ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಬೆಳೆಯಲ್ಲಿ ಯಶಸ್ಸು: ನಾರಗೇರಿಯ ಮಾಣೇಶ್ವರ ಗೌಡರ ಕೃಷಿ ಉತ್ಸಾಹ

ನಾರಗೇರಿಯ ಮಾಣೇಶ್ವರ ಗೌಡರ ಕೃಷಿ ಉತ್ಸಾಹ
Last Updated 2 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಶಿರವಾಡ ಸಮೀಪದ ನಾರಗೇರಿಯಲ್ಲಿ ಹಾದುಹೋದ ರೈಲ್ವೆ ಹಳಿ ಪಕ್ಕದ ಜಾಗದಲ್ಲಿ ಗಿಡಗಳಿಗೆ ನೀರು, ಗೊಬ್ಬರ ನೀಡುತ್ತಿರುವ ವೃದ್ಧರೊಬ್ಬರು ವರ್ಷದ ಬಹುತೇಕ ದಿನಗಳಲ್ಲಿ ಕಾಣಸಿಗುತ್ತಾರೆ. ಅವರ ಕೃಷಿ ಕಾರ್ಯ ಕಂಡು ಹಲವರು ಹುಬ್ಬೇರಿಸುತ್ತಾರೆ. ಹಲವು ಬಗೆಯ ತರಕಾರಿಗಳನ್ನು ಬೆಳೆದು ಅದರಲ್ಲೇ ಜೀವನ ಕಟ್ಟಿಕೊಂಡ ಆ ಇಳಿ ವಯಸ್ಸಿನ ವ್ಯಕ್ತಿಯ ಹೆಸರು ಮಾಣೇಶ್ವರ ಗೌಡ.

ಸ್ವಂತ ಜಮೀನು ಇಲ್ಲದಿದ್ದರೂ ಬೇರೆವರ ಜಮೀನು ಗೇಣಿಗೆ ಪಡೆದು ಮೂರುವರೆ ದಶಕದಿಂದ ತರಕಾರಿ ಬೆಳೆ ಬೆಳೆಯುತ್ತಿರುವುದು ಅವರ ವಿಶೇಷ ಸಾಧನೆ. ಮಳೆಗಾಲದಲ್ಲಿ ಸೋರೆಕಾಯಿ, ಸೌತೆಕಾಯಿ, ಅವರೆಕಾಯಿ, ಬೆಂಡೆಕಾಯಿ, ಇನ್ನಿತರ ತರಕಾರಿ ಬೆಳೆಯುವ ಗೌಡರು ಬೇಸಿಗೆಯಲ್ಲಿ ಬದನೆ, ಹರಿವೆ ಸೊಪ್ಪು ಕೃಷಿ ಮೊರೆ ಹೋಗುತ್ತಾರೆ. ಇಲ್ಲಿ ಬೆಳೆದ ತರಕಾರಿಗಳಿಗೆ ಗೋವಾ, ಶಿರಸಿ, ಕುಮಟಾ, ಸ್ಥಳೀಯವಾಗಿಯೂ ಮಾರುಕಟ್ಟೆ ಇದೆ.

72ರ ಇಳಿ ವಯಸ್ಸಿನಲ್ಲೂ ಕೃಷಿ ಚಟುವಟಿಕೆಯಿಂದ ವಿಮುಖಗೊಳ್ಳದ ಅವರು ತರಕಾರಿ ಮಾರಾಟದಿಂದ ಬರುವ ಆದಾಯದಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

‘ಗೋಕರ್ಣದಿಂದ ಕಾರವಾರಕ್ಕೆ ಬಂದು ನೆಲೆನಿಂತ ನಮಗೆ ತರಕಾರಿ ಬೆಳೆಯೇ ಜೀವನಾಧಾರವಾಗಿದೆ. ಕಡವಾಡ ಗ್ರಾಮದಲ್ಲಿ ಜಾಗ ಗೇಣಿ ಪಡೆದು ಈ ಹಿಂದೆ ಕೃಷಿ ಮಾಡುತ್ತಿದ್ದೆ. ಅಲ್ಲಿನ ಜಾಗವನ್ನು ಮಾಲೀಕರು ಬೇರೊಬ್ಬರಿಗೆ ಮಾರಾಟ ಮಾಡಿದ ಬಳಿಕ ನಾರಗೇರಿಗೆ ವಲಸೆ ಬಂದೆ. ಐದು ವರ್ಷಗಳಿಂದ ಇಲ್ಲಿ ಹಲವು ಬಗೆಯ ಬೆಳೆ ತೆಗೆಯುತ್ತಿದ್ದೇನೆ’ ಎಂದು ಮಾಣೇಶ್ವರ ಹೇಳಿದರು.

‘ರಾಸಾಯನಿಕ ಬಳಸದೆ ಕೃಷಿ ಮಾಡುತ್ತಿದ್ದೇನೆ. ಈ ಮೊದಲು ವರ್ಷಕ್ಕೆ ಎರಡು ಬಾರಿ ದೊಡ್ಡ ಪ್ರಮಾಣದಲ್ಲೇ ತರಕಾರಿ ಬೆಳೆಯಲಾಗುತ್ತಿತ್ತು. ಇಳಿ ವಯಸ್ಸಿನಲ್ಲಿ ಹೆಚ್ಚು ದುಡಿಮೆ ಕಷ್ಟ, ಜತೆಗೆ ಆಗಾಗ ಕೈಕೊಡುತ್ತಿರುವ ಆರೋಗ್ಯದ ಕಾರಣದಿಂದ ಮಳೆಗಾಲದಲ್ಲಿ ಮಾತ್ರ ಹೆಚ್ಚು ತರಕಾರಿ ಬೆಳೆಯುತ್ತೇನೆ. ಬೇಸಿಗೆಯಲ್ಲಿ ಹರಿವೆ ಸೊಪ್ಪು ಬೆಳೆಸುತ್ತೇನೆ. ಕೆಲವು ದಿನಗಳ ಹಿಂದಷ್ಟೆ ಬದನೆಕಾಯಿಗಳನ್ನು ಕೊಯ್ಲು ಮಾಡಿ ಮಾರಾಟ ಮಾಡಿದೆ’ ಎಂದರು.

ಕಲ್ಲು ಮುಳ್ಳಿದ್ದ ಜಾಗದಲ್ಲಿ ಹಸಿರು ಕಳೆ

ಕಲ್ಲು, ಮುಳ್ಳುಗಳು ತುಂಬಿದ್ದ ನಾರಗೇರಿಯ ಬಂಜರು ಭೂಮಿಯಲ್ಲಿ ಹಸಿರು ನಳನಳಿಸುವಂತೆ ಮಾಡಿದ ಸಾಧನೆ ಮಾಣೇಶ್ವರ ಗೌಡರ ಪಾಲಿಗಿದೆ. ರೈಲು ಹಳಿ ಹಾದುಹೋದ ಜಾಗದ ಪಕ್ಕದಲ್ಲಿ ಕೃಷಿ ಮಾಡಲು ಹಲವರು ಹಿಂದೇಟು ಹಾಕಿದ್ದರು. ಆದರೆ ಕೆಲವು ವರ್ಷದ ಹಿಂದೆ ಈ ಜಾಗ ಗೇಣಿ ಪಡೆದ ಅವರು ಇಲ್ಲಿಯೇ ವೈವಿಧ್ಯಮಯ ತರಕಾರಿಗಳನ್ನು ಬೆಳೆಸುವ ಕೆಲಸ ಮಾಡಿದ್ದಾರೆ.

‘ಜಾಗ ಸಮತಟ್ಟು ಮಾಡಲು ಸುಮಾರು ₹80 ಸಾವಿರ ಖರ್ಚಾಯಿತು. ನೀರಾವರಿಗೆ ಬಾವಿ ಇದೆ. ಅದರಿಂದ ಈ ಜಾಗದಲ್ಲಿ ತರಕಾರಿ ಕೃಷಿ ಸಾಧ್ಯವಾಗಿದೆ’ ಎನ್ನುತ್ತಾರೆ ಮಾಣೇಶ್ವರ ಗೌಡ.

***

ಬೇರೆಯವರ ಜಮೀನು ಗೇಣಿ ಪಡೆದು ಕೃಷಿ ಮಾಡುತ್ತಿದ್ದೇನೆ. ಗೇಣಿ ಪಡೆದು ಮಾಡುವ ಕೃಷಿಗೂ ಸರ್ಕಾರ ಸಹಾಯಧನ, ಇನ್ನಿತರ ಕೃಷಿ ಸೌಲಭ್ಯ ಒದಗಿಸಿದರೆ ಅನುಕೂಲ ಆಗುತ್ತದೆ.

ಮಾಣೇಶ್ವರ ಗೌಡ, ತರಕಾರಿ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT