ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈತಮಿತ್ರ ‘ಕೃಷಿ ಸೆಂಟ್ರಲ್ ಆ್ಯಪ್’

Published : 6 ಆಗಸ್ಟ್ 2024, 23:30 IST
Last Updated : 6 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ನಮ್ಮ ರೈತರು ಕನಿಷ್ಠ ಸೌಲಭ್ಯಗಳಲ್ಲಿಯೇ ಬದುಕುವವರು; ಕಷ್ಟಗಳ ನಡುವೆಯೇ ದುಡಿಯುವವರು. ಹೆಚ್ಚು ಕೆಲಸ, ಕಡಿಮೆ ಆದಾಯ ನಮ್ಮ ರೈತರ ಸ್ಥಿತಿ. ಇಂದಿನ ಡಿಜಿಟಲ್‌ ಯುಗದಲ್ಲೂ ಅವರು ಹಲವು ಸೌಲಭ್ಯಗಳಿಂದ ವಂಚಿತರೇ ಹೌದು. ರೈತರು ಪ್ರತಿಯೊಂದು ಸೌಲಭ್ಯಕ್ಕೂ ಅಲೆದಾಡುವ ಸ್ಥಿತಿಯಿದೆ. ಇಂಥ ಅಲೆದಾಟವನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ರೈತರಿಗೆ ಡಿಜಿಟಲ್‌ ಯುಗದ ಪರಿಚಯ ಮಾಡಿಸಿ ಕೆಲಸಗಳನ್ನು ಸುಲಭವಾಗಿಸುವ ನಿಟ್ಟಿನಲ್ಲಿ ‘ಕೃಷಿ ಸೆಂಟ್ರಲ್‌’ ಹೆಸರಿನ ರೈತಸ್ನೇಹಿ ಆ್ಯಪ್‌‌ವೊಂದನ್ನು ರೈತಮಿತ್ರರೊಬ್ಬರು ಅಭಿವೃದ್ಧಿಪಡಿಸಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ವಿನಯ್‌ ಶಿವಪ್ಪ ಎನ್ನುವವರು ಈ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ. ಐಟಿ ಉದ್ಯೋಗದಲ್ಲಿರುವ ವಿನಯ್‌ ಶಿವಪ್ಪ, ತಮ್ಮ ಭಾಗದ ರೈತರ ಬವಣೆಯನ್ನು ನೀಗಬೇಕೆಂದು ಕೃಷಿ ಆಧಾರಿತ ಈ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಆ್ಯಪ್ ಬಳಕೆ ಹೇಗೆ?

ಕೃಷಿ ಸೆಂಟ್ರಲ್‌ ಆ್ಯಪ್‌ ಎಲ್ಲಾ ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಪ್ಲೇಸ್ಟೋರ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಕನ್ನಡ ಮತ್ತು ಇಂಗ್ಲಿಷ್‌‌ನಲ್ಲಿ ಈ ಆ್ಯಪ್‌ ಲಭ್ಯವಿದೆ.

ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡುತ್ತಿದ್ದಂತೆ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದರೆ ನೋಂದಣಿ ಪ್ರಕ್ರಿಯೆ ಪುಟ ತೆರೆದುಕೊಳ್ಳುತ್ತದೆ. ಹೆಸರು, ಉದ್ಯೋಗ, ರಾಜ್ಯ, ಜಿಲ್ಲೆ, ಊರು ಆಯ್ಕೆ ಮಾಡಿ ನೀವು ಆ್ಯಪ್‌ಗೆ ಪ್ರವೇಶ ಪಡೆಯಬಹುದು. ಲಾಗ್‌ ಇನ್‌ ಆಗುತ್ತಿದ್ದಂತೆ ಆ್ಯಪ್‌ ಬಳಕೆ ಹೇಗೆ ಮಾಡುವುದು ಎನ್ನುವ ಬಗ್ಗೆ ವಿಡಿಯೊವೊಂದು ಪ್ಲೇ ಆಗುತ್ತದೆ.

ಆ್ಯಪ್‌ನ ಮುಖಪುಟದಲ್ಲಿ ಮೊದಲು ನಿಮ್ಮ ಪ್ರದೇಶದಲ್ಲಿ ಬೆಳೆಯುವ ಬೆಳೆಗಳ ಅಂದಿನ ಮಾರುಕಟ್ಟೆ ದರಪಟ್ಟಿ ಕಾಣಿಸುತ್ತದೆ. ಉದಾಹರಣೆಗೆ, ಅಡಕೆ, ಕಾಳುಮೆಣಸು ಇತ್ಯಾದಿ. ಜತೆಗೆ ರಾಜ್ಯದ ಎಲ್ಲಾ ಪ್ರಮುಖ ಮಾರುಕಟ್ಟೆಗಳಲ್ಲಿ ವಿವಿಧ ಬೆಳೆಗಳ ಮಾರುಕಟ್ಟೆಯ ದರವನ್ನೂ ನೋಡಬಹುದು. ನಂತರ ಯಾವ ಉತ್ಪನ್ನ, ಯಾವ ಪ್ರಾಣಿ ಮಾರಾಟಕ್ಕಿದೆ ಎಂಬುದನ್ನು ಗಮನಿಸಬಹುದು. ಉತ್ಪನ್ನಗಳ ಜತೆಗೆ ಅದರ ಬೆಲೆ, ಯಾವ ದಿನಾಂಕದಂದು ಪೋಸ್ಟ್‌ ಮಾಡಿರುವುದು ಹಾಗೂ ಯಾವ ಪ್ರದೇಶದಲ್ಲಿ ಲಭ್ಯವಿದೆ ಎನ್ನುವುದನ್ನು ತಿಳಿಯಬಹುದು. ಅದನ್ನು ಕ್ಲಿಕ್ ಮಾಡಿದರೆ ಮಾರಾಟಗಾರರ ವಿವರಗಳು ಸಿಗುತ್ತವೆ.

ಇಷ್ಟೆ ಅಲ್ಲದೆ, ರೈತರಿಗೆ ಉಪಯೋಗವಾಗುವಂತೆ ಕೃಷಿ ಸಂಬಂಧಿತ ಸುದ್ದಿಗಳು, ವಿಡಿಯೊಗಳು ಕೂಡ ದೊರೆಯುತ್ತವೆ. ಆ್ಯಪ್‌ನ ಬಲಭಾಗದಲ್ಲಿ ವಿಡಿಯೊ ಆಯ್ಕೆ ಇದೆ. ಇದನ್ನು ಕ್ಲಿಕ್‌ ಮಾಡಿದರೆ ಆ್ಯಪ್‌ ಬಳಸುವ ಬಗೆಯನ್ನು ಕನ್ನಡದಲ್ಲೇ ತಿಳಿಯಬಹುದು.

ಉತ್ಪನ್ನಗಳ ಮಾರಾಟ, ಕೊಳ್ಳುವಿಕೆ ಮಾತ್ರವಲ್ಲದೆ ಕೃಷಿ ಸಂಬಂಧಿತ ಸೇವೆಗಳನ್ನೂ ಈ ಆ್ಯಪ್‌ ಮೂಲಕ ಪಡೆಯಬಹುದು. ಉದಾಹರಣೆಗೆ, ಅಡಕೆಕೊಯ್ಲು, ಡ್ರೋನ್‌ ಸ್ಪ್ರೇ, ಸೋಲಾರ್‌ ಪಂಪ್‌‌ಸೆಟ್ ನಿಮಗೆ ಅಗತ್ಯವಿರುವ ಕೃಷಿ ಉತ್ಪನ್ನದ ವಿವಿಧ ಯಂತ್ರಗಳನ್ನು ಬಾಡಿಗೆಗೆ ಪಡೆಯಲೂ ಇದು ನೆರವಾಗುತ್ತದೆ.

ಇದಲ್ಲದೆ ಪಶುವೈದ್ಯರು, ಬೋರ್‌ ಪಾಯಿಂಟ್‌ ನೋಡುವವರು, ಮಣ್ಣು ಪರೀಕ್ಷೆ ಮಾಡುವವರು, ತೆಂಗಿನಕಾಯಿ ಕೀಳುವವರು – ಹೀಗೆ ಹಲವು ಬಗೆಯ ಕೆಲಸಗಳಿಗೂ ಈ ಆ್ಯಪ್‌ನ ಮೂಲಕ ಜನರನ್ನು ಹೊಂದಿಸಿಕೊಳ್ಳಬಹುದು. ನಿಮ್ಮ ಬೆಳೆಗಳಿಗೆ ಕೀಟಬಾಧೆ ಕಾಡುತ್ತಿದ್ದರೆ ಅದರ ಬಗ್ಗೆ ಈ ಆ್ಯಪ್‌ನಲ್ಲಿ ವಿವರ ಹಂಚಿಕೊಂಡರೆ, ತಕ್ಷಣ ಕೃಷಿತಜ್ಞರು ನಿಮ್ಮ ಸಮಸ್ಯೆಗೆ ಪರಿಹಾರವನ್ನೂ ಸೂಚಿಸುತ್ತಾರೆ.

ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದಾದರೆ ಅದರ ಫೋಟೊ, ನೀವು ಮಾರಾಟ ಮಾಡುವ ಬೆಲೆ ಹಾಗೂ ಕಮೆಂಟ್‌ ಬಾಕ್ಸ್‌ನಲ್ಲಿ ಉಳಿದ ಮಾಹಿತಿಗಳನ್ನು ಸೇರಿಸಬಹುದು.

ನಿಮಗೆ ಅಗತ್ಯವಾದ ವಸ್ತುಗಳ ಲಭ್ಯತೆ ಎಲ್ಲಿದೆ ಎಂದು ತಿಳಿದುಕೊಳ್ಳಲು ಸರ್ಚ್‌ ಆಯ್ಕೆಗೆ ಹೋಗಿ ‘ಖರೀದಿಗಾಗಿ’ ಎನ್ನುವುದನ್ನು ಆಯ್ಕೆ ಮಾಡಿದರೆ ಯಾವೆಲ್ಲಾ ಉತ್ಪನ್ನಗಳಿವೆ ಎನ್ನುವುದನ್ನೂ ತಿಳಿಯಬಹುದು.

ಹೇಗೆ ಉಪಯೋಗ?

ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರು ತಮ್ಮ ಉತ್ಪನ್ನಗಳನ್ನು ಈ ಆ್ಯಪ್‌ ಮೂಲಕ ಮಾರಾಟ ಮಾಡಬಹುದು. ಅದೇ ರೀತಿ ರೈತರಿಗೆ ಅಗತ್ಯವಿರುವ ಉತ್ಪನ್ನಗಳನ್ನು ಈ ಆ್ಯಪ್‌ ಮೂಲಕವೇ ಖರೀದಿಸಬಹುದು.

ಈ ಆ್ಯಪ್‌ನ ಬಳಕೆಯಿಂದ ಕೃಷಿ ಉತ್ಪನ್ನಗಳನ್ನು ಕೊಳ್ಳಲು/ಮಾರಾಟ ಮಾಡಲು ದಲ್ಲಾಳಿಗಳನ್ನು ಹುಡುಕಿಕೊಂಡು ಅಲೆಯಬೇಕಾಗಿಲ್ಲ. ಹೀಗಾಗಿ ರೈತರ ಸಮಯ, ಶ್ರಮ ಹಾಗೂ ಹಣದ ಉಳಿತಾಯವಾಗಲಿದೆ.

ಕೆಲವು ಕೃಷಿ ಉತ್ಪನ್ನಗಳನ್ನು ಹೆಚ್ಚು ದಿನ ಸಂಗ್ರಹಿಸಿಡಲು ಸಾಧ್ಯವಾಗದು. ಅಗತ್ಯವಿರುವವರಿಗೆ ತಕ್ಷಣ ಈ ಆ್ಯಪ್‌ ಮೂಲಕ ಅದನ್ನು ಮಾರಾಟ ಮಾಡಿ, ಉತ್ಪನ್ನಗಳು ಹಾಳಾಗುವುದನ್ನು ತಡೆಯಬಹುದು.

‘ಆ್ಯಪ್‌ನ ಬಳಕೆ ಸುರಕ್ಷಿತವಾಗಿದೆ. 15 ಎಂಬಿ ಗಾತ್ರದ ಈ ಆ್ಯಪ್‌ ಅನ್ನು ಬಳಕೆದಾರ ಸ್ನೇಹಿಯಾಗಿಯೇ ರೂಪಿಸಲಾಗಿದೆ. ಉತ್ಪನ್ನಗಳ ನಿಖರತೆ ಬಗ್ಗೆ ಅನುಮಾನ ಬಂದಲ್ಲಿ ಅದನ್ನು ನಮ್ಮ ತಂಡ ಪರಿಶೀಲನೆಗೆ ಒಳಪಡಿಸುತ್ತದೆ. ನೇರವಾಗಿ ರೈತರಿಂದ ರೈತರನ್ನು ತಲುಪುವ ಉದ್ದೇಶದಿಂದ ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ’ ಎನ್ನುತ್ತಾರೆ ವಿನಯ್ ಶಿವಪ್ಪ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT