ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ಮರೆಯಾದ ಹಿಂಗಾರು ಹಿತ್ತಲು

125ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಧ್ಯಯನ; ಕ್ರಿಮಿನಾಶಕ ಸಹಿತ ತರಕಾರಿ ಮಾರುಕಟ್ಟೆ ವಿಸ್ತರಣೆ
Last Updated 5 ಜನವರಿ 2020, 19:45 IST
ಅಕ್ಷರ ಗಾತ್ರ

ಶಿರಸಿ: ಮಲೆನಾಡಿನ ಭತ್ತದ ಗದ್ದೆ, ಮನೆಯಂಗಳಲ್ಲಿ ಹಿಂಗಾರು ಹಿತ್ತಲು ಕಡಿಮೆಯಾಗಿ, ತರಕಾರಿ ವೈವಿಧ್ಯಗಳು ಕಾಣೆಯಾಗುತ್ತಿರುವ ಪರಿಣಾಮ ಸಸ್ಯಾಹಾರಿ ಹಳ್ಳಿಗರಲ್ಲಿ ವಿಟಮಿನ್ ಹಾಗೂ ಖನಿಜಾಂಶದ ಕೊರತೆ ಕಾಡುತ್ತಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಅರಣ್ಯನಾಶ, ಬದಲಾಗುತ್ತಿರುವ ಜೀವನಕ್ರಮ ಹಾಗೂ ಜಾಗತಿಕ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ, ಕಾಣೆಯಾಗುತ್ತಿರುವ ಜೀವವೈವಿಧ್ಯ, ಜನಜೀವನದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ. ಕೇಶವ ಕೊರ್ಸೆ ನಡೆಸುತ್ತಿರುವ ಅಧ್ಯಯನದ ಮಧ್ಯಂತರ ವರದಿಯು, ಈ ಸಂಗತಿಯನ್ನು ಬಹಿರಂಗಪಡಿಸಿದೆ.

ಕಳೆದ ಒಂದೂವರೆ ದಶಕದಲ್ಲಿ ಸಾವಯವ ಪದ್ಧತಿಯಲ್ಲಿ ಕೃಷಿಕರು ಬೆಳೆಯುತ್ತಿದ್ದ ಸವತೆಕಾಯಿ, ಕೆಂಪುಮೆಕ್ಕೆ, ಪಟ್ಟೆ ಮೊಗೆಕಾಯಿ, ತುಪ್ಪಹೀರೆ, ಮಿಡಿತೊಂಡೆ, ಸೀಮೆ ಬದನೆ ಮೊದಲಾದ 150ಕ್ಕೂ ಹೆಚ್ಚು ಪಾರಂಪರಿಕ ತರಕಾರಿ ತಳಿಗಳು ಮಾಯವಾಗಿವೆ. ಹಳ್ಳಿಯಲ್ಲಿರುವ ಹಿರಿಯರು ಇದರ ಹೆಸರು ಹೇಳಬಲ್ಲರೇ ವಿನಾ ತಳಿ ವೈವಿಧ್ಯದ ಬೀಜ, ಗಿಡಗಳು ಸಿಗುತ್ತಿಲ್ಲ. ಹಿಂಗಾರಿನ ಬೆಳೆಯಾಗಿದ್ದ ದ್ವಿದಳ ಧಾನ್ಯಗಳ ಬಿತ್ತನೆ ಕೂಡ ಗಣನೀಯವಾಗಿ ಕುಸಿದಿದೆ.

ಇದರಿಂದ ಸಾವಯವ ತರಕಾರಿ ಇಳಿಮುಖವಾಗಿ, ಲಾಭ ಕೇಂದ್ರಿತ ತರಕಾರಿ ಪೂರೈಕೆಯ ವಾಣಿಜ್ಯಿಕ ವಿದ್ಯಮಾನ ಹೆಚ್ಚುತ್ತಿದೆ. ಈ ಸ್ಪರ್ಧೆಯಲ್ಲಿ ಕ್ರಿಮಿನಾಶಕ ಬಳಸಿ ಬೆಳೆದ ತರಕಾರಿಗಳು ಮಾರುಕಟ್ಟೆಯನ್ನು ಆಕ್ರಮಿಸಿ, ಜನರ ಆರೋಗ್ಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.

ಒಂದು ವರ್ಷದಿಂದ ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಮಲೆನಾಡಿನ 125ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಈ ಅಧ್ಯಯನ ನಡೆದಿದೆ. ‘ಪಾರಂಪರಿಕ ಕೃಷಿ ಜೀವವೈವಿಧ್ಯಗಳು ಕಣ್ಮರೆಯಾಗುತ್ತಿರುವ ಕಾರಣ ಹಾಗೂ ಪರಿಣಾಮ ಅರ್ಥೈಸಿಕೊಳ್ಳಲು ಅಧ್ಯಯನ ಆರಂಭಿಸಿದೆವು. ಕುಟುಂಬ ವಿಘಟನೆ, ಕುಂಠಿತವಾಗುತ್ತಿರುವ ಕೆಲಸ ಮತ್ತು ಕೊಡುಕೊಳ್ಳುವಿಕೆ ಸಂಸ್ಕೃತಿ, ಕೃಷಿ ಕಾರ್ಮಿಕರ ಕೊರತೆ, ಸುಲಭದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗುವ ತರಕಾರಿಗಳು ಪಾರಂಪರಿಕ ಪದ್ಧತಿ ಕಳೆದು ಹೋಗುವಂತೆ ಮಾಡಿವೆ. ಹಳ್ಳಿಗರ ತರಕಾರಿ ಖರೀದಿ ವೆಚ್ಚ 10ಪಟ್ಟು ಹೆಚ್ಚಿದೆ’ ಎನ್ನುತ್ತಾರೆ ಕೇಶವ ಕೊರ್ಸೆ.

‘ಶ್ರಮಜೀವಿ ತರಕಾರಿ ಕೃಷಿಕರನ್ನು ಗುರುತಿಸುವಿಕೆ, ಸಮುದಾಯ ಬೀಜ ಬ್ಯಾಂಕ್, ಪಂಚಾಯ್ತಿಗಳ ಜೀವವೈವಿಧ್ಯ ನಿರ್ವಹಣಾ ಸಮಿತಿ ಬೆಂಬಲದಿಂದ ಇದನ್ನು ಪುನಶ್ಚೇತನಗೊಳಿಸಬಹುದು. ಇಲ್ಲವಾದಲ್ಲಿ, ಮುಂದಿನ ತಲೆಮಾರಿನವರು ಇಂತಹ ಅಪರೂಪದ ಜೀವವೈವಿಧ್ಯದ ಖುಷಿಯಿಂದ ವಂಚಿತರಾಗುತ್ತಾರೆ’ ಎಂಬುದು ಅವರ ಸಲಹೆ.

***

ಶೇ 88ಕ್ಕೂ ಹೆಚ್ಚು ಅತಿಸಣ್ಣ, ಸಣ್ಣ, ಮಧ್ಯಮ ಹಿಡುವಳಿದಾರರು ಗದ್ದೆಯಲ್ಲಿ ಮಾಡುತ್ತಿದ್ದ ಹಿಂಗಾರು ತರಕಾರಿ ಬೇಸಾಯವನ್ನು ಒಂದೂವರೆ ದಶಕದಲ್ಲಿ ಕೈಬಿಟ್ಟಿದ್ದಾರೆ
–ಡಾ. ಕೇಶವ ಕೊರ್ಸೆ, ಸಂರಕ್ಷಣಾ ಜೀವಶಾಸ್ತ್ರಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT