ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಕೃಷಿಗೆ ವರ್ಮುಡಿ ಕ್ಯಾಲೆಂಡರ್

Last Updated 8 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಕಾಸರಗೋಡು ಜಿಲ್ಲೆಯ ಪೆರ್ಲದ ಬಳಿಯ ಕೃಷಿಕ ಶಿವಪ್ರಸಾದ್ ವರ್ಮುಡಿ ಅವರಿಗೀಗ 52. ಮುಂದಿನ ವರ್ಷ ಅವರ ‘ತರಕಾರಿ ಸುರಕ್ಷತೆ’ಯ ಬೆಳ್ಳಿ ಹಬ್ಬ. ಇಪ್ಪತ್ತನಾಲ್ಕು ವರ್ಷಗಳಿಂದ ಈ ಮನೆಯವರ ಊಟಕ್ಕೆ ಅವರದೇ ಹಿತ್ತಿಲಿನ ತರಕಾರಿ. ಅದೂ ನಿರ್ವಿಷವಾದದ್ದು! ‘ಕಾಯಿಲೆಗಳು ನಮ್ಮ ಬಳಿ ಸುಳಿಯುವುದೇ ಇಲ್ಲ. ಮನೆಗೆ ಮದ್ದು ತಂದದ್ದೇ ಇಲ್ಲ’ ಎಂದು ಹೇಳುತ್ತಿರುತ್ತಾರೆ, ಹೆಮ್ಮೆಯಿಂದ.

‘ಪೆರ್ಲ ನಮ್ಮದೇ ಊರು. ಎಲ್ಲರೂ ಪರಿಚಿತರು. ಆದರೆ ಪೇಟೆಯಲ್ಲಿ ನಡೆದು ಹೋಗುವಾಗ ನನಗೆ ನಮಸ್ಕರಿಸದವರು ಇಬ್ಬರು – ಮೆಡಿಕಲ್ ಶಾಪ್ ಮತ್ತು ತರಕಾರಿ ಅಂಗಡಿಯವರು. ನಮಗೆ ಪರಸ್ಪರ ಪರಿಚಯ ಇಲ್ಲ ನೋಡಿ’ ಎಂದು ಚಟಾಕಿ ಹಾರಿಸುತ್ತಾರೆ.

ಹೆಚ್ಚಿನ ಕೃಷಿಕರೂ ಮಳೆಗಾಲ ಶುರುವಾದಾಗ ಅಂಗಳದಲ್ಲಿ ತರಕಾರಿ ಬೆಳೆಯುತ್ತಾರೆ. ಅದು ಮುಗಿದಾಗ ಚೀಲ ಹಿಡಿದು ಅಂಗಡಿಗೆ ಹೊರಡುತ್ತಾರೆ. ಆದರೆ ಶಿವಪ್ರಸಾದ್ ದಾರಿಯೇ ವಿಭಿನ್ನ. ಒಂದು ತರಕಾರಿ ಮುಗಿಯುವ ಮುನ್ನವೇ ಇನ್ನೊಂದನ್ನು ಬೆಳೆಸುವುದಕ್ಕೆ ತಯಾರಿ ಮಾಡಿಕೊಂಡಿರುತ್ತಾರೆ. ಇವರ ಅಕ್ಕಪಕ್ಕದ ಮನೆಯ ಗೃಹಿಣಿಯರಿಗೆ ‘ಇಂದು ಅಡುಗೆಗೆ ತರಕಾರಿ ಇಲ್ವಲ್ಲಾ ಎಂಬ ಚಿಂತೆ’ ಆದರೆ, ಇವರಲ್ಲಿ ‘ಇಷ್ಟೊಂದು ಇದೆಯಲ್ಲಾ, ಯಾವುದನ್ನು ಕತ್ತರಿಸಲಿ’ ಎಂಬ ಸಮೃದ್ಧಿಜನ್ಯ ತಲೆನೋವು.

ಬಿತ್ತುವ ಸಮಯ ಬಹು ಮುಖ್ಯ

ಶಿವ ಅವರ ಪ್ರಕಾರ, ‘ತರಕಾರಿಯ ತಳಿಯ ಆಯ್ಕೆ, ಉಪಚಾರ ಎಷ್ಟು ಮುಖ್ಯವೋ ಅದಕ್ಕೂ ಮುಖ್ಯ ಬಿತ್ತುವ / ನೆಡುವ ಸಮಯ.’ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಯಲ್ಲಿ ಯಾವ್ಯಾವಾಗ ಯಾವ ಬೆಳೆ ಶುರು ಮಾಡಬೇಕೆಂಬುದಕ್ಕೆ ಅವರು ಒಂದು ಕ್ಯಾಲೆಂಡರನ್ನೇ ರಚಿಸಿದ್ದಾರೆ. ಅಮವಾಸ್ಯೆ ಮತ್ತು ಹುಣ್ಣಿಮೆಗಳ ನಡುವೆ ‘ಪ್ರಥಮ, ದ್ವಿತೀಯ, ತೃತೀಯ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ನವಮಿ’ ಅಂತೆಲ್ಲಾ ತಿಥಿಗಳು ಬರುತ್ತವಲ್ಲಾ. ವರ್ಮುಡಿ ತರಕಾರಿ ಕೃಷಿ ಕ್ಯಾಲೆಂಡರ್ ಪ್ರಕಾರ ‘ಮಿ’ಯಿಂದ ಕೊನೆಗೊಳ್ಳುವ ತಿಥಿಯ ದಿನ ಬೀಜ ಬಿತ್ತಲೇ ಬಾರದು. ‘ವೈಜ್ಞಾನಿಕ ಕಾರಣ ಗೊತ್ತಿಲ್ಲ. ಆದರೆ ಆ ದಿನಗಳಲ್ಲಿ ಬಿತ್ತಿದರೆ ಸೋಲು ಖಚಿತ. ಇದು ಹೊಸ ಜ್ಞಾನ ಅಲ್ಲ, ಹಿರಿಯರಿಂದ ಬಂದದ್ದು’ ಎನ್ನುತ್ತಾರೆ.

ಶಿವಪ್ರಸಾದರ ಕ್ಯಾಲೆಂಡರಿನ ಆಯ್ದ ಭಾಗ ಹೀಗಿದೆ : ‘ಆದ್ರಾ ನಕ್ಷತ್ರದಲ್ಲಿ ಬರುವ ಜೂನ್ ತಿಂಗಳ ಅಮಾವಾಸ್ಯೆಯಂದು ಮುಳ್ಳುಸೌತೆ ಬೀಜ ಹಾಕಬೇಕು. ಜುಲೈ ತಿಂಗಳ ಆಟಿ ಅಮಾವಾಸ್ಯೆಯ ದಿನ ಸೌತೆ, ಕುಂಬಳಗಳ ಬೀಜ ಹಾಕುವುದು; ಬಸಳೆ ನೆಡುವುದು. ಸೆಪ್ಟೆಂಬರ್ ತಿಂಗಳ ತಾರೀಕು 15 – 20ರ ಅಂದಾಜು ತೊಂಡೆ ಬಳ್ಳಿ ನೆಡುವುದು; ಹಳೆ ಬಳ್ಳಿ ಕಡಿದು ಚಪ್ಪರ ಹಾಕುವುದು’
ತೊಂಡೆ ಕೃಷಿಗೆ ಎರಡು ಹೊಂಡ. ಒಂದು ಹೊಂಡದ ಬಳ್ಳಿ ಸೆಪ್ಟೆಂಬರ್‌ನಲ್ಲಿ ಕಡಿದು ಬಿಡುತ್ತಾರೆ. ಇನ್ನೊಂದರಲ್ಲಿ ಹೊಸದಾಗಿ ನೆಡುತ್ತಾರೆ. ಈ ಕ್ರಿಯೆಯ ಆವರ್ತನದಿಂದಾಗಿ ದೀರ್ಘಕಾಲ ತೊಂಡೆ ಸಿಗುತ್ತಿರುತ್ತದೆ.

ಕೊಳ್ಳುಗರ ಕೊರತೆ

ಪೇಟೆಯಿಂದ ತರಕಾರಿ ತರುವುದು, ಮಾರುವುದು – ಎರಡೂ ಇಷ್ಟವಿಲ್ಲ. ಎರಡನೆಯ ವಿಚಾರಕ್ಕೆ ಒಂದೇ ಅಪವಾದ ತೊಂಡೆಕಾಯಿ. ಎರಡು ದಿನಕ್ಕೊಮ್ಮೆ ಕೊಯ್ದಾಗ ಹೆಚ್ಚಾದ ತೊಂಡೆ ಮಾರಾಟ ಮಾಡಿಯೇ ತನ್ನ ತರಕಾರಿ ಕೃಷಿಯ ವೆಚ್ಚ ಸರಿದೂಗಿಸಬೇಕೆಂಬ ಪ್ಲಾನ್ ಇತ್ತು. ಎರಡು ಮೂರು ವರ್ಷ ಒಂದು ಹೋಟೆಲಿನವರು ಇಡೀ ವರ್ಷ ಸ್ವಲ್ಪ ಹೆಚ್ಚಿನ ದರದ ಒಪ್ಪಂದದಂತೆ ಕೊಂಡುಕೊಂಡಿದ್ದರು. ಆ ಒಪ್ಪಂದ ಮುಗಿದ ಮೇಲೆ ಈಗ ಸಾವಯವ ತರಕಾರಿಗೆ ತುಸು ಹೆಚ್ಚಿನ ದರ ಕೊಟ್ಟು ಕೊಳ್ಳುವವರು ಸನಿಹದ ಚಿಕ್ಕ ಪೇಟೆಯಲ್ಲಿ ಸಿಕ್ಕಿಲ್ಲ.

ತರಕಾರಿ ಕೃಷಿಗೆಂದೇ ಇವರು ಅರ್ಧ ಎಕರೆ ಮೀಸಲಿಟ್ಟಿದ್ದಾರೆ. ತೊಂಡೆಕಾಯಿಗೆ ಪ್ರತಿ ವರ್ಷ ಚಪ್ಪರ ಹಾಕಬೇಕು. ಶ್ರಮ ಉಳಿಸಲು ಇವರು ಚಪ್ಪರಕ್ಕೆ ಕಾಂಕ್ರೀಟ್ ಕಂಬ ಹಾಕಿಟ್ಟುಕೊಂಡಿದ್ದಾರೆ.

ಎಲ್ಲರಂತೆ ಇವರು ತೊಂಡೆಬಳ್ಳಿ ನೆಡುವುದು ಚೌತಿಗೆ ಅಲ್ಲ. ಅದಕ್ಕೆ ಮೂರು ವಾರ ಮೊದಲೇ ನೆಡುತ್ತಾರೆ. ಇವರ ಚಪ್ಪರದಡಿ ಎರಡು ತೊಂಡೆಯ ಹೊಂಡ ಇರುತ್ತದೆ. ಅದರಲ್ಲಿ ಹಿಂದಿನ ವಷ ನೆಟ್ಟ ಹೊಂಡದ ಬಳ್ಳಿಯನ್ನು ಅರ್ಧದಿಂದ ಕತ್ತರಿಸಿ ಬಿಟ್ಟುಬಿಡುತ್ತಾರೆ. ಅದಕ್ಕೂ ಹಿಂದಿನ ವರ್ಷ ನೆಟ್ಟ ಇನ್ನೊಂದು ಹೊಂಡದ ಬಳ್ಳಿ ಕಿತ್ತು ಹೊಸದಾಗಿ ನೆಡುತ್ತಾರೆ. ಹೀಗೆ ಮಾಡುವುದರಿಂದ ನವೆಂಬರ್ ತಿಂಗಳಲ್ಲೇ ತೊಂಡೆಕಾಯಿ ಸಿಗುತ್ತದೆ. ಹೊಸದಾಗಿ ನೆಟ್ಟ ಬಳ್ಳಿ ಜನವರಿಯಲ್ಲಿ ಕೊಯ್ಲಿಗೆ ಸಿದ್ಧವಾಗುತ್ತದೆ. ಒಂದು ಹೊಂಡದಲ್ಲಿ ಕೂಳೆ ಬೆಳೆ, ಇನ್ನೊಂದರಲ್ಲಿ ಹೊಸ ನಾಟಿ - ಹೀಗೆಯೇ ಮುಂದುವರಿಯುತ್ತದೆ. ಹೀಗೆ ಇವರಲ್ಲಿ ನವೆಂಬರ್‌ನಿಂದ ಜೂನ್‌ವರೆಗೆ ತೊಂಡೆಕಾಯಿ ಇಲ್ಲ ಎನ್ನುವಂತಿಲ್ಲ.

ತಮ್ಮದೇ ತರಕಾರಿ ನೆಚ್ಚಿಕೊಳ್ಳುವ ಹಲವರು ಸೌತೆ, ಕುಂಬಳ, ಚೀನಿಕಾಯಿ ಮೊದಲಾದ ಹೆಚ್ಚು ಕಾಲ ತಾಳುವ ತರಕಾರಿಗಳನ್ನು ದಾಸ್ತಾನು ಇಡುವುದು ರೂಢಿ. ಇವರು ಈ ಕೆಲಸವನ್ನೂ ಮಾಡುವುದಿಲ್ಲ. ಎಲ್ಲವೂ ಆಗಾಗ ಬೆಳೆಸಿದ ತಾಜಾ ತರಕಾರಿಯೇ!

ಉಳಿದೆಲ್ಲವರೂ ಅನ್ನಕ್ಕೆ ತರಕಾರಿಯ ತಯಾರಿ ಸೇರಿಸಿ ಉಂಡರೆ ಇವರ ಕ್ರಮ ತದ್ವಿರುದ್ಧ! ‘ನನಗೆ ತಾಜಾ ತರಕಾರಿಯೇ ಬೇಕು, ಅದೂ ಊಟದಲ್ಲಿ ಮೂರರಲ್ಲೆರಡು ಪಾಲು. ಅದು ನಮ್ಮ ಆರೋಗ್ಯ ಉಳಿಸಿಕೊಟ್ಟಿದೆ’ ಎನ್ನುತ್ತಾರೆ. ಹೆಚ್ಚುಕಮ್ಮಿ ಮೂರು ಡಜನ್ ತರಕಾರಿ ಬೆಳೆಯುವ ಇವರ ತೋಟದ ಬಾಳೆಕಾಯಿ, ಮುಂಡಿಗಡ್ಡೆ ಅಡುಗೆಮನೆಗೆ ಬರಬೇಕಾಗುವುದೇ ಇಲ್ಲ.

ಎರಡು ದಶಕಕ್ಕೆ ಮೀರಿದ ಅನುಭವದಲ್ಲಿ ಶಿವಪ್ರಸಾದರ ತರಕಾರಿ ಕೃಷಿಯಲ್ಲಿ ತನ್ನದೇ ಆದ ಸಿದ್ಧಾಂತಗಳನ್ನು, ಬಿತ್ತನೆ / ನೆಡುವ ಸಮಯಗಳನ್ನು ರೂಢಿಸಿಕೊಂಡಿದ್ದಾರೆ. ಇವನ್ನು ಚಾಚೂ ತಪ್ಪದೆ ಅನುಸರಿಸುತ್ತಾರೆ.

ತರಕಾರಿ ಭದ್ರತೆ

ಇವರ ಸಾವಯವ ತರಕಾರಿ ಸಮೃದ್ಧಿ ಎಷ್ಟೆಂದರೆ ಮನೆಯಲ್ಲಿ ಪ್ರತಿವರ್ಷ ನಡೆಸುವ ಎರಡು ಮೂರು ಕುಟುಂಬ ಸಂಬಂಧಿ ಕಾರ್ಯಕ್ರಮಕ್ಕೂ ಪೇಟೆಗೆ ತರಕಾರಿಗಾಗಿ ಕೈ ಚಾಚುವುದಿಲ್ಲ. ವರ್ಷದ ಹಿಂದೆ ನೂರ ಐವತ್ತು ಅತಿಥಿಗಳು ಸೇರಿದ್ದ ಕಾರ್ಯ ಕ್ರಮದಲ್ಲೂ ನೂರಕ್ಕೆ ನೂರು ಮನೆ ತರಕಾರಿಯದೇ ಊಟ!

ಇವರು ಹೊಸಹೊಸ ತರಕಾರಿಗಳನ್ನು ಹುಡುಕುತ್ತಿರುತ್ತಾರೆ. ಹೀಗೆ ಸಿಕ್ಕಿದ್ದು ಉತ್ತರದ ಹೃಷಿಕೇಶದ ಹೀರೆಕಾಯಿ. ಈ ತಳಿ ಅಲ್ಲಿ ಬೇಲಿ ಬದಿಯಲ್ಲಿ ಧಾರಾಳ ಬೆಳೆಯುತ್ತಿರುತ್ತದಂತೆ. ಇವರ ಹಿತ್ತಲಿಗಿದು ಬಂದು ಮನ ಗೆದ್ದು ಆರೆಂಟು ವರ್ಷವಾಯಿತು. ‘ನೀರಿನಂಶ ಹೆಚ್ಚು. ಸ್ವಲ್ಪ ಸಿಹಿಯೂ ಇದೆ. ಇದರ ಸಲಾಡ್ ಮಾಡಿ ಗಾಂಧಾರಿ ಮೆಣಸು ನುರಿದುಕೊಂಡರೆ ದೋಸೆಗೆ ಚಟ್ನಿಯ ಬದಲೂ ಬಳಸಬಹುದು’ ಎನ್ನುತ್ತಾರೆ.

ಪ್ರತಿವರ್ಷ ಬೆಳೆಸುವ ಆರೆಂಟು ಗಡ್ಡೆ ತರಕಾರಿಗಳಲ್ಲಿ ಶಿವ ಮೆಚ್ಚಿದ ಗಡ್ಡೆ ಕಲಶ ಕೆಸು. ಇದರ ಗಡ್ಡೆಯ ಆಕಾರದಿಂದಾಗಿ ಈ ಹೆಸರು ಬಂದಿದೆ. ‘ಕಲಶ ಕೆಸು ಬಟಾಟೆಗೆ ಉತ್ತಮ ಪರ್ಯಾಯ. ಪಲ್ಯ ಗಸಿಯಿಂದಾರಂಭಿಸಿ ಮಸಾಲೆ ದೋಸೆಗೆ ಬಾಝಿ ಕೂಡಾ ಇದರಿಂದಂದಲೇ ಮಾಡಿಕೊಳ್ಳಬಹುದು. ಒಂದಷ್ಟು ಹೆಚ್ಚು ತಿಂದರೂ ಹೊಟ್ಟೆಗೆ ತೊಂದರೆ ಆಗುವುದಿಲ್ಲ’ ಎನ್ನುತ್ತಾರೆ.

ಈಚೆಗೆ ಶಿವ ಹಿತ್ತಿಲು ಸೇರಿದ ಎಲೆ ತರಕಾರಿ ಛಾಯಾ ಮಾನಸ ಒಂದು ಪೊದರುಗಿಡ (Shrub plant). ಇದು ಕೇರಳದಲ್ಲಿ ಜನಪ್ರಿಯ. ಸುಲಭದಲ್ಲಿ ಬೆಳೆದು ಬಹುವರ್ಷ ಉಳಿಯುತ್ತದೆ. ಗಿಡ ಕೊಟ್ಟವರು ಇದನ್ನು ತಿನ್ನಬಹುದು ಎಂದರೂ ಇವರಿಗೆ ಧೈರ್ಯ ಬಂದದ್ದು ಒಂದು ದನ ಹಿತ್ತಿಲು ನುಗ್ಗಿ ತಿಂದ ಮೇಲೆಯೇ. ಈಚೆಗೆ ಇದರ ಪತ್ರೊಡೆ ಮಾಡಿ ಸವಿದರು.

ಪಡುವಲ, ಹಾಗಲ, ಋಷಿಕೇಶ ಹೀರೆ, ಸೊರೆಕಾಯಿ ಮೊದಲಾದ ಮಳೆಗಾಲದ ತರಕಾರಿಯ ಬೀಜ ಇವರು ಏಪ್ರಿಲ್ 15ಕ್ಕೆ ಮೊದಲೇ ಬಿತ್ತುತ್ತಾರೆ! ‘ಮತ್ತೆ ಅದಕ್ಕೆ ನೀರು?’ ‘ನೀರು ಕೊಡುವುದು ಪ್ರಕೃತಿಯೇ, ಮಳೆಯ ರೂಪದಲ್ಲಿ. ಈ ಕ್ರಮದಿಂದ ಗಿಡ ಬೇಗನೆ ಮೇಲೆದ್ದು ಏನೂ ಸಮಸ್ಯೆಯಿಲ್ಲದೆ ಜುಲೈ ಹೊತ್ತಿಗೆ ಬೆಳೆ ಕೊಡತೊಡಗುತ್ತದೆ’ ಎನ್ನುತ್ತಾರೆ.

ಸುಡುಮಣ್ಣು ತಯಾರಿಕೆ

ಪ್ರತಿ ವರ್ಷ ಎರಡು ಟ್ರಕ್ ಲೋಡಿನಷ್ಟು ಸುಡುಮಣ್ಣು ತಯಾರಿಸುತ್ತಾರೆ. ಇದರಲ್ಲೂ ಇವರ ರೀತಿ ಬೇರೆಯೇ. ಎಲ್ಲರೂ ಅನುಸರಿಸುವ ನೇರ ಹೊರಗಿನಿಂದ ಬೆಂಕಿ ಕೊಡುವ ಕ್ರಮ ಇವರದಲ್ಲ. ಸುಡುಮಣ್ಣಿನ ರಾಶಿ ಪೇರಿಸುವಾಗಲೇ ನಡುವೆ ಟೊಳ್ಳು ಜಾಗ ಉಳಿಸಿ ರಾಶಿಯ ಒಳಭಾಗದಿಂದ ಬೆಂಕಿ ನಿಧಾನವಾಗಿ ಹತ್ತಿಕೊಳ್ಳುವಂತೆ ಮಾಡುವ ಕ್ರಮ ಇವರದು. ಈ ಸುಡುಮಣ್ಣು ತರಕಾರಿಗೆ ಮಾತ್ರವಲ್ಲದೆ ಅಡಿಕೆ ತೋಟಕ್ಕೂ ಬಳಸುತ್ತಾರೆ. ಅದರಿಂದ ಪ್ರಯೋಜನ ಕಂಡಿದ್ದಾರೆ.

ಶಿವಪ್ರಸಾದ್. (04998) 225 167 ( ಸಂಜೆ 6 ರಿಂದ 7.30) /ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT