ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಉಳಿಸುವ ‘ಡೀಪ್‌ ಡ್ರಿಪ್‌’ ಪದ್ಧತಿ

ಕೃಷಿಯಲ್ಲಿ ಮಿತ ನೀರು – ವಿದ್ಯುತ್‌ ಬಳಕೆಯ ಸುಲಭ ಮಾರ್ಗ, ಅಧಿಕ ಇಳುವರಿ
Last Updated 26 ಅಕ್ಟೋಬರ್ 2019, 4:18 IST
ಅಕ್ಷರ ಗಾತ್ರ

ಬೆಂಗಳೂರು: ಮರಗಳ ಬೇರುಗಳಿಗೆನೇರವಾಗಿ ನೀರುಣಿಸುವ ತಳ ನೀರಾವರಿ (ಡೀಪ್‌ ಡ್ರಿಪ್‌ ಇರಿಗೇಷನ್‌) ಪದ್ಧತಿಯು ಕೃಷಿಮೇಳದಲ್ಲಿ ಜನರ ಗಮನ ಸೆಳೆಯುತ್ತಿದೆ. ಇದು, ಭಿನ್ನವಾದ ಹನಿ ನೀರಾವರಿ ಪದ್ಧತಿ.

ಚೂಪಾದ ತುದಿಯುಳ್ಳ ಕೊಳವೆಯನ್ನು ಮಣ್ಣಿನ ಆಳಕ್ಕೆ ಹುಗಿಯಲಾಗುತ್ತದೆ. ಇದರಲ್ಲಿ ಸಣ್ಣ ಗಾತ್ರದ ರಂಧ್ರಗಳಿದ್ದು, ಇದರ ಮೂಲಕ ನೀರು ನಿಧಾನಗತಿಯಲ್ಲಿ ಬೇರುಗಳಿಗೆ ತಲುಪಲಿದೆ. ದ್ರವರೂಪದಲ್ಲಿ ಗೊಬ್ಬರವನ್ನೂ ಇದರ ಮೂಲಕ ಪೂರೈಸಬಹುದಾಗಿದೆ.

ಈಗಾಗಲೇ ಸಾಂಪ್ರದಾಯಿಕ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದರೆ, ಇದೇ ಪೈಪುಗಳಿಗೆ ರಂಧ್ರ ಕೊರೆದು, ಸಣ್ಣ ಪೈಪುಗಳನ್ನು ಜೋಡಿಸಿ, ಅದರ ಮೂಲಕವೂ ನೀರು ಪೂರೈಸಬಹುದಾಗಿದೆ.

ಮರದ ಬೇರುಗಲು ಅದರ ಕೊಂಬೆಗಳು ಚಾಚಿರುವಷ್ಟು ದೂರ ಆಳದಲ್ಲಿ ಹರಡಿಕೊಂಡಿರುತ್ತವೆ. ಹಾಗಾಗಿ, ಕೊಂಬೆಗಳನ್ನು ಅನುಸರಿಸಿ ಕೊಳವೆಯನ್ನು ಮಣ್ಣಿನಲ್ಲಿ ಹೂಳಬೇಕು. ಸಾಮಾನ್ಯವಾಗಿ ಒಂದು ಮರ ವ್ಯಾಪ್ತಿಯಲ್ಲಿ ಎರಡದಿಂದ ಮೂರು ಕೊಳವೆ ಅಳವಡಿಸಬೇಕು.

ಬೆಂಗಳೂರಿನ ಎಕ್ಸಾಗ್ರೀನ್‌ ಸಲ್ಯೂಷನ್ಸ್‌ ಎಲ್‌.ಎಲ್‌.ಪಿ ಕಂಪನಿ ಈ ಪರಿಕರ ಪರಿಚಯಿಸಿದೆ. ‘ಹನಿ ನೀರಾವರಿ ಪದ್ಧತಿಗೆ ಹೋಲಿಸಿದರೆ ಶೇ 50ರಷ್ಟು ಈ ಪದ್ಧತಿಯಲ್ಲಿ ಉಳಿತಾಯವಾಗಲಿದೆ’ ಎಂದು ಕಂಪನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಜಗದೀಶ ತಿಳಿಸಿದರು.

‘ಕೃಷಿ ಎಂದರೆ ನೀರು ಸುರಿಯುವುದು ಎನ್ನುವ ಸಾಮಾನ್ಯ ನಂಬಿಕೆ ರೈತರಲ್ಲಿ ಇದೆ. ಆದರೆ, ಹಾಗೆ ಹರಿಸಿದ ನೀರೆಲ್ಲವೂ ಬೇರುಗಳ ಆಳಕ್ಕೆ ಇಳಿಯುವುದಿಲ್ಲ. ನೀರಿನ ಸದ್ಬಳಕೆಯ ದೃಷ್ಟಿಯಿಂದ ಈ ಪದ್ಧತಿ ಉಪಯುಕ್ತವಾದುದು’ ಎಂದರು.

‘ತುಮಕೂರು ಜಿಲ್ಲೆಯ ಕೊರಟಗೆರೆ ಮಧುಗಿರಿ, ಮಲೆನಾಡು ಭಾಗ, ಬಳ್ಳಾರಿ ಹೀಗೆ ರಾಜ್ಯದ ನಾನಾ ಭಾಗಗಳಲ್ಲಿ ಇಂಥ ಪರಿಕರ ಅಳವಡಿಸಿದ್ದು, ಪರಿಣಾಮಕಾರಿಯಾಗಿದೆ. ಉತ್ತಮ ಇಳುವರಿ ಬಂದಿದೆ. ನಾವು ನೀರನ್ನು ಪೋಲು ಮಾಡುತ್ತಿದ್ದೆವು. ಈಗ ನೀರಿನ ಜೊತೆ ವಿದ್ಯುತ್‌ ಕೂಡಾ ಉಳಿತಾಯವಾಗುತ್ತದೆ ಎಂದು ರೈತರು ತಿಳಿಸಿದ್ದಾರೆ’ ಎಂದು ಜಗದೀಶ್‌ ಹೇಳಿದರು.

‘ಅಡಿಕೆ, ತೆಂಗು, ಮಾವು, ದಾಳಿಂಬೆ, ನಿಂಬೆ, ಚಿಕ್ಕು, ದ್ರಾಕ್ಷಿ ಹೀಗೆ ಮುಂತಾದ ತೋಟಗಾರಿಕೆ ಬೆಳೆಗಳಿಗೆ ಅಳವಡಿಸಿ ಪ್ರಯೋಗ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಬ್ಬು, ಹತ್ತಿ, ಬಾಳೆ ಕೃಷಿಗೂ ವಿಸ್ತರಿಸುವ ಆಲೋಚನೆ ಇದೆ’ ಎಂದು ಮಾಹಿತಿ ನೀಡಿದರು.

‘ಸದ್ಯಕ್ಕೆ ಈ ಕೊಳವೆಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿಯೇ ಇವುಗಳ ಉತ್ಪಾದನೆ ಮಾಡುವ ಯೋಜನೆ ಇದೆ. ತಯಾರಿಕಾ ವೆಚ್ಚ ಕಡಿಮೆಯಾದರೆ ರೈತರಿಗೆ ಇನ್ನಷ್ಟು ಅಗ್ಗವಾಗಿ ಪರಿಕರ ಸಿಗುತ್ತದೆ’ ಎಂದರು.

‘ಈ ಕೊಳವೆಗಳನ್ನು ಖರೀದಿಸುವ ಆಸಕ್ತಿಯುಳ್ಳ ಕೃಷಿಕರ ತಾಕುಗಳಿಗೆ ತೆರಳಿ ಅಳವಡಿಸಲಾಗುವುದು’ ಎಂದು ತಿಳಿಸಿದರು. ಆಸಕ್ತರ ರೈತರು ಹೆಚ್ಚಿನ ಮಾಹಿತಿಗೆಜಗದೀಶ ಎಂ. (ಮೊಬೈಲ್‌ 99720 28657) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT