ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ನಡುವೆ ರಾಗಿ ಸರಾಗ

ಅಕ್ಷರ ಗಾತ್ರ

ಭದ್ರಾವತಿ ತಾಲ್ಲೂಕು ಕಾಗೆಕೋಡಮಗ್ಗೆ ಪಂಚಾಯ್ತಿ ಜಯನಗರದ ಮಹಾಲಿಂಗಯ್ಯ ತಮ್ಮ ಎರಡು ಎಕರೆ ಜಮೀನಿನಲ್ಲಿ ಒಂದೂವರೆ ಎಕರೆಗೆ ಅಡಿಕೆ ಸಸಿ ನೆಟ್ಟರು. ಅರ್ಧ ಎಕರೆ ಗದ್ದೆಗೆ ಮೀಸಲು. ಆದರೆ ನಾಗಮಂಗಲ ಮೂಲದ ಅವರಿಗೆ ನಿತ್ಯದ ಊಟಕ್ಕೆ ರಾಗಿ ಮುದ್ದೆ ಬೇಕೇ ಬೇಕಿತ್ತು. ಮೂರು ವರ್ಷಗಳ ಹಿಂದೆ ಅಡಿಕೆ ಹಾಕುವವರೆಗೂ ರಾಗಿ ಬೆಳೆಯುತ್ತಿದ್ದರು. ಆದರೆ ಅಡಿಕೆ ಹಾಕಿದ ಮೇಲೆ ರಾಗಿ ನಾಟಿ ಮಾಡಲು ಜಮೀನು ಇಲ್ಲವಾಯಿತು.

ಏನು ಮಾಡುವುದೆಂದು ಯೋಚಿಸಿದ ಅವರು ಅಡಿಕೆ ನಡುವೆಯೇ ಅಂತರ ಬೆಳೆಯಾಗಿ ರಾಗಿ ನಾಟಿ ಮಾಡಲು ಮುಂದಾದರು. ಇದಕ್ಕೆ ಇತರರಿಂದ ವಿರೋಧ ಬಂತು. ಕಾರಣ ರಾಗಿ ಹಾಕಿದರೆ ಅಡಿಕೆ ಬೆಳವಣಿಗೆ ಕುಂಠಿತವಾಗುತ್ತದೆ ಎಂಬುದು. ಆದರೆ ಮಹಾಲಿಂಗಯ್ಯ ಹಿಂಜರಿಯಲಿಲ್ಲ. ತಮ್ಮ ಹುಟ್ಟಿದ ಊರಾದ ನಾಗಮಂಗಲದಿಂದ 4 ಕೆ.ಜಿ. ರಾಗಿ ಬಿತ್ತನೆ ಬೀಜ ತರಿಸಿ ಸಸಿಮಡಿ ಬಿಟ್ಟು ನಾಟಿ ಹಾಕಿದರು. ಆಗಿನಿಂದಲೂ ಸತತವಾಗಿ ಹೀಗೆ ಅಡಿಕೆ ನಡುವೆ ರಾಗಿ ಬೆಳೆಯುತ್ತಲೇ ಇದ್ದಾರೆ. ಆದರೆ, ಅಡಿಕೆ ಬೆಳವಣಿಗೆಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಿಲ್ಲ. ‘ಅಡಿಕೆ ಫಸಲು ಬರುವವರೆಗೂ ರಾಗಿ ಬೆಳೀಬೌದು, ಏನೂ ತೊಂದ್ರೆ ಇಲ್ಲ’ ಎನ್ನುತ್ತಾರೆ ಮಹಾಲಿಂಗಯ್ಯ.

ಬೇಸಿಗೆಯಲ್ಲಿ ರಾಗಿ ಹಾಕುವುದು ರೂಢಿ. ಈ ವರ್ಷ ಜನವರಿಯಲ್ಲಿ ನಾಟಿ ಮಾಡಿದ್ದು ಇನ್ನೇನು ಕಟಾವಿನ ಹಂತದಲ್ಲಿದೆ. ಅಡಿಕೆ ಸಸಿಗಳ ಸಾಲಿನಿಂದ ಒಂದೂವರೆ ಅಡಿ ಬಿಟ್ಟು ಉಳುಮೆ ಹಾಗೂ ಅಂತರ ಬೇಸಾಯ ಮಾಡುತ್ತಾರೆ. ಇದರಿಂದ ಅಡಿಕೆಗೆ ಯಾವುದೇ ತೊಂದರೆ ಆಗುವುದಿಲ್ಲ. ರಾಗಿ ಪೈರನ್ನು ಸಾಲಿನಿಂದ ಸಾಲಿಗೆ ಒಂದೂವರೆ ಅಡಿ ಹಾಗೂ ಸಸಿಯಿಂದ ಸಸಿಗೆ ಅರ್ಧ ಅಡಿ ಅಂತರ ಕೊಟ್ಟು ನಾಟಿ ಮಾಡುತ್ತಾರೆ. ಇದು ಹೆಚ್ಚು ತೆಂಡೆ ಹೊಡೆಯಲು ಅನುಕೂಲ. ಈ ಬಾರಿ 20-15ರವರೆಗೂ ತೆಂಡೆ ಬಂದಿದೆ.

‘ಕಳೆದ ಬಾರಿ 12 ಕ್ವಿಂಟಾಲ್ ಇಳುವರಿ ಬಂದಿತ್ತು. ಈ ಸಲ ಇನ್ನೂ ಬೆಳೆ ಚೆನ್ನಾಗಿದೆ. ಅದಕ್ಕಿಂತ ತುಸು ಹೆಚ್ಚಿಗೆ ಇಳುವರಿ ಬರಬಹುದು’ ಎಂಬುದು ಮಹಾಲಿಂಗಯ್ಯನವರ ಮಡದಿ ಸರೋಜಮ್ಮ ಅನಿಸಿಕೆ. ಬೆಳೆದ ಫಸಲನ್ನು 9 ಜನರಿರುವ ಇವರ ಕುಟುಂಬದ ಬಳಕೆಗೆ ಆಗುವಷ್ಟು ಇಟ್ಟುಕೊಂಡು ಉಳಿದಿದ್ದನ್ನು ಮಾರಾಟ ಮಾಡುತ್ತಾರೆ.

ಮಹಾಲಿಂಗಯ್ಯ ಗ್ರಾಮದ ಸುತ್ತಮುತ್ತಲ ಹಳ್ಳಿಗಳಲ್ಲಿ ಅಡಿಕೆ ನಡುವೆ ಚೆಂಡು, ಸೇವಂತಿಗೆ, ತರಕಾರಿಗಳನ್ನು ಅಂತರ ಬೆಳೆಯಾಗಿ ಬೆಳೆಯುವ ಅನೇಕ ರೈತರಿದ್ದಾರೆ. ಅದು ಲಾಭದಾಯಕ ಸಹ. ಆದರೆ ಇವರಿಗೆ ರಾಗಿ ಬಿಟ್ಟು ಬೇರೆ ಬೆಳೆ ಹಾಕುವ ಮನಸ್ಸಿಲ್ಲ. ಕಾರಣ ಕೊಂಡು ತಂದ ರಾಗಿ ಬಳಸಲು ಇಷ್ಟವಿಲ್ಲ. ಹಾಗೆಯೇ, ‘ಹೂವಿನ ಕೃಷಿಯಲ್ಲಿ ನನಗೆ ಅನುಭವ ಕಡಿಮೆ’ ಎನ್ನುತ್ತಾರೆ ಅವರು.

ಭದ್ರಾವತಿ ತಾಲ್ಲೂಕಿನಲ್ಲಿ ದಶಕದ ಹಿಂದೆ ಯಥೇಚ್ಛವಾಗಿ ಭತ್ತ ಬೆಳೆಯುತ್ತಿದ್ದರು. ಜೊತೆಗೆ ಶೇಂಗಾ, ರಾಗಿ, ಹೆಸರುಕಾಳು ಇತ್ಯಾದಿ ತಡುಫಸಲುಗಳೂ ಇದ್ದವು. ಭದ್ರಾ ಹಾಗೂ ಗೊಂದಿ ಅಣೆಕಟ್ಟಿನ ನೀರು ಲಭ್ಯವಿರುವುದರಿಂದ ರೈತರು ವರ್ಷಕ್ಕೆ ಎರಡು ಬೆಳೆ ಭತ್ತ ಹಾಕುತ್ತಿದ್ದದ್ದು ರೂಢಿ. ಆದರೆ ಅಡಿಕೆಗೆ ಬೆಲೆ ಹೆಚ್ಚಾದ ಕಾರಣ ರೈತರ ಒಲವು ಅತ್ತ ತಿರುಗಿತು. ಭತ್ತ ಹಾಗೂ ಇತರೆ ಬೆಳೆ ತಾಕುಗಳೆಲ್ಲಾ ಬಹುತೇಕ ಅಡಿಕೆ ತೋಟಗಳಾದವು.

ಮಹಾಲಿಂಗಯ್ಯನವರು ಕಂಡಂತೆ 10 ವರ್ಷಗಳ ಹಿಂದೆ ಇವರ ಗ್ರಾಮದಲ್ಲೇ 15ರಿಂದ 20 ರೈತರು ರಾಗಿ ಬೆಳೆಯುತ್ತಿದ್ದರು. ಆದರೆ ಈ ವರ್ಷ ಇವರೂ ಸೇರಿದಂತೆ ಇಬ್ಬರು ಮಾತ್ರ ರಾಗಿ ಹಾಕಿದ್ದಾರೆ. ಬಹುತೇಕ ಕುಟುಂಬಗಳು ರಾಗಿಯನ್ನು ಕೊಂಡು ತರುತ್ತಿದ್ದಾರೆ, ಇಲ್ಲವೇ ಆಹಾರ ಪದ್ಧತಿಯನ್ನೇ ಬದಲಾಯಿಸಿಕೊಂಡಿದ್ದಾರೆ.

‘ಆದರೆ ಇತ್ತೀಚಿನ ವರ್ಷಗಳಲ್ಲಿ ರೈತರು ಮತ್ತೆ ರಾಗಿಯತ್ತ ಒಲವು ತೋರಿಸುತ್ತಿರುವುದು ಕಾಣುತ್ತಿದೆ’ ಎನ್ನುತ್ತಾರೆ ಕಾಗೆಕೋಡಮಗ್ಗೆಯ ಕೃಷ್ಣಮೂರ್ತಿ. ಏಕೆಂದರೆ ಅಡಿಕೆ ಮಧ್ಯೆ ಹೂವು ಅಥವಾ ತರಕಾರಿ ಬೆಳೆಯುವುದಕ್ಕೆ ಹೆಚ್ಚು ವೆಚ್ಚವಾಗುತ್ತದೆ. ಆದರೆ ರಾಗಿಗೆ ಆ ತಾಪತ್ರಯವಿಲ್ಲ. ಅಲ್ಲದೆ ಆರೋಗ್ಯ ಕಾಳಜಿಯಿಂದಾಗಿ ರಾಗಿ ತಿನ್ನುವವರ ಸಂಖ್ಯೆ ಏರುತ್ತಿರುವುದೂ ಮತ್ತೊಂದು ಕಾರಣ ಎನ್ನುತ್ತಾರೆ. ಇದೊಂದು ಆಶಾದಾಯಕ ಬೆಳವಣಿಗೆ. ಮಹಾಲಿಂಗಯ್ಯನವರ ಸಂಪರ್ಕ: 9632321054

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT