ಗುರುವಾರ , ಜೂನ್ 30, 2022
25 °C
Halasu

ವಿಶಿಷ್ಟ ಹಲಸು

ವಿನಾಯಕ ಭಟ್ ನರೂರು Updated:

ಅಕ್ಷರ ಗಾತ್ರ : | |

Prajavani

‘ನೇರ್ಲಮನೆ ಚಿಕ್ಕಪ್ಪ ಫೋನ್ ಮಾಡಿದ್ದ. ಹಲಸಿನ ಕಾಯಿ ಕೊಯ್ಸಿ ಇಟ್ಟಿದ್ನಡ. ಬಂದು ತಗಂಡೋಗಕ್ಕೆ ಹೇಳಿದ್ದ’ ತೋಟದಲ್ಲಿದ್ದವನಿಗೆ ಸುದ್ದಿ ರವಾನಿಸಿದಳು ಮಡದಿ. ಈ ನೇರ್ಲಮನೆ ಶಿರಸಿಯಿಂದ ಹದಿನೈದು ಕಿ.ಮೀ. ದೂರದಲ್ಲಿರುವ ಹಳ್ಳಿ. ಭೇಟಿ ಕೊಡದೆ ಬಹಳ ದಿನವಾದ್ದರಿಂದ ಮಧ್ಯಾಹ್ನದ ಬಿಸಿ ಊಟಕ್ಕೇ ಹಾಜರಾದೆವು.

ಕೈ ತೊಳೆಯಲು ಅಂಗಳಕ್ಕೆ ಹೋದರೆ ಕಣ್ಣಿಗೆ ಬಿತ್ತು ಭೀಮಗಾತ್ರದ ಬಕ್ಕೆ ಹಲಸು! ಕಷ್ಟಪಟ್ಟು ಒಂದು ಕಾಯಿ ಎತ್ತಿ ಫೋಟೊ ತೆಗೆಸಿಕೊಂಡೆ. ಅಜಮಾಸು 25 ಕೆಜಿ ಭಾರ. ಅಂಥ ನಾಲ್ಕು ಕಾಯಿಗಳು ಸಾಲಾಗಿದ್ದವು.

‘ಅದೇ ಹಳೆಯ ಮರ. ನಾನು ಈಗ ಹತ್ತಲಾರೆ. ಆಳು ಬಂದರೆ ಮಾತ್ರ ಕೊಯ್ಲು’ ಅಂದ ಮಂಜುನಾಥ ಮಾವ ಹಿತ್ತಲಿಗೆ ಕೈತೋರಿದ. ಮರದಲ್ಲಿ ಅಂಥದ್ದೇ ಇನ್ನೂ 15-20 ಕಾಯಿಗಳಿದ್ದವು. ಊಟದ ಬಳಿಕ ಒಂದು ಕಾಯಿ ಕತ್ತರಿಸಿ ಬಿಡಿಸಿದರೆ ಬುಟ್ಟಿ ತುಂಬ ಸೊಳೆ ಸಿಕ್ಕಿತು. ಕೆನೆಬಣ್ಣದ ಉದ್ದನೆಯ ಸೊಳೆಗಳು. ‘ಇದರ ಹಪ್ಪಳ ಚೊಲೋ ಆಗ್ತು’ ಸಿಂಧತ್ತೆಯ ಶಿಫಾರಸು. ಚಹಾದ ಜೊತೆಗೆ ಬಂದ ಅದೇ ಹಲಸಿನ ಗರಿಗರಿ ಚಿಪ್ಸ್ ರುಚಿಯಾಗಿತ್ತು.

ಪಕ್ಕದ ಹಿತ್ತಲಲ್ಲಿ ಇನ್ನೊಂದು ಹಲಸಿನ ಮರ ಆಕರ್ಷಿಸಿತು. ಅಷ್ಟೇನು ವಯಸ್ಸಾಗದ ನೇರವಾದ ಮರದಲ್ಲಿ ಬುಡದಿಂದ ತುದಿಯತನಕ ಕಾಯಿ ಗೊಂಚಲು. ಫುಟ್ಬಾಲ್ ಗಾತ್ರದ ಗುಂಡನೆಯ ಕಾಯಿಗಳು. ‘ಬಕ್ಕೆ ಕಾಯಲ್ಲ, ಸಾದಾ. ಕೇಸರಿ ಸೊಳೆ. ರುಚಿ ಸಾಧಾರಣ’ ಮಂಜುನಾಥ ಹೆಗಡೆಯವರ ವಿವರಣೆ. ಆದರೆ ರುದ್ರಾಕ್ಷಿ ಹಲಸಿನಂತಿರುವ ಆಕಾರ, ಗಾತ್ರಗಳು ಅದರ ಆಕರ್ಷಣೆ.

ಈ ಕಾಯಿಗಳನ್ನು ಕೊಯ್ದು ಸಂಸ್ಕರಿಸಲು ಆ ಪುಟ್ಟ ಊರಿನಲ್ಲಿ ಜನರಿಲ್ಲ. ಖರೀದಿಗೆ ಹೊರಗಿನವರು ಬಂದಿಲ್ಲ. ಅಪರೂಪದ ಈ ತಳಿಗಳ ಕಸಿ ಸಸಿ ಮಾಡಿ ಪಸರಿಸಲು ಅವರಿಗೆ ಸಾಧ್ಯವಿಲ್ಲ. ಶಿರಸಿಯ ತೋಟಗಾರಿಕೆ ಮತ್ತು ಅರಣ್ಯ ಮಹಾವಿದ್ಯಾಲಯಗಳು ಆಸಕ್ತಿವಹಿಸಿ, ಈ ತಳೀಯ ಸಸಿಗಳನ್ನು ಅಭಿವೃದ್ಧಿ ಮಾಡಿದರೆ, ತಳಿ ಉಳಿದೀತು. ‌

ಸಣ್ಣ ಕುಟುಂಬಕ್ಕೆ ಅಡುಗೆಗಾಗಿ ಫುಟ್ಪಾಲ್‌ ಆಕಾರದ ಹಲಸು ಉತ್ತಮ ಎನ್ನಿಸುತ್ತದೆ. ಇದು ಇಳುವರಿಯೂ ಹೆಚ್ಚು ಬರಬಹುದು. ಬಕ್ಕೆ, ಗಾತ್ರದಲ್ಲಿ ದೊಡ್ಡದು. ಹಾಗೆ ಅದನ್ನು ತಿನ್ನುವುದಕ್ಕಾಗಿ ಬಳಸಬಹುದು. ಈ ಎರಡೂ ತಳಿಗಳು ವಿಶಿಷ್ಟ ಎನ್ನಿಸುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು