ಶನಿವಾರ, ಫೆಬ್ರವರಿ 29, 2020
19 °C
ರಾಷ್ಟ್ರೀಯ ತೋಟಗಾರಿಕೆ ಮೇಳ | ಕೃಷಿಯನ್ನು ಉದ್ದಿಮೆಯಾಗಿಸಲು ತೋಟಗಾರಿಕೆ’

ವಿಡಿಯೊ ಸ್ಟೋರಿ | ಹಸಿರು ಕ್ಷೇತ್ರದ ಅನಂತ ಸಾಧ್ಯತೆಗಳ ಅನಾವರಣ

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ಆವರಣದಲ್ಲಿ ಇದೇ ಫೆ.5 ರಿಂದ 8ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳ ಆಯೋಜಿಸಲಾಗಿದೆ. ‘ಕೃಷಿಯನ್ನು ಉದ್ದಿಮೆಯನ್ನಾಗಿಸಲು ತೋಟಗಾರಿಕೆ’ ಎಂಬ ಶೀರ್ಷಿಕೆಯಡಿ ಮೇಳ ನಡೆಯುತ್ತಿದೆ. ಮೇಳದ ವೈಶಿಷ್ಟ್ಯಗಳ ಬಗ್ಗೆ ಐಐಎಚ್‌ಆರ್‌ ನಿರ್ದೇಶಕ ಎಂ.ಆರ್‌.ದಿನೇಶ್ ಅವರೊಂದಿಗೆ ನಡೆಸಿದ ಮಾತುಕತೆಯ ಸಂಕ್ಷಿಪ್ತ ರೂಪ ಇಲ್ಲಿದೆ.

* ಮೇಳದ ಉದ್ದೇಶ, ವೈಶಿಷ್ಟ್ಯ ಏನು ?

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು 52 ವರ್ಷಗಳಿಂದ ತೋಟಗಾರಿಕಾ ಕ್ಷೇತ್ರದಲ್ಲಿ ಕೈಗೊಂಡಿರುವ ಸಂಶೋಧನೆಯ ಫಲಿತಾಂಶವನ್ನು ರೈತರಿಗೆ, ಸಂಶೋಧಕರಿಗೆ, ಸಾರ್ವಜನಿಕರಿಗೆ ತಲುಪಿಸುವುದು ಮೇಳದ ಪ್ರಮುಖ ಉದ್ದೇಶ. ಜತೆಗೆ, ಕೃಷಿಯನ್ನು ಉದ್ದಿಮೆಯಾಗಿಸಲು ತೋಟಗಾರಿಕೆಯಲ್ಲಿ ಏನೆಲ್ಲ ಅವಕಾಶಗಳಿವೆ ಎಂಬುದನ್ನೂ ಇಲ್ಲಿ ಅನಾವರಣಗೊಳಿಸಲಾಗುತ್ತದೆ.

ಇದರ ಜತೆಗೆ ಹಣ್ಣು, ತರಕಾರಿ, ಅಲಂಕಾರಿಕ ಮತ್ತು ಔಷಧೀಯ ಸಸ್ಯಗಳನ್ನು ಪರಿಚಯಿಸಲು ಪ್ರದರ್ಶನ ತಾಕುಗಳಿವೆ. ತಾಕುಗಳನ್ನು ನೋಡುತ್ತಾ ವಿಜ್ಞಾನಿಗಳಿಂದ ಮಾಹಿತಿ ಪಡೆಯಬಹುದು. ಕೊಯ್ಲೋತ್ತರ ನಿರ್ವಹಣೆ, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ವಿಧಾನಗಳು, ಜೈವಿಕ ಗೊಬ್ಬರ, ಕೀಟನಿಯಂತ್ರಕಗಳ ಕುರಿತು ಅರಿಯಬಹುದು.

* ಪ್ರಸ್ತುತ ಮಳೆ ಪ್ರಮಾಣದಲ್ಲಿ ಏರುಪೇರು. ಅಂತರ್ಜಲದ ಸಮಸ್ಯೆ ತೀವ್ರವಾಗಿದೆ. ಈ ಹೊತ್ತಿನಲ್ಲಿ ಮೇಳಕ್ಕೆ ಬರುವ ರೈತರಿಗೆ ಯಾವ ರೀತಿಯ ಪರಿಹಾರ ಸಿಗಬಹುದು?

ಬರ ಮತ್ತು ಜೌಗು ವಾತಾವರಣಕ್ಕೆ (Water Shortage and Water logging) ಹೊಂದುವಂತಹ ತರಕಾರಿ ಹಾಗೂ ಹಣ್ಣಿನ ತಳಿಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಬೇರು ಸಸಿಗಳಿಂದ(Root Stock) ಅಭಿವೃದ್ಧಿಪಡಿಸಿರುವ ಈ ತಳಿಗಳು ನೀರು ಕಡಿಮೆಯಾದರೂ ಬೆಳೆಯುತ್ತವೆ. ನೀರು ಹೆಚ್ಚಾದರೂ ಅದನ್ನು ತಡೆದುಕೊಳ್ಳುತ್ತವೆ. ಜತೆಗೆ ಹನಿನೀರಾವರಿಯಲ್ಲೇ ಬೆಳೆಯುವ ತಳಿಗಳ ಬೆಳವಣಿಗೆ ನೋಡಬಹುದು. ನೀರು ನಿರ್ವಹಣೆ, ಮಣ್ಣಿನ ತೇವಾಂಶ ಸಂರಕ್ಷಣೆ ಬಗ್ಗೆ ಮಾಹಿತಿ ಪಡೆಯಬಹುದು. ಸಮಗ್ರ ಕೃಷಿ ಪದ್ಧತಿಯಲ್ಲಿ ಸೀತಾಫಲ, ನುಗ್ಗೆಕಾಯಿ, ನೆಲ್ಲಿಕಾಯಿಯಂತಹ ಬೆಳೆಗಳನ್ನು ಹೇಗೆಲ್ಲ ಜೋಡಿಸಬಹುದು ಎಂಬುದನ್ನು ಇಲ್ಲಿ ತಿಳಿಯಬಹುದು.

ಎಂ.ಆರ್.ದಿನೇಶ್, ನಿರ್ದೇಶಕರು ಐಐಎಚ್ಆರ್ ಹೇಸರಘಟ್ಟ

* ಕಾರ್ಮಿಕರ ಕೊರತೆ ನೀಗಿಸಲು ಸುಲಭ ಮತ್ತು ಸರಳ ಯಂತ್ರ–ತಂತ್ರಜ್ಞಾನಗಳು ಮೇಳದಲ್ಲಿ ನೋಡಬಹುದೇ?

ಕಾರ್ಮಿಕರ ಕೊರತೆ ತಗ್ಗಿಸುವುದಕ್ಕಾಗಿಯೇ ಯಂತ್ರೋಪಕರಣ ವಿಭಾಗದ ವಿಜ್ಞಾನಿಗಳು ಸಣ್ಣ ರೈತರಿಂದ ಹಿಡಿದು, ದೊಡ್ಡ ಹಿಡುವಳಿದಾರರಿಗೂ ಅನುಕೂಲವಾಗುವ ಹಲವು ಯಂತ್ರಗಳನ್ನು ಆವಿಷ್ಕರಿಸಿದ್ದಾರೆ. ಉದಾಹರಣೆಗೆ: ಈರುಳ್ಳಿಯ ಬೀಜ ನಾಟಿ ಮಾಡಲು ಕೈಚಾಲಿತ ಹಾಗೂ ಮೋಟಾರ್‌ ಚಾಲಿತ ಯಂತ್ರವಿದೆ. ಕಟಾವು ಮಾಡಿದ ಈರುಳ್ಳಿ ತುದಿ ಕತ್ತರಿಸಲು, ಈರುಳ್ಳಿ ಗೆಡ್ಡೆಗಳನ್ನು ಮೂರು ಹಂತಗಳಲ್ಲಿ ಗ್ರೇಡಿಂಗ್‌ ಮಾಡಲು ಯಂತ್ರಗಳಿವೆ. ಇಷ್ಟೇ ಅಲ್ಲ, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಪೂರಕವಾದ ಯಂತ್ರಗಳೂ ಮೇಳದಲ್ಲಿರುತ್ತವೆ.

* ರಾಸಾಯನಿಕ ರಹಿತ ಕೃಷಿ ಪದ್ಧತಿಗೆ ಪೂರಕವಾದ ಗೊಬ್ಬರ, ಕೀಟನಿಯಂತ್ರಕ, ಬೀಜದಂತಹ ಒಳಸುರಿಗಳ ಬಗ್ಗೆ ಮಾಹಿತಿ ಲಭ್ಯವಿದೆಯೇ?

ನಾವು ಅರ್ಕ ಮೈಕ್ರೋಬಿಯಂ ಕನ್ಸೋರ್ಟಿಯಂ(ಎಎಂಸಿ) ಎಂಬ ಜೈವಿಕ ಗೊಬ್ಬರ ಅಭಿವೃದ್ಧಿಪಡಿಸಿದ್ದೇವೆ. ಇದು ಪುಡಿ ಮತ್ತು ದ್ರಾವಣ ರೂಪದಲ್ಲಿದೆ. ಬೆಳೆಗಳಿಗೆ ಗೊಬ್ಬರವಾಗಿ ಮತ್ತು ರೋಗ ನಿಯಂತ್ರಕವಾಗಿ ಬಳಕೆಯಾಗುತ್ತದೆ. ಇದನ್ನು ಸಾಕಷ್ಟು ರೈತರು ಬಳಸಿ ಯಶ ಕಂಡಿದ್ದಾರೆ. ಚಿತ್ರದುರ್ಗ–ಪಾವಗಡ ಭಾಗದ ಕೆಲವು ರೈತರು ದಾಳಿಂಬೆ ಕೃಷಿಗೆ ಎಎಂಸಿ ಬಳಸಿ ಬ್ಯಾಕ್ಟೀರಿಯಲ್‌ ಬ್ಲೈಟ್ ನಿಯಂತ್ರಿಸಿದ್ದಾರೆ. ಇದರ ಜತೆಗೆ, ಕ್ಯಾಬೇಜ್‌ಗೆ ತಗುಲುವ ಕೀಟಬಾಧೆ ನಿಯಂತ್ರಿಸಲು ಬೇವಿನ ಟ್ಯಾಬ್ಲೆಟ್ ಅಭಿವೃದ್ಧಿಪಡಿಸಿದ್ದೇವೆ. ಅದನ್ನು ನೀರಿನಲ್ಲಿ ಮಿಶ್ರಣ ಮಾಡಿ, ಸಿಂಪಡಿಸುವುದರಿಂದ ಶೇ 90ರಷ್ಟು ಔಷಧ ಸಿಂಪಡಣೆ ಕಡಿಮೆ ಮಾಡಬಹುದು.ಇದರ ಜತೆಗೆ, ಸಮಗ್ರ ಕೀಟ, ರೋಗ ಹತೋಟಿ ಮಾಡುವ ವಿಧಾನಗಳಿವೆ. ಔಷಧ ಸಿಂಪಡಣೆಯಿಲ್ಲದೇ ಬೆಳೆಯುವಂತಹ ಹೂವಿನ ತಳಿಗಳು ಪ್ರದರ್ಶನದಲ್ಲಿರುತ್ತವೆ. ಜತೆಗೆ ಸಾವಯವ ಕೃಷಿಗೆ ಹೊಂದುವಂತಹ ತಳಿಗಳಿವೆ. ರೋಗ ನಿರೋಧಕ ಬೆಳೆ ಹಾಗೂ ತಳಿಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಮೇಳದಲ್ಲಿ ಈ ತಳಿಗಳ ಬಿತ್ತನೆ ಬೀಜಗಳ ಪ್ರದರ್ಶನ, ಮಾರಾಟವಿರುತ್ತದೆ.

* ಸಣ್ಣ ಹಿಡುವಳಿದಾರರು, ಮಳೆಯಾಶ್ರಿತ ಕೃಷಿಕರಿಗೆ ಯಾವುದಾದರೂ ಮಾದರಿಗಳನ್ನು ಅಭಿವೃದ್ಧಿಪಡಿಸಿದ್ದೀರಾ?

ಸಣ್ಣ ರೈತರು, ಮಳೆಯಾಶ್ರಿತ ರೈತರಿಗಾಗಿ ‘ಸೀಡ್‌ ಕ್ಲಸ್ಟರ್‌ ವಿಲೇಜ್‌’ ಯೋಜನೆ ಇದೆ. ಇದರ ಅಡಿ ರೈತರು ನಮ್ಮ ಸಂಸ್ಥೆಯಿಂದ ಬೀಜಗಳನ್ನು ಖರೀದಿಸಿ, ಬೀಜೋತ್ಪಾದನೆ ಮಾಡಬಹುದು. ಆ ಬೀಜಗಳನ್ನು ನಾವೇ ಖರೀದಿಸುತ್ತೇವೆ. ಈಗಾಗಲೇ ಕೆಲವು ರೈತರು ಈ ಯೋಜನೆಯಡಿ ತೊಡಗಿಸಿಕೊಂಡಿದ್ದಾರೆ. ಒಂದು ಎಕರೆಯಲ್ಲಿ ಬೆಳೆ ಬೆಳೆದು ಗಳಿಸಲಾಗದಷ್ಟು ಹಣವನ್ನು ಅರ್ಧ ಎಕರೆಯಲ್ಲಿ ಬೀಜೋತ್ಪಾದನೆ ಮಾಡಿ ಗಳಿಸಬಹುದು.

ಮಳೆಯಾಶ್ರಿತ ಕೃಷಿಗಾಗಿ ಅರ್ಕ ಸಹನಾ ಎಂಬ ಸೀತಾಫಲ ಹಣ್ಣಿನ ತಳಿ ಅಭಿವೃದ್ಧಿಪಡಿಸಿದ್ದೇವೆ. ಒಣ ಪ್ರದೇಶದಲ್ಲಿ ಸುಲಭವಾಗಿ ಬೆಳೆಯವ ತಳಿ ಇದು. ಸ್ವಲ್ಪ ನೀರಿನ ನೆರವಿದ್ದರೆ ಸುಗಂಧರಾಜ ಹೂವಿನ ಕೃಷಿ ಮಾಡಬಹುದು. ಇದರಲ್ಲಿ ಹೂವು ಹಾಗೂ ಗೆಡ್ಡೆಗಳನ್ನು ಬಿತ್ತನೆ ಬೀಜವಾಗಿ ಮಾರಾಟ ಮಾಡಬಹುದು. ಈ ಕುರಿತು ಮೇಳದಲ್ಲಿ ಮಾಹಿತಿ ನೀಡಲಾಗುತ್ತದೆ. 

ಮೇಳಕ್ಕೆ ಸಿದ್ಧತೆ

* ಬೆಳೆಯನ್ನು ಮಾರುಕಟ್ಟೆ ಮಾಡಲು ದಾರಿ ಯಾವುದಿದೆ?

ರಾಜ್ಯದಲ್ಲಿ ಹಲವು ರೈತ ಉತ್ಪಾದಕ ಸಂಸ್ಥೆಗಳಿವೆ (ಫಾರ್ಮ್‌ ಪ್ರೊಡ್ಯೂಸರ್ಸ್‌ ಕಂಪನಿ – ಎಫ್‌ಪಿಒ). ಇವು ಗೊಬ್ಬರ, ಬೀಜ ಮಾರಾಟ ಮಾಡುವ ಕೇಂದ್ರಗಳಷ್ಟೇ ಆಗದೇ, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡುವ ಕೇಂದ್ರಗಳಾಗಬೇಕು. ಈ ಹಿನ್ನೆಲೆಯಲ್ಲಿ ಆ ಸಂಸ್ಥೆಗಳಿಗೆ ಬೆಳೆಗಳನ್ನು ಮೌಲ್ಯವರ್ಧಿಸಿ, ಮಾರುಕಟ್ಟೆ ಮಾಡುವ ತರಬೇತಿ ನೀಡುತ್ತಿದ್ದೇವೆ. ಉತ್ಪನ್ನಗಳ ಮೌಲ್ಯವರ್ಧನೆಗಾಗಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಈ ತಂತ್ರಜ್ಞಾನಗಳನ್ನು ಬಳಸಿಕೊಂಡು ಉದ್ಯಮವನ್ನು ಆರಂಭಿಸಿರುವ ರೈತರು, ಕಂಪನಿಗಳು ಮೇಳಕ್ಕೆ ಬರುತ್ತಾರೆ.

ತರಕಾರಿ ಮಾರಾಟಕ್ಕೆ ಅನುಕೂಲವಾಗುವ ದೃಷ್ಟಿಯಿಂದ ’ಹವಾನಿಯಂತ್ರಿತ ಸಂಚಾರಿ ಮಾರುಕಟ್ಟೆ’ ಅಭಿವೃದ್ಧಿಪಡಿಸಿದ್ದೇವೆ. ಇದರಲ್ಲಿ ಒಂದು ವ್ಯಾನ್‌ಗೆ ಸೋಲಾರ್‌ ವಿದ್ಯುತ್ ಆಧಾರಿತ ಹವಾನಿಯಂತ್ರಣ ಸೌಲಭ್ಯ ಅಳವಡಿಸಿದ್ದೇವೆ. ಹೂವು, ಹಣ್ಣು ,ತರಕಾರಿಗಳನ್ನು ಎರಡು ದಿನ ಕಾಪಿಟ್ಟು ಮಾರಾಟ ಮಾಡಲು ವ್ಯವಸ್ಥೆ ಇದೆ. ರೈತರು ‘ಎಫ್‌ಪಿಒ’ ಮೂಲಕ ಈ ವ್ಯಾನ್ ಖರೀದಿಸಿ, ಮಾರುಕಟ್ಟೆ ಆರಂಭಿಸಬಹುದು. ಮೇಳದಲ್ಲಿ ಈ ವಾಹನ ಪ್ರದರ್ಶನವಿರುತ್ತದೆ.

ಸಣ್ಣ ರೈತರು, ಸಣ್ಣ ವ್ಯಾಪಾರಸ್ಥರಿಗೂ ಅನುಕೂಲವಾಗುವ ‘ಸೈಕಲ್‌ ಕಂಟೇನರ್’ ಅಭಿವೃದ್ಧಿಪಡಿಸಲಾಗಿದೆ. ಮೋಟರೈಸ್ಡ್‌ ಸೈಕಲ್‌ಗೆ ಸೋಲಾರ್ ಪ್ಲೇಟ್ ಜೋಡಿಸಿದ್ದಾರೆ. ಈ ಕಂಟೇನರ್‌ ನಲ್ಲಿ ತರಕಾರಿ ಇಟ್ಟರೆ, ಎರಡು ಮೂರು ದಿನ ಕೆಡುವುದಿಲ್ಲ. ಇದೂ ಮೇಳದಲ್ಲಿ ನೋಡಲು ಸಿಗುತ್ತದೆ.

* ಯುವಕರು ಮತ್ತು ನಗರದವರಿಗಾಗಿ ಮೇಳದಲ್ಲಿ ಏನೇನಿದೆ?

ತಾರಸಿಯಲ್ಲಿ ಅಣಬೆ ಬೆಳೆಯುವ ಕುರಿತು ತರಬೇತಿ ಕೊಡುತ್ತೇವೆ. ಅಣಬೆ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ತಂತ್ರಜ್ಞಾನಗಳು ಲಭ್ಯವಿವೆ. ಸೋಲಾರ್‌ ಶಕ್ತಿ ಆಧರಿತ ಸಂಚಾರಿ ಅಣಬೆ ಘಟಕಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಆ ಮಾದರಿಗಳು ಮೇಳದಲ್ಲಿ ಪ್ರದರ್ಶನಕ್ಕಿರುತ್ತವೆ. ತಾರಸಿ ತೋಟದ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವಿದೆ. ಈ ಕಾರ್ಯಾಗಾರಕ್ಕೆ ಪ್ರವೇಶ ಶುಲ್ಕವಿದೆ. ಶುಲ್ಕಕ್ಕೆ ಪ್ರತಿಯಾಗಿ ಮಾದರಿಗಳ ಮಾಹಿತಿ, ತರಕಾರಿ ಬೀಜದ ಕಿಟ್‌ ಕೊಡುತ್ತೇವೆ. ಇಲ್ಲಿ ತರಬೇತಿ ಪಡೆದವರು, ನಿರಂತರವಾಗಿ ನಮ್ಮ ಸಂಸ್ಥೆಯಲ್ಲಿ ಸಲಹೆ ಪಡೆಯುತ್ತಿರಬಹುದು.

ಅಣಬೆ ರಸಂ ಪುಡಿ ಬಗ್ಗೆ ಹೇಳಿ...

ಅಣಬೆ ಪುಡಿಯ ರಸಂ ಮಿಕ್ಸ್, ಚಟ್ನಿಪುಡಿ ಅಭಿವೃದ್ಧಿಪಡಿಸಿದ್ದೇವೆ. ಇದನ್ನು ಮಧ್ಯಾಹ್ನದ ಬಿಸಿಯೂಟದ ಜತೆಗೆ ಮಕ್ಕಳಿಗೆ ಕೊಡಬಹುದು. ಪ್ರಾಥಮಿಕ ಶಾಲಾ ಮಕ್ಕಳಿಗೆ ಒಂದು ಕಪ್ ಅಣಬೆ ಪುಡಿಯ ರಸಂ ಮಿಕ್ಸ್‌ ಕೊಟ್ಟರೆ, ಆ ಮಕ್ಕಳಿಗೆ ದಿನಕ್ಕೆ ಬೇಕಾದ ಪ್ರೊಟಿನ್ ಸಿಗುತ್ತದೆ. ನೀರಿಗೆ, ಪುಡಿ ಹಾಕಿ ಮಿಕ್ಸ್ ಮಾಡಿದರೆ ಸಾಕು. ಈ ಕುರಿತು ಸರ್ಕಾರದ ಜತೆ ಮಾತುಕತೆ ನಡೆಸಿದ್ದೇವೆ. ಇದು ಯಶಸ್ವಿಯಾದರೆ, ಅಣಬೆ ಬೆಳೆಯುವವರಿಗೆ, ರಸಂಪೌಡರ್ ತಯಾರಕರಿಗೆ ಅನುಕೂಲವಾಗುತ್ತದೆ. ಮಕ್ಕಳಿಗೆ ಪ್ರೊಟಿನ್‌ಯುಕ್ತ ಆಹಾರ ಸಿಕ್ಕಂತಾಗುತ್ತದೆ. 

ಈ ಹಿನ್ನೆಲೆಯಲ್ಲಿ ತಾರಸಿ, ಮನೆಯ ಹಿತ್ತಲಲ್ಲಿ ಅಣಬೆ ಬೆಳೆಯಲು ತರಬೇತಿ ನೀಡುತ್ತಿದ್ದೇವೆ. ಇದಕ್ಕಾಗಿ ಮಾಡೆಲ್‌ಗಳನ್ನು ತಯಾರಿಸಿದ್ದೇವೆ. ಮೇಳದಲ್ಲಿ ಇವುಗಳ ಪ್ರದರ್ಶನವಿರುತ್ತದೆ. ಇದು ಸಣ್ಣ ರೈತರು, ಯುವ ಕೃಷಿಕರಿಗೆ ಹೆಚ್ಚು ಸಹಕಾರಿ. 

ಮೇಳಕ್ಕಾಗಿ ಸಿದ್ಧತೆ

ಹಲಸಿನಲ್ಲಿ ಜ್ಯೂಸ್, ಚಾಕೊಲೇಟ್ ಸಾಧ್ಯವೇ?

ಬೆಳೆಗೆ ಬೆಲೆ ಸಿಗದಿದ್ದಾಗ, ಅವುಗಳನ್ನು ಮೌಲ್ಯವರ್ಧನೆಗೊಳಿಸಿ, ಮಾರಾಟ ಮಾಡಬಹುದು. ಈ ನಿಟ್ಟಿನಲ್ಲಿ ಕೊಯ್ಲೋತ್ತರ ತಂತ್ರಜ್ಞಾನ ವಿಭಾಗದವರು ಆರು ತಿಂಗಳು ಕೆಡದಂತಿರುವ ಹಲಸಿನ ಜ್ಯೂಸ್, ಹಲಸಿನ ಬಿಸ್ಕತ್‌, ಚಾಕೊಲೇಟ್‌  ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ಇವುಗಳಿಗೆ ಪ್ರಿಸರ್ವೇಟಿವ್ಸ್‌ ಹಾಕುವುದಿಲ್ಲ. ಜ್ಯೂಸ್‌ಗೆ ಸಕ್ಕರೆ ಹಾಕಿಲ್ಲ. ಚಾಕೊಲೇಟ್‌ಗೆ ಅಣಬೆ ಪುಡಿ ಸೇರಿಸಿದ್ದಾರೆ. ಇಂಥ ಮೌಲ್ಯವರ್ಧಿತ ಉತ್ಪನ್ನಗಳ ತಂತ್ರಜ್ಞಾನಗಳನ್ನು ಬಳಸಿಕೊಂಡು ರೈತರು ಉದ್ದಿಮೆ ಆರಂಭಿಸಬಹುದು.

ಔಷಧೀಯ ಸಸ್ಯಗಳ ಅಭಿವೃದ್ಧಿಯ ಮಾಹಿತಿ ಕೊಡಿ...

ಅಲ್ಕಲೈಡ್ ಪ್ರಮಾಣ ಹೆಚ್ಚಿರುವ ಒಂದೆಲಗ ತಳಿ, ತುರಿಕೆ ರಹಿತ ನಸುಗುನ್ನಿ ಕಾಯಿ ತಳಿ ಅಭಿವೃದ್ಧಿಪಡಿಸಿದ್ದೇವೆ. ನಸುಗುನ್ನಿಕಾಯಿ ಅಲ್ಜಮೈರ್ ಕಾಯಿಲೆಗೆ ಔಷಧಿಯಾಗುವಂತಹ ಬೀಜ. ಇದನ್ನು ಬೆಳೆಸಲು ಉತ್ತೇಜಿಸುತ್ತಿದ್ದೇವೆ. ನಸುಗುನ್ನಿ ಕಾಯಿ ಬಳ್ಳಿ ಮಣ್ಣಿಗೆ ಸಾರಜನಕ ಸ್ಥಿರೀಕರಿಸಿ, ಪೋಷಕಾಂಶವನ್ನು ವೃದ್ಧಿಗೊಳಿಸುತ್ತದೆ. ಇದು ಬೆಳೆಗಳಿಗೆ ಪೂರಕ ಅಂಶ. ಸಣ್ಣ ರೈತರು, ಮಳೆಯಾಶ್ರಿತ ರೈತರಿಗೆ ಈ ಬೆಳೆಗಳು ಹಲವು ರೀತಿಯಲ್ಲಿ ನೆರವಾಗುತ್ತವೆ.

ರಫ್ತು ಉತ್ಪನ್ನಗಳ ಲ್ಯಾಬ್‌ ಬಗ್ಗೆ ತಿಳಿಸಿ...

ನಮ್ಮ ಸಂಸ್ಥೆಯಲ್ಲಿ ರೆಫರೆಲ್‌ ಲ್ಯಾಬೊರೆಟರಿ ಇದೆ. ಇದು ರಫ್ತು ಮಾಡುವ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸುವ (ಬೆಳೆಗಳಲ್ಲಿ ರಾಸಾಯನಿಕ ಕ್ರಿಮಿನಾಶಕ ಉಳಿಕೆ ಪರೀಕ್ಷಿಸುವುದು) ಪ್ರಯೋಗಾಲಯ. ರೈತರು ರಫ್ತು ಮಾಡುವ ಬೆಳೆಗಳನ್ನು ಇಲ್ಲಿ ಪರೀಕ್ಷಿಸಿ ವರದಿ ಪಡೆಯಬಹುದು.

 

ಮೇಳಕ್ಕೆ ಹೀಗೆ ಬನ್ನಿ...

ತೋಟಗಾರಿಕೆ ಮೇಳವು ಫೆಬ್ರುವರಿ 5 ರಿಂದ 8ರವರೆಗೆ ನಡೆಯಲಿದೆ. ಬೆಳಿಗ್ಗೆ 9.30ಯಿಂದ ಸಂಜೆ 5.30ವರೆಗೆ ಮೇಳ ನೋಡಬಹುದು. ಹೆಸರಘಟ್ಟ, ಬೆಂಗಳೂರಿನಿಂದ 25 ಕಿ.ಮೀ ದೂರದಲ್ಲಿದೆ. ಬೆಂಗಳೂರು–ತುಮಕೂರು ರಸ್ತೆಯ 8ನೇ ಮೈಲಿಯಿಂದ ಬಲಭಾಗಕ್ಕೆ ತಿರುಗಿ, 10 ಕಿ.ಮೀ ಕ್ರಮಿಸಿದರೆ ಮೇಳದ ಅಂಗಳ ತಲುಪುತ್ತೀರಿ. ಬೆಂಗಳೂರು–ಹೆಸರಘಟ್ಟ ನಡುವೆ ಸಾಕಷ್ಟು ಬಿಎಂಟಿಸಿ ಬಸ್‌ಗಳು ಲಭ್ಯವಿವೆ.

263 ತಂತ್ರಜ್ಞಾನಗಳ ಪ್ರದರ್ಶನ

ಈ ಬಾರಿಯ ಮೇಳದಲ್ಲಿ 263 ತಂತ್ರಜ್ಞಾನಗಳನ್ನು ಪ್ರದರ್ಶನಕ್ಕಿಡುತ್ತಿದ್ದಾರೆ. ’ಕಳೆದ ವರ್ಷಕ್ಕೆ ಹೋಲಿಸಿದರೆ 98 ಹೊಸ ತಂತ್ರಜ್ಞಾನಗಳನ್ನು ಇದೇ ಪ್ರಥಮಬಾರಿಗೆ ಪ್ರದರ್ಶನಕ್ಕೆ ಇಡಲಾಗಿದೆ’ ಎನ್ನುತ್ತಾರೆ ಮೇಳದ ಆಯೋಜನಾ ಕಾರ್ಯದರ್ಶಿ, ಪ್ರಧಾನ ವಿಜ್ಞಾನಿ ವಿ.ಧನಂಜಯ.

ಸಂಸ್ಥೆ ಇಲ್ಲಿವರೆಗೆ 13 ಹಣ್ಣಿನ ಬೆಳೆ, 26 ತರಕಾರಿ ಬೆಳೆಗಳು, 10 ಅಲಂಕಾರಿಕ ಮತ್ತು 5 ಔಷಧೀಯ ಬೆಳೆಗಳಲ್ಲಿ ಸಂಶೋಧನೆ ನಡೆಸಿದೆ. ಇಲ್ಲಿಯವರೆಗೂ ಹೆಚ್ಚು ಇಳುವರಿ ಮತ್ತು ರೋಗ ನಿರೋಧಕ ಶಕ್ತಿಯುಳ್ಳ 34 ಹಣ್ಣಿನ ಬೆಳೆಗಳು, 131 ತರಕಾರಿ ತಳಿಗಳು, 111 ಅಲಂಕಾರಿಕ ಮತ್ತು 13 ಔಷಧೀಯ ಬೆಳೆಗಳ ತಳಿಗಳನ್ನು ಬಿಡುಗಡೆ ಮಾಡಿದೆ. ಬೆಳೆ ಉತ್ಪಾದನೆ, ಸಸ್ಯ ಸಂರಕ್ಷಣೆಗೆ ಸಂಬಂಧಿಸಿದ 145 ತಂತ್ರಜ್ಞಾನಗಳನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಸಂಸ್ಥೆಯಿಂದ ತಂತ್ರಜ್ಞಾನದ ಪರವಾನಗಿ ಪಡೆದಿರುವ ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿವೆ. 25ಕ್ಕೂ ಅಧಿಕ ರಾಜ್ಯಗಳಿಂದ ರೈತರು ಭಾಗವಹಿಸುತ್ತಿದ್ದಾರೆ. ಇದೇ ಮೇಳದಲ್ಲಿ ಎಂಟು ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮವಿದೆ’ ಎನ್ನುತ್ತಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು