ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮವಿದ್ದರೂ ತಂದೆಯ ಆಸೆಯಂತೆ ಕೃಷಿ ಕಾಯಕದಲ್ಲಿ ತೊಡಗಿಕೊಂಡ ಯುವಕ!

ಮೈಸೂರಿನಲ್ಲಿ ಉದ್ಯಮವಿದ್ದರೂ ವ್ಯವಸಾಯ ಮರೆಯದ ಯುವ ರೈತ
Last Updated 6 ಮಾರ್ಚ್ 2021, 19:45 IST
ಅಕ್ಷರ ಗಾತ್ರ

ಮಳವಳ್ಳಿ: ಪದವೀಧರ, ಯುವ ರೈತ ಎಚ್.ಎಸ್.ಯಶವಂತಗೌಡ ಅವರಿಗೆ ಕೃಷಿ ಮೇಲೆ ಎಲ್ಲಿಲ್ಲದ ಆಸಕ್ತಿ. ಮೈಸೂರಿನಲ್ಲಿ ಉದ್ಯಮ ನಡೆಸುತ್ತಿದ್ದರೂ ಹುಟ್ಟೂರಿನ ಹೊಲದ ಮೇಲೆ ಅಪಾರ ಪ್ರೀತಿ. ಹೊಲದಲ್ಲಿ ವಿಶೇಷ ಬೆಳೆ ತೆಗೆಯುತ್ತಿರುವ ಅವರು ಮಾದರಿ ಯುವ ರೈತ ಎನಿಸಿಕೊಂಡಿದ್ದಾರೆ.

ತಾಲ್ಲೂಕಿನ ಹಂಚೀಪುರ ಗ್ರಾಮದ ದಿ.ಎಚ್.ಆರ್.ಶಿವರಾಮು ಪುತ್ರರಾದ ಅವರು ತಮಗಿರುವ 8 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಾ ಹಲವು ರೀತಿಯ ಬೆಳೆ ತೆಗೆಯುತ್ತಿದ್ದಾರೆ. ವರ್ಷದಲ್ಲಿ ಒಮ್ಮೆ ಬೆಳೆದ ಬೆಳೆಯನ್ನು ಅವರು ಪುನರಾವರ್ತನೆ ಮಾಡುವುದಿಲ್ಲ. ಪ್ರತಿ ಬಾರಿಯೂ ಅಲ್ಪಾವಧಿ ಬೆಳೆ ತೆಗೆಯುತ್ತಾರೆ. ಬೆಳೆದ ಬೆಳೆಯನ್ನೇ ಮತ್ತೆ ಬೆಳೆದು ನಷ್ಟಕ್ಕೊಳಗಾಗುವ ರೈತರಿಗೆ ಇವರು ಮಾದರಿಯಾಗಿದ್ದಾರೆ.

ಈ ಹಿಂದೆ ವಿವಿಧ ತಳಿಯ ಭಜಿ ಮೆಣಸಿನಕಾಯಿ, ಹೂಕೋಸು, ಟೊಮೆಟೊ, ಚೆಂಡು ಹೂ, ಕೊತ್ತಂಬರಿ ಸೊಪ್ಪು ಸೇರಿದಂತೆ ಹಲವು ಬೆಳೆ ಬೆಳೆದಿದ್ದರು. ಇದೀಗ ನಾಟಿ ಬೀನ್ಸ್, ಕಲ್ಲಂಗಡಿ, ಸೌತೇಕಾಯಿ ಬೆಳೆದು ಲಾಭ ಗಳಿಸುತ್ತಿದ್ದಾರೆ. ಮೈಸೂರಿನಲ್ಲಿ ಕೆಫೆ ಉದ್ಯಮ ನಡೆಸುವ ಯಶವಂತಗೌಡ ವ್ಯವಸಾಯದಲ್ಲೂ ತೊಡಗಿಸಿಕೊಂಡಿದ್ದಾರೆ.

ರಾಜ್ಯದ ವಿವಿಧ ಕಡೆಯ ಮಾದರಿ ರೈತರ ಜಮೀನುಗಳಿಗೆ ತೆರಳಿ ಅಲ್ಲಿನ ವಿನೂತನ ಪ್ರಯೋಗ ವೀಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಹೊಸ ತಳಿಗಳನ್ನು ಗಮನಿಸಿ ತಮ್ಮ ಜಮೀನಿನಲ್ಲಿ ಅನುಷ್ಠಾನಕ್ಕೆ ತರುತ್ತಿದ್ದಾರೆ. ಇರುವ ಎರಡು ಕೊಳವೆ ಬಾವಿಯನ್ನೇ ಅವಲಂಬಿಸಿರುವ ಇವರು ಹನಿ ನೀರಾವರಿ ಪದ್ಧತಿ ಮೂಲಕವೂ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ.

ತಮ್ಮ ಎರಡು ಎಕರೆ ಜಮೀನಿನಲ್ಲಿ ಹೊಸ ಬಗೆಯ ತಳಿ ಬೆಳೆದಿದ್ದು ₹ 3 ಲಕ್ಷ ಆದಾಯ ಗಳಿಸಿದ್ದಾರೆ. ಮೈಸೂರಿನಲ್ಲಿ ಉದ್ಯಮ ನಡೆಸುತ್ತಿರುವುದರಿಂದ ತಾವು ಬೆಳೆದ ಬೆಳೆಯನ್ನು ಯಾವುದೇ ಮಧ್ಯವರ್ತಿಗಳಿಗೆ ನೀಡದೆ ನೇರವಾಗಿ ಅವರೇ ಮೈಸೂರಿನ ಮಾರುಕಟ್ಟೆಗೆ ರವಾನಿಸುತ್ತಾರೆ. ಬೆಳೆದ ಬೆಳೆಯನ್ನು ಸ್ವತಃ ತಾವೇ ಖುದ್ದು ಮಾರುಕಟ್ಟೆಯಲ್ಲಿ ನಿಂತು ಮಾರಾಟ ಮಾಡುತ್ತಾರೆ.

‘ಉದ್ಯಮದ ಜೊತೆಗೆ ತಂದೆಯ ಆಸೆಯಂತೆ ವ್ಯವಸಾಯದ ಕಡೆಗೆ ಮನಸ್ಸು ವಾಲಿತು. ವ್ಯವಸಾಯದಲ್ಲಿ ಯಾರಿಗೂ ಮೋಸ ಆಗುವುದಿಲ್ಲ. ಆದರೆ, ಒಂದೇ ಬೆಳೆ ಬೆಳೆದರೆ ರೈತರಿಗೆ ಹೊರೆಯಾಗುತ್ತದೆ. ಆದ್ದರಿಂದ ಎಲ್ಲಾ ಬಗೆಯ ಅಲ್ಪಾವಧಿ ಮಾದರಿಯ ಬೆಳೆ ಬೆಳೆದು ಕಾಲಕ್ಕೆ ತಕ್ಕಂತೆ ಪಾಲನೆ ಮಾಡಿದರೆ ಪ್ರತಿ ಬೆಳೆಯೂ ಆದಾಯ ತಂದು ಕೊಡುತ್ತದೆ’ ಎಂದು ಎಚ್.ಎಸ್.ಯಶವಂತಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT