ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುವೈವಿಧ್ಯದ ತರಕಾರಿ ತೋಟ

Last Updated 29 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಒಂದು ಕಡೆ ಹೂಕೋಸು, ಎಲೆಕೋಸಿನ ಹಾಸು. ಇನ್ನೊಂದು ಕಡೆ ಕೆಂಪು ಬಣ್ಣದ ಕ್ಯಾರೆಟ್, ಟೊಮೆಟೊ. ದೂರದಲ್ಲಿ ಹಸಿರಾಗಿ ಕಾಣುವ ದಪ್ಪ ಮೆಣಸಿನಕಾಯಿ, ಉದ್ದ ಮೆಣಸಿನಕಾಯಿಯ ತಾಕು. ಜತೆಗೆ, ಈರುಳ್ಳಿ ಕಟ್ಟು, ಕೊತ್ತಂಬರಿ, ಮೆಂತ್ಯೆ ಸೊಪ್ಪಿನ ಕಟ್ಟು.. ಹೀಗೆ ಇಡೀ ಅಂಗಳದ ತುಂಬಾ ಹತ್ತಾರು ತರಕಾರಿ ಬೆಳೆಗಳು. ಒಂದೇ ನೋಟಕ್ಕೆ ಸಿಗುವ ಈ ತರಕಾರಿ ಅಂಗಳ ಒಂಥರ ‘ತರಕಾರಿ ಪಾರ್ಕ್‌’ ತರಹ ಕಾಣುತ್ತದೆ.

ಇಷ್ಟೊಂದು ತರಕಾರಿ ಬೆಳೆದಿರುವುದನ್ನು ನೋಡಿದರೆ, ಇದ್ಯಾವುದೋ ಮಲೆನಾಡಿನ ಕೃಷಿಕರ ಭೂಮಿ ಇರಬೇಕು ಎನ್ನಿಸಿರಬೇಕಲ್ಲವಾ? ಹಾಗೆಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಏಕೆಂದರೆ, ಇದು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಚಿಮ್ಮಡ ಗ್ರಾಮದ ತರಕಾರಿ ತೋಟ. ರೈತ ಮಹಾಂತೇಶ್ ಪಾಂಡಪ್ಪ ಜಾಲಿಕಟ್ಟೆ ಇದರ ವಾರಸುದಾರರು.

ಓದಿದ್ದು ಹತ್ತನೇ ತರತಗತಿವರೆಗೆ. ಆರ್ಥಿಕ ಸಂಕಷ್ಟದ ಕಾರಣಕ್ಕೆ ಅವರ ಓದು ಮೊಟಕಾಯಿತು. ವಾಹನ ಚಾಲಕರಾಗಿ ದುಡಿಯುತ್ತಿದ್ದ ಮಹಾಂತೇಶ, ಅಪ್ಪ ಪಾಂಡಪ್ಪ ನೀಡಿದ ಸಲಹೆಯೊಂದಿಗೆ ಕೃಷಿಗೆ ಮರಳಿದರು. ತಮ್ಮ ಫಲವತ್ತಲ್ಲದ 11 ಎಕರೆ ಒಣ ಜಮೀನಿನಲ್ಲಿ, ನೊಗಕ್ಕೆ ಹೆಗಲುಕೊಟ್ಟು, ವ್ಯವಸಾಯ ಆರಂಭಿಸಿದರು. ಅಲ್ಲಿ, ಇಲ್ಲಿ ಬೇಸಾಯದ ಕ್ರಮ ನೋಡಿದ್ದ ಮಹಾಂತೇಶ್, ಅದನ್ನೇ ಅನುಸರಿಸಲು ಪ್ರಯತ್ನಿಸಿದರು.

ಆರ್ಥಿಕ ಕೊರತೆಯಿಂದಾಗಿ, ಕೃಷಿ ಸುಲಭವಾಗಿ ಸಾಗಲಿಲ್ಲ. ಹೀಗಾಗಿ ಬ್ಯಾಂಕ್‌ನಲ್ಲಿ ಸಾಲ ಕೇಳಿದರು. ಆದರೆ, ಬ್ಯಾಂಕ್‌ನವರು ಕೇಳಿದಷ್ಟು ಸಾಲ ಕೊಡಲಿಲ್ಲ. ಸಿಕ್ಕಷ್ಟೇ ಹಣದಲ್ಲಿ ಕೊಳವೆಬಾವಿ ಕೊರೆಸಿ, ಅರಣ್ಯ, ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಯೋಜನೆ ರೂಪಿಸಿದರು. ಪುನಃ ಹಣ ಸಾಕಾಗಲಿಲ್ಲ. ಹಾಗಾಗಿ ಅಲ್ಪ ಪ್ರಮಾಣದಲ್ಲಿ ತರಕಾರಿ ಬೆಳೆ ಬೆಳೆಯಲು ಶುರು ಮಾಡಿದರು. ಬೆಳೆದ ತರಕಾರಿಯನ್ನು ಸ್ಥಳೀಯ ಮಾರುಕಟ್ಟೆಗೆ ಹೊತ್ತು ಮಾರಿದರು. ’ನೆಲಮೂಲ ಜ್ಞಾನ’ದಲ್ಲೇ ಅರಳಿದ ಈ ತರಕಾರಿ ಕೃಷಿ ಸಣ್ಣ ಲಾಭದೊಂದಿಗೆ ಅವರ ಜೀವನಕ್ಕೆ ಆಸರೆಯಾಯಿತು.

ಹಾಗೆ ಸಣ್ಣ ಲಾಭದ ತರಕಾರಿ ಬೆಳೆ ಇಂದು ದೊಡ್ಡದಾಗಿ ವಿಸ್ತಾರವಾಗಿದೆ. ಮಹಾಂತೇಶ ಜಮೀನಿ ತುಂಬಾ ತರಕಾರಿ ಬೆಳೆ. ಜತೆಗೆ, ತಮ್ಮ ಕುಟುಂಬದವರ ಜತೆಗೆ, ಹತ್ತಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಕಾರ್ಮಿಕರ ವೇತನಕ್ಕಾಗಿ ಸುಮಾರು ₹40ಸಾವಿರದಷ್ಟು ಖರ್ಚು ಮಾಡುತ್ತಾರೆಂದರೆ, ಅವರ ತರಕಾರಿ ಕೃಷಿಯ ಆದಾಯ ವ್ಯಾಪ್ತಿಯನ್ನು ಲೆಕ್ಕ ಹಾಕಿಕೊಳ್ಳಬಹುದು.

ಇಸ್ರೇಲ್ ಮಾದರಿ

ಕೃಷಿ ಇಲಾಖೆಯ ಹಲವು ತರಬೇತಿಗಳು ಹಾಗೂ ಕೃಷಿ ಅಧಿಕಾರಿಗಳ ಸಲಹೆ ಮೇರೆಗೆ ಮಹಾಂತೇಶ ಇಸ್ರೇಲ್ ಮಾದರಿಯ ಕೃಷಿ ಅಳವಡಿಸಿಕೊಂಡಿದ್ದಾರೆ. ಪ್ರತಿ ಬೆಳೆಗೆ (ಪ್ಲಾಸ್ಟಿಕ್ ಮಲ್ಚಿಂಗ್)ಮುಚ್ಚಿಗೆ ಮಾಡುತ್ತಿದ್ದಾರೆ. ಎಲ್ಲ ಗಿಡಗಳಿಗೆ ಸಮಾನವಾಗಿ ಗೊಬ್ಬರ, ನೀರು ಪೂರೈಕೆಯಾಗುವಂತಹ ತಾಂತ್ರಿಕ ವಿಧಾನ ಅಳವಡಿಸಿದ್ದಾರೆ. ‘ಮಲ್ಚಿಂಗ್‌ನಿಂದ ಕಳೆ ನಿಯಂತ್ರಣವಾಗುತ್ತದೆ. ತೇವಾಂಶ ರಕ್ಷಣೆಯಾಗುತ್ತದೆ. ಗೊಬ್ಬರ ಮತ್ತು ನೀರು ಕೊಡುವ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ಹಣ, ಸಮಯ, ನೀರು ಉಳಿತಾಯವಾಗುತ್ತದೆ. ಕಾರ್ಮಿಕರ ಸಮಸ್ಯೆಯೂ ಇರುವುದಿಲ್ಲ’ ಎಂದು ಪ್ಲಾಸ್ಟಿಕ್ ಪರದೆ ಸರಿಸಿ, ತೇವಭರಿತ ಮಣ್ಣನ್ನು ತೋರಿಸುತ್ತಾ ವಿವರಿಸಿದರು ಮಹಾಂತೇಶ. ಸದ್ಯ ಟೊಮೆಟೊ, ದಪ್ಪ ಮೆಣಸಿನಕಾಯಿ, ಕೋಸುಗಳನ್ನು ಇದೇ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ.

ಎಲೆಕೋಸಿಗೆ ಹೆಚ್ಚಿದ ಬೇಡಿಕೆ

ಮಹಾಂತೇಶ ಬೆಳೆಯುವ ಎಲೆಕೋಸಿಗೆ ಕರ್ನಾಟಕವಲ್ಲದೇ ಹೊರರಾಜ್ಯಗಳಾದ ಗೋವಾ, ಮಹಾರಾಷ್ಟ್ರಗಳಲ್ಲೂ ಬೇಡಿಕೆ ಇದೆ. ಅದಕ್ಕೆ ಕಾರಣ, ಇವರು ಬೇಡಿಕೆಗೆ ತಕ್ಕಷ್ಟು, ರೋಗ ರಹಿತ ತರಕಾರಿಗಳನ್ನು ಪೂರೈಸುತ್ತಾರೆ.

ಹೀಗಾಗಿ ಬೇರೆ ಬೇರೆ ಭಾಗದ ತರಕಾರಿ ದಲ್ಲಾಳಿಗಳು ದೂರವಾಣಿಯ ಮೂಲಕ ಬೆಲೆ ನಿಗದಿಪಡಿಸಿಕೊಂಡು, ಬೇಡಿಕೆ ಸಲ್ಲಿಸುತ್ತಾರೆ. ವಾಹನ ಸಹಿತ ತೋಟಕ್ಕೆ ಬಂದುತರಕಾರಿ ಖರೀದಿಸುತ್ತಾರೆ. ವಾರಕ್ಕೆ ಎರಡು ಬಾರಿ ಒಂದೊಂದುಲೋಡ್‌ ತರಕಾರಿಖರೀದಿಸುತ್ತಾರೆ. ‌

‘1 ಎಕರೆ ಎಲೆಕೋಸು ಕೃಷಿಗೆ ₹ 50 ಸಾವಿರ ಖರ್ಚು ತಗಲುತ್ತದೆ. ಕೆ.ಜಿ ಕೋಸಿಗೆ ₹10 ದೊರೆತರೂ ₹ 1.50 ಲಕ್ಷದವರೆಗೂ ಆದಾಯ ಪಡೆಯಬಹುದು’ ಎನ್ನುತ್ತಾರೆ ಮಹಾಂತೇಶ. ‘ಈ ತರಕಾರಿ ಹಂತ ಹಂತವಾಗಿ ಕೊಯ್ಲಿಗೆ ಬರುತ್ತದೆ. ಪ್ರತಿ ದಿನ ಸಂಜೆಯೇ ಬಲಿತ ಹೂವುಗಳನ್ನು ಕೊಯ್ಲು ಮಾಡುತ್ತೇವೆ. ತಾಜಾ ಸ್ಥಿತಿಯಲ್ಲಿಯೇ ಮಾರುಕಟ್ಟೆಗೆ ಕಳಿಸುತ್ತೇವೆ’ ಎಂದು ವಿವರಿಸುತ್ತಾರೆ ಅವರು.

ಅರಿಸಿನ ಬೆಳೆಯಲ್ಲಿ ಎತ್ತಿದ ಕೈ

ಮಹಾಂತೇಶ ಅವರ ಜಮೀನು ಕೆಂಪು ಹಾಗೂ ಕಪ್ಪು ಮಣ್ಣಿನ ಭೂಮಿ. ಇದು ಅರಿಸಿನ ಕೃಷಿಗೆ ಹೆಚ್ಚು ಸೂಕ್ತವಾಗಿದೆ. ಹೀಗಾಗಿಯೇ, ಅರಿಸಿನದಲ್ಲೂ ಉತ್ತಮ ಇಳುವರಿ ತೆಗೆದಿದ್ದಾರೆ. ಈಗಾಗಲೇ ಒಂದು ಅವಧಿಯ ಫಸಲನ್ನು ಮಾರುಕಟ್ಟೆಗೆ ಕಳುಹಿಸಿದ್ದಾರೆ. ಮತ್ತೊಂದು ಬೆಳೆ ಜಮೀನಿನಲ್ಲಿದೆ. ಅರಿಸಿನ ಕೃಷಿಗಾಗಿ, ತೋಟಗಾರಿಕೆ ಇಲಾಖೆಯ ನೆರವೂ ಪಡೆದಿದ್ದಾರೆ.

ಅರಿಸಿನವನ್ನು ಸಂಸ್ಕರಿಸಿ ತಮಿಳುನಾಡು, ಮಧ್ಯಪ್ರದೇಶ ಮತ್ತು ತೆಲಂಗಾಣದ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಎಕರೆಗೆ ಸರಾಸರಿ 45 ಕ್ವಿಂಟಲ್ ಇಳುವರಿ ಪಡೆದಿದ್ದಾರೆ. ಕ್ವಿಂಟಲ್‌ಗೆ ₹ 7500 ದರ ಸಿಕ್ಕಿದೆ.

ದೊಡ್ಡಬೆಳೆಗಿಂತ ಸಣ್ಣ ಬೆಳೆ ಲೇಸು

‘ದೊಡ್ಡ ಬೆಳಿ ಹಾಕಿದ್ರ ಬೀಜ ಗೊಬ್ಬರಕ್ಕಾಗಿ ಸಾವಿರಾರು ರೂಪಾಯಿ ವ್ಯಯಿಸಬೇಕು, ಜತೆಗೆ, ಅವುಗಳಿಗೆ ಕಾಡುವ ರೋಗಗಳ ನಿಯಂತ್ರಣಕ್ಕೆ ನೂರಾರು ರೂಪಾಯಿ ಖರ್ಚು ಮಾಡಬೇಕು. ಇಷ್ಟೆಲ್ಲ ವ್ಯಯಿಸಿದರೂ ಕೊನೆಗೆ ಕೈಗೆ ಫಸಲು ದಕ್ಕುತೈತಿ ಅನ್ನೊ ಹೊತ್ನಾಗ ಕೃಷಿ ಮಾರುಕಟ್ಟೆಯಲ್ಲಿ ಬೆಲೆ ಇಳಿಮುಖವಾಗಿರತೈತಿ. ಅಲ್ದ ಅದರಾಗ ದಲ್ಲಾಳಿಗಳ ಮೋಸ ಬ್ಯಾರೆ ನಡೀತೈತಿ, ಅದಕ್ಕೆ, ನಾನು ವಾರಕ್ಕೊಮ್ಮೆ ತಿಳಿದು ಹೋಗುವ ಲಾಭದತರಕಾರಿಬೆಳೆನೇ ನಮ್ಮ ಕೈಹಿಡಿದಿದೆ’ ಎಂದು ತರಕಾರಿ ಬೆಳೆದ ಹಿಂದಿನ ಉದ್ದೇಶವನ್ನು ವಿವರಿಸುತ್ತಾರೆ.

‘ಬೆಲೆ ಏರಿಳಿತದ ಕಾಲವಿದು. ಹಾಗಾಗಿ, ರೈತರು ನಾಲ್ಕಾರು ವಿಧಧ ತರಕಾರಿಬೆಳೆದರೆ ಒಳ್ಳೆಯದು. ಒಂದಕ್ಕೆ ಬೆಲೆ ದಕ್ಕದಿದ್ದರೂ ಮತ್ತೊಂದಕ್ಕೆ ಬೆಲೆ ಸಿಕ್ಕೇ ಸಿಗುತ್ತದೆ’ ಎಂಬುದು ಇವರ ಅನುಭವದ ಮಾತು. ಹೆಚ್ಚಿನ ಮಾಹಿತಿಗಾಗಿ ಮಹಾಂತೇಶ ಅವರನ್ನು 9164941877 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT