ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆಯೊಂದೇ ಸಾಲದು..

Last Updated 5 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

‘ಅಡಿಕೆ ಒಂದನ್ನೇ ನಂಬ್ಕೊಂಡ್ರೆ ಉಳಿಗಾಲ ಇಲ್ಲ’ ಎನ್ನುತ್ತಲೇ ಮಾತಿಗಿಳಿದರು ಟಿ.ಕೆ ಗಂಗಪ್ಪ. ಅವರು ಎದೆಯುದ್ದ ಸೊಂಪಾಗಿ ಬೆಳೆದಿದ್ದ ಡಯಾಂಚ ಹಸಿರೆಲೆ ಗೊಬ್ಬರವನ್ನು ಭತ್ತದ ತಾಕಿಗೆ ಮಿಶ್ರ ಮಾಡಲು ಟ್ರ್ಯಾಕ್ಟರ್ ಹೊಡೆಯುತ್ತಿದ್ದರು. ‘ಶ್ರೀ’ ಪದ್ಧತಿಯಲ್ಲಿ ಗಂಧಸಾಲೆ ಎಂಬ ದೇಸಿ ಭತ್ತದ ತಳಿ ಹಾಕಲು ಸಿದ್ಧತೆ ನಡೆಸಿದ್ದರು.

ನಾನು ಸುತ್ತಲಿನ ರೈತರ ಜಮೀನುಗಳತ್ತ ಕಣ್ಣು ಹಾಯಿಸಿದೆ. ಅಲ್ಲೆಲ್ಲೂ ಡಯಾಂಚ ಕಾಣಲಿಲ್ಲ. ‘ಭತ್ತ ಹಾಕೋರೇ ಕಡಿಮೆ ಆಗ್ತಾ ಇದ್ದಾರೆ, ಇನ್ನು ಮಾಗಿ ಉಳುಮೆ ಮಾಡಿ ಡಯಾಂಚ ಬೆಳೆಯೋರು ತುಂಬಾ ಅಪರೂಪ’ ಎನ್ನುತ್ತಾ ತೋಟ ಸುತ್ತಾಡಿಸಲು ಬಂದರು.

ಅವರ ತೋಟ ಅಡಿಕೆ, ಕಬ್ಬು, ಬಾಳೆ, ತೆಂಗು, ಹಲಸು, ನೇರಳೆ, ತರಕಾರಿ ಹೀಗೆ ವೈವಿಧ್ಯಮಯ ಬೆಳೆಗಳ ಸಂಗಮ. ಎರಡು ಜಾತಿ ಕಬ್ಬು ಬೆಳೆಯುತ್ತಿದ್ದಾರೆ. ಅದರಲ್ಲಿ ತಮಿಳುನಾಡು ಕಬ್ಬು ಜಾತಿಯು ಜ್ಯೂಸ್ ಮಾಡಲು ಸೂಕ್ತ. ಹಾಗೆಯೇ ಪುಟ್ಟ ಬಾಳೆ ಮತ್ತು ಪಚ್ಚ ಬಾಳೆ ತಳಿಗಳಿವೆ. ಫಸಲು ಕೊಡುತ್ತಿರುವ ಅಡಿಕೆ ನಡುವೆ ಐದು ವರ್ಷಗಳ ಹಿಂದೆ ನೆಟ್ಟ ಪಚ್ಚಬಾಳೆ ಈಗಲೂ ಫಸಲು ನೀಡುತ್ತಿದೆ. ವಿಶೇಷ ಆರೈಕೆ ಇಲ್ಲ.

ಒಂದೇ ಬೆಳೆ ಇದ್ದರೆ ಒಂದು ಸಲ ಮಾತ್ರ ದುಡ್ಡು ಸಿಗುತ್ತೆ, ಬಹುಬೆಳೆ ಇದರೆ ಕನಿಷ್ಟ ತಿಂಗಳಿಗೊಮ್ಮೆಯಾದರೂ ದುಡ್ಡು ಬರುತ್ತೆ ಎಂಬುದು ಇವರ ಅನುಭವ. ಅಲ್ಲದೆ ‘ಒಂದು ಲಾಸ್ ಆದ್ರೆ ಇನ್ನೊಂದು ಕೈಹಿಡಿಯುತ್ತೆ’ ಎನ್ನಲು ಮರೆಯುವುದಿಲ್ಲ.

ಮುಚ್ಚಿಗೆ ಬೆಳೆ; ಮಣ್ಣಿನ ಫಲವತ್ತತೆ
ಅವಕಾಶ ಸಿಕ್ಕಾಗಲೆಲ್ಲಾ ತೋಟದಲ್ಲಿ ಮುಚ್ಚಿಗೆ ಬೆಳೆಯಾಗಿ ಅಲಸಂದೆ, ಹುರುಳಿ ಹಾಕುತ್ತಾರೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎಂಬುದು ಇವರ ಅನಿಸಿಕೆ.

ಮಿಶ್ರಬೆಳೆ ಅನುಸರಣೆಯಲ್ಲಿ ಅಪಾರ ಅನುಭವ ಹೊಂದಿರುವ ಗಂಗಪ್ಪ, ಅಡಿಕೆಯ ಜೊತೆಗೆ ಪ್ರತಿ ವರ್ಷ ಬೇರೆ-ಬೇರೆ ಉಪಬೆಳೆ ಸಂಯೋಜಿಸುತ್ತಾರೆ. 2018ರ ಬೇಸಿಗೆಯಲ್ಲಿ ಒಂದು ಎಕರೆ ಅಡಿಕೆ ನಡುವೆ ಮೆಕ್ಕೆಜೋಳವನ್ನು ಮಿಶ್ರಬೆಳೆಯಾಗಿ ಬೆಳೆದು 15 ಕ್ವಿಂಟಲ್ ಇಳುವರಿ ಪಡೆದಿದ್ದಾರೆ. ಅಡಿಕೆಗೆ ಕೊಡುವ ನೀರು, ಗೊಬ್ಬರವೇ ಉಪಬೆಳೆಗೂ ಸಾಕು. ಆದಾಯ ಮಾತ್ರ ಹೆಚ್ಚುವರಿ. ಈ ವರ್ಷ ಅದೇ ಭೂಮಿಯಲ್ಲಿ ಬೆಂಡೆ ಮತ್ತು ಬೀನ್ಸ್ ಬಿತ್ತಿದ್ದಾರೆ.

ಭದ್ರಾವತಿ ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಭದ್ರಾವತಿ ತಾಲ್ಲೂಕಿನಲ್ಲಿ ಪ್ರತಿ ವರ್ಷ ಸರಾಸರಿ 5 ಸಾವಿರ ಹೆಕ್ಟೇರ್ ಅಡಿಕೆ ಬೆಳೆಯುವ ಪ್ರದೇಶ ಹೆಚ್ಚುತ್ತಿದೆ. ಅದೆಲ್ಲವೂ ಭತ್ತ ಬೆಳೆಯುವ ಭೂಮಿ. ಗಂಗಪ್ಪನವರೇನೂ ಅಡಿಕೆ ವಿರೋಧಿಯಲ್ಲ. ಆದರೆ ಅದು ಒಂದು ಮಿತಿ ದಾಟಬಾರದು ಎನ್ನುವುದರಲ್ಲಿ ನಂಬಿಕೆ. ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ ಸಹ. ‘ನಾವು ತಿನ್ನುವಷ್ಟಾದರೂ ನಾವೇ ಬೆಳೆದುಕೊಳ್ಳದಿದ್ದರೆ ಹೇಗೆ’ ಎಂದು ಪ್ರಶ್ನಿಸುತ್ತಾರೆ. ಇವರಿಗೆ 14 ಎಕರೆ ಜಮೀನಿದೆ. ಅದರಲ್ಲಿ ಆರೂವರೆ ಎಕರೆ ಅಡಿಕೆ, 4 ಎಕರೆ ಭತ್ತ. ಉಳಿಕೆ ಜಮೀನಿನಲ್ಲಿ ತರಕಾರಿ ಹಾಕುತ್ತಾರೆ. ಭತ್ತದ ಗದ್ದೆಗೆ ಡಯಾಂಚ, ಕೊಟ್ಟಿಗೆ ಗೊಬ್ಬರ ಹಾಗೂ ಅಡಿಕೆ ಸಸಿಗಳಿಗೆ ಆಲೆಮನೆಯ ಬೂದಿ ಮತ್ತು ಕುರಿ ಗೊಬ್ಬರ ಬಳಸುವುದು ವಾಡಿಕೆ.

ಇವರ ಜಮೀನು ಗೊಂದಿ ಅಣೆಕಟ್ಟೆಯ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಬರುತ್ತದೆ. ಕಾಲುವೆ ಮೇಲ್ಭಾಗದಲ್ಲೇ ಜಮೀನಿದೆ. ನೀರಿನ ಕೊರತೆ ಇಲ್ಲ. ಆದರೆ ವೃಥಾ ನೀರು ಹರಿಸುವುದಿಲ್ಲ. ‘ನೀರು ಇದೇ ಅಂತ ಯಾವತ್ತೂ ಕೊಡೋದಿಲ್ಲ, ಅಗತ್ಯ ಇದ್ದರೆ ಮಾತ್ರ ಕೊಡ್ತೀನಿ’ ಎಂಬ ತತ್ವಕ್ಕೆ ಬದ್ಧ. ಅಡಿಕೆಗೆ ಸಾಲು ಬಿಟ್ಟು ಸಾಲು ನೀರು ಹಾಯಿಸುವುದು, ಸಾಲಿನ ಕೊನೆಗೆ ಇನ್ನೂ ಐದಾರು ಅಡಿ ಇರುವಾಗಲೇ ನಿಲ್ಲಿಸುವುದು, ಮುಚ್ಚಿಗೆ ಬೆಳೆ, ಮಿಶ್ರ ಬೆಳೆ ಹಾಗೂ ಬೆಳೆ ಬದಲಾವಣೆ ಮೂಲಕ ನೀರುಳಿತಾಯ.

ಭತ್ತದಲ್ಲಿ ‘ಶ್ರೀ’ ಪದ್ಧತಿ ಅನುಸರಿಸುವ ಮೂಲಕ ನೀರಿನ ಉಳಿತಾಯದ ಮೇಲ್ಪಂಕ್ತಿ. ಇತರರು ಸದಾ ಗದ್ದೆಯಲ್ಲಿ ನೀರು ನಿಲ್ಲಿಸಿದರೆ, ಇವರು ನಾಲ್ಕು ದಿನಕ್ಕೊಮ್ಮೆ ಮಾತ್ರ ಕೊಡುತ್ತಾರೆ. ಇವರಿಂದ ಉತ್ತೇಜಿತರಾಗಿ ಗ್ರಾಮದ ನಂಜುಂಡಯ್ಯ ಹಾಗೂ ಜೈಶಂಕರ್ ಈಗ ಇದೇ ಪದ್ಧತಿ ಅನುಸರಿಸುತ್ತಿದ್ದಾರೆ. ಮಳೆ ಬಂದಾಗ ತೋಟದ ನೀರು ಹರಿದು ಹಳ್ಳ ಸೇರುವುದನ್ನು ಗಮನಿಸಿ ಅದನ್ನು ಸಂಗ್ರಹಿಸಲು ಈ ವರ್ಷ ಕೃಷಿ ಹೊಂಡ ತೆಗೆಸಿದ್ದಾರೆ.

ಒಬ್ಬಂಟಿಯಾದ ಗಂಗಪ್ಪ ಇಡೀ ಜಮೀನಿಗೆ ಅಡಿಕೆ ಸಸಿ ನೆಟ್ಟು ಆರಾಮಾಗಿ ಇರಬಹುದಿತ್ತು. ಹೆಚ್ಚಿನ ರೈತರು ಹೀಗೇ ಮಾಡುತ್ತಿದ್ದಾರೆ. ಆದರೆ ಗಂಗಪ್ಪ ಆ ಮಾರ್ಗ ಅನುಸರಿಸಲು ಸಿದ್ಧರಿಲ್ಲ. ‘ರೆಟ್ಟೆಯಲ್ಲಿ ಬಲ ಇರೋವರೆಗೂ ದುಡೀಬೇಕು’ ಎಂಬುದೇ ಅವರ ಉತ್ತರ.

ಭದ್ರಾವತಿ ತಾಲ್ಲೂಕು ದೊಡ್ಡಗೊಪ್ಪೇನಹಳ್ಳಿ ಇವರ ಗ್ರಾಮ. ಪಿ.ಯು.ಸಿ ವಿದ್ಯಾಭ್ಯಾಸ ಪೂರೈಸಿದ ಕೂಡಲೇ ಬೇಸಾಯದ ಸೆಳೆತ. ಈಗ ಅವರಿಗೆ 63 ವರ್ಷ. ಈ ವಯಸ್ಸಿನಲ್ಲೂ ದುಡಿಯುವ ಹುಮ್ಮಸ್ಸು. ತಮ್ಮ ಬಿಡುವಿಲ್ಲದ ಬೇಸಾಯ ಕೆಲಸಗಳ ನಡುವೆಯೂ ಗ್ರಾಮದ ಗೊಂದಿ ನೀರು ಬಳಕೆದಾರ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗಂಗಪ್ಪ ಸಂಪರ್ಕ: 9945993761

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT