್ನ ತಪ್ಪನ್ನು ತಿದ್ದಿಕೊಂಡೆ.

ಶ್ರೀಗಂಧ, ಮಾವು, ಪೇರು, ಕರಿಬೇವು, ಸೀಬೆ, ನೇರಳೆ ಜೊತೆ ಕುರಿ, ಕೋಳಿ ಸಾಕಾಣಿಕೆ ಮಾಡಿದೆ. ಪರಿಸ್ಥಿತಿಗಳ ವಿರುದ್ಧ ಸಾಗದೇ, ಪರಿಸ್ಥಿತಿಗಳ ಜೊತೆಗೇ ಸಾಗಬೇಕು ಎಂಬುದನ್ನೂ ಕಂಡುಕೊಂಡೆ. ಅದಕ್ಕಾಗಿ ನಾನು ಋತುಮಾನದ ಬೆಳೆ ಅನುಸರಿಸಿದೆ. ಶ್ರೀಗಂಧದ ಕೃಷಿ ಆರಂಭಿಸಿದೆ. ಕೃಷಿಕರನ್ನು ಕೋಟ್ಯಧಿಪತಿಗಳಾಗಿಸುವ ಶಕ್ತಿ ಶ್ರೀಗಂಧ ಬೇಸಾಯಕ್ಕಿದೆ. ಜೀವಾಮೃತ ಹಾಕಿ ಬೆಳೆಸಿದ ನನ್ನ ಶ್ರೀಗಂಧದ ನರ್ಸರಿಯಲ್ಲಿ ಒಂದೇ ಒಂದು ಶ್ರೀಗಂಧದ ಸಸಿ ಸತ್ತಿದ್ದಿಲ್ಲ. ಅಂಥ ಆರೋಗ್ಯವಂತ ಸಸಿಯನ್ನು ದೇಶದ ಎಲ್ಲ ರಾಜ್ಯಗಳಿಗೂ ಕಳಿಸಿದ್ದೇನೆ.

ನಾನು ನಡೆದುಬಂದ ದಾರಿ ಸುಖದ ಹಾದಿಯಾಗಿರಲಿಲ್ಲ. ನಾನಿಂದು ಕುರಿಗಳನ್ನು ಮೇಯಿಸಿಕೊಂಡು ಬರ್ತೇನೆ, ಕೋಳಿಗಳಿಗೆ ಕಾಳು ಹಾಕ್ತೇನೆ. ಕೆಲಸದವರ ಜೊತೆ ದುಡಿಯುತ್ತೇನೆ. ಮಣ್ಣಿನ ಜೊತೆ ಜೊತೆಯಾಗಿದ್ದಕ್ಕೆ ನನಗಿಂದು ಸನ್ಮಾನಗಳು ಸಿಕ್ಕಿವೆ. ನಾಲ್ಕು ರಾಷ್ಟ್ರ ಪ್ರಶಸ್ತಿ, ಒಂದು ಅಂತರ
ರಾಷ್ಟ್ರೀಯ ಪ್ರಶಸ್ತಿ, 16 ರಾಜ್ಯ ಪ್ರಶಸ್ತಿ ಜೊತೆಗೆ ಸ್ಥಳೀಯವಾಗಿ ಸಿಕ್ಕ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ.

ಕೊನೆಯದಾಗಿ ಹೇಳುವುದಿಷ್ಟೇ; ಯಾವುದೇ ಕೆಲಸ ಸಣ್ಣದಲ್ಲ. ಧರ್ಮ, ಕರ್ಮ ಎರಡೂ ನಮ್ಮ ರೈತರ ಮೇಲೇ ನಿಂತಿದೆ. ತೋಟಗಾರಿಕೆ ಜೊತೆ ಅರಣ್ಯ ಕೃಷಿ ಮಾಡಿದ್ದರೆ ನಿಜಕ್ಕೂ ಗೆಲುವು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT