ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆ ಹಣ್ಣಿನ ಭ್ರೂಣದಿಂದ ಸಸ್ಯೋತ್ಪಾದನೆ; ವಿನೂತನ ತಂತ್ರಜ್ಞಾನ ಆವಿಷ್ಕಾರ

Last Updated 15 ಡಿಸೆಂಬರ್ 2020, 20:14 IST
ಅಕ್ಷರ ಗಾತ್ರ
ADVERTISEMENT
""
""

ಹೆಸರಘಟ್ಟ: ಬಾಳೆಹಣ್ಣಿನ ಭ್ರೂಣದಿಂದ ಸಸ್ಯೋತ್ಪಾದನೆ ಮಾಡುವ ವಿನೂತನ ತಂತ್ರಜ್ಞಾನವನ್ನು ಇಲ್ಲಿನ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆ ಆವಿಷ್ಕಾರ ಮಾಡಿದೆ.

ಬಾಳೆಹಣ್ಣಿನ ಅಂಗಾಂಶ ಕೃಷಿ ಮತ್ತು ಸಾಂಪ್ರದಾಯಿಕ ವಿಧಾನಗಳ (ಗೆಡ್ಡೆ ಕತ್ತರಿಸಿ ಗಿಡ ಬೆಳೆಸುವುದು) ಮೂಲಕ ಸಸ್ಯೋತ್ಪಾದನೆ ಮಾಡಲಾಗುತ್ತಿತ್ತು. ಈ ಎರಡು ವಿಧಾನಗಳಲ್ಲಿ ಸಸ್ಯೋತ್ಪಾದನೆಗೆ ತಗಲುವ ಅವಧಿ ಹೆಚ್ಚು. ಅವುಗಳ ವೆಚ್ಚವೂ ದುಬಾರಿ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯ ವಿಜ್ಞಾನಿ ಉಷಾರಾಣಿ ಅವರು ವಿನೂತನ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ಏಲಕ್ಕಿ ಬಾಳೆಹಣ್ಣಿನ ಮೇಲೆ ಈ ಪ್ರಯೋಗ ಮಾಡಿ ಅವರು ಯಶಸ್ಸು ಕಂಡಿದ್ದಾರೆ.

‘ಬಾಳೆಹಣ್ಣಿನ ಹಣ್ಣಿನ ಮಾತ ಅಥವಾ ಹೂವು ಗೊಂಚಲಿನಲ್ಲಿರುವ ಪುರುಷ ಜೀವಕೋಶಗಳನ್ನು ಸಂಗ್ರಹಿಸಿ ಅದಕ್ಕೆ ಕೃತಕ ಜೀವಕೋಶಗಳನ್ನು ಬೆರೆಸಿ ಬಾಳೆಹಣ್ಣಿನ ಭ್ರೂಣವನ್ನು ಸೃಷ್ಟಿಸಲಾಗುತ್ತದೆ. ಭ್ರೂಣದಿಂದ ಜೀವಕೋಶಗಳ ಗುಚ್ಛವನ್ನು ಅಭಿವೃದ್ದಿ ಪಡಿಸಿ ಆ ಮೂಲಕ ಸಸ್ಯೋತ್ಪಾದನೆ ಮಾಡಲಾಗುತ್ತದೆ. ಹೊಸ ಜೀವಕೋಶಗಳ ಮೂಲಕ (ಕ್ಯಾಲಸ್‌) 1ಲಕ್ಷ ಸಸ್ಯಗಳನ್ನು ಉತ್ಪಾದನೆ ಮಾಡಬಹುದು’ ಎನ್ನುತ್ತಾರೆ ಉಷಾರಾಣಿ.

‘ಒಂದು ವರ್ಷದ ಅವಧಿಯಲ್ಲಿ ಅಂಗಾಂಶ ಕೃಷಿಯ ಮೂಲಕ ನೂರು ಗಿಡಗಳನ್ನು ಬೆಳೆಯಬಹುದು ಎಂದಿಟ್ಟುಕೊಳ್ಳೋಣ. ಅದೇ ಸಮಯ ಮತ್ತು ಅಷ್ಟೇ ವೆಚ್ಚದಲ್ಲಿ ಭ್ರೂಣದಿಂದ 1 ಲಕ್ಷ ಸಸಿಗಳನ್ನು ಬೆಳೆಸಬಹುದು. ಇದರಿಂದ ರೈತರಿಗೆ ಕಡಿಮೆ ಬೆಲೆಯಲ್ಲಿ ಸಸಿಗಳನ್ನು ಪೂರೈಸಲು ಸಾಧ್ಯ. ಕಡಿಮೆ ಬಂಡವಾಳದ ಮೂಲಕ ಹೆಚ್ಚಿನ ಲಾಭ ಪಡೆಯಬಹುದು’ ಎಂದು ಅವರು ವಿವರಿಸಿದರು.

ಭ್ರೂಣದಿಂದ ಬೆಳೆದಿರುವ ಏಲಕ್ಕಿ ಬಾಳೆ ಸಸಿ

‘ಭ್ರೂಣದಿಂದ ಬೆಳೆದ ಏಲಕ್ಕಿ ಬಾಳೆಹಣ್ಣಿನ ಗಿಡವು 350 ಸೆಂ.ಮೀ. ಎತ್ತರ ಬೆಳೆಯಬಲ್ಲದು. 12 ತಿಂಗಳಲ್ಲಿ ಫಸಲು ನೀಡುತ್ತದೆ. ಒಂದು ಗೊನೆಯು 15ರಿಂದ 20 ಕೆ.ಜಿ. ತೂಗುತ್ತದೆ. ಗೊನೆಯಲ್ಲಿ ಸುಮಾರು 250ರಿಂದ 300 ಬಾಳೆಹಣ್ಣುಗಳಿರುತ್ತವೆ. ಸಾಂಪ್ರದಾಯಿಕ ಮತ್ತು ಅಂಗಾಂಶ ಕೃಷಿಯಿಂದ ಬೆಳೆದ ವಿಧಾನಗಿಂತ ತುಸು ಹೆಚ್ಚೇ ಫಸಲನ್ನು ಇದರಿಂದ ನಿರೀಕ್ಷೆ ಮಾಡಬಹುದು’ ಎಂದರು.

‘ಏಲಕ್ಕಿ ಬಾಳೆಹಣ್ಣಿನ ಭ್ರೂಣದಿಂದ ಸಸ್ಯೋತ್ಪಾದನೆ ಹೆಚ್ಚಳವಾದರೆ ರಾಜ್ಯವು ಬಾಳೆಹಣ್ಣು ಬೆಳೆಯುವುದರಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆಯುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ’ ಎನ್ನುತ್ತಾರೆ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯ ನಿರ್ದೇಶಕರಾದ ಎಂ.ಆರ್.ದಿನೇಶ್.

ಬಾಳೆಹಣ್ಣಿನ ಭ್ರೂಣ ಸಂಗ್ರಹಿಸುವ ಹೂ

ಸಸ್ಯೋತ್ಪಾದನೆಗೆ ತಿಂಗಳ ತರಬೇತಿ
ಈ ತಂತ್ರಜ್ಞಾನ ಅಳವಡಿಸಿಕೊಳ್ಳುವ ನರ್ಸರಿ ಅಥವಾ ಉದ್ಯಮಿಗಳಿಗೆ ಒಂದು ತಿಂಗಳ ತರಬೇತಿಯನ್ನು ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆ ನೀಡಲಿದೆ. ತರಬೇತಿ ಪಡೆದ ನಂತರ ತಂತ್ರಜ್ಞಾನ ಅಳವಡಿಸಿಕೊಳ್ಳಲು ಅನುಮತಿ ಪತ್ರವನ್ನೂ ಕೊಡಲಾಗುತ್ತದೆ.

ಮಾಹಿತಿಗಾಗಿ ಬೆಳಿಗ್ಗೆ 8-30ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಂಸ್ಥೆಯ ತಜ್ಞರನ್ನು ಭೇಟಿಯಾಗಬಹುದು. ಸಂಪರ್ಕ: 080-23086100/430 (ರಜೆ ದಿನಗಳನ್ನು ಹೊರತು ಪಡಿಸಿ ಬೆಳಿಗ್ಗೆ 8 ರಿಂದ ಸಂಜೆ ಐದರವರೆಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT